ಮಂಗಳವಾರ, ಮಾರ್ಚ್ 9, 2021
28 °C
ಬ್ಯಾಸ್ಕೆಟ್‌ಬಾಲ್‌ ತಂಡದ ನಾಯಕ ಭೃಗುವಂಶಿ ಅಭಿಪ್ರಾಯ

ಭಾರತದಲ್ಲೂ ವೃತ್ತಿಪರ ಲೀಗ್‌ ಶುರುವಾಗಲಿ : ಭೃಗುವಂಶಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಕ್ರಿಕೆಟ್‌, ಕಬಡ್ಡಿ, ಬ್ಯಾಡ್ಮಿಂಟನ್‌ ರೀತಿಯಲ್ಲಿ ಬ್ಯಾಸ್ಕೆಟ್‌ಬಾಲ್‌ನಲ್ಲೂ ವೃತ್ತಿಪರ ಲೀಗ್‌ ಶುರುವಾಗಬೇಕು. ಇದರಿಂದ ಪ್ರತಿಭಾನ್ವೇಷಣೆ ಸುಲಭವಾಗಲಿದೆ. ಕ್ರೀಡೆಯೂ ಜನಪ್ರಿಯತೆ ಪಡೆದುಕೊಳ್ಳಲಿದೆ’ ಎಂದು ಭಾರತ ಬ್ಯಾಸ್ಕೆಟ್‌ಬಾಲ್‌ ತಂಡದ ನಾಯಕ ವಿಶೇಷ್‌ ಭೃಗುವಂಶಿ ಅಭಿಪ್ರಾಯಪಟ್ಟಿದ್ದಾರೆ.

‘ನಮ್ಮಲ್ಲಿ ಪ್ರತಿಭಾನ್ವಿತರಿಗೆ ಕಿಂಚಿತ್ತೂ ಕೊರತೆಯಿಲ್ಲ. ಆದರೆ ತಮ್ಮೊಳಗಿನ ಪ್ರತಿಭೆಯನ್ನು ಜಾಹೀರುಗೊಳಿಸಲು ಸೂಕ್ತ ವೇದಿಕೆ ಸಿಗುತ್ತಿಲ್ಲ. ವೃತ್ತಿಪರ ಲೀಗ್‌ವೊಂದು ಶುರುವಾದರೆ ಭಾರತದ ಬ್ಯಾಸ್ಕೆಟ್‌ಬಾಲ್‌ನ ಚಿತ್ರಣವೇ ಬದಲಾಗಲಿದೆ’ ಎಂದಿದ್ದಾರೆ.

‘ಲೀಗ್‌ನಲ್ಲಿ ವಿದೇಶಿ ಆಟಗಾರರೂ ಪಾಲ್ಗೊಳ್ಳುತ್ತಾರೆ. ಅವರ ಜೊತೆ ಆಡುವುದರಿಂದ ಹೊಸ ವಿಷಯಗಳನ್ನು ಕಲಿಯಲು ಸಹಕಾರಿಯಾಗುತ್ತದೆ. ಆಟದ ಗುಣಮಟ್ಟ  ಹೆಚ್ಚಿಸಿಕೊಳ್ಳುವ ಜೊತೆಗೆ ಯೋಚನಾ ಲಹರಿಯನ್ನೂ ಬದಲಾಯಿಸಿಕೊಳ್ಳಬಹುದು’ ಎಂದು 29 ವರ್ಷ ವಯಸ್ಸಿನ ಆಟಗಾರ ನುಡಿದಿದ್ದಾರೆ.

‘ಲೀಗ್‌ನಲ್ಲಿ ಆಡುವ ಅನುಭವವೇ ಬೇರೆ. ವಿಶ್ವಶ್ರೇಷ್ಠ ಆಟಗಾರರ ಜೊತೆ ವಿಚಾರ ವಿನಿಮಯ ಮಾಡಿಕೊಳ್ಳುವ, ಅವರ ತಂತ್ರಗಳನ್ನು ಕಲಿಯುವ ಅವಕಾಶ ಲೀಗ್‌ನಿಂದ ಸಿಗಲಿದೆ. ಭಾರತ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಶೀಘ್ರವೇ ಲೀಗ್‌ ಶುರುವಾಗಲಿ ಎಂಬ ಆಶಯ ನಮ್ಮದು’ ಎಂದು ಅವರು ತಿಳಿಸಿದ್ದಾರೆ.

‘ನಮ್ಮ ಆಟಗಾರರು ವಿದೇಶಗಳಲ್ಲಿ ನಡೆಯುವ ಲೀಗ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲಿ ಹೊಸ ಕೌಶಲಗಳನ್ನು ಕಲಿತು ಆಟದ ಗುಣಮಟ್ಟ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅಲ್ಲಿ ಕಲಿತಿದ್ದನ್ನು ಇಲ್ಲಿನ ಆಟಗಾರರಿಗೂ ಹೇಳಿಕೊಡುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ’ ಎಂದಿದ್ದಾರೆ.

ಭೃಗುವಂಶಿ ಅವರು ಅಡಿಲೇಡ್‌ ಕ್ಲಬ್‌ ಪರ ಒಪ್ಪಂದ ಮಾಡಿಕೊಂಡ ಭಾರತದ ಮೊದಲ ಆಟಗಾರ ಎಂಬ ಹಿರಿಮೆ ಹೊಂದಿದ್ದಾರೆ. ಈ ಕ್ಲಬ್‌ ಆಸ್ಟ್ರೇಲಿಯಾದ ನ್ಯಾಷನಲ್‌ ಬ್ಯಾಸ್ಕೆಟ್‌ಬಾಲ್‌ ಲೀಗ್‌ನಲ್ಲಿ (ಎನ್‌ಬಿಎಲ್‌) ಆಡುತ್ತದೆ.

‘ಕೊರೊನಾ ವೈರಾಣುವಿನ ಬಿಕ್ಕಟ್ಟಿನಿಂದಾಗಿ ಸಿಕ್ಕಿರುವ ರಜೆಯಲ್ಲಿ ಕುಟುಂಬದ ಜೊತೆ ಹಾಯಾಗಿ ಸಮಯ ಕಳೆಯುತ್ತಿದ್ದೇನೆ’ ಎಂದೂ ಅವರು ತಿಳಿಸಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು