ಮಂಗಳವಾರ, ಸೆಪ್ಟೆಂಬರ್ 29, 2020
22 °C

ಕ್ರೀಡಾ ಫೆಡರೇಷನ್ ಮಾಹಿತಿ: ಅವಧಿ ಕೋರಿದ ಐಒಎ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕ್ರೀಡಾ ಫೆಡರೇಷನ್‌ ಪದಾಧಿಕಾರಿಗಳ ವಯಸ್ಸು ಮತ್ತು ಆಡಳಿತಾವಧಿಗೆ ಸಂಬಂಧಿಸಿ ಪ್ರಶ್ನಾವಳಿಗೆ ಉತ್ತರಿಸಲು ನೀಡಿರುವ ಅವಧಿಯನ್ನು ಹೆಚ್ಚಿಸಬೇಕು ಎಂದು ಭಾರತ ಒಲಿಂಪಿಕ್ ಸಂಸ್ಥೆಯು (ಐಒಎ) ಕ್ರೀಡಾ ಸಚಿವಾಲಯವನ್ನು ಕೋರಿದೆ. ಕ್ರೀಡಾ ಫೆಡರೇಷನ್‌ಗಳಿಗೆ ಸಂಬಂಧಿಸಿ ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣದಲ್ಲಿ ಈ ಮಾಹಿತಿಗಳು ಮಹತ್ವದ್ದಾಗಿವೆ.

ರಾಷ್ಟ್ರೀಯ ಕ್ರೀಡಾನೀತಿ ಮತ್ತು ಅವಧಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ರಾಷ್ಟ್ರದ 57 ಕ್ರೀಡಾ ಫೆಡರೇಷನ್‌ಗಳ ಮಾನ್ಯತೆಯನ್ನು ಸಚಿವಾಲಯ ರದ್ದುಗೊಳಿಸಿದ್ದು ಆಗಸ್ಟ್ 11ರ ಒಳಗೆ ಪ್ರಶ್ನಾವಳಿಗೆ ಉತ್ತರ ನೀಡುವಂತೆ ಸೂಚಿಸಿದೆ. ಆಗಸ್ಟ್ 21ರಂದು ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ನಡೆಯಲಿದೆ.

‘ಕೋವಿಡ್ –19ರಿಂದಾಗಿ ಫೆಡರೇಷನ್‌ಗಳ ಸಿಬ್ಬಂದಿಗೆ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಆಗಲಿಲ್ಲ. ಆದ್ದರಿಂದ ಸಮಯಾವಕಾಶ ನೀಡಬೇಕು, ಕ್ರೀಡಾ ಸಚಿವರೊಂದಿಗೆ ಚರ್ಚಿಸಲು ದಿನ ನಿಗದಿ ಮಾಡಬೇಕು. ಪ್ರಶ್ನಾವಳಿಯಲ್ಲಿ ಕೇಳಿರುವ ಅನೇಕ ಮಾಹಿತಿಗಳಿಗೂ ಕ್ರೀಡಾನೀತಿಗೂ ಸಂಬಂಧವೇ ಇಲ್ಲ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಸೂಕ್ಷ್ಮವಾಗಿ ನಿರ್ವಹಣೆ ಮಾಡಬೇಕು. ಎಲ್ಲರೂ ಒಗ್ಗಟ್ಟಾಗಿ ಸಮಸ್ಯೆಯನ್ನು ಎದುರಿಸಬೇಕಾದ ಸಮಯ ಇದು. ಸದ್ಯದ ಪರಿಸ್ಥಿತಿಯಲ್ಲಿ ಉತ್ತರ ನೀಡಲು ಕನಿಷ್ಠ ನಾಲ್ಕು ವಾರಗಳ ಅವಧಿಯನ್ನಾದರೂ ನೀಡಬೇಕು’ ಎಂದು ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ನರಿಂದರ್ ಬಾತ್ರಾ ಮತ್ತು ಕಾರ್ಯದರ್ಶಿ ರಾಜೀವ್ ಮೆಹ್ತಾ ಜಂಟಿ ಪ್ರಕಟಣೆಯಲ್ಲಿ ಕೋರಿದ್ದಾರೆ. ಸೋಮವಾರ ನಡೆಯಲಿರುವ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಲಿದೆ.

ಫೆಬ್ರುವರಿ ಏಳರಂದು ನೀಡಿದ ಆದೇಶವನ್ನು ಮುರಪರಿಶೀಲನೆ ಮಾಡಬೇಕು ಎಂದು ಕೋರಿ ಕ್ರೀಡಾ ಸಚಿವಾಲಯ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್‌ ತಳ್ಳಿಹಾಕಿತ್ತು. ಕ್ರೀಡಾ ಫೆಡರೇಷನ್‌ಗಳಿಗೆ ಸಂಬಂಧಿಸಿ ಯಾವುದೇ ನಿರ್ಧಾರವನ್ನು ತನ್ನ ಗಮನಕ್ಕೆ ತಾರದೇ ತೆಗೆದುಕೊಳ್ಳಬಾರದು ಎಂದು ಹೈಕೋರ್ಟ್ ಸೂಚಿಸಿತ್ತು. ಮೇ 11ರಂದು ಫೆಡರೇಷನ್‌ಗಳಿಗೆ ನೀಡಿದ್ದ ಮಾನ್ಯತೆಯನ್ನು ರದ್ದುಗೊಳಿಸುವಂತೆ ಜೂನ್ 24ರಂದು ನ್ಯಾಯಾಲಯವು ಸಚಿವಾಲಯಕ್ಕೆ ಆದೇಶ ನೀಡಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು