ಶನಿವಾರ, ಜನವರಿ 29, 2022
23 °C
ಫೈನಲ್ ಪ್ರವೇಶಿಸಿದ ಭಾರತದ ಯುವ ಆಟಗಾರ

ಇಂಡಿಯಾ ಓಪನ್ ಬ್ಯಾಡ್ಮಿಂಟನ್: ಪ್ರಶಸ್ತಿ ಮೇಲೆ ಸೇನ್‌ ‘ಲಕ್ಷ್ಯ’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತ ಭಾರತದ ಆಟಗಾರ ಲಕ್ಷ್ಯ ಸೇನ್ ಅವರು ಇಂಡಿಯಾ ಓಪನ್ ಬ್ಯಾಡ್ಮಿಂಟನ್‌ ಟೂರ್ನಿಯ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಹಿನ್ನಡೆಯಿಂದ ಪುಟಿದೆದ್ದ ಅವರು ಸೆಮಿಫೈನಲ್‌ನಲ್ಲಿ ಮಲೇಷ್ಯಾದ ಎನ್‌ಜಿ ಜೆ ಯಾಂಗ್‌ ಅವರ ಸವಾಲು ಹತ್ತಿಕ್ಕಿದರು.

ಉತ್ತರಾಖಂಡದ ಅಲ್ಮೊರಾದ 20 ವರ್ಷದ ಲಕ್ಷ್ಯ ಅವರಿಗೆ ಇದು ವಿಶ್ವ ಟೂರ್‌ ಸೂಪರ್‌ 500 ಟೂರ್ನಿಯಲ್ಲಿ ಮೊದಲ ಫೈನಲ್‌ ಪ್ರವೇಶವಾಗಿದೆ. ಪುರುಷರ ಸಿಂಗಲ್ಸ್ ನಾಲ್ಕರ ಘಟ್ಟದ ರೋಚಕ ಹಣಾಹಣಿಯಲ್ಲಿ ಅವರು 19-21, 21-16, 21-12ರಿಂದ ವಿಶ್ವ ಕ್ರಮಾಂಕದಲ್ಲಿ 60ನೇ ಸ್ಥಾನದಲ್ಲಿರುವ ಆಟಗಾರನಿಗೆ ಸೋಲುಣಿಸಿದರು.

ಲಕ್ಷ್ಯ ಮತ್ತು ಯಾಂಗ್‌ ಸೆಮಿಫೈನಲ್‌ ಪಂದ್ಯವು ಆಕ್ರಮಣಕಾರಿ ಪರಾಕ್ರಮಗಳ ಅನಾವರಣಕ್ಕೆ ಸಾಕ್ಷಿಯಾಯಿತು.

ಮೊದಲ ಗೇಮ್‌ನಲ್ಲಿ ಬಲಿಷ್ಠ ರಿಟರ್ನ್‌, ಪರಿಣಾಮಕಾರಿ ಸ್ಮ್ಯಾಷ್‌ಗಳಿಂದ ಎದುರಾಳಿಯನ್ನು ಅಂಗಣದ ತುಂಬ ಓಡಾಡಿಸಿದ ಲಕ್ಷ್ಯ ಆರಂಭದಲ್ಲಿ 10–6ರಿಂದ ಮುಂದಿದ್ದರು. ವಿರಾಮದ ವೇಳೆಗೆ ಇದು 11–8ಕ್ಕೆ ತಲುಪಿತು. ವಿರಾಮದ ಬಳಿಕ ಚೇತರಿಸಿಕೊಂಡ ಮಲೇಷ್ಯಾ ಆಟಗಾರ 14–14ರ ಸಮಬಲ ಸಾಧಿಸಿದರು. ಬಳಿಕ ಇಬ್ಬರ ಮಧ್ಯೆ ಜಿದ್ದಾಜಿದ್ದಿ ಪೈಪೋಟಿ ನಡೆದರೂ ಗೇಮ್‌ ಯಾಂಗ್‌ ಕೈವಶವಾಯಿತು.

ಎರಡನೇ ಗೇಮ್‌ನಲ್ಲೂ ಯಾಂಗ್ ಅದೇ ಲಯ ಮುಂದುವರಿಸಿ, ಆರಂಭದಲ್ಲಿ 4–1ರಿಂದ ಮುಂದಿದ್ದರು. ವಿರಾಮದ ವೇಳೆ ಭಾರತದ ಆಟಗಾರ 9–11ರಿಂದ ಹಿಂದೆ ಇದ್ದರು. ಬಳಿಕ ಕ್ರಮೇಣ ಮೇಲುಗೈ ಸಾಧಿಸಿದ ಅವರು ಗೇಮ್‌ಅನ್ನು 19–16ಕ್ಕೆ ಕೊಂಡೊಯ್ದರು. ಯಾಂಗ್‌ ಅವರು ನೆಟ್‌ನಲ್ಲಿ ಮಾಡಿದ ಲೋಪಗಳಿಂದಾಗಿ ಗೇಮ್‌ ತನ್ನದಾಗಿಸಿಕೊಳ್ಳುವುದು ಲಕ್ಷ್ಯ ಅವರಿಗೆ ಮತ್ತಷ್ಟು ಸರಳವಾಯಿತು.

ನಿರ್ಣಾಯಕ ಮತ್ತು ಗೇಮ್‌ನಲ್ಲಿ ಲಕ್ಷ್ಯ ಮತ್ತಷ್ಟು ವಿಶ್ವಾಸದಿಂದ ಆಡಿದರು; ಜಯದ ಸಂತಸದಲ್ಲಿ ಮಿಂದೆದ್ದರು.

ಇಲ್ಲಿ ಮೂರನೇ ಶ್ರೇಯಾಂಕ ಪಡೆದಿರುವ ಲಕ್ಷ್ಯ, ಪ್ರಶಸ್ತಿಗಾಗಿ ವಿಶ್ವ ಚಾಂಪಿಯನ್‌, ಸಿಂಗಪುರದ ಲೋಹ್ ಕೀನ್ ಯಿವ್ ಎದುರು ಭಾನುವಾರ ಸೆಣಸಲಿದ್ದಾರೆ. ಕಳೆದ ವರ್ಷ ಡಚ್‌ ಓಪನ್ ಫೈನಲ್‌ನಲ್ಲೂ ಇಬ್ಬರೂ ಮುಖಾಮುಖಿಯಾಗಿದ್ದರು. ಆಗ ಸೇನ್‌ ಸೋತಿದ್ದರು.

ಐದನೇ ಶ್ರೇಯಾಂಕದ ಲೋಹ್‌ ಅವರಿಗೆ ನಾಲ್ಕರ ಘಟ್ಟದ ಪಂದ್ಯದಲ್ಲಿ ವಾಕ್‌ಓವರ್ ಸಿಕ್ಕಿತು. ಅವರ ಎದುರು ಆಡಬೇಕಿದ್ದ ಕೆನಡಾದ ಬ್ರಿಯನ್‌ ಯಂಗ್‌ ಗಂಟಲು ನೋವು ಮತ್ತು ತಲೆನೋವಿನ ಕಾರಣ ಪಂದ್ಯದಿಂದ ಹಿಂದೆ ಸರಿದರು.

ಲಕ್ಷ್ಯ ಹಾಗೂ ಲೋಹ್‌ ಒಟ್ಟು ನಾಲ್ಕು ಬಾರಿ ಮುಖಾಮುಖಿಯಾಗಿದ್ದು, ತಲಾ ಎರಡು ಬಾರಿ ಗೆಲುವು ಸಾಧಿಸಿದ್ದಾರೆ. ಆದರೆ ಕಳೆದ ಮೂರು ಪಂದ್ಯಗಳಲ್ಲಿ ಲಕ್ಷ್ಯ ಎರಡು ಬಾರಿ ನಿರಾಸೆ ಅನುಭವಿಸಿದ್ದಾರೆ.

ಲಕ್ಷ್ಯ ಅವರು ಎರಡು ಸೂಪರ್ 100 (ಡಚ್‌ ಮತ್ತು ಸಾರ್‌ಲೊರ್‌ಲಕ್ಷ್‌ ಓಪನ್‌) ಮತ್ತು ಮೂರು ಇಂಟರ್‌ನ್ಯಾಷನಲ್‌ ಚಾಲೆಂಜ್ (ಬೆಲ್ಜಿಯಂ, ಸ್ಕಾಟ್ಲೆಂಡ್‌ ಮತ್ತು ಬಾಂಗ್ಲಾದೇಶ) ಟೂರ್ನಿಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಕೋವಿಡ್‌ ಕಾರಣ ಅವರ ಯಶಸ್ಸಿನ ಓಟಕ್ಕೆ ಸ್ವಲ್ಪ ಹಿನ್ನಡೆಯಾಗಿತ್ತು.

ಕಳೆದ ವರ್ಷ ಹೈಲೊ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್‌, ವಿಶ್ವ ಟೂರ್ ಫೈನಲ್ಸ್‌ನಲ್ಲಿ ನಾಕೌಟ್‌ ಹಂತ, ಬಳಿಕ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಸಾಧನೆ ಅವರಿಂದ ಮೂಡಿಬಂದಿತ್ತು.

 

ಮತ್ತೆ ಕೋವಿಡ್‌ ಹಾವಳಿ:

ಕೋವಿಡ್‌ ಹಿನ್ನೆಲೆಯಲ್ಲಿ ಮತ್ತಿಬ್ಬರು ಆಟಗಾರರು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ರಷ್ಯಾದ ಮಿಶ್ರ ಡಬಲ್ಸ್ ಆಟಗಾರ ರೊಡಿಯೊನ್‌ ಅಲಿಮೊವ್ ಅವರಿಗೆ ಕೋವಿಡ್‌ ಖಚಿತಪಟ್ಟ ಕಾರಣ ಆಡಲಿಲ್ಲ. ಹೀಗಾಗಿ, ಪ್ರಾಥಮಿಕ ಸಂಪರ್ಕಿತೆ ಎಂದು ಪರಿಗಣಿಸಲಾದ ಅವರ ಜೊತೆ ಆಟಗಾರ್ತಿ ಅಲಿನಾ ದವ್ಲೆಟೊವಾ ಕೂಡ ಹಿಂದೆ ಹಿಂದೆ ಸರಿಯಬೇಕಾಯಿತು.

ಇದರಿಂದ ಅವರ ಎದುರಾಳಿಗಳಾಗಿದ್ದ ಇಂಡೊನೇಷ್ಯಾದ ಯಾಂಗ್‌ ಕಾಯ್ ಹೀ ಮತ್ತು ವೇ ಹಾನ್ ತೊನ್‌ ಅವರು ಮಿಶ್ರ ಡಬಲ್ಸ್ ಫೈನಲ್ ತಲುಪಿದರು.

ರಷ್ಯಾದ ಡಬಲ್ಸ್ ಆಟಗಾರ್ತಿ ಏಕಟೆರಿನಾ ಮಾಲ್ಕೊವಾ ಬೆನ್ನುನೋವಿನಿಂದ ಬಳಲಿದ ಕಾರಣ ಅವರು ಮತ್ತು ಜೊತೆಗಾರ್ತಿ ಅನಸ್ತಾಸಿಯಾ ಶಪವೊಲೊವಾ ಕೂಡ ಟೂರ್ನಿಯಿಂದ ಹಿಂದೆ ಸರಿದರು. ಇದರಿಂದಾಗಿ ಸೆಮಿಫೈನಲ್‌ನಲ್ಲಿ ಇವರ ಎದುರಾಳಿಗಳಾಗಿದ್ದ ರಷ್ಯಾದ ಅನಸ್ತಾಸಿಯಾ ಅಕ್ಚುರಿನಾ ಮತ್ತು ಓಲ್ಗಾ ಮೊರೊಜೊವಾ ಪ್ರಶಸ್ತಿ ಸುತ್ತು ತಲುಪಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು