ಶುಕ್ರವಾರ, ಅಕ್ಟೋಬರ್ 30, 2020
28 °C

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಸೈನಾ, ಶ್ರೀಕಾಂತ್‌ಗೆ ಸುಲಭ ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಒಡೆನ್ಸ್, ಡೆನ್ಮಾರ್ಕ್‌: ಕೊರೊನಾ ಸೋಂಕಿನ ಹಾವಳಿಯ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ ಟೂರ್ನಿಗಳಿಗೆ ಡೆನ್ಮಾರ್ಕ್‌ ಓಪನ್ ಮೂಲಕ ಚಾಲನೆ ಸಿಗಲಿದೆ. ಅಕ್ಟೋಬರ್‌ 13ರಂದು ಆರಂಭವಾಗುವ ಟೂರ್ನಿಯ ಡ್ರಾ ಪ್ರಕಟವಾಗಿದ್ದು, ಭಾರತದ ಸೈನಾ ನೆಹ್ವಾಲ್‌ ಹಾಗೂ ಕಿದಂಬಿ ಶ್ರೀಕಾಂತ್ ಅವರಿಗೆ ಮೊದಲ ಸುತ್ತಿನಲ್ಲಿ ಸುಲಭ ಸವಾಲು ಎದುರಾಗಿದೆ.

ಟೋಕಿಯೊ ಒಲಿಂಪಿಕ್ಸ್‌ ಮೇಲೆ ಕಣ್ಣಿಟ್ಟಿರುವ ಸೈನಾ ಹಾಗೂ ಶ್ರೀಕಾಂತ್‌, ಈ ಟೂರ್ನಿಗಳಲ್ಲಿ ಅಮೂಲ್ಯ ಪಾಯಿಂಟ್ಸ್‌ ಕಲೆಹಾಕುವತ್ತ ಚಿತ್ತವಿರಿಸಿದ್ದಾರೆ. ರಿಯೊ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ಫೈನಲ್‌ ತಲುಪಿದ್ದ ಶ್ರೀಕಾಂತ್‌ ಅವರು ಟೂರ್ನಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ನ ಟೋಬಿ ಪೆಂಟಿ ಅವರನ್ನು ಎದುರಿಸಲಿದ್ದಾರೆ. ಎರಡನೇ ಸುತ್ತಿನ ಹಣಾಹಣಿಯಲ್ಲಿ ಅವರಿಗೆ ಭಾರತದ ಶುಭಾಂಕರ್‌ ಡೇ ಮುಖಾಮುಖಿಯಾಗುವ ಸಾಧ್ಯತೆಯಿದೆ.

ಶುಭಾಂಕರ್‌ ಅವರಿಗೆ ಮೊದಲ ಸುತ್ತಿನಲ್ಲಿ ಕೆನಡಾದ ಜೇಸನ್‌ ಅಂಥೋನಿ ಹೋ ಶ್ಯು ಅವರ ಸವಾಲು ಎದುರಾಗಿದೆ.

ವಿಶ್ವ ಕ್ರಮಾಂಕದಲ್ಲಿ 20ನೇ ಸ್ಥಾನದಲ್ಲಿರುವ ಸೈನಾ, ಫ್ರಾನ್ಸ್‌ನ ಯೇಲೆ ಹೊಯುಕ್ಸ್ ಅವರನ್ನು ಮೊದಲ ಸುತ್ತಿನಲ್ಲಿ ಎದುರಿಸಲಿದ್ದಾರೆ. ಒಂದು ವೇಳೆ ಯೇಲೆ ಮೇಲೆ ಗೆದ್ದರೆ ಸೈನಾ ಅವರು ಏಳನೇ ಶ್ರೇಯಾಂಕದ ಸ್ಥಳೀಯ ಆಟಗಾರ್ತಿ ಮಿಯಾ ಬ್ಲಿಚ್‌ಫೆಲ್ಟ್ ಅವರ ಸವಾಲಿಗೆ ಸಜ್ಜಾಗಲಿದ್ದಾರೆ. 

ಸೈನಾ ಅವರ ಪತಿ ಪರುಪಳ್ಳಿ ಕಶ್ಯಪ್‌ ಅವರು ಜಪಾನ್‌ನ ಕೋಕಿ ಎದುರು, ಯುವ ಆಟಗಾರ ಲಕ್ಷ್ಯ ಸೇನ್‌ ಅವರು ಫ್ರಾನ್ಸ್‌ನ ಕ್ರಿಸ್ಟೊ ಪಾಪೊವ್ ಎದುರು, ಅಜಯ್‌ ಜಯರಾಮ್ ಅವರು ಡೆನ್ಮಾರ್ಕ್‌ನ ಆ್ಯಂಡರ್ಸ್ ಆ್ಯಂಟನ್‌ಸೇನ್‌ ಅವರನ್ನು ಮೊದಲ ಸುತ್ತಿನಲ್ಲಿ ಎದುರಿಸಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು