ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕ್ಲಿಂಗ್‌ ರೋಚಕತೆಗೆ ಅಖಾಡ ಸಜ್ಜು

ರಾಷ್ಟ್ರ ಮಟ್ಟದ ಸೈಕ್ಲಿಂಗ್‌ ಸ್ಪರ್ಧೆಗೆ ಕರ್ನಾಟಕ ತಂಡದ ಆಯ್ಕೆ ಪ್ರಕ್ರಿಯೆ
Last Updated 16 ಜನವರಿ 2021, 19:54 IST
ಅಕ್ಷರ ಗಾತ್ರ

ಗದಗ: ಕಲ್ಲು ಮಣ್ಣು, ಬೆಟ್ಟ ಗುಡ್ಡಗಳ ನಡುವೆ ವೇಗದಿಂದ ಸಾಗುವ, ಬಂಡೆ ಹತ್ತಿಸಿ, ಇಳಿಜಾರಿನಲ್ಲಿ ಜಾಗೂರತೆಯಿಂದ ಇಳಿಸಲು ಸೈಕ್ಲಿಂಗ್‌ ಪಟುಗಳು ತೋರುವ ಕೈಚಳಕದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಸೈಕ್ಲಿಂಗ್‌ ಪ್ರಿಯರು ತುದಿಗಾಲಿನಲ್ಲಿ ನಿಂತಿದ್ದು, ಇಂತಹ ರೋಚಕ ಅನುಭವ ನೀಡುವ ಸ್ಪರ್ಧೆಗೆ ವೇದಿಕೆ ಒದಗಿಸಲು ಗದಗ ನಗರ ಸಜ್ಜಾಗಿದೆ.

ಕರ್ನಾಟಕ ಅಮೆಚೂರ್‌ ಸೈಕ್ಲಿಂಗ್‌ ಅಸೋಸಿಯೇಷನ್‌ ಹಾಗೂ ಗದಗ ಜಿಲ್ಲಾ ಸೈಕ್ಲಿಂಗ್‌ ಅಸೋಸಿಯೇಷನ್‌ ಸಹಯೋಗದಲ್ಲಿ ಭಾನುವಾರ ರಾಷ್ಟ್ರ ಮಟ್ಟದ ಸೈಕ್ಲಿಂಗ್‌ ಸ್ಪರ್ಧೆಗೆ ಸೈಕ್ಲಿಸ್ಟ್‌ಗಳ ಆಯ್ಕೆ ನಡೆಯಲಿದ್ದು, ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನದ ಒಳಗಿರುವ ಗುಡ್ಡದಲ್ಲಿ ಎಂಟಿಬಿ ಟ್ರ್ಯಾಕ್‌ ಸಿದ್ಧವಾಗಿದೆ. 14, 16, 18 ವರ್ಷದೊಳಗಿನವರ ವಿಭಾಗ ಮತ್ತು 18 ವರ್ಷ ಮೇಲ್ಪಟ್ಟ 23 ವರ್ಷದೊಳಗಿನವರ ವಿಭಾಗದಿಂದ ಒಟ್ಟು 103 ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಇವರಲ್ಲಿ 62 ಮಂದಿ ಬಾಲಕರು, 41 ಮಂದಿ ಬಾಲಕಿಯರು ಇದ್ದಾರೆ.

ಗುಡ್ಡದ ಕಲ್ಲು ಮಣ್ಣು, ಇಳಿಜಾರು ದಿಬ್ಬ ಪ್ರದೇಶವನ್ನು ಒಳಗೊಂಡಿರುವ ಎರಡು ಕಿಲೋ ಮೀಟರ್‌ನ ಒಂದು ಟ್ರ್ಯಾಕ್‌ ಸಿದ್ಧಪಡಿಸಲಾಗಿದ್ದು, 14 ವರ್ಷದೊಳಗಿನ ಸ್ಪರ್ಧಿಗಳು ಒಂದು ಲ್ಯಾಪ್‌ (ಸುತ್ತು), 16 ವರ್ಷದೊಳಗಿನವರು 2 ಲ್ಯಾಪ್‌, 18 ವರ್ಷದೊಳಗಿನವರು 3 ಲ್ಯಾಪ್‌ ಹಾಗೂ 18 ವರ್ಷ ಮೇಲ್ಪಟ್ಟವರು 4 ಲ್ಯಾಪ್‌ಗಳಲ್ಲಿ ಸೆಣಸಲಿದ್ದಾರೆ. ಪ್ರತಿ ವಿಭಾಗದಿಂದ ಟಾಪ್‌ 3 ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುವುದು. ಇವರೆಲ್ಲರೂ ರಾಷ್ಟ್ರ ಮಟ್ಟದ ಸೈಕ್ಲಿಂಗ್‌ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಳ್ಳಲಿದ್ದಾರೆ.

ರಾಷ್ಟ್ರ ಮಟ್ಟದ ಸೈಕ್ಲಿಂಗ್‌ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಪಡೆಯಲು ಬೆಂಗಳೂರು, ಮೈಸೂರು, ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಯ ಸೈಕ್ಲಿಸ್ಟ್‌ಗಳು ವಿವಿಧ ವಿಭಾಗಗಳಲ್ಲಿ ಸೆಣಸಲಿದ್ದಾರೆ.

ಮೈಸೂರಿನ ‘ಸೈಕ್ಲಿಂಗ್‌ my–ಸೂರು’ ಸಂಸ್ಥೆಯ 12 ಮಂದಿ ಸೈಕ್ಲಿಸ್ಟ್‌ಗಳು ಒಂದು ವಾರ ಮುಂಚಿತವಾಗಿಯೇ ಗದಗ ನಗರಕ್ಕೆ ಬಂದಿಳಿದಿದ್ದು, ಕಠಿಣ ತರಬೇತಿ ನಡೆಸಿದ್ದಾರೆ.

‘ಮಕ್ಕಳು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕು ಎಂಬ ಸಲುವಾಗಿ ವಾರದ ಹಿಂದೆಯೇ ಗದುಗಿಗೆ ಬಂದಿದ್ದೇವೆ. ದಕ್ಷಿಣ ಕರ್ನಾಟಕದ ಊಟವೇ ಬೇರೆ; ಉತ್ತರ ಕರ್ನಾಟದ ಆಹಾರ ಸಂಸ್ಕೃತಿಯೇ ಬೇರೆ. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿನ ಟ್ರ್ಯಾಕ್‌ ಅನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಸ್ಪರ್ಧಿಸಬೇಕು ಎಂಬ ಕಾರಣಕ್ಕೆ ನಾವು ಮೊದಲೇ ಬಂದು ಅಭ್ಯಾಸ ಶುರುಮಾಡಿದ್ದೇವೆ’ ಎಂದು ‘ಸೈಕ್ಲಿಂಗ್‌ my-ಸೂರು’ ಸಂಸ್ಥೆಯ ತರಬೇತುದಾರ ನಾಗರಾಜು ತಿಳಿಸಿದರು.

ಬೆಳಿಗ್ಗೆ 8ಕ್ಕೆ ಆರಂಭಗೊಳ್ಳುವ ಸ್ಪರ್ಧೆ ಮಧ್ಯಾಹ್ನ 2ಕ್ಕೆ ಮುಕ್ತಾಯಗೊಳ್ಳಲಿದೆ. ರಾಷ್ಟ್ರ ಮಟ್ಟದ ಸೈಕ್ಲಿಂಗ್‌ ಸ್ಪರ್ಧೆಗೆ ಕರ್ನಾಟಕ ತಂಡವನ್ನು ಆಯ್ಕೆ ಇಲ್ಲಿ ಆಯ್ಕೆ ಮಾಡಲಾಗುವುದು. ಎಂ.ಐ.ಕನಿಕೆ‌ಕಾರ್ಯದರ್ಶಿ, ಗದಗ ಜಿಲ್ಲಾ ಸೈಕ್ಲಿಂಗ್‌ ಅಸೋಸಿಯೇಷನ್‌

ಆಯ್ಕೆ ಪ್ರಕ್ರಿಯೆಯಲ್ಲಿ ಏಷ್ಯನ್‌ ಚಾಂಪಿಯನ್‌ಷಿಪ್‌ ಸೈಕ್ಲಿಂಗ್‌ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಎಡೋನಿಸ್‌ ಭಾಗವಹಿಸುತ್ತಿದ್ದು, ಅವರು ಸ್ಟಾರ್‌ ಸೈಕ್ಲಿಂಗ್‌ಪಟುವಾಗಿದ್ದಾರೆ. ನಾಗರಾಜು ಸೈಕ್ಲಿಂಗ್‌my- ಸೂರು ತಂಡದ ಕೋಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT