ಶುಕ್ರವಾರ, ಜನವರಿ 24, 2020
20 °C
ಯುವ ಆಟಗಾರರಾದ ವಿವೇಕ್, ಲಾಲ್‌ರೆಮ್ಸಿಯಾಮಿ ‘ಉದಯೋನ್ಮುಖ’ ಪ್ರಶಸ್ತಿಗೆ ಶಿಫಾರಸು

ವರ್ಷದ ಆಟಗಾರ ಪ್ರಶಸ್ತಿಗೆ ಮನ್‌ಪ್ರೀತ್ ಹೆಸರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಾಸನ್ನೆ: ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಅವರ ಹೆಸರನ್ನು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ (ಎಫ್ಐಎಚ್) ವರ್ಷದ ಆಟಗಾರ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ವಿವೇಕ್ ಪ್ರಸಾದ್ ಮತ್ತು ಲಾಲ್‌ರೆಮ್ಸಿಯಾಮಿ ಅವರನ್ನು ಉದಯೋನ್ಮುಖ ತಾರೆಯರು ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಭಾರತ ತಂಡ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ಮನ್‌ಪ್ರೀತ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಈ ಸಾಧನೆಯೇ ಅವರ ಹೆಸರನ್ನು ಶಿಫಾರಸು ಮಾಡಲು ಕಾರಣ. 27 ವರ್ಷದ ಮನ್‌ಪ್ರೀತ್ 242 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು ಭಾರತ ತಂಡದ ಮಿಡ್‌ಫೀಲ್ಡ್ ವಿಭಾಗದ ಆಧಾರಸ್ತಂಭವಾಗಿದ್ದಾರೆ. ಒಲಿಂಪಿಕ್ ಅರ್ಹತಾ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಅವರ ನಾಯಕತ್ವದಲ್ಲಿ ಭಾರತ ತಂಡ ರಷ್ಯಾವನ್ನು ಮಣಿಸಿತ್ತು.  

ಪ್ರಸಾದ್‌ಗೆ ಈಗ 19 ವರ್ಷ. ಮಿಡ್‌ಫೀಲ್ಡರ್ ಆಗಿರುವ ಅವರು ಕಳೆದ ವರ್ಷ ನಡೆದ ಯೂತ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ತಂಡ ಬೆಳ್ಳಿ ಪದಕ ಗೆದ್ದಿತ್ತು. ಈ ವರ್ಷ ನಡೆದಿದ್ದ ಎಫ್‌ಐಎಚ್ ಸೀರಿಸ್‌ನ ಫೈನಲ್‌ನಲ್ಲಿ ಅವರು ಅತ್ಯುತ್ತಮ ಯುವ ಆಟಗಾರ ಪ್ರಶಸ್ತಿ ಗಳಿಸಿದ್ದರು.

ಮಹಿಳಾ ತಂಡದ ಪ್ರಮುಖ ಆಟಗಾರ್ತಿ ಲಾಲ್‌ರೆಮ್ಸಿಯಾಮಿ ಫಾರ್ವರ್ಡ್ ಆಟಗಾರ್ತಿ. ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ತಂಡದಲ್ಲಿ ಅವರು ಆಡಿದ್ದರು. ಆಸ್ಟ್ರೇಲಿಯಾದ ಎಡಿ ಒಕೆಂಡೆನ್ ಮತ್ತು ಅರಾನ್ ಜಲೆವ್‌ಸ್ಕಿ, ಅರ್ಜೆಂಟೀನಾದ ಲೂಕಾಸ್ ವಿಲಾ, ಬೆಲ್ಜಿಯಂನ ಆರ್ಥರ್ ವ್ಯಾನ್ ಡೊರೆನ್ ಮತ್ತು ವಿಕ್ಟರ್ ವೆಗ್ನೆಸ್ ಮುಂತಾದವರೂ ವರ್ಷದ ಆಟಗಾರ ಪ್ರಶಸ್ತಿಗೆ ಶಿಫಾರಸು ಮಾಡಲಾದವರ ಪಟ್ಟಿಯಲ್ಲಿದ್ದಾರೆ.

ವರ್ಷದ ಪ್ರಶಸ್ತಿಗೆ ಶಿಫಾರಸು ಆದವರು: ಪುರುಷರು: ಮನ್‌ಪ್ರೀತ್ ಸಿಂಗ್ (ಭಾರತ), ಎಡಿ ಒಕೆಂಡನ್, ಅರಾನ್ ಜಲೆವ್‌ಸ್ಕಿ (ಆಸ್ಟ್ರೇಲಿಯಾ), ಲೂಕಾಸ್ ವಿಲಾ (ಅರ್ಜೆಂಟೀನಾ), ಆರ್ಥರ್ ವ್ಯಾನ್ ಡೊರೆನ್ (ಬೆಲ್ಜಿಯಂ), ವಿಕ್ಟರ್ ವೆಗ್ನೆಜ್ (ಬೆಲ್ಜಿಯಂ). ಮಹಿಳೆಯರು: ಕಾರ್ಲಾ ರೆಬೆಚಿ (ಅರ್ಜೆಂಟೀನಾ), ಜನಿ ಮುಲ್ಲರ್ ವೀಲ್ಯಾಂಡ್ (ಜರ್ಮನಿ), ಇವಾ ಡಿ ಗೋಡೆ, ಫ್ರೆಡ್ರಿಕ್ ಮಾಟ್ಲಾ (ನೆದರ್ಲೆಂಡ್ಸ್‌), ಸ್ಟೇಸಿ ಮಿಚೆಲ್ಸೆನ್, ಒಲಿವಿಯಾ ಮೆರಿ (ನ್ಯೂಜಿಲೆಂಡ್).

ಗೋಲ್‌ಕೀಪರ್‌ಗಳು: ಪುರುಷರು: ಟೈಲೇರ್ ಲೊವೆಲ್ (ಆಸ್ಟ್ರೇಲಿಯಾ), ವಿನ್ಸೆಂಟ್ ವನಾಶ್ (ಬೆಲ್ಜಿಯಂ), ಡೇವಿಡ್ ಕಾರ್ಟರ್ (ಕೆನಡಾ), ಕ್ವಿಕೊ ಕಾರ್ಟಸ್ (ಸ್ಪೇನ್), ವಿಕ್ಟರ್ ಆಲಿ (ಜರ್ಮನಿ). ಮಹಿಳೆಯರು: ರಾಚೆಲ್ ಲಿಂಚ್ (ಆಸ್ಟ್ರೇಲಿಯಾ), ಮರಿಯಾ ರೂಜಿಜ್ (ಸ್ಪೇನ್), ಮಟಿಲ್ಡೆ ಪ್ಯಾಟ್ರಿಕ್ಸ್ (ಫ್ರಾನ್ಸ್), ಆಯೆಷಾ ಮೆಕ್‌ಫೆರಾನ್ (ಐರ್ಲೆಂಡ್), ಮೇಗುಮಿ ಕಗೆಯಾಮ (ಜಪಾನ್).

ಉದಯೋನ್ಮುಖ ತಾರೆ: ವಿವೇಕ್ ಪ್ರಸಾದ್ (ಭಾರತ), ಮೈಕೊ ಕಾಸೆಲಾ (ಅರ್ಜೆಂಟೀನಾ), ಬ್ಲೇಕ್ ಗೋವರ್ಸ್‌ (ಆಸ್ಟ್ರೇಲಿಯಾ), ಜಚಾರಿ ವಲೇಸ್ (ಬ್ರಿಟನ್), ಜೊನಾಸ್ ಡಿ ಗುವೆಜ್ (ನೆದರ್ಲೆಂಡ್ಸ್‌). ಮಹಿಳೆಯರು: ಲಾಲ್‌ರೆಮ್ಸಿಯಾಮಿ (ಭಾರತ), ಜುಲಿಯೆಟಾ ಜಂಕುನಾಸ್ (ಅರ್ಜೆಂಟೀನಾ), ಜೊಂಗ್ ಜಿಯಾಗಿ (ಚೀನಾ), ನೈಕಿ ಲೊರೆಜ್ (ಜರ್ಮನಿ).

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು