ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್| ಲವ್ಲಿನಾಗೆ ಗೆಲುವು: ಪ್ರೀತಿಗೆ ಸೋಲು

ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಎಂಟರ ಘಟ್ಟಕ್ಕೆ ಸಾಕ್ಷಿ
Last Updated 20 ಮಾರ್ಚ್ 2023, 18:02 IST
ಅಕ್ಷರ ಗಾತ್ರ

ನವದೆಹಲಿ: ಎದುರಾಳಿಯ ವಿರುದ್ಧ ಸಂಪೂರ್ಣ ಪಾರಮ್ಯ ಮೆರೆದ ಭಾರತದ ಸಾಕ್ಷಿ ಚೌಧರಿ ಹಾಗೂ ಲವ್ಲಿನಾ ಬೊರ್ಗೊಹೈನ್ ಅವರು ಸೋಮವಾರ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು.

ಇಲ್ಲಿಯ ಕೆ.ಡಿ. ಜಾಧವ್ ಒಳಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ 52 ಕೆಜಿ ವಿಭಾಗದ 16ರ ಘಟ್ಟದ ಬೌಟ್‌ನಲ್ಲಿ ಸಾಕ್ಷಿ 5–0ಯಿಂದ ಕಜಕಸ್ತಾನದ ಜಜೀರಾ ಯುರಾಕ್‌ಬಯೆವಾ ಅವರನ್ನು ಪರಾಭವಗೊಳಿಸಿದರು.

2021ರ ಏಷ್ಯನ್ ಚಾಂಪಿಯನ್ ಆಗಿರುವ ಸಾಕ್ಷಿ, ತಮ್ಮ ನೀಳಕಾಯದ ಲಾಭ ಪಡೆದರು. ದೂರದಿಂದ ಎದುರಾಳಿಗೆ ಪಂಚ್‌ ಮಾಡಿ, ತಕ್ಷಣ ಹಿಂದೆ ಸರಿಯುತ್ತಿದ್ದರು. ಕಜಕಸ್ತಾನದ ಬಾಕ್ಸರ್‌ಗೆ ಪ್ರತಿದಾಳಿ ನಡೆಸುವ ಅವಕಾಶವನ್ನು ಹೆಚ್ಚು ನೀಡಲಿಲ್ಲ.

ರಿಂಗ್‌ನಲ್ಲಿ ಚುರುಕಿನಿಂದ ಓಡಾಡಿದ ಭಾರತದ ಬಾಕ್ಸರ್‌, ಬಿರುಸಿನ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.

‘ಈ ಬೌಟ್‌ನಲ್ಲಿ ನಾನು ನಿರೀಕ್ಷೆಗಿಂತ ಉತ್ತಮ ಸಾಮರ್ಥ್ಯ ತೋರಿದೆ. ಜಜೀರಾ ಶ್ರೇಷ್ಠ ಬಾಕ್ಸರ್‌ ಆಗಿದ್ದರಿಂದ ಜಿದ್ದಾಜಿದ್ದಿ ನಡೆಯಿತು. ನಾನು ರೂಪಿಸಿದ ಕಾರ್ಯತಂತ್ರ ಫಲ ನೀಡಿತು‘ ಎಂದು ಬೌಟ್‌ ಬಳಿಕ ಸಾಕ್ಷಿ ನುಡಿದರು.

75 ಕೆಜಿ ವಿಭಾಗದ ಪ್ರೀಕ್ವಾರ್ಟರ್‌ ಹಣಾಹಣಿಯಲ್ಲಿ ಲವ್ಲಿನಾ ಬೊರ್ಗೊಹೈನ್ ಅವರು 5–0ಯಿಂದ ಮೆಕ್ಸಿಕೊದ ವೆನೆಸ್ಸಾ ಸಿಟಾಲ್ಲಿ ಆರ್ಟಿಜ್ ಅವರನ್ನು ಪರಾಭವಗೊಳಿಸಿದರು. ಬಲಿಷ್ಠ ಪಂಚ್‌ಗಳನ್ನು ಪ್ರಯೋಗಿಸಿದ ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲವ್ಲಿನಾ, ರಕ್ಷಣಾತ್ಮಕ ಆಟಕ್ಕೂ ಒತ್ತುಕೊಟ್ಟು ಗೆಲುವಿನ ನಗೆ ಬೀರಿದರು.

ಚಾಂಪಿಯನ್‌ಷಿಪ್‌ನ ಮೊದಲ ಬೌಟ್‌ನಲ್ಲಿ ಲವ್ಲಿನಾ ಬೈ ಸಿಕ್ಕಿತ್ತು.

ಹೋರಾಡಿ ಸೋತ ಪ್ರೀತಿ: 54 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಪ್ರೀತಿ ಅವರು ಪ್ರೀಕ್ವಾರ್ಟರ್‌ನ ಮತ್ತೊಂದು ಬೌಟ್‌ನಲ್ಲಿ 3–4ರಿಂದ ಥಾಯ್ಲೆಂಡ್‌ನ ಜಿಪ್ಟಾಂಗ್‌ ಜುಟಾಮಸ್‌ ಎದುರು ಸೋತರು. ಜುಟಾಮಸ್‌ ಅವರು ಕಳೆದ ವರ್ಷ ಬೆಳ್ಳಿ ಪದಕ ಜಯಿಸಿದ್ದರು.

ಆಕ್ರಮಣಕಾರಿ ಆಟವಾಡಿದ ಪ್ರೀತಿ ಮೊದಲ ಸುತ್ತಿನಲ್ಲಿ ಜಯ ಗಳಿಸಿದರು. ಆದರೆ ಕೊನೆಯ ಎರಡು ಸುತ್ತುಗಳಲ್ಲಿ ಥಾಯ್ಲೆಂಡ್‌ ಬಾಕ್ಸರ್ ಮೇಲುಗೈ ಸಾಧಿಸಿದರು. ರೆಫರಿಗಳ ಮರುಪರಿಶೀಲನೆಯ ಬಳಿಕ ಅಂತಿಮ ಫಲಿತಾಂಶವನ್ನು ನಿರ್ಧರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT