ಭಾನುವಾರ, ಸೆಪ್ಟೆಂಬರ್ 20, 2020
21 °C

ಮಲೇಷ್ಯಾ ಎದುರು ನೆದರ್ಲೆಂಡ್ಸ್ ಗೋಲು ಮಳೆ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಭುವನೇಶ್ವರ: ‌ಹ್ಯಾಟ್ರಿಕ್‌ ಗೋಲು ಗಳಿಸಿದ ಜೀರನ್‌ ಹೆಟ್ಸ್‌ಬರ್ಜರ್‌ ಕಳಿಂಗ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ಮಿಂಚು ಹರಿಸಿದರು. 200ನೇ ಪಂದ್ಯ ಆಡಿದ ರಾಬರ್ಟ್ ಕೆಂಪರ್‌ಮ್ಯಾನ್‌ ಗೋಲು ಗಳಿಸಿ ಸಂಭ್ರಮಿಸಿದರು.

ವಿಶ್ವಕಪ್‌ ಹಾಕಿ ಟೂರ್ನಿಯ ಮಲೇಷ್ಯಾ ವಿರುದ್ಧ ನಡೆದ ‘ಡಿ’ ಗುಂಪಿನ ಪಂದ್ಯದಲ್ಲಿ ಗೋಲಿನ ಮಳೆ ಸುರಿಸಿದ ನೆದರ್ಲೆಂಡ್ಸ್‌ ತಂಡ 7–0 ಗೋಲುಗಳಿಂದ ಗೆದ್ದು ಶುಭಾರಂಭ ಮಾಡಿತು.

ಮಲೇಷ್ಯಾದ ದುರ್ಬಲ ರಕ್ಷಣಾ ವಿಭಾಗವನ್ನು ದಂಗುಬಡಿಸಿದ ನೆದರ್ಲೆಂಡ್ಸ್ 11ನೇ ನಿಮಿಷದಲ್ಲೇ ಗೋಲಿನ ಖಾತೆ ತೆರೆಯಿತು. ಜೀರನ್‌ ಹೆಟ್ಸ್‌ಬರ್ಜರ್‌ ಗೋಲು ಗಳಿಸಿ ಸಂಭ್ರಮಿಸಿದರು. ಮಿರ್ಕೊ ಪ್ರೂಸ್ನರ್‌ 21ನೇ ನಿಮಿಷದಲ್ಲಿ ಗಳಿಸಿದ ಗೋಲಿನ ಮೂಲಕ ನೆದರ್ಲೆಂಡ್ಸ್ ತಂಡದವರು ಮುನ್ನಡೆಯನ್ನು ಹೆಚ್ಚಿಸಿಕೊಂಡರು.

ಲಯ ಕಂಡುಕೊಳ್ಳಲು ಮಲೇಷ್ಯಾ ನಡೆಸಿದ ಕಠಿಣ ಪ್ರಯತ್ನಗಳನ್ನು ಎದುರಾಳಿ ತಂಡದ ರಕ್ಷಣಾ ವಿಭಾಗದವರು ವಿಫಲಗೊಳಿಸಿದರು. 29ನೇ ನಿಮಿಷದಲ್ಲಿ ಜೀರನ್‌ ಹೆಟ್ಸ್‌ಬರ್ಜರ್‌ ಮತ್ತೊಂದು ಗೋಲಿನ ಮೂಲಕ ಮಲೇಷ್ಯಾವನ್ನು ಕಂಗೆಡಿಸಿದರು.

ಮೂರು ಫೀಲ್ಡ್‌ ಗೋಲುಗಳನ್ನು ಬಿಟ್ಟುಕೊಟ್ಟ ಮಲೇಷ್ಯಾ ತೀವ್ರ ಒತ್ತಡಕ್ಕೆ ಸಿಲುಕಿತು. ಇದರ ಲಾಭ ಪಡೆಯಲು ಪ್ರಯತ್ನಿಸಿದ ನೆದರ್ಲೆಂಡ್ಸ್‌ಗೆ 35ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಇದನ್ನು ವಾನ್ ಡೆರ್ ವೀರ್ಡನ್‌ ಮಿಂಕ್‌ ಸದುಪಯೋಗಪಡಿಸಿಕೊಂಡು ಚೆಂಡನ್ನು ಗುರಿ ಮುಟ್ಟಿಸಿದರು.

200ನೇ ಪಂದ್ಯ; ಐದನೇ ಗೋಲು: ನೆದರ್ಲೆಂಡ್ಸ್ ಪರ 200ನೇ ಪಂದ್ಯ ಆಡಿದ ರಾಬರ್ಟ್ ಕೆಂಪರ್‌ಮ್ಯಾನ್‌ 42ನೇ ನಿಮಿಷದಲ್ಲಿ ತಂಡದ ಪರ ಐದನೇ ಗೋಲು ಬಾರಿಸಿ ಸಂಭ್ರಮಿಸಿದರು. ಸತತ ಗೋಲುಗಳನ್ನು ಬಿಟ್ಟುಕೊಟ್ಟ ಮಲೇಷ್ಯಾ ಕೊನೆಯ ಕ್ವಾರ್ಟರ್‌ನಲ್ಲಿ ಸೋಲಿನ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸಿತು. ಆದರೆ ನೆದರ್ಲೆಂಡ್ಸ್‌ಗೆ ಗೋಲುಗಳ ದಾಹ ಮುಗಿದಿರಲಿಲ್ಲ. 57ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ನಲ್ಲಿ ಬಿರ್ಕ್‌ಮ್ಯಾನ್ ಥಿಯರಿ ಅಮೋಘ ಗೋಲು ಗಳಿಸಿ ಮಿಂಚಿದರು. ಎಡಗೈಯಿಂದ ಅವರು ಹೊಡೆದ ಚೆಂಡು ಮಿಂಚಿನ ವೇಗದಲ್ಲಿ ಎದುರಾಳಿಗಳ ಗೋಲುಪೆಟ್ಟಿಗೆಯ ಒಳಗೆ ಸೇರಿತು. ಕೊನೆಯ ನಿಮಿಷದಲ್ಲಿ ಜೀರನ್‌ ಹೆಟ್ಸ್‌ಬರ್ಜರ್‌ ಮೂರನೇ ಗೋಲು ಗಳಿಸಿ ಟೂರ್ನಿಯ ಮೊದಲ ಹ್ಯಾಟ್ರಿಕ್‌ ಸಾಧನೆ ಮಾಡಿದ ಆಟಗಾರ ಎಂದೆನಿಸಿಕೊಂಡರು. ತಂಡದ ಗೆಲುವಿನ ಅಂತರವನ್ನೂ ಹೆಚ್ಚಿಸಿದರು.

ವಿಶ್ವಕಪ್‌ನಲ್ಲಿ ಈ ತಂಡಗಳು ಈ ಮೊದಲು ನಾಲ್ಕು ಬಾರಿ ಸೆಣಸಿದ್ದವು. ಮೂರು ಬಾರಿ ನೆದರ್ಲೆಂಡ್ಸ್ ಗೆದ್ದರೆ ಒಮ್ಮೆ ಮಾತ್ರ ಮಲೇಷ್ಯಾ ಗೆದ್ದಿತ್ತು. ಮಲೇಷ್ಯಾ ವಿರುದ್ಧ ಆ ಪಂದ್ಯಗಳಲ್ಲಿ ಒಟ್ಟು 10 ಗೋಲುಗಳನ್ನು ಗಳಿಸಿದ್ದ ನೆದರ್ಲೆಂಡ್ಸ್‌ ಶನಿವಾರದ ಪಂದ್ಯದೊಂದಿಗೆ ಈ ಸಂಖ್ಯೆಯನ್ನು 17ಕ್ಕೆ ಏರಿಸಿಕೊಂಡಿತು.

ಜೀರನ್‌ ಹೆಟ್ಸ್‌ಬರ್ಜರ್‌

ಗೋಲುಗಳು

11ನೇ ನಿಮಿಷ (ಫೀಲ್ಡ್‌ಗೋಲು)

29ನೇ ನಿಮಿಷ (ಫೀಲ್ಡ್‌ ಗೋಲು)

60ನೇ ನಿಮಿಷ (ಫೀಲ್ಡ್ ಗೋಲು)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು