ಭಾನುವಾರ, ಸೆಪ್ಟೆಂಬರ್ 20, 2020
24 °C

ಇವರ ಮೇಲೆ ಎಲ್ಲರ ಗಮನ..

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

ಹದಿನೆಂಟನೇ ಏಷ್ಯನ್‌ ಕ್ರೀಡಾಕೂಟಕ್ಕೆ ದಿನಗಣನೆ ಶುರುವಾಗಿದೆ. ಇಂಡೊನೇಷ್ಯಾದಲ್ಲಿ ಆಯೋಜನೆಯಾಗಿರುವ ಕೂಟದಲ್ಲಿ ಭಾರತ ಹಿಂದೆಂದಿಗಿಂತಲೂ ಹೆಚ್ಚು ಪದಕಗಳನ್ನು ಗೆಲ್ಲುವ ನಿರೀಕ್ಷೆ ಗರಿಗೆದರಿದೆ. ಇತ್ತೀಚೆಗೆ ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕೂಟದಲ್ಲಿ ಭಾರತ ಒಟ್ಟು 66 ಪದಕಗಳನ್ನು ಗೆದ್ದಿತ್ತು. ಇದರೊಂದಿಗೆ ಪದಕ ಪಟ್ಟಿಯಲ್ಲಿ ಮೂರನೆ ಸ್ಥಾನ ಗಳಿಸಿ ಗಮನಸೆಳೆದಿತ್ತು.

ಈ ನೆನಪು ಕ್ರೀಡಾಪ್ರೇಮಿಗಳ ಮನದಲ್ಲಿ ಹಾಸುಹೊಕ್ಕಾಗಿರುವ ಹೊತ್ತಿನಲ್ಲೇ ಮತ್ತೊಂದು ಕ್ರೀಡಾ ಹಬ್ಬ ಆರಂಭವಾಗುತ್ತಿದೆ. ಜಕಾರ್ತದಲ್ಲಿ 15 ದಿನಗಳ ಕಾಲ ನಡೆಯುವ ಏಷ್ಯನ್‌ ಕೂಟದಲ್ಲಿ ಭಾರತದ ದೊಡ್ಡ ಪಡೆಯೇ ಕಣಕ್ಕಿಳಿಯುತ್ತಿದೆ.

ಅಥ್ಲೆಟಿಕ್ಸ್‌, ಬ್ಯಾಡ್ಮಿಂಟನ್‌, ಟೆನಿಸ್‌, ಶೂಟಿಂಗ್‌, ಕುಸ್ತಿ, ಸ್ಕ್ವಾಷ್‌ ಮತ್ತು ಬಾಕ್ಸಿಂಗ್‌ ಸೇರಿದಂತೆ ಇತರೆ ಕ್ರೀಡೆಗಳಲ್ಲಿ ಚೀನಾ, ಜಪಾನ್‌, ದಕ್ಷಿಣ ಕೊರಿಯಾಗಳಂತಹ ಪ್ರಬಲ ರಾಷ್ಟ್ರಗಳ ಸ್ಪರ್ಧಿಗಳಿಗೆ ಸವಾಲೊಡ್ಡಬಲ್ಲ ಸಮರ್ಥರು ತಂಡದಲ್ಲಿದ್ದಾರೆ. ಈ ‍ಪೈಕಿ ಕೆಲವರಂತೂ ಪದಕ ಗೆದ್ದೇ ಗೆಲ್ಲುತ್ತಾರೆ ಎಂದು ಈಗಾಗಲೇ ಕ್ರೀಡಾ ಪಂಡಿತರು ಷರಾ ಬರೆದಿದ್ದಾರೆ. ಅಂತಹ ಕೆಲ ಸ್ಪರ್ಧಿಗಳ ಪ್ರಮುಖ ಸಾಧನೆಗಳ ಮೇಲೆ ಇಲ್ಲಿ ಬೆಳಕು ಚೆಲ್ಲಲಾಗಿದೆ.

* ನೀರಜ್‌ ಚೋಪ್ರಾ (ಅಥ್ಲೆಟಿಕ್ಸ್‌)
ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ನ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಹೊಸ ಮೈಲುಗಲ್ಲು ಸ್ಥಾಪಿಸಿದ್ದವರು ನೀರಜ್‌. ಈ ಬಾರಿಯ ಕಾಮನ್‌ವೆಲ್ತ್‌ ಕೂಟದಲ್ಲೂ ಅವರಿಂದ ಚಿನ್ನದ ಸಾಧನೆ ಮೂಡಿಬಂದಿತ್ತು.

* ಸುಶೀಲ್‌ ಕುಮಾರ್‌ (ಕುಸ್ತಿ)
ಭಾರತದ ಕುಸ್ತಿ ಲೋಕದ ದಿಗ್ಗಜ ಸುಶೀಲ್‌. ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಹಿರಿಮೆ ಇವರದ್ದಾಗಿದೆ. ಈ ಬಾರಿಯ ಕಾಮನ್‌ವೆಲ್ತ್‌ ಕೂಟದ 74 ಕೆ.ಜಿ. ಫ್ರೀಸ್ಟೈಲ್‌ನಲ್ಲಿ ಚಿನ್ನ ಗೆದ್ದು ಭರವಸೆ ಹೆಚ್ಚಿಸಿದ್ದಾರೆ.

* ಜಿನ್ಸನ್‌ ಜಾನ್ಸನ್‌ (ಅಥ್ಲೆಟಿಕ್ಸ್‌)
27ರ ಹರೆಯದ ಜಾನ್ಸನ್‌ 800 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ (1ನಿಮಿಷ 45.65ಸೆ.) ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡು ಪದಕಗಳನ್ನು ಗೆದ್ದಿ ಹಿರಿಮೆ ಇವರದ್ದಾಗಿದೆ. 1500 ಮೀ. ಓಟದಲ್ಲೂ ರಾಷ್ಟ್ರೀಯ ದಾಖಲೆ ನಿರ್ಮಿಸಿ ಗಮನ ಸೆಳೆದಿದ್ದಾರೆ.

* ರೋಹನ್‌ ಬೋಪಣ್ಣ (ಟೆನಿಸ್‌)
ಭಾರತದ ಅನುಭವಿ ಟೆನಿಸ್‌ ಆಟಗಾರ ರೋಹನ್‌ ಬೋಪಣ್ಣ. ಪುರುಷರ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ ವಿಭಾಗಗಳಲ್ಲಿ ಆಡುವ ರೋಹನ್‌, 2017 ಫ್ರೆಂಚ್‌ ಓಪನ್‌ನ ಮಿಶ್ರ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು.

* ಅನೀಶ್‌ ಭಾನವಾಲಾ (ಶೂಟಿಂಗ್‌)
ಹರಿಯಾಣದ ಅನೀಶ್‌, ಶೂಟಿಂಗ್‌ನಲ್ಲಿ ಭಾರತದ ಭರವಸೆಯಾಗಿದ್ದಾರೆ. ಗೋಲ್ಡ್‌ ಕೋಸ್ಟ್‌ ಕಾಮನ್‌ವೆಲ್ತ್‌ ಕೂಟದ 25 ಮೀಟರ್ಸ್‌ ರ‍್ಯಾಪಿಡ್‌ ಫೈರ್‌ ಪಿಸ್ತೂಲ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಇವರು ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ ಮತ್ತು ಜೂನಿಯರ್‌ ವಿಶ್ವಕಪ್‌ನಲ್ಲಿ ತಲಾ ಐದು ಪದಕಗಳನ್ನು ಜಯಿಸಿದ್ದಾರೆ.

* ಮೊಹಮ್ಮದ್‌ ಅನಾಸ್‌ (ಅಥ್ಲೆಟಿಕ್ಸ್‌)
ಕೇರಳದ ಅನಾಸ್‌ ಅವರು 400 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ (45.24ಸೆ.) ನಿರ್ಮಿಸಿದ್ದಾರೆ.
2017ರಲ್ಲಿ ಭುವನೇಶ್ವರದಲ್ಲಿ ನಡೆದಿದ್ದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.

* ಬಜರಂಗ್‌ ಪೂನಿಯಾ (ಕುಸ್ತಿ)
ಈ ಬಾರಿಯ ಕಾಮನ್‌ವೆಲ್ತ್‌ ಕೂಟದ 65 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ಚಿನ್ನದ ಪದಕ ಜಯಿಸಿದ್ದ ಹಿರಿಮೆ ಬಜರಂಗ್‌ ಅವರದ್ದು. 2014ರ ಏಷ್ಯನ್‌ ಕೂಟದ 61 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಇವರು ಬೆಳ್ಳಿಯ ಪದಕ ಜಯಿಸಿದ್ದರು.

* ಕಿದಂಬಿ ಶ್ರೀಕಾಂತ್‌ (ಬ್ಯಾಡ್ಮಿಂಟನ್‌)
ಬ್ಯಾಡ್ಮಿಂಟನ್‌ ಕ್ರೀಡೆಯ ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್‌ ಭಾರತದ ಭರವಸೆಯಾಗಿದ್ದಾರೆ. ಈ ಬಾರಿಯ ಕಾಮನ್‌ವೆಲ್ತ್ ಕೂಟದ ಸಿಂಗಲ್ಸ್‌ನಲ್ಲಿ ಬೆಳ್ಳಿಯ ಪದಕ ಗೆದ್ದಿದ್ದ ಇವರು ಮಿಶ್ರ ತಂಡ ವಿಭಾಗದಲ್ಲಿ ಭಾರತ ತಂಡ ಚಿನ್ನ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

* ತೇಜಿಂದರ್‌ ಪಾಲ್‌ (ಅಥ್ಲೆಟಿಕ್ಸ್‌)
ಶಾಟ್‌ಪಟ್‌ ಸ್ಪರ್ಧಿ ತೇಜಿಂದರ್‌ ಹೋದ ವರ್ಷ ನಡೆದಿದ್ದ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕ ಗೆದ್ದಿದ್ದರು. ಈ ಕೂಟದಲ್ಲಿ ಅವರು ಕಬ್ಬಿಣದ ಗುಂಡನ್ನು 19.77 ಮೀಟರ್ಸ್‌ ದೂರ ಎಸೆದಿದ್ದರು. ಇದು ಅವರ ಶ್ರೇಷ್ಠ ಸಾಧನೆಯಾಗಿದೆ.

* ಧರುಣ್‌ ಅಯ್ಯಸಾಮಿ (ಅಥ್ಲೆಟಿಕ್ಸ್‌)
400 ಮೀಟರ್ಸ್‌ ಹರ್ಡಲ್ಸ್‌ನಲ್ಲಿ ಧರುಣ್‌ ರಾಷ್ಟ್ರೀಯ ದಾಖಲೆ (49.68ಸೆ.) ನಿರ್ಮಿಸಿದ್ದಾರೆ. ಧರುಣ್‌ ಅವರಿಗೆ ಫಿಲಿಪ್ಪೀನ್ಸ್‌ನ ಎರಿಕ್‌ ಕ್ರೆಯ್‌ ಮತ್ತು ತೈವಾನ್‌ನ ಚೆನ್‌ ಚಿಹಾ ಅವರಿಂದ ಕಠಿಣ ಸ್ಪರ್ಧೆ ಎದುರಾಗುವ ನಿರೀಕ್ಷೆ ಇದೆ.

* ಜಿ.ಲಕ್ಷ್ಮಣನ್‌ (ಅಥ್ಲೆಟಿಕ್ಸ್‌)
ದೂರ ಅಂತರದ ಓಟಗಳಲ್ಲಿ (5,000 ಮತ್ತು 10,000 ಮೀಟರ್ಸ್‌) ಸ್ಪರ್ಧಿಸುವ ಲಕ್ಷ್ಮಣನ್‌ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನ ಸೇರಿ ಒಟ್ಟು ನಾಲ್ಕು ಪದಕಗಳನ್ನು ಜಯಿಸಿದ್ದಾರೆ.

* ವಿನೇಶಾ ಪೋಗಟ್‌ (ಕುಸ್ತಿ)
2014ರ ಇಂಚೆನ್‌ ಏಷ್ಯನ್‌ ಕೂಟದ ಕುಸ್ತಿಯಲ್ಲಿ (48 ಕೆ.ಜಿ.ವಿಭಾಗ) ವಿನೇಶಾ, ಕಂಚಿನ ಪದಕ ಜಯಿಸಿ ಗಮನ ಸೆಳೆದಿದ್ದರು. ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕೂಟದ 50 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು.

* ಸಾಕ್ಷಿ ಮಲಿಕ್‌ (ಕುಸ್ತಿ)
ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹಿರಿಮೆ ಸಾಕ್ಷಿ ಅವರದ್ದು. 2016ರ ರಿಯೊ ಕೂಟದಲ್ಲಿ 58 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. ಕಾಮನ್‌ವೆಲ್ತ್‌ ಕೂಟದಲ್ಲಿ ಎರಡು ಪದಕ ಗೆದ್ದಿದ್ದಾರೆ.

* ದೀಪಿಕಾ ಪಳ್ಳಿಕಲ್‌ (ಸ್ಕ್ವಾಷ್‌)
ಸ್ಕ್ವಾಷ್‌ ತಾರೆ ದೀಪಿಕಾ, 2014ರ ಏಷ್ಯನ್‌ ಕೂಟದ ಸಿಂಗಲ್ಸ್‌ನಲ್ಲಿ ಕಂಚಿನ ಪದಕದ ಸಾಧನೆ ಮಾಡಿದ್ದರು. ತಂಡ ವಿಭಾಗದಲ್ಲಿ ಅವರು ಬೆಳ್ಳಿಯ ಪದಕಕ್ಕೆ ಮುತ್ತಿಕ್ಕಿದ್ದರು. ಇವರು ಕಾಮನ್‌ವೆಲ್ತ್‌ನಲ್ಲಿ ಮೂರು ಪದಕಗಳನ್ನು ಜಯಿಸಿದ್ದಾರೆ.

* ಹಿಮಾ ದಾಸ್‌ (ಅಥ್ಲೆಟಿಕ್ಸ್‌)
ಭಾರತದ ಅಥ್ಲೆಟಿಕ್ಸ್‌ ಲೋಕದ ಚಿನ್ನದ ಹುಡುಗಿ ಹಿಮಾ.
ಅಸ್ಸಾಂ ರಾಜ್ಯದ ಈ ಓಟಗಾರ್ತಿ ಇತ್ತೀಚೆಗೆ ಫಿನ್ಲೆಂಡ್‌ನ ತಾಮ್‌ಪೆರ್‌ನಲ್ಲಿ ನಡೆದಿದ್ದ 20 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಷಿಪ್‌ನ 400 ಮೀಟರ್ಸ್‌ ಓಟದಲ್ಲಿ ಚಿನ್ನ ಗೆದ್ದು ಇತಿಹಾಸ ರಚಿಸಿದ್ದರು.

* ದೀಪಿಕಾ ಕುಮಾರಿ (ಆರ್ಚರಿ)
ಆರ್ಚರಿಯಲ್ಲಿ ಭಾರತದವರೂ ಪದಕ ಗೆಲ್ಲಬಹುದು ಎಂಬುದನ್ನು ತೋರಿಸಿ ಕೊಟ್ಟವರು ದೀಪಿಕಾ. ವಿಶ್ವಕಪ್‌ನಲ್ಲಿ ತಲಾ ಮೂರು ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಜಯಿಸಿರುವ ಇವರು ಕಾಮನ್‌ವೆಲ್ತ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ಪದಕ ಜಯಿಸಿ ಹೆಜ್ಜೆ ಗುರುತು ಮೂಡಿಸಿದ್ದಾರೆ.

* ಪಿ.ವಿ.ಸಿಂಧು (ಬ್ಯಾಡ್ಮಿಂಟನ್‌)
ಬ್ಯಾಡ್ಮಿಂಟನ್‌ ಲೋಕದಲ್ಲಿ ಹೊಸ ಸಂಚಲನ ಹುಟ್ಟುಹಾಕಿರುವ ಸಿಂಧು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕು ಪದಕಗಳನ್ನು ಗೆದ್ದ ದಾಖಲೆ ಹೊಂದಿದ್ದಾರೆ. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಪದಕ ಗೆದ್ದು ಹೊಸ ಭಾಷ್ಯ ಬರೆದಿದ್ದರು.

* ಮನು ಭಾಕರ್‌ (ಶೂಟಿಂಗ್‌)
ಭಾಕರ್‌, ಶೂಟಿಂಗ್‌ ಕ್ಷಿತಿಜದ ಮಿನುಗು ತಾರೆ. ಈ ಸಲದ ಕಾಮನ್‌ವೆಲ್ತ್‌ ಕೂಟದ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಚಿನ್ನ ಜಯಿಸಿದ್ದ ಮನು, ಐಎಸ್‌ಎಸ್‌ಎಫ್‌ ವಿಶ್ವಕಪ್‌ನಲ್ಲೂ ಚಿನ್ನದ ಪದಕಕ್ಕೆ ಗುರಿ ಇಟ್ಟಿದ್ದರು.

* ಹೀನಾ ಸಿಧು (ಶೂಟಿಂಗ್‌)
ಭಾರತದ ಶೂಟಿಂಗ್‌ನ ‘ಚಿನ್ನ’ ಹೀನಾ ಸಿಧು. 10 ಮೀ. ಏರ್‌ ಪಿಸ್ತೂಲ್‌ ಮತ್ತು 25 ಮೀ. ಪಿಸ್ತೂಲ್‌ ವಿಭಾಗಗಳಲ್ಲಿ ಸ್ಪರ್ಧಿಸುವ ಹೀನಾ, ಕಾಮನ್‌ವೆಲ್ತ್‌ ಕೂಟದಲ್ಲಿ ತಲಾ ಎರಡು ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಗೆದ್ದ ಹಿರಿಮೆ ಹೊಂದಿದ್ದಾರೆ. ಏಷ್ಯನ್‌ ಕೂಟ ಮತ್ತು ವಿಶ್ವಕಪ್‌ನಲ್ಲೂ ಪದಕಗಳ ಬೇಟೆಯಾಡಿ ಹೊಸ ಮೈಲುಗಲ್ಲುಗಳನ್ನು ಸ್ಥಾಪಿಸಿದ್ದಾರೆ.

* ದ್ಯುತಿ ಚಾಂದ್‌ (ಅಥ್ಲೆಟಿಕ್ಸ್‌)
ಒಡಿಶಾದ ದ್ಯುತಿ ಅಥ್ಲೆಟಿಕ್ಸ್‌ನಲ್ಲಿ ಭಾರತದ ಭರವಸೆಯಾಗಿದ್ದಾರೆ. 2013ರಲ್ಲಿ ಪುಣೆಯಲ್ಲಿ ನಡೆದಿದ್ದ ಏಷ್ಯನ್‌ ಚಾಂಪಿಯನ್‌ಷಿಪ್‌ನ 200 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದ ದ್ಯುತಿ, 2017ರಲ್ಲಿ ಭುವನೇಶ್ವರದಲ್ಲಿ ಜರುಗಿದ್ದ ಚಾಂಪಿಯನ್‌ಷಿಪ್‌ನ 100 ಮೀ. ಓಟದ ಸ್ಪರ್ಧೆಯಲ್ಲೂ ಕಂಚು ಗೆದ್ದಿದ್ದರು.

* ಸೈನಾ ನೆಹ್ವಾಲ್‌ (ಬ್ಯಾಡ್ಮಿಂಟನ್‌)
ಈ ಬಾರಿಯ ಕಾಮನ್‌ವೆಲ್ತ್‌ ಕೂಟದ ಮಿಶ್ರ ತಂಡ ವಿಭಾಗದಲ್ಲಿ ಭಾರತ ಚಿನ್ನದ ಪದಕ ಗೆಲ್ಲುವಲ್ಲಿ ಸೈನಾ, ನಿರ್ಣಾಯಕ ಪಾತ್ರ ವಹಿಸಿದ್ದರು. ಸಿಂಗಲ್ಸ್‌ನಲ್ಲೂ ಚಿನ್ನ ಜಯಿಸಿ ಅಭಿಮಾನಿಗಳ ಮನ ಗೆದ್ದಿದ್ದರು.

* ಜೋಷ್ನಾ ಚಿಣ್ಣಪ್ಪ (ಸ್ಕ್ವಾಷ್‌)
ಗೋಲ್ಡ್‌ ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕೂಟದ ಮಹಿಳೆಯರ ಡಬಲ್ಸ್‌ನಲ್ಲಿ ಜೋಷ್ನಾ ಬೆಳ್ಳಿಯ ಪದಕ ಜಯಿಸಿ ಗಮನ ಸೆಳೆದಿದ್ದರು. 2014ರ ಕೂಟದ ಡಬಲ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದರು.


 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.