ಶನಿವಾರ, ಜೂಲೈ 4, 2020
24 °C
ಟೋಕಿಯೋ ಕೂಟದ ಸಂಘಟನಾ ಸಮಿತಿ

ಕೊರೊನಾ‌ ಹತೋಟಿಗೆ ಬರದಿದ್ದರೆ ಒಲಿಂಪಿಕ್ಸ್‌ ರದ್ದು: ಯೋಶಿರೊ ಮೊರಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಕೊರೊನಾ ವೈರಾಣು ಉಪಟಳ ಹತೋಟಿಗೆ ಬರದಿದ್ದರೆ 2021ರಲ್ಲಿ ನಿಗದಿಯಾಗಿರುವ ಒಲಿಂಪಿಕ್ಸ್ ಕೂಟವನ್ನು ರದ್ದುಗೊಳಿಸಲಾಗುವುದು ಎಂದು ಟೋಕಿಯೋ ಒಲಿಂಪಿಕ್ಸ್‌ ಸಂಘಟನಾ ಸಮಿತಿ ಅಧ್ಯಕ್ಷ ಯೋಶಿರೊ ಮೊರಿ ಹೇಳಿದ್ದಾರೆ. ಈ ಮೂಲಕ ಕೂಟ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯನ್ನು ಅವರು ತಳ್ಳಿಹಾಕಿದ್ದಾರೆ.

ಜಪಾನ್‌ನ ಕ್ರೀಡಾ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ. ಸೋಂಕು ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. 2021ರ ವೇಳೆಗೂ ಇದು ನಿಯಂತ್ರಣಕ್ಕೆ ಬರದೇ ಇರಬಹುದು. ಆಗ ಮುಂದಿನ ನಡೆ ಏನು ಎಂಬ ವೈದ್ಯಕೀಯ ತಜ್ಞರ ಸಂದೇಹಕ್ಕೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.

ಈ ವರ್ಷ ನಡೆಯಬೇಕಿದ್ದ ಒಲಿಂಪಿಕ್ಸ್‌ ಕೂಟವನ್ನು ಈಗಾಗಲೇ 2021 ಜುಲೈಗೆ ಮುಂದೂಡಲಾಗಿದೆ. 

‘ಈ ಹಿಂದೆ ಮೊದಲ ಮಹಾಯುದ್ಧದ ಸಂದರ್ಭದಲ್ಲಿ ಮಾತ್ರ ಒಲಿಂಪಿಕ್ಸ್‌ ಕೂಟ ರದ್ದಾಗಿತ್ತು. ಈಗ ನಾವು ಅಗೋಚರ ಶತ್ರುವಿನ (ಕೊರೊನಾ ವೈರಾಣು) ವಿರುದ್ಧ ಹೋರಾಡುತ್ತಿದ್ದೇವೆ. ವೈರಾಣುವಿನ ಉಪಟಳ ಹೆಚ್ಚಾದರೆ 2022ಕ್ಕೆ ಕೂಟವನ್ನು ಮುಂದೂಡುವುದಿಲ್ಲ; ಬದಲಿಗೆ ರದ್ದುಗೊಳಿಸಲಾಗುತ್ತದೆ. ನಿಯಂತ್ರಣಕ್ಕೆ ಬಂದರೆ 2021ಕ್ಕೇ ಕೂಟ ನಡೆಸುವ ವಿಶ್ವಾಸವಿದೆ’ ಎಂದು ಮೊರಿ ತಿಳಿಸಿದ್ದಾರೆ.

ಆದರೆ ಒಲಿಂಪಿಕ್ಸ್‌ ರದ್ದು ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿರುವ ಕೂಟದ ವಕ್ತಾರ ಮಸಾ ಟಕಾಯಾ, ‘ಮೊರಿ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ’ ಎಂದಿದ್ದಾರೆ.

‘ಕೋವಿಡ್‌–19 ಪಿಡುಗಿಗೆ ಚಿಕಿತ್ಸೆ ಕಂಡುಹಿಡಿಯದಿದ್ದರೆ 2021ಕ್ಕೂ ಒಲಿಂಪಿಕ್ಸ್‌ ಆಯೋಜಿಸುವುದು ತೀರಾ ಕಷ್ಟವಾಗಲಿದೆ’ ಎಂದು ಮಂಗಳವಾರ ಜಪಾನ್‌ನ ವೈದ್ಯಕೀಯ ಅಸೋಸಿಯೇಷನ್‌ನ ಮುಖ್ಯಸ್ಥ ಯೋಶಿಟಾಕೆ ಯೊಕೊಕುರಾ ಎಚ್ಚರಿಕೆ ನೀಡಿದ್ದಾರೆ.

‘ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್‌ ಎರಡಕ್ಕೂ ಒಂದೇ ಬಾರಿ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭ ಆಯೋಜಿಸಲು ಯೋಚಿಸಬೇಕು. ಇದರಿಂದ ಸಾಕಷ್ಟು ವೆಚ್ಚದ ಹೊರೆ ಕಡಿಮೆಯಾಗಲಿದೆ’ಎಂದು ಸಂದರ್ಶನದಲ್ಲಿ ಮೊರಿ ಹೇಳಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು