ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಠೀರವದಲ್ಲಿ ಶೀಘ್ರವೇ ಹೊಸ ಟ್ರ್ಯಾಕ್‌

₹ 4.26 ಕೋಟಿ ವೆಚ್ಚದಲ್ಲಿ ನಿರ್ಮಾಣ: ಮೂರು ಕಂಪನಿಗಳಿಂದ ಬಿಡ್‌
Last Updated 27 ಜುಲೈ 2019, 19:55 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಾನನಗರಿಯ ಹೃದಯ ಭಾಗದಲ್ಲಿರುವ ಕಂಠೀರವ ಕ್ರೀಡಾಂಗಣದಲ್ಲಿ, ಹೊಸ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಿಸಬೇಕೆಂಬ ಅಥ್ಲೀಟ್‌ಗಳ ದಶಕದ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ.

ಹೊರಾಂಗಣ ಕ್ರೀಡಾಂಗಣದಲ್ಲಿ ಹೊಸ ಟ್ರ್ಯಾಕ್‌ ನಿರ್ಮಿಸಲು (400 ಮೀಟರ್ಸ್‌) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಸಿರು ನಿಶಾನೆ ತೋರಿದೆ. ಇದಕ್ಕಾಗಿ ₹4.26 ಕೋಟಿ ಮಂಜೂರು ಮಾಡಿದೆ.

ಹೋದ ತಿಂಗಳೇ ಟೆಂಡರ್‌ ಆಹ್ವಾನಿಸಲಾಗಿದ್ದು, ಗ್ರೇಟ್‌ ಸ್ಪೋರ್ಟ್ಸ್‌ ಇನ್‌ಫ್ರಾ ಪ್ರೈವೇಟ್‌ ಲಿಮಿಟೆಡ್‌ (ಹೈದರಾಬಾದ್‌), ಅಡ್ವಾನ್ಸ್ಡ್‌ ಸ್ಪೋರ್ಟ್ಸ್‌ ಟೆಕ್ನಾಲಜೀಸ್‌ (ನವದೆಹಲಿ) ಮತ್ತು ಶಿವನರೇಶ ಸ್ಪೋರ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌ (ನವದೆಹಲಿ) ಕಂಪನಿಗಳು ಬಿಡ್‌ ಸಲ್ಲಿಸಿವೆ. 1997ರಲ್ಲಿ ಬೆಂಗಳೂರು ಮತ್ತು ಮೈಸೂರಿನಲ್ಲಿ ರಾಷ್ಟ್ರೀಯ ಕ್ರೀಡಾಕೂಟ (ನ್ಯಾಷನಲ್‌ ಗೇಮ್ಸ್‌) ಆಯೋಜನೆಯಾಗಿತ್ತು. ಇದಕ್ಕಾಗಿ ಕಂಠೀರವ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಿಸಲಾಗಿತ್ತು. 2009ರಲ್ಲಿ ಇದಕ್ಕೆ ಹೊಸ ಸ್ಪರ್ಶ ನೀಡಲಾಗಿತ್ತು.

ಈಗಿರುವ ಟ್ರ್ಯಾಕ್‌ ಹತ್ತು ವರ್ಷಗಳಷ್ಟು ಹಳೆಯದಾಗಿದ್ದು, ಸತ್ವ ಕಳೆದುಕೊಂಡಿದೆ. ಇದರಲ್ಲಿ ಅಭ್ಯಾಸ ನಡೆಸುವ ವೇಳೆ ಹಲವರು ಗಾಯಗೊಂಡಿದ್ದೂ ಇದೆ.

ಕಿತ್ತು ಹೋಗಿರುವ ಈ ಟ್ರ್ಯಾಕ್‌ನಲ್ಲೇ ಹಲವು ಸೀನಿಯರ್‌ ಅಥ್ಲೆಟಿಕ್ ಕೂಟಗಳೂ ನಡೆದಿರುವುದು ವಿಪರ್ಯಾಸ. ಅಥ್ಲೀಟ್‌ಗಳ ಬದುಕಿಗೆ ಮಾರಕವಾಗಿದ್ದ ಈ ಟ್ರ್ಯಾಕ್‌ಗೆ ಈ‌ಗ ಮುಕ್ತಿ ಸಿಗಲಿದೆ.

‘ಈಗಿರುವ ಟ್ರ್ಯಾಕ್‌ ಬಳಕೆಗೆ ಯೋಗ್ಯವಾಗಿಲ್ಲ. ಹೊಸ ಟ್ರ್ಯಾಕ್‌ ನಿರ್ಮಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ₹4.26 ಕೋಟಿ ಹಣ ಬಿಡುಗಡೆ ಮಾಡಿದೆ. ಟೆಂಡರ್‌ ಪ್ರಕ್ರಿಯೆಯೂ ಪೂರ್ಣಗೊಂಡಿದೆ’ ಎಂದು ಕರ್ನಾಟಕ ಅಥ್ಲೆಟಿಕ್‌ ಸಂಸ್ಥೆಯ (ಕೆಎಎ) ಕಾರ್ಯದರ್ಶಿ ಎ.ರಾಜವೇಲು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಕ್ಟೋಬರ್‌ ಮೊದಲ ವಾರದಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್‌ ಕೂಟ ನಡೆಯಲಿದೆ. ಹೀಗಾಗಿ ಸೆಪ್ಟೆಂಬರ್‌ ಅಂತ್ಯದೊಳಗೆ ಹೊಸ ಟ್ರ್ಯಾಕ್‌ ಸಿದ್ಧಪಡಿಸಿಕೊಂಡುವಂತೆ ಸಂಬಂಧಪಟ್ಟವರಿಗೆ ಸೂಚಿಸಿದ್ದೇವೆ. ಹಾಳಾಗಿರುವ ಟ್ರ್ಯಾಕ್‌ನಲ್ಲಿ ಈ ಸಲ ರಾಜ್ಯ ಸೀನಿಯರ್‌ ಅಥ್ಲೆಟಿಕ್ಸ್‌ ನಡೆಸಲು ನಮಗೂ ಮನಸ್ಸಿರಲಿಲ್ಲ. ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್‌) ಕೇಂದ್ರದಲ್ಲಿ ಸುಸಜ್ಜಿತ ಟ್ರ್ಯಾಕ್‌ ಇದೆ. ಅಲ್ಲಿ ಕೂಟ ಆಯೋಜಿಸಲು ಸಾಕಷ್ಟು ಪ್ರಯತ್ನಿಸಿದ್ದೆವು. ಆದರೆ ಅನುಮತಿ ಸಿಗಲಿಲ್ಲ. ಹೀಗಾಗಿ ಕಂಠೀರವದಲ್ಲೇ ಸ್ಪರ್ಧೆ ನಡೆಸುವುದು ಅನಿವಾರ್ಯವಾಯಿತು’ ಎಂದೂ ಅವರು ಹೇಳಿದರು.

ಕ್ರೀಡಾಂಗಣ ಅಥ್ಲೆಟಿಕ್ಸ್‌ಗೆ ಮೀಸಲು

‘ಕಂಠೀರವ ಕ್ರೀಡಾಂಗಣವನ್ನು ಅಥ್ಲೆಟಿಕ್ಸ್‌ಗೆ ಮೀಸಲಿಡುವಂತೆ ಹೈಕೋರ್ಟ್‌ ಆದೇಶಿಸಿದೆ. ಇನ್ನು ಮುಂದೆ ಇಲ್ಲಿ ಫುಟ್‌ಬಾಲ್‌ ಪಂದ್ಯಗಳನ್ನು ನಡೆಸಲು ಅವಕಾಶ ನೀಡುವುದಿಲ್ಲ’ ಎಂದು ರಾಜವೇಲು ಹೇಳಿದರು.

‘ಜೆಎಸ್‌ಡಬ್ಲ್ಯು ಒಡೆತನದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಈ ಹಿಂದೆ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಸೇರಿದಂತೆ ಹಲವು ಟೂರ್ನಿಗಳ ಪಂದ್ಯಗಳನ್ನು ಈ ಮೈದಾನದಲ್ಲಿ ಆಡಿತ್ತು. ಸಿಂಥೆಟಿಕ್‌ ಟ್ರ್ಯಾಕ್‌ ಹಾಳಾಗಲು ಇದು ಮುಖ್ಯ ಕಾರಣ. ಫುಟ್‌ಬಾಲ್‌ ಪಂದ್ಯಗಳು ನಡೆಯುತ್ತಿದ್ದ ಅವಧಿಯಲ್ಲಿ ಅಥ್ಲೀಟ್‌ಗಳ ಅಭ್ಯಾಸಕ್ಕೆ ಅವಕಾಶ ನಿರಾಕರಿಸಲಾಗುತ್ತಿತ್ತು. ಇದರಿಂದ ಅಥ್ಲೀಟ್‌ಗಳು ನೊಂದುಕೊಂಡಿದ್ದು ಇದೆ’ ಎಂದರು.

‘ಐಎಸ್‌ಎಲ್‌ ಸೇರಿದಂತೆ ಇತರ ಟೂರ್ನಿಗಳ ವೇಳೆ ಕಂಠೀರವದಲ್ಲಿ ಪಂದ್ಯಗಳನ್ನು ಆಯೋಜಿಸಲು ಅವಕಾಶ ನೀಡುವಂತೆ ಜೆಎಸ್‌ಡಬ್ಲ್ಯು ಸಂಸ್ಥೆಯವರು ಈಗಲೂ ಮನವಿ ಮಾಡುತ್ತಿದ್ದಾರೆ. ಈ ಸಂಬಂಧ ಚರ್ಚಿಸಲು ಶೀಘ್ರವೇ ಸಭೆ ನಡೆಸಲಿದ್ದೇವೆ. ಅಥ್ಲೀಟ್‌ಗಳ ಹಿತಕಾಯುವುದು ನಮ್ಮ ಆದ್ಯ ಕರ್ತವ್ಯ. ಹೀಗಾಗಿ ಜೆಎಸ್‌ಡಬ್ಲ್ಯು ಸಂಸ್ಥೆಗೆ ಮೈದಾನ ನೀಡದಿರುವ ನಿರ್ಣಯವನ್ನು ಕೈಗೊಳ್ಳುತ್ತೇವೆ’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT