ಬುಧವಾರ, ಸೆಪ್ಟೆಂಬರ್ 22, 2021
29 °C

ಕ್ಯೂಬಾದ ಮಿಜಾಯಿನ್ ಲೊಪೆಜ್‌ಗೆ ಸತತ 4ನೇ ಬಾರಿಯ ಒಲಿಂಪಿಕ್ಸ್‌ ಚಾಂಪಿಯನ್‌ ಕನಸು

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಕ್ಯೂಬಾದ ಮಿಜಾಯಿನ್ ಲೊಪೆಜ್ ನ್ಯೂನೆಜ್‌ ಅವರು ಗ್ರೀಕೊ ರೋಮನ್ ಕುಸ್ತಿಯಲ್ಲಿ ಸತತ ನಾಲ್ಕನೇ ಬಾರಿ ಒಲಿಂಪಿಕ್ಸ್‌ ಚಾಂಪಿಯನ್‌ ಆಗುವತ್ತ ದಾಪುಗಾಲಿಟ್ಟರು. ಕಳೆದ ಮೂರು ಕೂಟಗಳಲ್ಲಿ ಸೂಪರ್ ಹೆವಿವೇಟ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ಅವರು ಭಾನುವಾರ ಇಲ್ಲಿ ಫೈನಲ್ ತಲುಪಿದ್ದಾರೆ.

ಮಕುಹಾರಿ ಮೆಸ್ಸೆ ಹಾಲ್‌ನಲ್ಲಿ ಎದುರಾಳಿಗಳಿಗೆ ಒಂದೂ ಪಾಯಿಂಟ್ಸ್ ಬಿಟ್ಟುಕೊಡದೆ ಮೂರು ಬೌಟ್‌ ಜಯಿಸಿ, ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟರು. 130 ಕೆಜಿ ವಿಭಾಗದ ಸೆಮಿಫೈನಲ್‌ ಹಣಾಹಣಿಯಲ್ಲಿ ಟರ್ಕಿಯ ರಿಜಾ ಕಯಾಲ್ಪ್‌ ಅವರನ್ನು 2–0ಯಿಂದ ಚಿತ್ ಮಾಡಿದ ಕ್ಯೂಬಾದ ಪೈಲ್ವಾನ, ಇದಕ್ಕೂ ಮೊದಲು ನಡೆದ ಎರಡು ಸುತ್ತುಗಳಲ್ಲಿ ಎದುರಾಳಿಗಳಿಗೆ ಭಾರಿ ಅಂತರದಿಂದ ಸೋಲುಣಿಸಿದ್ದರು.

ಮೊದಲ ಬೌಟ್‌ನಲ್ಲಿ 9–0ಯಿಂದ ರುಮೇನಿಯಾದ ಅಲಿನ್ ಅಲೆಕ್ಸುಕ್‌ ಸಿರಾರ್ಜು ಎದುರು, ಎರಡನೇ ಬೌಟ್‌ನಲ್ಲಿ 8–0ಯಿಂದ ಇರಾನ್‌ನ ಅಮಿನ್‌ ಮಿರ್ಜಾಜದೆಹ್‌ ವಿರುದ್ಧ ಜಯಭೇರಿ ಮೊಳಗಿಸಿದರು.

ಟೋಕಿಯೊ ಕೂಟದಲ್ಲಿ ಚಿನ್ನ ಗೆದ್ದರೆ ಲೊಪೆಜ್, ನಾಲ್ಕು ಒಲಿಂಪಿಕ್ಸ್‌ಗಳಲ್ಲಿ ಚಾಂಪಿಯನ್ ಆದ ಮೊದಲ ಪುರುಷ ಕುಸ್ತಿಪಟು ಎನಿಸಿಕೊಳ್ಳಲಿದ್ದಾರೆ. ಜಪಾನ್‌ನ ಫ್ರೀಸ್ಟೈಲ್ ಕುಸ್ತಿಪಟು ಕವೊರಿ ಇಚೊ ಅವರು ವೈಯಕ್ತಿಕ ವಿಭಾಗದಲ್ಲಿ ಸತತ ನಾಲ್ಕು ಒಲಿಂಪಿಕ್ಸ್‌ಗಳಲ್ಲಿ ಚಿನ್ನ ಗೆದ್ದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ.

ಫೈನಲ್‌ನಲ್ಲಿ 38 ವರ್ಷದ ಲೊಪೆಜ್‌, ಜಾರ್ಜಿಯಾದ ಇಯಾಕೊಬಿ ಕಜಾಜ ಅವರನ್ನು ಎದುರಿಸಲಿದ್ದಾರೆ. ಸೋಮವಾರ ಈ ಬೌಟ್‌ ನಿಗದಿಯಾಗಿದೆ.

ಲೊಪೆಜ್‌ ಅವರು 2008ರ ಬೀಜಿಂಗ್‌, 2012ರ ಲಂಡನ್‌ ಮತ್ತು 2016ರ ರಿಯೊ ಕೂಟಗಳಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು