ಒಲಿಂಪಿಕ್ಸ್: ಭಾರತದ ಮೊದಲ ತಂಡದ ಪ್ರಯಾಣ 14ರಂದು

ಚೆನ್ನೈ: ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಭಾರತದ ಕ್ರೀಡಾಪಟುಗಳ ಮೊದಲ ತಂಡ ಇದೇ 14ರಂದು ಟೋಕಿಯೊಗೆ ತೆರಳಲಿದೆ ಎಂದು ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಶನಿವಾರ ತಿಳಿಸಿದ್ದಾರೆ. ಏರ್ ಇಂಡಿಯಾದ ವಿಶೇಷ ವಿಮಾನದಲ್ಲಿ ಅಥ್ಲೀಟ್‌ಗಳು ಪ್ರಯಾಣಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಎರಡನೇ ತಂಡದ ಪ್ರಯಾಣದ ದಿನವನ್ನು ಇನ್ನೂ ನಿಗದಿ ಮಾಡಲಿಲ್ಲ. ಜುಲೈ 16ರಿಂದ 19ರ ಅವಧಿಯಲ್ಲಿ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗುವುದು. ಟೋಕಿಯೊಗೆ ತಲುಪಿದ ನಂತರ ತಂಡದ ಎಲ್ಲರೂ ಮೂರು ದಿನಗಳ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ. ಜುಲೈ 23ರಿಂದ ಆಗಸ್ಟ್ ಎಂಟರ ವರೆಗೆ ಒಲಿಂಪಿಕ್ಸ್ ನಡೆಯಲಿದೆ.
‘ಟೋಕಿಯೊದಲ್ಲಿ ವಿಮಾನ ಇಳಿಯುವ ದಿನವನ್ನು ಶೂನ್ಯ ದಿನ ಎಂದು ಪರಿಗಣಿಸಲಾಗುತ್ತದೆ. ನಂತರದ ಮೂರು ದಿನ ಕ್ವಾರಂಟೈನ್ ಇರುತ್ತದೆ’ ಎಂದು ಯೂತಿಂಕ್ ಫೌಂಡೇಷನ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮೆಹ್ತಾ ತಿಳಿಸಿದರು.
‘18 ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಒಟ್ಟು 115 ಮಂದಿ ಈಗಾಗಲೇ ಆಯ್ಕೆಯಾಗಿದ್ದಾರೆ. ಇದರಲ್ಲಿ ಇದೇ ಮೊದಲ ಬಾರಿ ಫೆನ್ಸಿಂಗ್‌ಗೆ ಆಯ್ಕೆಯಾಗಿರುವ ತಮಿಳುನಾಡಿನ ಸಿ.ಎ.ಭವಾನಿ ದೇವಿ ಅವರೂ ಸೇರಿದ್ದಾರೆ’ ಎಂದು ಅವರು ಹೇಳಿದರು.
ಚಿನ್ನ ಗೆದ್ದರೆ ₹ ಎರಡು ಕೋಟಿ
ರಾಂಚಿಯ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದರೆ ₹ ಎರಡು ಕೋಟಿ ಬಹುಮಾನ ನೀಡುವುದಾಗಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಘೋಷಿಸಿದ್ದಾರೆ. ಪ್ಯಾರಿಸ್‌ನಲ್ಲಿ ಈಚೆಗೆ ನಡೆದ ವಿಶ್ವಕಪ್ ಮೂರನೇ ಸುತ್ತಿನ ಟೂರ್ನಿಯಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ರಾಜ್ಯದ ದೀಪಿಕಾ ಕುಮಾರಿ ಅವರಿಗೆ ₹ 50 ಲಕ್ಷ ನೀಡುವುದಾಗಿಯೂ ಭರವಸೆ ನೀಡಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದರೆ ₹ ಒಂದು ಕೋಟಿ, ಕಂಚಿನ ಪದಕ ಗಳಿಸಿದರೆ ₹ 75 ಲಕ್ಷ ನೀಡುವುದಾಗಿಯೂ ಸೊರೇನ್ ತಿಳಿಸಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಆಡಲಿರುವ ಭಾರತ ಹಾಕಿ ತಂಡಕ್ಕೆ ಆಯ್ಕೆಯಾಗಿರುವ ನಿಕ್ಕಿ ಪ್ರಧಾನ್ ಮತ್ತು ಸಲಿಮಾ ಟೆಟೆ ಅವರಿಗೆ ತಲಾ ₹ ಐದು ಲಕ್ಷ ನೀಡುವುದಾಗಿ ತಿಳಿಸಿದರು.
ಅಂಕಿತಾ ಭಕತ್ ಮತ್ತು ಕೋಮಲಿಕಾ ಬಾರಿ ಅವರಿಗೆ ₹ ತಲಾ 20 ಲಕ್ಷ, ಕೋಚ್ ಪೂರ್ಣಿಮಾ ಮಹತೊ ಅವರಿಗೆ ₹ 12 ಲಕ್ಷ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ... ದೇಶಿ ಕ್ರಿಕೆಟ್ ವೇಳಾಪಟ್ಟಿ: ನವೆಂಬರ್ 16ರಿಂದ ರಣಜಿ ಟ್ರೋಫಿ ಟೂರ್ನಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.