ಬಲವಿಲ್ಲದ ಬೆರಳಿನಿಂದ ಪದಕ ಗೆದ್ದ ಶ್ರೀಹರ್ಷ!

7
ಮೊಣಕೈ ಮೇಲೆ ಭಾರ ಹಾಕಿ ಶೂಟ್‌ ಮಾಡುವ ಹುಬ್ಬಳ್ಳಿಯ ಶೂಟರ್‌

ಬಲವಿಲ್ಲದ ಬೆರಳಿನಿಂದ ಪದಕ ಗೆದ್ದ ಶ್ರೀಹರ್ಷ!

Published:
Updated:
Deccan Herald

ಹುಬ್ಬಳ್ಳಿ: ಅಪಘಾತದಲ್ಲಿ ಕೈ ಹಾಗೂ ಕಾಲುಗಳ ಸ್ವಾಧೀನ ಕಳೆದುಕೊಂಡು ರೈಫಲ್‌ ಟ್ರಿಗರ್‌ ಒತ್ತಲು ಕೂಡ ಕಷ್ಟಪಡ ಬೇಕಾದ ಸ್ಥಿತಿಯಲ್ಲಿರುವ ಶೂಟರ್‌ ಶ್ರೀ ಹರ್ಷ ದೇವರೆಡ್ಡಿ ರಾಷ್ಟ್ರೀಯ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬೆಳ್ಳಿ ಪದಕಗಳನ್ನು ಗೆದ್ದು ಬಂದಿದ್ದಾರೆ.

ಕೇರಳದ ತಿರುವನಂತಪುರದಲ್ಲಿ ಇತ್ತೀಚಿಗೆ ನಡೆದ 62ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಅವರು 10 ಮೀಟರ್‌ ಏರ್ ರೈಫಲ್‌ ಸ್ಪರ್ಧೆಯ ಸ್ಟ್ಯಾಂಡಿಂಗ್‌ ಮತ್ತು ಪ್ರೊನ್‌ ವಿಭಾಗದಲ್ಲಿ ಪದಕ ಜಯಿಸಿದ್ದಾರೆ. ಹೋದ ವರ್ಷ ಕೂಡ ತಿರುವನಂತಪುರದಲ್ಲಿಯೇ ರಾಷ್ಟ್ರೀಯ ಶೂಟಿಂಗ್‌ ನಡೆದಿತ್ತು. ಆಗ ಸ್ಟ್ಯಾಂಡಿಂಗ್ ವಿಭಾಗದಲ್ಲಿ ಕಂಚು ಗೆದ್ದಿದ್ದರು.

ಕರ್ನಾಟಕ ರಾಜ್ಯ ರೈಫಲ್‌ ಸಂಸ್ಥೆ  2017 ಮತ್ತು 2018ರಲ್ಲಿ ಬೆಂಗ ಳೂರಿನಲ್ಲಿ ನಡೆಸಿದ್ದ ರಾಜ್ಯಮಟ್ಟದ ಸ್ಪರ್ಧೆಯ 10 ಮೀ. ಏರ್‌ ರೈಫಲ್‌ನಲ್ಲಿ ಚಿನ್ನದ ಪದಕ ಪಡೆದಿದ್ದರು. ಇದೇ ವರ್ಷ ದಸರಾ ಕ್ರೀಡಾಕೂಟದ ಸಿ.ಎಂ. ಕಪ್‌ ಮತ್ತು ಹೋದ ವರ್ಷ ಚೆನ್ನೈನಲ್ಲಿ ನಡೆದ ಜಿ.ವಿ. ಮೌಲಾಂಕರ್‌ ದಕ್ಷಿಣ ವಲಯ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದರು. ಚೆನ್ನೈನಲ್ಲಿ ಒಟ್ಟು 400ಕ್ಕೆ 393 ಅಂಕ ಗಳಿಸಿದ್ದರು.

ಹುಬ್ಬಳ್ಳಿ ಸ್ಪೋರ್ಟ್ಸ್‌ ಶೂಟಿಂಗ್‌ ಅಕಾಡೆಮಿಯಲ್ಲಿ ರವಿಚಂದ್ರ ಬಾಲೆಹೊಸೂರ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ಶ್ರೀಹರ್ಷ, ರಾಮಕೃಷ್ಣ ದೇವರೆಡ್ಡಿ ಹಾಗೂ ಲಲಿತಾ ಅವರ ಪುತ್ರ.

ವಿಮೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀಹರ್ಷ ಅವರಿಗೆ 2013ರಲ್ಲಿ ನಗರದಲ್ಲಿ ನಡೆದ ಅಪಘಾತದಲ್ಲಿ ಬೆನ್ನುಹುರಿಗೆ ಬಲವಾದ ಪೆಟ್ಟು ಬಿದ್ದಿತ್ತು. ಆದ್ದರಿಂದ ಎರಡೂ ಕಾಲು ಹಾಗೂ ಕೈಗಳ ಶಕ್ತಿ ಕಳೆದುಕೊಂಡರು. ಕೈ ಬೆರಳುಗಳಲ್ಲಿಯೂ ಸ್ವಾಧೀನವಿಲ್ಲ.

‘ಕೈ ಹಾಗೂ ಕಾಲುಗಳನ್ನು ಮುಟ್ಟಿದರೆ ಸ್ಪರ್ಶ ಗೊತ್ತಾಗುವುದಿಲ್ಲ. ಕೈಯಿಂದ ಟ್ರಗರ್‌ ಒತ್ತಲು ಆಗುವುದಿಲ್ಲ. ಆದರೆ, ಶೂಟಿಂಗ್‌ನಲ್ಲಿ ದೊಡ್ಡ ಸಾಧನೆ ಮಾಡಬೇಕೆನ್ನುವ ಒಂದೇ ಒಂದು ಆಸೆ ನನ್ನ ಎಲ್ಲ ವೈಕಲ್ಯ ಮರೆಸುತ್ತಿದೆ. ಟ್ರಿಗರ್‌ನಲ್ಲಿ ಬೆರಳು ಹಾಕಿ, ಮೊಣಕೈ ಶಕ್ತಿಯಿಂದ ಶೂಟ್‌ ಮಾಡುತ್ತೇನೆ’ ಎಂದು ಶ್ರೀಹರ್ಷ ಹೇಳಿದರು.

‘ಧಾರವಾಡದ ಜೆಎಸ್‌ಎಸ್‌ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಕುರು ಗೋಡಿ ಸರ್‌ ಮತ್ತು ಶೂಟಿಂಗ್ ಅಕಾಡೆಮಿಯ ರವಿಚಂದ್ರ ಸರ್‌ ನೀಡಿದ ಅಪಾರ ಪ್ರೋತ್ಸಾಹದಿಂದ ಈ ಮಟ್ಟಕ್ಕೆ ಬರಲು ಸಾಧ್ಯವಾಗಿದೆ’ ಎಂದರು.

‘ಪ್ಯಾರಾ ಕ್ರೀಡಾಪಟುಗಳ ಸಾಧನೆಗೆ ಬೆಲೆಯಿಲ್ಲವೇ’

ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪ್ರಶಸ್ತಿ ಗೆದ್ದವರಿಗೆ ರಾಜ್ಯ ಸರ್ಕಾರ ನಗದು ಬಹುಮಾನ ಕೊಡುತ್ತದೆ. ಆದರೆ, ಪ್ಯಾರಾ ಕ್ರೀಡಾಪಟುಗಳ ಸಾಧನೆಯನ್ನು ಏಕೆ ಗುರುತಿಸುವುದಿಲ್ಲ, ನಮ್ಮ ಶ್ರಮಕ್ಕೆ ಬೆಲೆಯಿಲ್ಲವೇ ಎಂದು ಶ್ರೀಹರ್ಷ ಪ್ರಶ್ನಿಸಿದರು.

‘ರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿ ಪದಕ ಗೆದ್ದಿರುವುದರಿಂದ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಲಭಿಸಿದೆ. ವಿದೇಶದಲ್ಲಿ ನಡೆಯುವ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಸ್ವಂತ ಹಣ ಖರ್ಚು ಮಾಡಿಕೊಂಡು ಹೋಗಬೇಕಾದ ಪರಿಸ್ಥಿತಿಯಿದೆ. ಅಷ್ಟೊಂದು ಶಕ್ತಿ ನನ್ನಲ್ಲಿಲ್ಲ. ಕೆಲಸಕ್ಕಾಗಿ ನಿತ್ಯ ಅಲೆದಾಡಬೇಕಾದ ಸ್ಥಿತಿಯಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !