ಜೈಲಿನಲ್ಲಿ ಕುಸ್ತಿ ನೋಡಲು ಟಿವಿ ಬೇಕೆಂದ ಸುಶೀಲ್ ಕುಮಾರ್!

ನವದೆಹಲಿ: ಕುಸ್ತಿ ಪಂದ್ಯಗಳ ವಿವರಗಳನ್ನು ತಿಳಿಯಲು ಟಿವಿ ಒದಗಿಸುವಂತೆ ತಿಹಾರ್ ಜೈಲಿನ ಅಧಿಕಾರಿಗಳಿಗೆ ಕುಸ್ತಿಪಟು ಸುಶೀಲ್ ಕುಮಾರ್ ಮನವಿ ಮಾಡಿದ್ದಾರೆ.
ದೆಹಲಿಯ ಛತ್ರಸಾಲ ಕ್ರೀಡಾಂಗಣದಲ್ಲಿ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿ ಜೈಲು ಸೇರಿರುವ, ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಭಾರತದ ಕುಸ್ತಿಪಟು ಸುಶೀಲ್ ಕುಮಾರ್ ತಮ್ಮ ವಕೀಲರ ಮೂಲಕ ಟಿವಿ ಒದಗಿಸುವಂತೆ ಮನವಿ ಇಟ್ಟಿದ್ದಾರೆ.
23 ವರ್ಷದ ಸಾಗರ್ ಧನಕರ್ ಮತ್ತು ಇಬ್ಬರು ಗೆಳೆಯರ ಮೇಲೆ ಸುಶೀಲ್ ಕುಮಾರ್ ಮತ್ತು ಸಹಚರರು ಹಲ್ಲೆ ನಡೆಸಿದ್ದರು ಎನ್ನಲಾಗಿದ್ದು, ನಂತರ ಸಾಗರ್ ಮೃತಪಟ್ಟಿದ್ದರು. ಕೊಲೆ ಆರೋಪ ಎದುರಿಸುತ್ತಿರುವ ಸುಶೀಲ್ ಕುಮಾರ್ ಮತ್ತು ಸಹಚರ ಅಜಯ್ ಕುಮಾರ್ ಅವರನ್ನು ಮೇ 23ರಂದು ಬಂಧಿಸಲಾಗಿದೆ.
'ಟಿವಿ ಒದಗಿಸಿದರೆ ಕುಸ್ತಿ ಪಂದ್ಯಗಳ ವಿವರಗಳನ್ನು ತಿಳಿಯಲು ಸಾಧ್ಯ' ಎಂದು ಸುಶೀಲ್ ಕುಮಾರ್ ಮನವಿಯಲ್ಲಿ ತಿಳಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಸಿಎಂ ಮಮತಾರನ್ನು ಕೆಳಗಿಳಿಸಲು ರಾವತ್ ರಾಜೀನಾಮೆಯೆಂಬ ಬಿಜೆಪಿಯ ನೈತಿಕ ದಾಳ?
ದಿಲ್ಲಿ ಕೋರ್ಟ್ ಸುಶೀಲ್ ಕುಮಾರ್ ಅವರನ್ನು ಜುಲೈ 9ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ಆರಂಭದಲ್ಲಿ ಸುಶೀಲ್ ಅವರನ್ನು ಮಾಂಡೋಲಿ ಜೈಲಿನಲ್ಲಿ ಇರಿಸಲಾಗಿತ್ತು. ಇದೀಗ ತಿಹಾರ್ ಜೈಲಿಗೆ ಸ್ಥಳಾಂತರಿಸಲಾಗಿದೆ.
ಸ್ಥಳಾಂತರದ ವೇಳೆ ಮಾಂಡೋಲಿ ಜೈಲಿನ ಆವರಣದಲ್ಲಿ ಪೊಲೀಸ್ ಸಿಬ್ಬಂದಿ ಸುಶೀಲ್ ಕುಮಾರ್ ಜೊತೆ ತೆಗೆಸಿಕೊಂಡಿದ್ದ ಫೋಟೊ ವಿವಾದಕ್ಕೆ ಕಾರಣವಾಗಿತ್ತು. ಫೋಟೊದಲ್ಲಿ ಸುಶೀಲ್ ಕುಮಾರ್ ಬೆಲೆಬಾಳುವ ಟಿ-ಶರ್ಟ್ ಧರಿಸಿ, ಮಾಸ್ಕ್ ಧರಿಸಿದೆ ಮುಗುಳ್ನಗುತ್ತ ನಿಂತಿದ್ದರು.
ಸುಶೀಲ್ ಜೊತೆ ಫೋಟೊ ತೆಗೆಸಿಕೊಂಡ ಪೊಲೀಸರು: ತನಿಖೆ ಆರಂಭ
ಪ್ರಕರಣಕ್ಕೆ ಸಂಬಂಧಿಸಿ ಸುಶೀಲ್ ಕುಮಾರ್ ಸೇರಿದಂತೆ 12 ಆರೋಪಿಗಳನ್ನು ಬಂಧಿಸಲಾಗಿದೆ. ಸುಶೀಲ್ ಕುಮಾರ್ ಪ್ರಮುಖ ಆರೋಪಿ ಹಾಗೂ ಸಂಚುಕೋರ ಎಂದು ಪೊಲೀಸರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.