ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂಲಿಯಸ್‌ ಬಾರ್ ಜೆನರೇಷನ್‌ ಕಪ್: ಪ್ರಶಸ್ತಿಗೆ ಅರ್ಜುನ್‌– ಕಾರ್ಲ್‌ಸನ್‌ ಪೈಪೋಟಿ

ಜೂಲಿಯಸ್‌ ಬಾರ್ ಜೆನರೇಷನ್‌ ಕಪ್ ಆನ್‌ಲೈನ್ ಚೆಸ್‌ ಟೂರ್ನಿ
Last Updated 24 ಸೆಪ್ಟೆಂಬರ್ 2022, 11:25 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್‌ ಅರ್ಜುನ್ ಎರಿಗೈಸಿ ಮತ್ತು ವಿಶ್ವ ಚಾಂಪಿಯನ್‌, ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್ ಅವರು ಜೂಲಿಯಸ್‌ ಬಾರ್‌ ಜೆನರೇಷನ್ ಕಪ್‌ ಆನ್‌ಲೈನ್ ರ‍್ಯಾಪಿಡ್‌ ಚೆಸ್‌ ಟೂರ್ನಿಯ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.

ಶನಿವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ 19 ವರ್ಷದ ಅರ್ಜುನ್‌, ಟೈಬ್ರೇಕರ್‌ನಲ್ಲಿ ವಿಯೆಟ್ನಾಂನ ಲಿಯೆಮ್‌ ಕ್ವಾಂಗ್‌ ಲೀ ಅವರನ್ನು ಸೋಲಿಸಿದರು. ತೀವ್ರ ಪೈಪೋಟಿ ಕಂಡುಬಂದ ಪಂದ್ಯದ ಮೊದಲ ಗೇಮ್‌ ಡ್ರಾನಲ್ಲಿ ಅಂತ್ಯವಾಯಿತು.

ಎರಡನೇ ಗೇಮ್‌ ಜಯಿಸಿದ ಅರ್ಜುನ್‌ ಮುನ್ನಡೆ ಸಾಧಿಸಿದರು. ಆದರೆ ಮೂರನೇ ಗೇಮ್ ಮತ್ತೆ ಡ್ರಾನಲ್ಲಿ ಕೊನೆಗೊಂಡಿತು. 32 ನಡೆಗಳ ನಾಲ್ಕನೇ ಗೇಮ್‌ ಲೀ ಪಾಲಾಯಿತು. ಆದರೆ ಟೈಬ್ರೇಕರ್‌ನಲ್ಲಿ ಜಾಣತನ ಮೆರೆದ ಅರ್ಜುನ್‌ ಎರಡು ನೇರ ಗೇಮ್‌ಗಳನ್ನು ಗೆದ್ದು ಪಂದ್ಯ ಕೈವಶಮಾಡಿಕೊಂಡರು.

ನಾಲ್ಕರ ಘಟ್ಟದ ಮತ್ತೊಂದು ಸೆಣಸಾಟದಲ್ಲಿ ಕಾರ್ಲ್‌ಸನ್‌ 3–1ರಿಂದ ಜರ್ಮನಿಯ ವಿನ್ಸೆಂಟ್‌ ಕೇಮರ್‌ ಅವರಿಗೆ ಸೋಲುಣಿಸಿದರು. ಈ ಹಣಾಹಣಿಯಲ್ಲಿ ಯುವ ಆಟಗಾರನ ಸವಾಲು ಮೀರಲು ಕಾರ್ಲ್‌ಸನ್ ಬೆವರು ಹರಿಸಬೇಕಾಯಿತು. ಪಂದ್ಯದ ಮೊದಲ ಎರಡು ಗೇಮ್‌ಗಳು ಡ್ರಾನಲ್ಲಿ ಕೊನೆಗೊಂಡವು. ಆದರೆ ನಂತರದ ಎರಡು ಗೇಮ್‌ಗಳಲ್ಲಿ ವಿಶ್ವದ ಅಗ್ರ ಕ್ರಮಾಂಕದ ಆಟಗಾರ ಕಾರ್ಲ್‌ಸನ್ ಪಾರಮ್ಯ ಮೆರೆದರು.

₹ 1.20 ಕೋಟಿ ಬಹುಮಾನ ಮೊತ್ತದ ಟೂರ್ನಿಯ ಫೈನಲ್ ಪಂದ್ಯ ಶನಿವಾರ ತಡರಾತ್ರಿ ಆರಂಭವಾಗಿ ಭಾನುವಾರ ಕೊನೆಗೊಳ್ಳಲಿದೆ. ‘ಬೆಸ್ಟ್‌ ಆಫ್‌ ಫೋರ್‌‘ ಮಾದರಿಯಲ್ಲಿ ಈ ಹಣಾಹಣಿ ನಡೆಯಲಿದೆ.

ಪ್ರಿಲಿಮನರಿ ಹಂತದಲ್ಲಿ ಕಾರ್ಲ್‌ಸನ್‌ 34 ಪಾಯಿಂಟ್ಸ್‌ನೊಂದಿಗೆ ಅಗ್ರಸ್ಥಾನ ಗಳಿಸಿದರೆ, ಅರ್ಜುನ್ ಎರಡನೇ ಸ್ಥಾನ ತಮ್ಮದಾಗಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT