ಗುರುವಾರ , ಮೇ 26, 2022
23 °C
ಇಂಡಿಯನ್ ಗ್ರ್ಯಾನ್‌ ಪ್ರಿ–1, ಫೆಡರೇಷನ್ ಕಪ್ ಅಥ್ಲೆಟಿಕ್ಸ್‌ನಲ್ಲಿ ಅಮೋಘ ಸಾಧನೆ; ವಿಶ್ವ ಚಾಂಪಿಯನ್‌ಷಿಪ್ ಗುರಿ

ಜಾವೆಲಿನ್ ಥ್ರೋ: ಭರವಸೆಯ ಬೆಳಕು ಮನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಇತ್ತೀಚೆಗೆ ಮಿಂಚುತ್ತಿರುವ ಹಾಸನದ ಡಿ.ಪಿ ಮನು ಜಾವೆಲಿನ್ ಥ್ರೋದಲ್ಲಿ ಭಾರತದ ಭರವಸೆಯಾಗಿ ಮೂಡಿದ್ದಾರೆ. ಕೇರಳದಲ್ಲಿ ನಡೆದ ಫೆಡರೇಷನ್ ಕಪ್ ಮತ್ತು ಇಂಡಿಯನ್ ಗ್ರ್ಯಾನ್‌ ಪ್ರಿಯಲ್ಲಿ ಅಮೋಘ ಸಾಧನೆ ಮಾಡಿರುವ ಅವರು ಈಗ ವಿಶ್ವ ಮಟ್ಟದ ಸ್ಪರ್ಧೆಗೆ ಅಣಿಯಾಗುತ್ತಿದ್ದಾರೆ.

ಮಾರ್ಚ್‌ ತಿಂಗಳಲ್ಲಿ ತಿರುವನಂತಪುರದಲ್ಲಿ ನಡೆದ ಇಂಡಿಯನ್ ಗ್ರ್ಯಾನ್‌ ಪ್ರಿ–1ರಲ್ಲಿ ಮನು 82.43 ಮೀಟರ್ ದೂರದ ಸಾಧನೆ ಮಾಡುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಏಪ್ರಿಲ್ ಮೊದಲ ವಾರ ಕೋಯಿಕ್ಕೋಡ್‌ನಲ್ಲಿ ನಡೆದ ಫೆಡರೇಷನ್ ಕಪ್ ಅಥ್ಲೆಟಿಕ್ಸ್‌ನಲ್ಲಿ 79.17 ಮೀಟರ್ ದೂರ ಎಸೆದು ಬೆಳ್ಳಿ ಪದಕ ಗಳಿಸಿದ್ದರು. 

ಈ ಎರಡೂ ಕೂಟಗಳಲ್ಲಿ ಅವರಿಗೆ ಉತ್ತರ ಪ್ರದೇಶದ ರೋಹಿತ್ ಯಾದವ್ ತೀವ್ರ ಪೈಪೋಟಿ ಒಡ್ಡಿದ್ದರು. ಇಂಡಿಯನ್ ಗ್ರ್ಯಾನ್‌ ಪ್ರಿಯಲ್ಲಿ ಮಾಡಿರುವ ಸಾಧನೆಯ ಮೂಲಕ ಕಾಮನ್ವೆಲ್ತ್ ಮತ್ತು ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆಯುವಲ್ಲಿ ಮನು ಯಶಸ್ವಿಯಾಗಿದ್ದಾರೆ. ಬರ್ಮಿಂಗ್‌ಹ್ಯಾಂನಲ್ಲಿ ಜುಲೈನಲ್ಲಿ ಕಾಮನ್ವೆಲ್ತ್ ಗೇಮ್ಸ್ ಮತ್ತು ಸೆಪ್ಟೆಂಬರ್‌ನಲ್ಲಿ ಹ್ಯಾಂಗ್ಯೂನಲ್ಲಿ ಏಷ್ಯನ್ ಗೇಮ್ಸ್ ನಡೆಯಲಿದೆ.

ಬೇಲೂರಿನ ಪ್ರತಿಭೆ

ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಕುಪ್ಪಗೋಡು ಗ್ರಾಮದವರಾದ ಮನು ಜಾವೆಲಿನ್ ಥ್ರೋಗೆ ಆಕಸ್ಮಿಕವಾಗಿ ಪ್ರವೇಶಿಸಿದವರು. ಹೊಯ್ಸಳ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರ ಪ್ರೇರಣೆಯಿಂದ ಜಾವೆಲಿನ್ ಹಿಡಿದವರು. ಅಲ್ಲಿ ಮಾಡಿದ ಸಾಧನೆಯು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪ್ರವೇಶ ಪಡೆಯಲು ನೆರವಾಯಿತು. ಅಲ್ಲಿ 3 ವರ್ಷ ಅಭ್ಯಾಸ ಮಾಡಿದ ಅವರು ಅಂತರರಾಜ್ಯ ಕ್ರೀಡಾಕೂಟ, ಜೂನಿಯರ್ ರಾಷ್ಟ್ರೀಯ ಕೂಟ, ಖೇಲೊ ಇಂಡಿಯಾ ಕೂಟಗಳಲ್ಲಿ ಪದಕಗಳನ್ನು ಗೆದ್ದುಕೊಂಡರು.

ಕೋಚ್ ಕಾಶಿನಾಥ್ ನಾಯ್ಕ ಅವರ ಕಣ್ಣಿಗೆ ಬಿದ್ದ ನಂತರ ಮನು ಅವರ ವೃತ್ತಿಜೀವನದ ಮಗ್ಗುಲು ಬದಲಾಯಿತು. ಪುಣೆಯ ಸೇನಾ ಕ್ರೀಡಾ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿತು. ಅಲ್ಲಿ ಹವಾಲ್ದಾರ್ ಆಗಿ ನೇಮಕವಾಯಿತು. ಆ ನಂತರ ಎಸೆತದ ಸಾಮರ್ಥ್ಯ ಏಕಾಏಕಿ ವೃದ್ಧಿಯಾಯಿತು. ಇಂಡಿಯನ್ ಗ್ರ್ಯಾನ್‌ ಪ್ರಿ–1ರಲ್ಲಿ ತೋರಿದ ಸಾಮರ್ಥ್ಯ ಭಾರತದ ನಾಲ್ಕನೇ ಗರಿಷ್ಠ ಸಾಧನೆಯಾಗಿದೆ. ಈ ಪಟ್ಟಿಯ ಅಗ್ರಸ್ಥಾನದಲ್ಲಿ ಒಲಿಂಪಿಯನ್ ನೀರಜ್ ಚೋಪ್ರಾ ಇದ್ದಾರೆ. ಚೋಪ್ರಾ ಅವರ 88.06 ಮೀಟರ್ ದೂರದ ಸಾಧನೆಯ ಮೇಲೆ ಕಣ್ಣಿಟ್ಟಿರುವ ಮನು ಸದ್ಯ 85 ಮೀಟರ್‌ ಸಾಧನೆ ಮಾಡಿ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆಯುವ ಗುರಿಯೊಂದಿಗೆ ಕಠಿಣ ಅಭ್ಯಾಸ ಮಾಡುತ್ತಿದ್ದಾರೆ.

ಆರ್ಥಿಕ ನೆರವು, ಪ್ರಾಯೋಜಕತ್ವ ಬೇಕು

ಪ್ರಕಾಶ ಮತ್ತು ಸುಜಾತ ದಂಪತಿಯ ಇಬ್ಬರು ಮಕ್ಕಳಲ್ಲಿ ಹಿರಿಯರಾಗಿರುವ ಮನು ಅವರಿಗೆ ಸೇನಾ ಸಂಸ್ಥೆಯಲ್ಲಿ ಉತ್ತಮ ಪ್ರೋತ್ಸಾಹ ಸಿಗುತ್ತಿದೆ. ಆರ್ಥಿಕ ನೆರವು ಮತ್ತು ಪ್ರಾಯೋಜಕತ್ವದ ಅಗತ್ಯವಿದೆ ಎಂದು ಮನು ಹೇಳುತ್ತಾರೆ. ಜಾವೆಲಿನ್ ಖರೀದಿ, ಪ್ರೋಟೀನ್‌ಯುಕ್ತ ಆಹಾರ ಸೇವನೆ ಇತ್ಯಾದಿಗಳಿಗೆ ತುಂಬ ವೆಚ್ಚ ಆಗುತ್ತದೆ. ಆದ್ದರಿಂದ ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳ ನೆರವು ಬೇಕಾಗಿದೆ ಎಂದು ಅವರು ಹೇಳಿದರು.

****

ವೈಜ್ಞಾನಿಕ ತರಬೇತಿಯ ಮೂಲಕ ದೇಹ ತೂಕದಲ್ಲಿ ಬದಲಾವಣೆ ಮಾಡಲಾಯಿತು. ಇದು ಮನು ಅವರ ಸಾಮರ್ಥ್ಯ ಹೆಚ್ಚಳಕ್ಕೆ ಕಾರಣವಾಯಿತು. ಅವರ ಮೇಲೆ ತುಂಬ ಭರವಸೆ ಇದೆ.

- ಕಾಶಿನಾಥ್ ನಾಯ್ಕ ಜಾವೆಲಿನ್ ಕೋಚ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು