ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದೀಪನ ಮದ್ದು ಸೇವನೆ: ಪ್ರಕರಣದಿಂದ ವೇಟ್‌ಲಿಫ್ಟರ್‌ ಸಂಜಿತಾ ಮುಕ್ತ

ಒಲಿಂಪಿಕ್ಸ್‌ ಪ್ರವೇಶ ಅವಕಾಶ ಕಸಿದ ಐಡಬ್ಲ್ಯುಎಫ್
Last Updated 10 ಜೂನ್ 2020, 17:39 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ವೇಟ್‌ಲಿಫ್ಟರ್‌ ಸಂಜಿತಾ ಚಾನು ಅವರ ಮೇಲಿದ್ದ ಉದ್ದೀಪನ ಮದ್ದು ಸೇವನೆ ಪ್ರಕರಣವನ್ನು ಅಂತರರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ (ಐಡಬ್ಲ್ಯುಎಫ್‌) ‘ದೃಢೀಕೃತವಲ್ಲ’ ಎಂದು ಕೈಬಿಟ್ಟಿದೆ. ಆದರೆ ಸಂಜಿತಾ ಅವರು ಪ್ರಕರಣದ ಕಾರಣ ತಾವು ಅನುಭವಿಸಿದ ನೋವಿಗೆ ಕ್ಷಮೆ ಹಾಗೂ ಪರಿಹಾರದ ಬೇಡಿಕೆ ಇಟ್ಟಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ನನ್ನ ಅವಕಾಶವನ್ನು ಐಡಬ್ಲ್ಯುಎಫ್‌ ಕಸಿದುಕೊಂಡಿತು ಎಂದು ಅವರು ಕಿಡಿಕಾರಿದ್ದಾರೆ.

ವಿಶ್ವ ಉದ್ದೀಪನ ಮದ್ದು ಸೇವನೆ ತಡೆ ಘಟಕದ (ವಾಡಾ) ಶಿಫಾರಸಿನ ಆಧಾರದ ಮೇಲೆ ಐಡಬ್ಲ್ಯುಎಫ್‌ ಈ ನಿರ್ಧಾರಕ್ಕೆ ಬಂದಿದೆ.

ಆರಂಭದಿಂದಲೂ ‘ನಾನು ಅಮಾಯಕಳು’ ಎಂದು 26 ವರ್ಷದ ಸಂಜಿತಾ ಹೇಳುತ್ತಲೇ ಬಂದಿದ್ದರು. ಐಡಬ್ಲ್ಯುಎಫ್‌ನ ಕಾನೂನು ಸಲಹೆಗಾರ್ತಿ ಲಿಲ್ಲಾ ಸಾಗಿ ಅವರ ಸಹಿ ಹೊಂದಿರುವ ಇ–ಮೇಲ್‌ ಮೂಲಕ ಚಾನು ಅವರಿಗೆ ಅಂತಿಮ ತೀರ್ಪಿನ ಮಾಹಿತಿ ನೀಡಲಾಗಿದೆ.

‘ಚಾನು ಅವರಿಂದ ಸಂಗ್ರಹಿಸಿದ್ದ ಪರೀಕ್ಷಾ ಮಾದರಿಯಲ್ಲಿ ಉದ್ದೀಪನ ಮದ್ದಿನ ಅಂಶವಿರುವುದು ದೃಢಪಟ್ಟಿಲ್ಲ ಎಂದು ಮೇ 28ರಂದು ವಾಡಾ,ಐಡಬ್ಲ್ಯುಎಫ್‌ಗೆ ಹೇಳಿದೆ’ ಎಂದು ಇ–ಮೇಲ್‌ನಲ್ಲಿ ತಿಳಿಸಲಾಗಿದೆ.

‘ಡೋಪಿಂಗ್‌ ಪ್ರಕರಣದಿಂದ ಅಧಿಕೃತವಾಗಿ ಮುಕ್ತಿ ಸಿಕ್ಕಿರುವುದು ಸಂತಸ ತಂದಿದೆ. ಆದರೆ ಈ ಕಾರಣದಿಂದ ನಾನು ಕಳೆದುಕೊಂಡ ಅವಕಾಶಗಳ ಕತೆಯೇನು? ಅನುಭವಿಸಿದ ಹಾಗೂ ಅನುಭವಿಸುತ್ತಿರುವ ಮಾನಸಿಕ ಯಾತನೆಗೆ ಹೊಣೆ ಯಾರು?’ ಎಂದು ಮಣಿಪುರದಲ್ಲಿರುವ ಚಾನು ಪ್ರಶ್ನಿಸಿದ್ದಾರೆ.

ಅಂತಿಮ ತೀರ್ಪು ಹೊರಬೀಳದೆ ಒಬ್ಬ ಅಥ್ಲೀಟ್‌ನನ್ನು ವರ್ಷಗಳ ಕಾಲ ಅಮಾನತು ಮಾಡಲಾಗುತ್ತದೆ. ಕೊನೆಯಲ್ಲಿ ಒಂದು ದಿನ ಇ–ಮೇಲ್‌ ಮೂಲಕ ನೀವು ಪ್ರಕರಣದಿಂದ ಮುಕ್ತರಾಗಿದ್ದೀರಿ ಎಂದು ಹೇಳುತ್ತೀರಿ. ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ನನ್ನ ಅವಕಾಶವನ್ನು ಐಡಬ್ಲ್ಯುಎಫ್‌ ತನ್ನ ಜಡ ಮನೋಭಾವದಿಂದ ಕಸಿದುಕೊಂಡಿದೆ. ನನಗೆ ಕಿರುಕುಳ ನೀಡಿದ ತಪ್ಪಿಗೆ ಐಡಬ್ಲ್ಯುಎಫ್ ಕ್ಷಮೆ ಕೇಳಬೇಕು ಹಾಗೂ ಪರಿಹಾರ ನೀಡಬೇಕು’ ಎಂದು ಸಂಜಿತಾ ನುಡಿದರು.

‘ನನ್ನ ಪ್ರಕರಣದ ಕುರಿತು ಸೂಕ್ತ ವಿವರಣೆ ನೀಡಬೇಕು. ಇದಕ್ಕೆ ಕಾರಣವಾದ ಸಂಸ್ಥೆ ಅಥವಾ ವ್ಯಕ್ತಿಗಳಿಗೆ ಶಿಕ್ಷೆಯಾಗಲೇಬೇಕು. ಈ ಕುರಿತು ಮೇಲ್ಮನವಿ ಸಲ್ಲಿಸಿ ಪರಿಹಾರಕ್ಕೆ ಬೇಡಿಕೆ ಇಡುತ್ತೇನೆ’ ಎಂದು ಹೇಳಿದ್ದಾರೆ.

2017ರ ನವೆಂಬರ್‌ನಲ್ಲಿ ಸಂಜಿತಾ ಅವರಿಂದ ಪರೀಕ್ಷೆಗಾಗಿ ಮಾದರಿಯನ್ನು ಸಂಗ್ರಹಿಸಲಾಗಿತ್ತು.

2018ರ ಮೇ 15ರಿಂದ 2019ರ ಜನವರಿ 22ರ ವರೆಗೆಸಂಜಿತಾ ಅವರನ್ನು ಅಮಾನತುಗೊಳಿಸಲಾಗಿತ್ತು. ನಂತರ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು.

2014 ಮತ್ತು 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿಚಾನುಚಿನ್ನ ಗಳಿಸಿದ್ದರು.

ಮಾನಸಿಕ ಕಿರುಕುಳ ನೀಡಿದ ಆರೋಪ
ಅಂತಿಮ ತೀರ್ಪು ಹೊರಬೀಳದೆ ಒಬ್ಬ ಅಥ್ಲೀಟ್‌ನನ್ನು ವರ್ಷಗಳ ಕಾಲ ಅಮಾನತು ಮಾಡಲಾಗುತ್ತದೆ. ಕೊನೆಯಲ್ಲಿ ಒಂದು ದಿನ ಇ–ಮೇಲ್‌ ಮೂಲಕ ನೀವು ಪ್ರಕರಣದಿಂದ ಮುಕ್ತರಾಗಿದ್ದೀರಿ ಎಂದು ಹೇಳುತ್ತೀರಿ.

ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ನನ್ನ ಅವಕಾಶವನ್ನು ಐಡಬ್ಲ್ಯುಎಫ್‌ ತನ್ನ ಜಡ ಮನೋಭಾವದಿಂದ ಕಸಿದುಕೊಂಡಿದೆ. ನನಗೆ ಕಿರುಕುಳ ನೀಡಿದ ತಪ್ಪಿಗೆ ಐಡಬ್ಲ್ಯುಎಫ್ ಕ್ಷಮೆ ಕೇಳಬೇಕು ಹಾಗೂ ಪರಿಹಾರ ನೀಡಬೇಕು’ ಎಂದು ಸಂಜಿತಾ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT