ಗುರುವಾರ , ಅಕ್ಟೋಬರ್ 24, 2019
21 °C

ಭಾರತೀಯ ಮಹಿಳಾ ಬ್ಯಾಸ್ಕೆಟ್‌ಬಾಲ್ ತಂಡಕ್ಕೆ ದಕ್ಕಿದ ಅದೃಷ್ಟ ಕಾಪಿಡುವ ಸವಾಲು

Published:
Updated:
Prajavani

ಎರಡು ವರ್ಷಗಳಿಂದ ಬೆಚ್ಚನೆ ಕಾಪಿಟ್ಟುಕೊಂಡಿದ್ದ ಸಂಭ್ರಮದ ಕಳೆಗೆ ಒಂದು ತಾಸಿನ ಅಂತರದಲ್ಲಿ ವಿಷಾದದ ಛಾಯೆ ಕವಿಯಿತು. ಮರು ದಿನ ಮತ್ತೆ ಸಂತಸದ ಅಲೆ ಚಿಮ್ಮಿತು. ಆದರೂ ಸಾಗಿ ಬಂದ ಹಾದಿಯನ್ನು ಹಿಂದಿರುಗಿ ನೋಡಿದರೆ ಹೆಮ್ಮೆಗಿಂತ ನಿರಾಸೆವುದೇ ಹೆಚ್ಚು.

‌ಬೆಂಗಳೂರಿನಲ್ಲಿ ಕಳೆದ ವಾರ ನಡೆದ ಫಿಬಾ ಮಹಿಳೆಯರ ಏಷ್ಯಾಕಪ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯು ಭಾರತ ತಂಡದವರ ಸಾಮರ್ಥ್ಯವನ್ನು ಒರೆಗೆ ಹಚ್ಚಿತ್ತು. ಕಳೆದ ಬಾರಿ ಮೊತ್ತ ಮೊದಲ ಸಲ ಪ್ರತಿಷ್ಠಿತ ‘ಎ’ ವಲಯಕ್ಕೆ ಬಡ್ತಿ ಪಡೆದಿದ್ದ ಭಾರತ ತಂಡಕ್ಕೆ ಈ ವಲಯದಲ್ಲಿರುವ ಏಷ್ಯಾದ ದೈತ್ಯರ ವಿರುದ್ಧ ಹೋರಾಡಲು ಸಾಧ್ಯವಿಲ್ಲ ಎಂಬುದನ್ನು ತೋರಿಸಿಕೊಟ್ಟ ಟೂರ್ನಿಯಾಗಿತ್ತು ಈ ಬಾರಿಯ ಏಷ್ಯಾಕಪ್ ಟೂರ್ನಿ.

’ಎ’ ವಲಯದ ಎಲ್ಲ ಪಂದ್ಯಗಳನ್ನು ಸೋತು ‘ಬಿ’ ವಲಯಕ್ಕೇ ವಾಪಸ್ ಜಾರಿದ ಭಾರತ ತಂಡಕ್ಕೆ ಕೊನೆಯ ಪಂದ್ಯದ ನಿರಾಸೆ ಮರೆಯುವ ಸುದ್ದಿ ಮರುದಿನ ಕಾದಿತ್ತು. ‘ಬಿ’ ವಲಯದ ಟೂರ್ನಿ ಆಯೋಜಿಸಲು ಕ್ರೀಡಾಂಗಣ ಲಭ್ಯವಿಲ್ಲದ ಕಾರಣ ಭಾರತ ತಂಡವನ್ನು ‘ಎ’ ವಲಯದಲ್ಲೇ ಉಳಿಸಲಾಗುವುದು ಎಂದು ಅಂತರರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಫೆಡರೇಷನ್ (ಫಿಬಾ) ತಿಳಿಸಿತು.

ಇದು, ಭಾರತ ಬ್ಯಾಸ್ಕೆಟ್‌ಬಾಲ್ ಫೆಡರೇಷನ್‌ಗೆ (ಬಿಎಫ್‌ಐ) ಸಂತಸ ತಂದಿತಾದರೂ ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಸವಾಲನ್ನು ಹೇಗೆ ನಿಭಾಯಿಸುತ್ತದೆ, ಮುಂದಿನ ಎರಡು ವರ್ಷಗಳಲ್ಲಿ ತಂಡವನ್ನು ಬಲಿಷ್ಠವಾಗಿ ಕಟ್ಟುವ, ಲೋಪಗಳನ್ನು ನಿವಾರಿಸಿ ಹೊಸ ಚೇತನ ತುಂಬುವ ಕಾರ್ಯಕ್ಕೆ ತಂಡದ ಆಡಳಿತ ಹೇಗೆ ಸಜ್ಜಾಗುತ್ತದೆ ಎಂಬುದು ಈಗಿನ ಕುತೂಹಲದ ವಿಷಯ. 

ಈ ಬಾರಿಯ ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ ತಂಡ ಎಲ್ಲ ವಿಭಾಗಗಳಲ್ಲೂ ವೈಫಲ್ಯ ಕಂಡಿತ್ತು. ವೈಯಕ್ತಿಕವಾಗಿ ಶಿರೀನ್ ಲಿಮಯೆ, ನವನೀತಾ ಪಟ್ಟೆಮನೆ, ಬಾಂಧವ್ಯ ಹೆಮ್ಮಿಗೆ ಮುಂತಾದವರು ಮಿಂಚಿದ್ದರು. ಅಂಜನಾ ಪಿ.ಗೀತಾ, ಜೀನಾ ಸ್ಕರಿಯಾ, ರಾಜಪ್ರಿಯದರ್ಶಿನಿ ಮುಂತಾದವರು ಕೆಲವು ಪಂದ್ಯಗಳಲ್ಲಿ ಒಂದಷ್ಟು ಪಾಯಿಂಟ್‌ಗಳನ್ನು ತಂದುಕೊಟ್ಟಿದ್ದರು. ಇದು ಬಿಟ್ಟರೆ, ಒಟ್ಟಾರೆ ತಂಡದ ಸಾಧನೆ ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ. ತವರಿನ ಅಂಗಣದಲ್ಲಿ, ಸ್ಥಳೀಯ ಪ್ರೇಕ್ಷಕರ ಸಮ್ಮುಖದಲ್ಲಿ ಸಂಘಟಿತ ಹೋರಾಟ ನಡೆಸಲು ಮತ್ತು ತಂಡ ವಿಫಲವಾಗಿತ್ತು. 

ಟೂರ್ನಿಯ ಅಂಕಿ–ಅಂಶಗಳ ಮೇಲೆ ಕಣ್ಣಾಡಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ. ಭಾರತ ತಂಡ ಗುಂಪು ಹಂತದ ಮೂರೂ ಪಂದ್ಯಗಳನ್ನು ಸೋತ ಕಾರಣ ಏಳನೇ ಸ್ಥಾನಕ್ಕಾಗಿ ಸೆಣಸಿತ್ತು. ಆದ್ದರಿಂದ ತಂಡಕ್ಕೆ ಸಿಕ್ಕಿದ ಪಂದ್ಯಗಳ ಸಂಖ್ಯೆ ಕಡಿಮೆಯೇ. ಆದರೆ ಭಾರತದಷ್ಟೇ ಪಂದ್ಯಗಳನ್ನು ಆಡಿರುವ ಫಿಲಿಪೀನ್ಸ್ ಪ್ರತಿ ಪಂದ್ಯದಲ್ಲಿ ಗಳಿಸಿದ ಪಾಯಿಂಟ್ಸ್ ಸರಾಸರಿಯಲ್ಲಿ ಉತ್ತಮ ಸಾಧನೆ ಮಾಡಿದೆ. ಭಾರತಕ್ಕಿಂತ ನಾಲ್ಕು ಸ್ಥಾನ ಮೇಲಿದೆ. ಭಾರತದ ಸರಾಸರಿ 56.3 ಆಗಿದ್ದರೆ ಫಿಲಿಪ್ಪಿನ್ಸ್‌ನದ್ದು 65.8! 

ಬಿಡಿಬಿಡಿಯಾಗಿ ಪಂದ್ಯ ಗಳಲ್ಲಿ ಗಳಿಸಿದ ಪಾಯಿಂಟ್‌ಗಳ ಅವಲೋಕನ ನಡೆಸಿದರೆ ಜಪಾನ್‌, ಚೀನಾ, ಆಸ್ಟ್ರೇಲಿಯಾ ಮುಂತಾದ ತಂಡಗಳು ಪ್ರಭಾವಿ ಆಟ ಆಡಿರುವುದು ಗಮನಕ್ಕೆ ಬರುತ್ತದೆ. ಜಪಾನ್ ಎರಡು ಬಾರಿ, ಆಸ್ಟ್ರೇಲಿಯಾ ಮತ್ತು ಚೀನಾ ತಲಾ ಒಂದೊಂದು ಬಾರಿ ಪಾಯಿಂಟ್ ಗಳಿಕೆಯಲ್ಲಿ ಶತಕ ದಾಟಿದೆ. ಭಾರತ ಗಳಿಸಿದ ಅತ್ಯಧಿಕ ಪಾಯಿಂಟ್ 78.

ಅಭ್ಯಾಸ, ಟೂರ್ನಿಗಳ ಕೊರತೆ ಕಾಡಿತೇ?

2017ರಲ್ಲಿ ‘ಎ’ ವಲಯಕ್ಕೆ ಬಡ್ತಿ ಪಡೆದ ನಂತರ ಭಾರತದ ಮಹಿಳೆಯರಿಗೆ ಪ್ರಮುಖ ಟೂರ್ನಿಗಳಲ್ಲಿ ಆಡುವ ಅವಕಾಶ ಲಭಿಸಿದ್ದು ಕಡಿಮೆ. ಕಳೆದ ವರ್ಷ ವಿಲಿಯಮ್ಸ್ ಜಾನ್ಸ್ ಕಪ್‌, ಕಾಮನ್‌ವೆಲ್ತ್‌ ಹಾಗೂ ಏಷ್ಯಾಕಪ್‌ನಲ್ಲಿ ಆಡಿದ್ದ ತಂಡ ಯಾವ ಕೂಟದಲ್ಲೂ ಗಮನಾರ್ಹ ಸಾಧನೆ ಮಾಡಲಿಲ್ಲ. ನಂತರ ಏಷ್ಯಾಕಪ್‌ಗಾಗಿಯೂ ಸರಿಯಾದ ಸಿದ್ಧತೆಗಳನ್ನು ನಡೆಸಿಲ್ಲ.

‘ಸ್ಥಳೀಯ ಶಾಲಾ ತಂಡಗಳು, ಕೆಲವು ಕ್ಲಬ್‌ಗಳು ಮತ್ತು ಪುರುಷರ ತಂಡಗಳ ವಿರುದ್ಧ ಪಂದ್ಯಗಳನ್ನು ಆಡಿ ಸಿದ್ಧತೆ ಮಾಡಿಕೊಂಡಿದ್ದೆವು. ಹೀಗಾಗಿ ಏಷ್ಯಾಕಪ್‌ನಂಥ ಪ್ರಮುಖ ಟೂರ್ನಿಯಲ್ಲಿ ನಿರೀಕ್ಷೆಗೆ ತಕ್ಕಂತೆ ಆಡಲು ಆಗಲಿಲ್ಲ’ ಎಂದು ಫಿಲಿಪ್ಪಿನ್ಸ್ ಎದುರಿನ ಮಹತ್ವದ ಪಂದ್ಯವನ್ನು ಸೋತ ನಂತರ ಭಾರತದ ಶಿರೀನ್ ಲಿಮಯೆ ಅಭಿಪ್ರಾಯಪಟ್ಟಿದ್ದರು.  

ಈಗ ಭಾರತ ತಂಡದ ಅದೃಷ್ಟ ಖುಲಾಯಿಸಿದೆ. ಎರಡು ವರ್ಷ ನಿಶ್ಚಿಂತೆಯಿಂದ ’ಎ’ ವಲಯದಲ್ಲಿ ವಿರಾಜಿಸುವ ಅಪರೂಪದ ಅವಕಾಶ ದಕ್ಕಿದೆ. ಎರಡು ವರ್ಷಗಳ ನಂತರ ನಡೆಯುವ ಏಷ್ಯಾಕಪ್‌ನಲ್ಲಿ ಬಲಿಷ್ಠ ತಂಡಗಳಿಗೆ ಸವಾಲೆಸೆಯುವ ಸಾಮರ್ಥ್ಯ ನೀಡಬೇಕಾದರೆ ಈಗಲೇ ತಂಡ ಸಜ್ಜಾಗಬೇಕಿದೆ. 

ಇದನ್ನೂ ಓದಿ: ಭಾರತ ಮಹಿಳಾ ಬ್ಯಾಸ್ಕೆಟ್ ಬಾಲ್ : ಒಲಿಯುವುದೇ ಒಲಿಂಪಿಕ್ಸ್ ಅರ್ಹತಾ ಟಿಕೆಟ್?

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)