ಬುಧವಾರ, ಮಾರ್ಚ್ 3, 2021
18 °C

ಕನ್ನಡಿಗ ಕುಸ್ತಿಪಟುಗಳಿಗೆ ರೈಲು ಮಿಸ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನೊಯ್ಡಾದಲ್ಲಿ ಭಾನುವಾರ ಮುಕ್ತಾಯಗೊಂಡ ರಾಷ್ಟ್ರೀಯ ಫ್ರೀಸ್ಟೈಲ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡ ಕರ್ನಾಟಕದ ಕುಸ್ತಿಪಟುಗಳು ವಾಪಸ್ ಬರಲು ರೈಲು ಸಿಗದ ಕಾರಣ ದೆಹಲಿಯಲ್ಲೇ ಉಳಿಯಬೇಕಾಯಿತು. ಸೌಲಭ್ಯ ಕೋರಿ ಕುಸ್ತಿಪಟುಗಳು ಸೋಮವಾರ ರಾತ್ರಿ ಹರಿಯಬಿಟ್ಟ ವಿಡಿಯೊ ವೈರಲ್ ಆಗಿದೆ.

ಸುನಿಲ್ ಫಡತಾರೆ, ಅನಿಲ್ ದಳವಾಯಿ, ರಿಯಾಜ್ ಮುಲ್ಲಾ, ಸದಾಶಿವ ನಲವಡಿ, ಸಂಗಮೇಶ, ಮುಂತಾದವರು ದೆಹಲಿಯ ನಿಜಾಮುದ್ದೀನ್ ರೈಲು ನಿಲ್ದಾಣದ ಹೊರಗೆ ರಸ್ತೆಯಲ್ಲಿ ಕುಳಿತು ವಿಡಿಯೊ ಮಾಡಿದ್ದಾರೆ.

‘ಸೋಮವಾರ ಮಧ್ಯಾಹ್ನ ದೆಹಲಿಯಿಂದ ಹೊರಟ ಗೋವಾ ಎಕ್ಸ್‌ಪ್ರೆಸ್‌ಗೆ ಟಿಕೆಟ್ ಬುಕ್‌ ಆಗಿತ್ತು. ರೈಲು ಹೊರಡುವ ವೇಳೆ ನಮ್ಮ ಟಿಕೆಟ್ ರದ್ದಾಗಿದೆ ಎಂದು ಗೊತ್ತಾಯಿತು. ಹೀಗಾಗಿ ಹೊರಗೆ ಬಂದೆವು. ಬದಲಿ ವ್ಯವಸ್ಥೆ ಆಗದ ಕಾರಣ ಇಲ್ಲೇ ಕುಳಿತಿದ್ದೇವೆ’ ಎಂದು ಅವರು ಹೇಳಿದ್ದಾರೆ.

ರಾತ್ರಿ ಪ್ರಜಾವಾಣಿ ಜೊತೆ ಮಾತನಾಡಿದ ಸದಾಶಿವ ‘ಟಿಕೆಟ್ ರದ್ದಾಗಿರುವ ವಿಷಯ ಕರ್ನಾಟಕ ಕುಸ್ತಿ ಸಂಸ್ಥೆಯವರಿಗೆ ಮೂರು ದಿನಗಳ ಹಿಂದೆಯೇ ತಿಳಿದಿದೆ. ಆದರೆ ನಮಗೆ ಮಾಹಿತಿ ನೀಡಲಿಲ್ಲ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿದ್ದೇವೆ. ಮಂಗಳವಾರ ಬೆಳಿಗ್ಗೆ ಆರು ಗಂಟೆಗೆ ರೈಲಿನಲ್ಲಿ ತೆರಳಲು ಇದೀಗ ನಾವೇ ಟಿಕೆಟ್ ಮಾಡಿದ್ದೇವೆ’ ಎಂದು ತಿಳಿಸಿದರು.

ಈ ಕುರಿತು ಸ್ಪಷ್ಟನೆ ನೀಡಿದ ರಾಜ್ಯ ಕುಸ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ‘ಇವತ್ತು ಬುಕ್ ಮಾಡಿದ್ದ ಸೀಟುಗಳು ವೇಟಿಂಗ್ ಲಿಸ್ಟ್‌ನಲ್ಲಿದ್ದವು. ಕನ್ಫರ್ಮ್ ಆಗದ ಕಾರಣ ಕುಸ್ತಿಪಟುಗಳಿಗೆ ವಾಪಸಾಗಲು ಸಾಧ್ಯವಾಗಲಿಲ್ಲ. ಅವರಿಗೆ ಬೇರೆ ರೈಲಿಯಲ್ಲಿ ವ್ಯವಸ್ಥೆ ಮಾಡಲಾಗಿದ್ದು ನಾಳೆ ವಾಪಸ್ ಬರಲಿದ್ದಾರೆ. ಜೊತೆಯಲ್ಲಿ ಹೋಗಿದ್ದ ಕೋಚ್ ವಿನೋದ್ ಕುಮಾರ್ ಅನಾರೋಗ್ಯಕ್ಕೆ ಇಡಾಗಿದ್ದರಿಂದ ಆಸ್ಪತ್ರೆಯಲ್ಲಿದ್ದರು. ಈಗ ಕುಸ್ತಿಪಟುಗಳ ಜೊತೆ ಇದ್ದಾರೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು