ಶನಿವಾರ, ಮಾರ್ಚ್ 25, 2023
29 °C

ಕೊರೊನಾ ಸೋಂಕು ಪ್ರಕರಣ ಹೆಚ್ಚಳ: ಟೋಕಿಯೊದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಒಲಿಂಪಿಕ್ಸ್‌ ಆರಂಭಕ್ಕೆ ಎರಡೇ ವಾರಗಳು ಉಳಿದಿರುವಂತೆ ಜಪಾನ್‌ ಸರ್ಕಾರ ಟೋಕಿಯೊದಲ್ಲಿ ಗುರುವಾರ ಹೊಸದಾಗಿ ತುರ್ತು ಪರಿಸ್ಥಿತಿ ಹೇರಿದೆ. ಕ್ರೀಡೆಗಳ ವೇಳೆಯೂ ನಿರ್ಬಂಧ ಕ್ರಮಗಳು ಮುಂದುವರಿಯಲಿದೆ. ಸಂಘಟಕರು ಕ್ರೀಡೆಗಳ ಎಲ್ಲ ಸ್ಪರ್ಧೆಗಳಿಗೆ ಪ್ರೇಕ್ಷಕರನ್ನು ದೂರವಿಡಬಹುದು ಎಂದು ಮೂಲಗಳು ತಿಳಿಸಿವೆ.

ಜುಲೈ 23ರಂದು ಟೋಕಿಯೊ ಒಲಿಂಪಿಕ್‌ ಕ್ರೀಡೆಗಳ ಉದ್ಘಾಟನಾ ಸಮಾರಂಭ ನಿಗದಿಯಾಗಿದೆ. ಆದರೆ ರಾಜಧಾನಿಯಲ್ಲಿ ಸೋಂಕು ಪ್ರಕರಣಗಳು ಏರುತ್ತಿವೆ. ಅದರಲ್ಲೂ ಅಪಾಯಕಾರಿಯಾಗಿರುವ ಡೆಲ್ಟಾ ರೂಪಾಂತರ ಸೋಂಕು ಹರಡುತ್ತಿರುವುದು ಅಧಿಕಾರಿಗಳ ನಿದ್ದೆಗೆಡಿಸಿದೆ.

ಮೊಟ್ಟಮೊದಲ ಬಾರಿ ಖಾಲಿ ಕ್ರೀಡಾಂಗಣದಲ್ಲಿ ಸ್ಪರ್ಧೆಗಳನ್ನು ನಡೆಸುವ ನಿರ್ಧಾರಕ್ಕೆ ಸಂಘಟಕರು ಬಂದರೆ, ಕ್ರೀಡೆಗಳು ನಡೆಯುವ ತಾಣಗಳಿಗೆ ಹೋಗಿ ಸಂಭ್ರಮಿಸಬೇಕೆಂಬ ಸ್ಥಳೀಯ 10,000 ಪ್ರೇಕ್ಷಕರ ಬಯಕೆ ನುಚ್ಚುನೂರಾಗಲಿದೆ.

ಹೊಸ ನಿರ್ಬಂಧಗಳು ಆಗಸ್ಟ್‌ 22ರವರೆಗೆ ಜಾರಿಯಲ್ಲಿರಲಿದೆ ಎಂದು ಜಪಾನ್‌ ಪ್ರಧಾನಿ ಯೊಶಿಹಿಡೆ ಸುಗಾ ತಿಳಿಸಿದ್ದಾರೆ. ಆದರೆ ಇದು ವಿಶ್ವದ ಇತರ ಹಲವು ಕಡೆ ಹೇರಿದ್ದ ಬಿಗು ಕ್ರಮಗಳಿಗಿಂತ ಸ್ವಲ್ಪ ಸಡಿಲವಾಗಿರಲಿದೆ.

‘ಲಸಿಕೆ ಪರಿಣಾಮಗಳು ಕಂಡುಬಂದಲ್ಲಿ ಮತ್ತು ಆಸ್ಪತ್ರೆಯಲ್ಲಿ ಹಾಸಿಗೆಯ ಸಮಸ್ಯೆ ಸುಧಾರಣೆ ಆದರಲ್ಲಿ ಸರ್ಕಾರ ನಿಗದಿಗಿಂತ ಬೇಗ ತುರ್ತುಸ್ಥಿತಿ ಹಿಂಪಡೆಯಲೂಬಹುದು’ ಎಂದು ಸುಗಾ ಹೇಳಿದ್ದಾರೆ.

ಇದಕ್ಕೆ ಮೊದಲು, ಕೋವಿಡ್‌ 19 ಪ್ರಕರಣಗಳು ರಾಜಧಾನಿಯಲ್ಲಿ ಏರುತ್ತಿರುವ ಬಗ್ಗೆ ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದ ಸಚಿವರು ಎಚ್ಚರಿಕೆಯ ಮಾತುಗಳನ್ನಾಡಿದ್ದರು.

‘ಜನರ ಓಡಾಟ ಹೆಚ್ಚುತ್ತಿರುವಂತೆ ಪ್ರಕರಣಗಳು ಏರುತ್ತಿದೆ. ವರದಿಯಾಗುವ ಪ್ರಕರಣಗಳಲ್ಲಿ ಶೇ 30ರಷ್ಟು ಬಹುಬೇಗ ಹರಡುವ ಡೆಲ್ಟಾ ರೂಪಾಂತರ ವೈರಸ್‌ ಪತ್ತೆಯಾಗುತ್ತಿದೆ. ಇದು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಹೊಸ ನಿರ್ಬಂಧಗಳ ಪ್ರಕಾರ ಬಾರ್‌ ಮತ್ತು ರೆಸ್ಟೊರೆಂಟ್‌ಗಳಲ್ಲಿ ಮದ್ಯಪಾನ ನಿಷೇಧಿಸಲಾಗಿದೆ. ರಾತ್ರಿ 8 ಗಂಟೆಯೊಳಗೆ ಬಾರ್‌ಗಳನ್ನು ಬಂದ್‌ ಮಾಡಬೇಕಾಗುತ್ತದೆ. ಸಂಗೀತ ಕಛೇರಿ, ಸಭೆ, ಸಮ್ಮೇಳನಗಳು 9 ಗಂಟೆ ನಂತರ ನಡೆಯುವಂತಿಲ್ಲ.

ಈ ನಿರ್ಧಾರದಿಂದ ಒಲಿಂಪಿಕ್‌ ಸಂಘಟಕರ ಮೇಲೆ ಒತ್ತಡ ಹೆಚ್ಚಿದೆ. ಒಂದೊಮ್ಮೆ ಅವಕಾಶ ನೀಡುವುದಾದರೆ, ಸ್ಪರ್ಧಾ ಸ್ಥಳಗಳಿಗೆ ಎಷ್ಟು ಮಂದಿ ಪ್ರೇಕ್ಷಕರಿಗೆ ಬಿಡಬೇಕು ಎಂಬ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲು ಸಂಘಟಕರಿಗೆ ಇನ್ನೂ ಸಾಧ್ಯವಾಗಿಲ್ಲ. ಈಗಾಗಲೇ ಹೊರದೇಶಗಳ ಪ್ರೇಕ್ಷಕರಿಗೆ ನಿರ್ಬಂಧ ಹೇರಲಾಗಿದೆ.

ಜಪಾನ್‌ನಲ್ಲಿ ಕೆಲಸಮಯದಿಂದ ಸೀಮಿತ ಅವಧಿಯ ಲಾಕ್‌ಡೌನ್‌ಗಳನ್ನು ಹೇರಲಾಗುತ್ತಿದೆ.  ಇದುವರೆಗೆ 14,900 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಆದರೆ ಲಸಿಕೆ ಕಾರ್ಯಕ್ರಮ ತುಲನಾತ್ಮಕವಾಗಿ ನಿಧಾನಗತಿಯಲ್ಲಿ ಸಾಗಿದೆ.  ಕೇವಲ ಶೇ 15ರಷ್ಟು ಜನರು ಮಾತ್ರ ಲಸಿಕೆ ಡೋಸ್‌ಗಳನ್ನು ಪೂರ್ಣಗೊಳಿಸಿದ್ದಾರೆ.

ಡೆಲ್ಟಾ ವೈರಸ್‌ ‍ಪ್ರಕರಣಗಳು ಹೆಚ್ಚುತ್ತಾ ಹೋದಲ್ಲಿ ಮಹಾನಗರದ ವೈದ್ಯಕೀಯ ವ್ಯವಸ್ಥೆ ಹಳಿತಪ್ಪುವ ಆತಂಕವೂ ಕಾಡುತ್ತಿದೆ.

ಟೋಕಿಯೊಗೆ ಐಒಸಿ ಮುಖ್ಯಸ್ಥ: ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಮುಖ್ಯಸ್ಥ ಥಾಮಸ್‌ ಬಾಕ್‌ ಅವರು ಗುರುವಾರ ಮಧ್ಯಾಹ್ನ ಟೋಕಿಯೊಕ್ಕೆ ಬಂದಿದ್ದಾರೆ. ಮೂರು ದಿನಗಳ ಕ್ವಾರಂಟೈನ್‌ಗೆ ಒಳಗಾಗುವ ಅವರು ನಂತರ ಸೀಮಿತ ಓಡಾಟ ನಡೆಸಲಿದ್ದಾರೆ.

ಒಲಿಂಪಿಕ್‌ ಕ್ರೀಡೆಗಳಿಗೆ ಬರುವ ಸ್ಪರ್ಧಿಗಳು ಪೂರ್ಣ 14 ದಿನಗಳ ಕ್ವಾರಂಟೈನ್‌ಗೆ ಒಳಪಡಬೇಕಿಲ್ಲ. ಆದರೆ ಜಪಾನ್‌ನಲ್ಲಿ ಇರುವವರೆಗೆ ನಿರ್ಬಂಧಗಳಿಗೆ ಒಳಗಾಗಬೇಕಾಗುತ್ತದೆ. ಅಥ್ಲೀಟುಗಳು ಒಲಿಂಪಿಕ್ ಗ್ರಾಮ ಮತ್ತು ಸ್ಪರ್ಧಾ ತಾಣಗಳಿಗೆ ಸೀಮಿತಗೊಳ್ಳಬೇಕಾಗುತ್ತದೆ. ಮಾತ್ರವಲ್ಲ, ನಿತ್ಯ ಸೋಂಕು ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು