ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಲ್ಕಾ ಸಿಂಗ್‌ಗೆ ಕೋವಿಡ್ ದೃಢ

Last Updated 20 ಮೇ 2021, 15:06 IST
ಅಕ್ಷರ ಗಾತ್ರ

ನವದೆಹಲಿ/ಚಂಡೀಗಢ: ಭಾರತದ ಸ್ಪ್ರಿಂಟ್ ದಿಗ್ಗಜ ಮಿಲ್ಕಾ ಸಿಂಗ್ ಅವರಿಗೆ ಕೊವಿಡ್ ಇರುವುದು ಗುರುವಾರ ದೃಢಪಟ್ಟಿದೆ. ಅವರು ಚಂಡೀಗಢದಲ್ಲಿರುವ ತಮ್ಮ ನಿವಾಸದಲ್ಲಿ ಪ್ರತ್ಯೇಕವಾಸದಲ್ಲಿದ್ದಾರೆ.

‘ನನಗೆ ಕೋವಿಡ್ ಲಕ್ಷಣಗಳು ಇರಲಿಲ್ಲ. ಆದರೆ ಕೆಲಸಕ್ಕಿದ್ದ ವ್ಯಕ್ತಿಯೊಬ್ಬರಿಗೆ ಪಾಸಿಟಿವ್ ಆಗಿತ್ತು. ಹೀಗಾಗಿ ಎಲ್ಲರೂ ಪರೀಕ್ಷೆ ಮಾಡಿಸಿಕೊಂಡೆವು. ಬುಧವಾರ ವರದಿ ಬಂದಿದ್ದು ನನಗೆ ಮಾತ್ರ ಸೋಂಕು ಇರುವುದು ದೃಢವಾಗಿದೆ. ಇದನ್ನು ಕಂಡು ಅಚ್ಚರಿಯಾಗಿದೆ’ ಎಂದು ಮಿಲ್ಕಾ ಸಿಂಗ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಜ್ವರವಾಗಲಿ, ಕಫವಾಗಲಿ ಇಲ್ಲ. ಮೂರು ನಾಲ್ಕು ದಿನಗಳಲ್ಲಿ ಗುಣಮುಖನಾಗುವುದಾಗಿ ವೈದ್ಯರು ತಿಳಿಸಿದ್ದಾರೆ. ನಿನ್ನೆ ಜಾಗಿಂಗ್ ಮಾಡಿದ್ದೇನೆ. ಈಗಲೂ ಅತ್ಯುತ್ಸಾಹದಲ್ಲಿದ್ದೇನೆ. ನನಗೀಗ 91 ವರ್ಷ. ನಿತ್ಯವೂ ವ್ಯಾಯಾಮ ಮಾಡುತ್ತೇನೆ. ಕೋವಿಡ್ ಕಾಲದಲ್ಲಿ ದೈಹಿಕ ಚಟುವಟಿಕೆಗಳನ್ನು ನಡೆಸುವುದು ಮತ್ತು ಆರೋಗ್ಯಕರವಾಗಿ ಇರುವುದು ಮುಖ್ಯ ಎಂದು ಪ್ರತಿಯೊಬ್ಬರಿಗೂ ಹೇಳುತ್ತಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

ಮಿಲ್ಕಾ ಸಿಂಗ್ ಅವರ ಪುತ್ರ, ಹೆಸರಾಂತ ಗಾಲ್ಫ್ ಆಟಗಾರ ಜೀವ್ ಮಿಲ್ಕಾ ಸಿಂಗ್ ದುಬೈನಲ್ಲಿದ್ದು ಈ ವಾರ ತವರಿಗೆ ಮರಳಲಿದ್ದಾರೆ. ಪ್ರಯಾಣಕ್ಕೂ ಮೊದಲು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಗಾಗಬೇಕಾಗಿದ್ದು ಅದನ್ನು ಮಾಡಿಸಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಪತಿಗೆ ಸೋಂಕು ತಗುಲಿರುವ ಬಗ್ಗೆ ಮಾಹಿತಿ ನೀಡಿರುವ ಮಿಲ್ಕಾ ಸಿಂಗ್‌ ಪತ್ನಿ ನಿರ್ಮಲ್ ಕೌರ್ ’50 ವರ್ಷಗಳಿಂದ ಅಡುಗೆ ಮಾಡುತ್ತಿರುವ ವ್ಯಕ್ತಿಯೊಬ್ಬರು ನಮ್ಮ ಮನೆಯಲ್ಲೇ ಇರುತ್ತಾರೆ. ಅಪರೂಪಕ್ಕೊಮ್ಮೆ ತಮ್ಮ ಊರು ಕಿಶನ್‌ಘರ್‌ಗೆ ಹೋಗುತ್ತಾರೆ. ಈಚೆಗೆ ಅವರಲ್ಲಿ ಜ್ವರ ಕಾಣಿಸಿಕೊಂಡಿತ್ತು. ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ವರದಿ ಬಂದಿತ್ತು. ಕೆಲವು ದಿನಗಳ ಹಿಂದೆ ಮಿಲ್ಕಾ ಸಿಂಗ್‌ ಸುಸ್ತಾಗುತ್ತಿದೆ ಎಂದರು. ಜೀವನದಲ್ಲಿ ಮೊದಲ ಬಾರಿ ಅವರ ಬಾಯಿಂದ ಇಂಥ ಮಾತು ಕೇಳಿಬಂದಿತ್ತು’ ಎಂದಿದ್ದಾರೆ.

ಏಷ್ಯನ್ ಗೇಮ್ಸ್‌ನಲ್ಲಿ ನಾಲ್ಕು ಚಿನ್ನ ಗೆದ್ದಿರುವ ಮಿಲ್ಕಾ ಸಿಂಗ್ 1958ರ ಕಾಮನ್ವೆಲ್ತ್ ಗೇಮ್ಸ್‌ನಲ್ಲೂ ಚಿನ್ನದ ಪದಕ ಗೆದ್ದಿದ್ದರು. 1960ರ ರೋಮ್ ಒಲಿಂಪಿಕ್ಸ್‌ನ 400 ಮೀಟರ್ಸ್‌ ಓಟದಲ್ಲಿ ಫೈನಲ್ ಪ್ರವೇಶಿಸಿದ್ದ ಅವರು ನಾಲ್ಕನೇ ಸ್ಥಾನ ಗಳಿಸಿದ್ದರು. ಅಲ್ಲಿ ಅವರು ಗುರಿ ಮುಟ್ಟಿದ ಅವಧಿ ರಾಷ್ಟ್ರೀಯ ದಾಖಲೆಯಾಗಿತ್ತು. 38 ವರ್ಷಗಳ ನಂತರ ಪರಮ್‌ಜೀತ್ ಸಿಂಗ್‌ ಈ ದಾಖಲೆಯನ್ನು ಮುರಿದಿದ್ದರು. 1956 ಮತ್ತು 1964ರ ಒಲಿಂಪಿಕ್ಸ್‌ನಲ್ಲೂ ಭಾರತವನ್ನು ಪ್ರತಿನಿಧಿಸಿದ್ದ ಮಿಲ್ಕಾ ಅವರಿಗೆ 1959ರಲ್ಲಿ ಪದ್ಮಶ್ರೀ ಪುರಸ್ಕಾರ ಒಲಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT