ಬುಧವಾರ, ಅಕ್ಟೋಬರ್ 20, 2021
25 °C

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿಯೂ ಆಡುತ್ತೇನೆ: ಶ್ರೀಜೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿಯೂ ಆಡುತ್ತೇನೆ. ಎಲ್ಲಿಯವರೆಗೆ ತಂಡದವರು ತಮ್ಮನ್ನು  ಹೊರಗೆ ಹಾಕುವುದಿಲ್ಲವೋ ಅಲ್ಲಿಯವರೆಗೆ ಭಾರತಕ್ಕಾಗಿ ಆಡುತ್ತೇನೆ ಎಂದು ಹಾಕಿ ತಂಡದ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಹೇಳಿದ್ದಾರೆ.

ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್‌) ವರ್ಷದ ಶ್ರೇಷ್ಠ ಗೋಲ್‌ಕೀಪರ್ ಪ್ರಶಸ್ತಿ ಸ್ವೀಕರಿಸಿದ ನಂತರ ‘ಇಂಡಿಯಾ ಟುಡೆ ಕಾನ್‌ಕ್ಲೇವ್‌‘ನಲ್ಲಿ ಭಾಗವಹಿಸಿದ್ದ ಶ್ರೀಜೇಶ್ ತಮ್ಮ ಮನದಿಂಗಿತ ವ್ಯಕ್ತಪಡಿಸಿದ್ಧಾರೆ.

‘21 ವರ್ಷಗಳಿಂದ ಹಾಕಿ ಆಡುತ್ತಿರುವೆ. ಆದ್ದರಿಂದ ನನ್ನ ಮನದಲ್ಲಿ ಯಾವಾಗಲೂ ಇನ್ನೊಂದು ಪಂದ್ಯ ಆಡಬೇಕು. ಮತ್ತೊಂದು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಬೇಕು ಎಂಬ ಛಲ ಮತ್ತು ಆಸೆಗಳು ಇದ್ದೇ ಇರುತ್ತವೆ’ ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾರತ ಹಾಕಿ ತಂಡದ ನಾಯಕ ಮನಪ್ರೀತ್ ಸಿಂಗ್, ‘ಶ್ರೀಜೇಶ್ ಶ್ರೇಷ್ಠ ಗೋಲ್‌ಕೀಪರ್. ಅವರು ನಮ್ಮೆಲ್ಲರೊಂದಿಗೆ ಪ್ಯಾರಿಸ್‌ಗೆ ತೆರಳುವುದು ಖಚಿತ. ಅವರು ನಮ್ಮೊಂದಿಗೆ ಇದ್ದರೆ ತಂಡದ ಆತ್ಮವಿಶ್ವಾಸ ಉತ್ತುಂಗದಲ್ಲಿರುತ್ತದೆ. ನಮ್ಮ ಗೋಲುಪೆಟ್ಟಿಗೆ ರಕ್ಷಣೆಗೆ ಅವರಿರಲೇಬೇಕು’ ಎಂದರು. 

‘ಈ ಬಾರಿ ಗೆದ್ದಿರುವ ಒಲಿಂಪಿಕ್ ಪದಕದ ವರ್ಣವನ್ನು ಮುಂದಿನ ಬಾರಿ ಬದಲಿಸಿಕೊಂಡು ಬರುವುದೇ ನಮ್ಮ ಮುಂದಿರುವ ಅತಿದೊಡ್ಡ ಗುರಿ’ ಎಂದು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಚಿನ್ನಕ್ಕೆ ಗುರಿ ಇಟ್ಟಿರುವುದನ್ನು ಸಿಂಗ್ ಸೂಚ್ಯವಾಗಿ ಹೇಳಿದರು.

33 ವರ್ಷದ ಶ್ರೀಜೇಶ್ ಈಚೆಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವು ಕಂಚಿನ ಪದಕ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.  ಅವರ ಸಹ ಆಟಗಾರರಾಗಿದ್ದ ರೂಪಿಂದರ್ ಪಾಲ್ ಸಿಂಗ್, ಬೀರೇಂದ್ರ ಲಕ್ರಾ ಅವರು ಅಂತರರಾಷ್ಟ್ರೀಯ ಹಾಕಿ ಗೆ ವಿದಾಯ ಹೇಳಿದ್ದರು.

‘ಮಹಿಳೆಯರ ತಂಡದ್ದು ಅಮೋಘ ಸಾಧನೆ.  ಆದರೆ ಅವರ ಜೊತೆಗೆ ಅದೃಷ್ಟವಿರಲಿಲ್ಲ. ಆದ್ದರಿಂದ ಕೊಂಚದರಲ್ಲಿ ಪದಕ ಕೈತಪ್ಪಿ ಹೋಯಿತು. ಆದರೆ, ಈ ಸಾಧನೆ ಸಣ್ಣದೇನಲ್ಲ’ ಎಂದು ಮನಪ್ರೀತ್ ಶ್ಲಾಘಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು