ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಪ್ಯಾಂಥರ್ಸ್‌ ಜಯಭೇರಿ

ಬ್ಯಾಡ್ಮಿಂಟನ್‌: ತಾನ್ಯಾ ಉತ್ತಮ ಆಟ, ವೂಲ್ವ್ಸ್‌ಗೆ ನಿರಾಸೆ
Last Updated 15 ಆಗಸ್ಟ್ 2022, 17:02 IST
ಅಕ್ಷರ ಗಾತ್ರ

ಬೆಂಗಳೂರು: ತಾನ್ಯಾ ಹೇಮಂತ್‌ ಅವರ ಉತ್ತಮ ಆಟದ ನೆರವಿನಿಂದ ಮೈಸೂರು ಪ್ಯಾಂಥರ್ಸ್‌ ತಂಡ, ಗ್ರ್ಯಾನ್‌ ಪ್ರಿ ಬ್ಯಾಡ್ಮಿಂಟನ್‌ ಲೀಗ್‌ ಟೂರ್ನಿಯಲ್ಲಿ 5–4 ರಲ್ಲಿ ಕೆಜಿಎಫ್‌ ವೂಲ್ವ್ಸ್‌ ವಿರುದ್ಧ ಜಯಿಸಿತು.

ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆಯ ಅಂಗಣದಲ್ಲಿ ಸೋಮವಾರ ನಡೆದ ಹಣಾಹಣಿಯಲ್ಲಿ ನಾಲ್ಕು ಪಂದ್ಯಗಳನ್ನು ಜಯಿಸಿದ ಪ್ಯಾಂಥರ್ಸ್‌, ‘ಸೂಪರ್‌ ಮ್ಯಾಚ್‌‘ಅನ್ನು ಮಾತ್ರ ಎದುರಾಳಿಗೆ ಬಿಟ್ಟುಕೊಟ್ಟಿತು.

ಮೊದಲು ನಡೆದ ಮಹಿಳೆಯರ ಸಿಂಗಲ್ಸ್‌ ಪಂದ್ಯದಲ್ಲಿ ತಾನ್ಯಾ ಹೇಮಂತ್‌ 15–5, 15–3 ರಲ್ಲಿ ರಷ್ಮಿ ಗಣೇಶ್ ಅವರನ್ನು ಮಣಿಸಿ, ಪ್ಯಾಂಥರ್ಸ್‌ಗೆ ಮೇಲುಗೈ ತಂದಿತ್ತರು.

ಪುರುಷರ ಡಬಲ್ಸ್‌ನಲ್ಲಿ ಬಿ.ಎಂ.ರಾಹುಲ್– ಚಿರಂಜೀವಿ ರೆಡ್ಡಿ ಜೋಡಿ 13–15, 15–10, 15–13 ರಲ್ಲಿ ಪ್ರಕಾಶ್‌ ರಾಜ್– ವಿ.ಸುಹಾಸ್‌ ಅವರನ್ನು ಮಣಿಸಿತು. ಮೊದಲ ಗೇಮ್‌ನಲ್ಲಿ ಸೋತರೂ ರಾಹುಲ್‌–ರೆಡ್ಡಿ ಆ ಬಳಿಕ ಹೊಂದಾಣಿಕೆಯ ಆಟವಾಡಿದರು.

ಪುರುಷರ ಸಿಂಗಲ್ಸ್‌ನಲ್ಲಿ ರೋಹಿತ್‌ ಮರಿಸ್ವಾಮಿ ಅವರು 15–13, 10–15, 15–9 ರಲ್ಲಿ ರುದ್ರ ಶಾಹಿ ವಿರುದ್ಧ ಜಯಿಸಿದರು.

ಮಿಶ್ರ ಡಬಲ್ಸ್‌ನಲ್ಲಿ ಜಿ.ಕಿರಣ್‌ಕುಮಾರ್‌–ತಾನ್ಯಾ ಜೋಡಿ 15–8, 7–15, 15–10 ರಲ್ಲಿ ಹೇಮಂತ್‌ ಎಂ.ಗೌಡ– ಗ್ಲೋರಿಯಾ ವಿನಯಕುಮಾರ್‌ ಎದುರು ರೋಚಕವಾಗಿ ಗೆದ್ದಿತು.

ನಾಲ್ಕು ಪಂದ್ಯಗಳು ಕೊನೆಗೊಂಡಾಗ ಪ್ಯಾಂಥರ್ಸ್‌ ತಂಡ 5 ಪಾಯಿಂಟ್‌ ಕಲೆಹಾಕಿ ಗೆಲುವು ಖಚಿತಪಡಿಸಿಕೊಂಡಿತು. ಕೊನೆಯಲ್ಲಿ ನಡೆದ ‘ಸೂ‍ಪರ್‌ ಮ್ಯಾಚ್‌’ನಲ್ಲಿ ಜಯ ಸಾಧಿಸಿದ ಕೆಜಿಎಫ್‌ ತಂಡ ನಾಲ್ಕು ಪಾಯಿಂಟ್‌ ಗಿಟ್ಟಿಸಿಕೊಂಡು ಸೋಲಿನ ಅಂತರವನ್ನು 4–5ಕ್ಕೆ ತಗ್ಗಿಸಿಕೊಂಡಿತು.

ಸೂಪರ್‌ ಮ್ಯಾಚ್‌ನಲ್ಲಿ ಕೆಜಿಎಫ್‌ ತಂಡದ ಹೇಮಂತ್/ ಪ್ರಕಾಶ್‌ ರಾಜ್/ ವಿ.ಸುಹಾಸ್‌ ಅವರು 28–26 ರಲ್ಲಿ ಬಿ.ಎಂ.ರಾಹುಲ್/ ಕಿರಣ್‌ ಕುಮಾರ್/ ರೋಹಿತ್‌ ಮರಿಸ್ವಾಮಿ ಅವರನ್ನು ಸೋಲಿಸಿದರು.

ಸೋಲಿನ ನಡುವೆಯೂ ನಾಲ್ಕು ಪಾಯಿಂಟ್‌ ಕಲೆಹಾಕಿದ ವೂಲ್ವ್ಸ್‌ ತಂಡ (10) ಪಾಯಿಂಟ್ ಪಟ್ಟಿಯಲ್ಲಿ ಜಂಟಿ ಎರಡನೇ ಸ್ಥಾನಕ್ಕೇರಿತು. ಪ್ಯಾಂಥರ್ಸ್‌ ತಂಡ ಏಳು ಪಾಯಿಂಟ್‌ಳನ್ನು ಹೊಂದಿದೆ.

ಇಂದಿನ ಪಂದ್ಯಗಳು: ಕೊಡಗು ಟೈಗರ್ಸ್‌– ಮಂಡ್ಯ ಬುಲ್ಸ್‌ (ಮಧ್ಯಾಹ್ನ 3)

ಬಂಡೀಪುರ ಟಸ್ಕರ್ಸ್‌– ಮಂಗಳೂರು ಶಾರ್ಕ್ಸ್‌ (ಸಂಜೆ 6)

ನೇರಪ್ರಸಾರ: ಯೂರೋ ಸ್ಪೋರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT