ಶನಿವಾರ, ಜುಲೈ 24, 2021
20 °C

ಸಿಂಧುಗೆ ಒಲಿಂಪಿಕ್ ‍ಪದಕ ಸುಲಭವಲ್ಲ: ಜ್ವಾಲಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಪಿ.ವಿ.ಸಿಂಧು ಟೋಕಿಯೊದಲ್ಲಿ ಪದಕ ಗೆಲ್ಲುವುದು ಸುಲಭವಲ್ಲ. ಒಲಿಂಪಿಕ್ಸ್‌ಗೂ ಮುನ್ನ ಅಭ್ಯಾಸಕ್ಕೆ ಸಾಕಷ್ಟು ಸಮಯ ಸಿಗದೇ ಇರುವುದರಿಂದ ಸಿಂಧು ಒತ್ತಡಕ್ಕೆ ಒಳಗಾಗಲಿದ್ದಾರೆ ಎಂದು ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಅಭಿಪ್ರಾಯಪಟ್ಟಿದ್ದಾರೆ.

ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಸೈನಾ ನೆಹ್ವಾಲ್ ಮೇಲೆ ರಿಯೊ ಒಲಿಂಪಿಕ್ಸ್ ಸಂದರ್ಭದಲ್ಲಿ ಭರವಸೆ ಹೆಚ್ಚಿತ್ತು. ಆದರೆ ಸಿಂಧು ಬೆಳ್ಳಿ ಪದಕ ಗೆದ್ದು ಬ್ಯಾಡ್ಮಿಂಟನ್ ಜಗತ್ತಿನ ಗಮನ ಸೆಳೆದಿದ್ದರು. ಈ ಸಲ ಅವರ ಮೇಲೆ ಕೋಟ್ಯಂತರ ಭಾರತೀಯರು ನಿರೀಕ್ಷೆ ಇರಿಸಿಕೊಂಡಿದ್ದಾರೆ. ಪ್ರಮುಖ ಆಟಗಾರ್ತಿಯರು ಪಾಲ್ಗೊಳ್ಳದೇ ಇರುವುದರಿಂದ ಒಲಿಂಪಿಕ್ಸ್‌ನಲ್ಲಿ ಯಶಸ್ಸು ಗಳಿಸುವ ನೆಚ್ಚಿನ ಆಟಗಾರ್ತಿ ಎನಿಸಿಕೊಂಡಿದ್ದಾರೆ. 

‘ಸಿಂಧು ಪದಕ ಗೆಲ್ಲಬೇಕೆಂಬುದು ನಮ್ಮೆಲ್ಲರ ಬಯಕೆ ಮತ್ತು ಹಾರೈಕೆ. ಆದರೆ ಅವರ ಮೇಲೆ ಕಳೆದ ಬಾರಿಗಿಂತ ಹೆಚ್ಚು ಒತ್ತಡ ಇದೆ. ರಿಯೊ ಒಲಿಂಪಿಕ್ಸ್ ಸಂದರ್ಭಕ್ಕೂ ಈಗಿನ ಸಂದರ್ಭಕ್ಕೂ ಅಜಗಜಾಂತರವಿದೆ. ಈಗ ಒತ್ತಡ ಮೀರಿ ನಿಲ್ಲಲು ಅವರು ಏನು ಮಾಡುತ್ತಾರೆ ಎಂಬುದೇ ಪ್ರಮುಖವಾಗಿ ಗಮನಹರಿಸಬೇಕಾದ ವಿಷಯವಾಗಿದೆ’  ಎಂದು ಆ್ಯಪ್‌ ಕಂಪನಿಯೊಂದು ಏರ್ಪಡಿಸಿದ್ದ ಭಾರತ ಬ್ಯಾಡ್ಮಿಂಟನ್‌ನ ನಿರೀಕ್ಷೆಗಳು ಎಂಬ ಕಾರ್ಯಕ್ರಮದಲ್ಲಿ ಜ್ವಾಲಾ ಹೇಳಿದರು.  

‘ನನ್ನ ಮಾತನ್ನು ಸಿಂಧು ಸಕಾರಾತ್ಮಕವಾಗಿ ತೆಗೆದುಕೊಳ್ಳುವರು ಎಂದು ನಂಬಿದ್ದೇನೆ. ರಿಯೊದಲ್ಲಿ ಪರಿಸ್ಥಿತಿ ಕಠಿಣವಾಗಿತ್ತು. ಟೋಕಿಯೊದಲ್ಲಿ ಇನ್ನಷ್ಟು ಕಠಿಣವಿದೆ ಎಂಬುದನ್ನು ಮರೆಯುವಂತಿಲ್ಲ. ಅವರನ್ನು ಪ್ರತಿಯೊಬ್ಬರಿಗೂ ಗೊತ್ತು. ಅವರ ಆಟ ಏನೆಂದೂ ಗೊತ್ತು. ಕೋವಿಡ್‌ನಿಂದಾಗಿ ಹೆಚ್ಚು ಟೂರ್ನಿಗಳನ್ನು ಆಡಲು ಸಾಧ್ಯವಾಗದೇ ಇರುವುದರಿಂದ ಪ್ರತಿಯೊಬ್ಬರ ಮೇಲೆಯೂ ನಕಾರಾತ್ಮಕ ಪರಿಣಾಮ ಉಂಟಾಗುವ ಸಾಧ್ಯತೆ ಇದೆ’ ಎಂದು ಅವರು ಹೇಳಿದರು.

‘ಕೋವಿಡ್‌ ಎರಡನೇ ಅಲೆ ಬರುವ ಮೊದಲು ಕೂಡ ಭಾರತೀಯರಿಗೆ ಪರಿಸ್ಥಿತಿ ಪೂರಕವಾಗಿರಲಿಲ್ಲ. ಯುರೋಪ್‌ನ ಕೆಲವು ಕಡೆಗಳಲ್ಲಿ ಟೂರ್ನಿಗಳು ನಡೆದಿವೆ. ಭಾರತದಲ್ಲಿ ಉಂಟಾಗಿರುವ ವಿಷಮ ಪರಿಸ್ಥಿತಿ ಸಿಂಧು ಮೇಲೆಯೂ ಪರಿಣಾಮ ಬೀರಲಿದೆ. ಚೀನಾ, ಜಪಾನ್ ಮುಂತಾದ ಕಡೆಯ ಆಟಗಾರ್ತಿಯರು ಅಧ್ಬುತವಾಗಿ ಆಡುತ್ತಿದ್ದಾರೆ. ಕಠಿಣ ಪರಿಶ್ರಮದ ಬಲವೂ ಅವರಿಗೆ ಇದೆ. ಕೋಚ್‌ಗೆ ಸಂಬಂಧಿಸಿದ ಗೊಂದಲ ಮತ್ತಿತರ ವಿಚಾರಗಳು ಸಿಂಧು ಹಿನ್ನಡೆಗೆ ಕಾರಣವಾಗಲಿವೆ. ಒಲಿಂಪಿಕ್ಸ್‌ಗೂ ಮೊದಲಾದರೂ ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ’ ಎಂದು ಜ್ವಾಲಾ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು