ಸೋಮವಾರ, ಏಪ್ರಿಲ್ 6, 2020
19 °C
ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ 9ನೇ ಬಾಕ್ಸರ್‌, ವಿಕಾಸ್‌ಗೆ ಬೆಳ್ಳಿ

ಬಾಕ್ಸಿಂಗ್: ಮನೀಷ್‌ಗೆ ಒಲಿಂಪಿಕ್ಸ್ ಟಿಕೆಟ್‌

ಪಿಟಿಐ Updated:

ಅಕ್ಷರ ಗಾತ್ರ : | |

ಅಮಾನ್‌, ಜೋರ್ಡಾನ್‌: ಭಾರತದ ಮನಿಷ್‌ ಕೌಶಿಕ್‌, ಬುಧವಾರ ನಡೆದ ಏಷ್ಯ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯ ಬಾಕ್ಸ್‌ ಆಫ್‌ ಫೈನಲ್‌ನ ‘ಅತ್ಯುಗ್ರ ಹಣಾಹಣಿ’ಯಲ್ಲಿ ಜಯಗಳಿಸಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. ಅವರು ‘ಟೋಕಿಯೊ ಟಿಕೆಟ್‌’ ಪಡೆದ ಭಾರತದ ಒಂಬತ್ತನೇ ಬಾಕ್ಸಿಂಗ್ ಸ್ಪರ್ಧಿ ಎನಿಸಿದರು.

ಇದರೊಂದಿಗೆ ಒಲಿಂಪಿಕ್ಸ್‌ ಅರ್ಹತಾ ಸುತ್ತಿನಲ್ಲಿ ಭಾರತ ಶ್ರೇಷ್ಠ ಸಾಧನೆ ದಾಖಲಿಸಿತು. ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತರಾದ ಕೌಶಿಕ್‌, 63 ಕೆ.ಜಿ ವಿಭಾಗದ ಈ ಸೆಣಸಾಟದಲ್ಲಿ ಎರಡನೇ ಶ್ರೇಯಾಂಕದ ಹ್ಯಾರಿಸನ್‌ ಗಾರ್ಸೈಡ್‌ ಅವರನ್ನು 4–1 ರಿಂದ ಸೋಲಿಸಿದರು. ತೀವ್ರ ಸೆಣಸಾಟದ ಇಬ್ಬರೂ ಸಾಕಷ್ಟು ಬಳಲಿದ್ದರು. ಕಾಮನ್‌ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಆಗಿದ್ದ ಆಸ್ಟ್ರೇಲಿಯಾ ಸ್ಪರ್ಧಿಯ ಮುಖ ರಕ್ತಸಿಕ್ತವಾದರೆ, ಪಕ್ಕೆಲುಬಿಗೆ ಬಿದ್ದ ಸತತ ಪಂಚ್‌ಗಳಿಂದ ಮನಿಷ್‌ ಕೂಡ ಸುಸ್ತಾಗಿದ್ದರು.

 2018ರ ಕಾಮನ್‌ವೆಲ್ತ್‌ ಗೇಮ್ಸ್‌ನ ಫೈನಲ್‌ನಲ್ಲೂ ಇವರಿಬ್ಬರು ಎದುರುಬದುರಾಗಿದ್ದರು. ಆಗ ಹ್ಯಾರಿಸನ್‌  ವಿಜೇತರಾಗಿದ್ದರು. ಈ ಬಾರಿ, ಕೌಶಿಕ್‌ ಜಯಶಾಲಿಯಾದರು.

63 ಕೆ.ಜಿ ವಿಭಾಗದಲ್ಲಿ ಈ ಟೂರ್ನಿಯಿಂದ ಆರು ಮಂದಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತಾರೆ. ಮನಿಷ್‌, ಹ್ಯಾರಿಸನ್‌ ಇಬ್ಬರೂ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲನುಭವಿಸಿದ್ದರು. ಆದರೆ ಬಾಕ್ಸ್‌ ಆಫ್‌ ಸೆಣಸಾಟದ ಮೂಲಕ ಅರ್ಹತೆ ಪಡೆಯಲು ಅವಕಾಶ ಹೊಂದಿದ್ದರು.

‘ಒಲಿಂಪಿಕ್ಸ್‌ನಲ್ಲಿ ಆಡಬೇಕೆಂಬುದು ನನ್ನ ಕನಸಾಗಿತ್ತು. ಕೊನೆಗೂ ನನ್ನ ಮತ್ತು ಕುಟುಂಬದ ಕನಸು ನನಸಾಗಿದೆ. ನನ್ನ ತರಬೇತುದಾರರು ಯಶಸ್ಸಿಗೆ ದೊಡ್ಡ ಕಾಣಿಕೆ ನೀಡಿದ್ದಾರೆ’ ಎಂದು ಸೇನೆಯಲ್ಲಿ ಕೆಲಸ ಮಾಡು‌ತ್ತಿರುವ ಮನಿಷ್‌  ಹೇಳಿದರು.

ಇದಕ್ಕೆ ಮೊದಲು, ಕಾಮನ್‌ವೆಲ್ತ್‌ ಚಾಂಪಿಯನ್‌ ವಿಕಾಸ್‌ ಕೃಷ್ಣನ್‌ (69 ಕೆ.ಜಿ ವಿಭಾಗ) ಬೆಳ್ಳಿಯ ಪದಕಕ್ಕೆ ತೃಪ್ತರಾಗಬೇಕಾಯಿತು. ಅವರು ಕಣ್ಣಿನ ಗಾಯದಿಂದಾಗಿ ಬುಧವಾರದ ಫೈನಲ್‌ನಲ್ಲಿ ಆತಿಥೇಯ ಜೋರ್ಡಾನ್‌ನ ಜೆಯದ್ ಎಶಾಸ್‌ ಎದುರು ಆಡದಿರಲು ನಿರ್ಧರಿಸಿದರು.

ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಇತರ ಬಾಕ್ಸರ್‌ಗಳೆಂದರೆ– ಎಂ.ಸಿ.ಮೇರಿಕೋಮ್‌ (51 ಕೆ.ಜಿ), ಸಿಮ್ರನ್‌ಜಿತ್‌ ಕೌರ್‌ (60 ಕೆ.ಜಿ), ಲವ್ಲಿನಾ ಬೊರ್ಗೊಯಿನ್‌ (69 ಕೆ.ಜಿ), ಪೂಜಾ ರಾಣಿ (75 ಕೆ.ಜಿ), ಅಮಿತ್‌ ಪಂಗಲ್‌ (52 ಕೆ.ಜಿ), ಆಶಿಷ್‌ ಕುಮಾರ್‌ (75 ಕೆ.ಜಿ) ಮತ್ತು ಸತೀಶ್‌ ಕುಮಾರ್‌ (+91 ಕೆ.ಜಿ).

2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಎಂಟು ಮಂದಿ ಅರ್ಹತೆ ಪಡೆದಿದ್ದೇ ಭಾರತದ ಇದುವರೆಗಿನ ಶ್ರೇಷ್ಠ ಸಾಧನೆ ಎನಿಸಿತ್ತು. ಇನ್ನೂ ಒಂದು ಅರ್ಹತಾ ಟೂರ್ನಿ ಇರುವಾಗಲೇ ಭಾರತದಿಂದ ಈ ಸಾಧನೆ ದಾಖಲಾಗಿದೆ.

ಸಚಿನ್‌ಗೆ ನಿರಾಸೆ: ಆದರೆ ಮೊದಲ ಬಾರಿ ಭಾಗವಹಿಸಿದ ಸಚಿನ್‌ ಕುಮಾರ್‌ 81 ಕೆ.ಜಿ ವಿಭಾಗದ ಬಾಕ್ಸ್‌ ಆಫ್‌ ಫೈನಲ್‌ನಲ್ಲಿ ತಾಜಿಕಿಸ್ತಾನದ ಶಬ್ಬೋಸ್‌ ನೆಗ್ಮಾಟುಲೋವ್‌ ಎದುರು ಶರಣಾದರು. ಅವರ ಒಲಿಂಪಿಕ್ಸ್‌ ಕನಸು ಕೈಗೂಡಲಿಲ್ಲ.

ಕೃಷ್ಣನ್‌ ವಿಶ್ವ ಮತ್ತು ಏಷ್ಯಾ ಚಾಂಪಿಯನ್‌ಷಿಪ್‌ನ ಪದಕ ವಿಜೇತರಾಗಿದ್ದಾರೆ. ಅವರು ಮಂಗಳವಾರ ಸೆಮಿಫೈನಲ್‌ನಲ್ಲಿ, ಎರಡನೇ ಶ್ರೇಯಾಂಕದ ಅಬ್ಲೈಖಾನ್‌ ಝುಸ್ಸುಪೊವ್‌ (ಕಜಕಸ್ತಾನ) ಅವರನ್ನು ಮಣಿಸಿದ್ದರು. ಈ ಸೆಣಸಾಟದ ಎರಡನೇ ಸುತ್ತಿನಲ್ಲಿ ಅವರ ಎಡ ಕಣ್ಣಿನ ಗುಡ್ಡೆಗೆ ಗಾಯವಾಗಿತ್ತು.

ಅಬ್ಲೈಖಾನ್‌, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಕಂಚಿನ ಪದಕ ಜಯಿಸಿದ್ದರು.

ಮುಖ್ಯಾಂಶಗಳು

* ಕಣ್ಣಿನ ಗಾಯ– ಫೈನಲ್‌ ಬಿಟ್ಟುಕೊಟ್ಟ ವಿಕಾಸ್‌

* 2012ರ ಲಂಡನ್‌ ಗೇಮ್ಸ್‌ನಲ್ಲಿ ಎಂಟು ಬಾಕ್ಸಿಂಗ್‌ ಸ್ಪರ್ಧಿಗಳು ಆಡಿದ್ದರು.

* ಬಾಕ್ಸ್‌ ಆಫ್‌ ಫೈನಲ್‌ನಲ್ಲಿ ಸೋತ ಸಚಿನ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು