ಭಾನುವಾರ, ಏಪ್ರಿಲ್ 2, 2023
31 °C
ಅಕ್ಟೋಬರ್‌ನಲ್ಲಿ ಟಿ20, ಮುಂದಿನ ವರ್ಷದ ಫೆಬ್ರುವರಿಯಯಲ್ಲಿ ಏಕದಿನ ಟೂರ್ನಿ

ದೇಶಿ ಕ್ರಿಕೆಟ್ ವೇಳಾಪಟ್ಟಿ: ನವೆಂಬರ್‌ 16ರಿಂದ ರಣಜಿ ಟ್ರೋಫಿ ಟೂರ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್ ಕಾಲಘಟ್ಟದ ಸವಾಲುಗಳ ನಡುವೆಯೂ ದೇಶಿ ಕ್ರಿಕೆಟ್‌ನ ‘ರಾಜ’ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ.

ನವೆಂಬರ್ 16 ರಿಂದ 2022ರಿಂದ ಫೆಬ್ರುವರಿ 19ರವರೆಗೆ ರಣಜಿ ಟ್ರೋಫಿ ಆಯೋಜಿಸಲಿದೆ. ಒಟ್ಟು 38 ತಂಡಗಳು ಸ್ಪರ್ಧಿಸಲಿವೆ. 177 ಪಂದ್ಯಗಳು ಆಯೋಜನೆಗೊಳ್ಳಲಿವೆ. ಕೋವಿಡ್ ಕಾರಣದಿಂದಾಗಿ ಹೋದ ವರ್ಷದ ರಣಜಿ ಋತು ರದ್ದಾಗಿತ್ತು. 87 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ರಣಜಿ ಟೂರ್ನಿ ರದ್ದಾಗಿತ್ತು. 

ಶನಿವಾರ ಬಿಸಿಸಿಐ ಪ್ರಕಟಿಸಿರುವ ವೇಳಾಪಟ್ಟಿಯಲ್ಲಿ 2021–22ರ ದೇಶಿ ಕ್ರಿಕೆಟ್ ಚಟುವಟಿಕೆಗಳನ್ನು ಉಲ್ಲೇಖಿಸಿದೆ.

‘ಸೆಪ್ಟೆಂಬರ್ 21 ರಿಂದ ಸೀನಿಯರ್ ಮಹಿಳಾ ಏಕದಿನ ಲೀಗ್ ಟೂರ್ನಿಯೊಂದಿಗೆ ದೇಶಿ ಋತುವಿಗೆ ಚಾಲನೆ ದೊರೆಯಲಿದೆ‘ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.

ಅಕ್ಟೋಬರ್‌ 20 ರಿಂದ ನವೆಂಬರ್‌ 12ರವರೆಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಮೂಲಕ ದೇಶಿ ಋತುವಿಗೆ ಚಾಲನೆ ದೊರೆಯಲಿದೆ.

2022ರ ಫೆಬ್ರುವರಿ 23ರಿಂದ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿ ನಡೆಯಲಿದೆ. ಇಡೀ ಋತುವಿನಲ್ಲಿ ಸೀನಿಯರ್, ಜೂನಿಯರ್ ಟ್ರೋಫಿ ಟೂರ್ನಿಗಳಲ್ಲಿ 2100 ಪಂದ್ಯಗಳು ನಡೆಯಲಿವೆ.

‘ಒಟ್ಟು ಮೂರು ತಿಂಗಳುಗಳ  ಅವಧಿಯಲ್ಲಿ ರಣಜಿ ಟ್ರೋಫಿ ಟೂರ್ನಿಯು ಆಯೋಜನೆಗೊಳ್ಳಲಿದೆ. ಈ ಬಾರಿ ಯೋಜನೆಯಂತೆ ಈ ಎಲ್ಲ ಟೂರ್ನಿಗಳನ್ನೂ ಯಶಸ್ವಿಯಾಗಿ ಆಯೋಜಿಸುವ ವಿಶ್ವಾಸ ನಮಗಿದೆ‘ ಎಂದು ಶಾ ಹೇಳಿದ್ದಾರೆ.

ರಣಜಿ ಟೂರ್ನಿಯಲ್ಲಿ ಎರಡು ಎಲೀಟ್ ವಿಭಾಗಗಳಿವೆ. ಪ್ರತಿ ಗುಂಪಿನಲ್ಲಿ ಒಂಬತ್ತು ತಂಡಗಳು ಇರಲಿವೆ. ಸಿ ಗುಂಪು ಮತ್ತು ಪ್ಲೇಟ್ (ಈಶಾನ್ಯ ರಾಜ್ಯ ತಂಡಗಳು) ಗುಂಪುಗಳಲ್ಲಿ ತಲಾ 10 ತಂಡಗಳಿವೆ. 

‘ವಿನೂ ಮಂಕಡ್‌ ಟ್ರೋಫಿ ಟೂರ್ನಿಯಲ್ಲಿ ಉತ್ತಮವಾಗಿ ಆಡುವ ಕ್ರಿಕೆಟಿಗರನ್ನು 19 ವರ್ಷದೊಳಗಿನ ಭಾರತ ತಂಡದ ಆಯ್ಕೆಗೆ ಪರಿಗಣಿಸಲಾಗುವುದು‘ ಎಂದು ಶಾ ಹೇಳೀದ್ದಾರೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು