ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics: ಬಾಕ್ಸಿಂಗ್ ರಿಂಗ್‌ನಲ್ಲಿ ಪ್ರತಿಭಟನೆಯ ಪಂಚ್‌ ಪ್ರಯೋಗ

Last Updated 1 ಆಗಸ್ಟ್ 2021, 22:19 IST
ಅಕ್ಷರ ಗಾತ್ರ

ಟೋಕಿಯೊ: ಒಲಿಂಪಿಕ್ಸ್‌ನ ಬಾಕ್ಸಿಂಗ್ ರಿಂಗ್‌ ಭಾನುವಾರ ಭರ್ಜರಿ ಪ್ರಹಾರ ಮತ್ತು ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಯಿತು. ಘಾನಾ 50 ವರ್ಷಗಳಲ್ಲಿ ಮೊದಲ ಪದಕದ ಸಂಭ್ರಮದಲ್ಲಿ ಮಿಂದರೆ ಫ್ರಾನ್ಸ್‌ನ ಬಾಕ್ಸರ್ ಪ್ರತಿಭಟನೆಯ ಅಸ್ತ್ರ ಪ್ರಯೋಗಿಸಿ ಸಂಘಟಕರನ್ನು ಕಂಗೆಡಿಸಿದರು.

ಕೊಕುಗಿಕಾನ್ ಅರೆನಾದಲ್ಲಿ ಸೂಪರ್ ಹೆವಿವೇಟ್ ವಿಭಾಗದ ಚಿನ್ನದ ಪದಕದ ಬೌಟ್ ಆರಂಭವಾಗಲು ಸಿದ್ಧತೆ ನಡೆಯುತ್ತಿದ್ದಾಗ ಫ್ರಾನ್ಸ್‌ನ ಮೌರಾದ್ ಅಲೀವ್ ರಿಂಗ್ ಬದಿಯಲ್ಲಿ ಧರಣಿ ನಡೆಸಿದರು. ಎದುರಾಳಿಗೆ ತಲೆ ಡಿಚ್ಚಿ ಹೊಡೆದು ಅಶಿಸ್ತು ತೋರಿದ್ದಕ್ಕಾಗಿ ರೆಫರಿ ಆನರ್ಹಗೊಳಿಸಿದ್ದು ಅವರ ಕೋಪಕ್ಕೆ ಕಾರಣ.

ಮಾಸ್ಕೊದಲ್ಲಿ ಜನಿಸಿ ಫ್ರಾನ್ಸ್‌ನಲ್ಲಿ ಬೆಳೆದ ಮೌರಾದ್ ಬೌಟ್‌ನಿಂದ ಆನರ್ಹಗೊಂಡ ನಂತರ ಬಾಯಿಯೊಳಗೆ ಇರಿಸಿದ್ದ ಗಾರ್ಡ್ ತೆಗೆದು ಎಸೆದು, ಅಸಹ್ಯ ಹಾವಭಾವ ತೋರಿ ಟಿವಿ ಕ್ಯಾಮರಾಮನ್‌ ಮೇಲೆ ಪಂಚ್‌ ಮಾಡಿದ್ದರು. ಅವರ ಎದುರಾಳಿ ಬ್ರಿಟನ್‌ನ ಫ್ರೇಜರ್ ಕ್ಲಾರ್ಕ್‌ ಗಾಯಗೊಂಡರೂ ಜಯ ಸಾಧಿಸಿದರು. ‘ನಾನು ಗೆದ್ದಿದ್ದೆ. ಆದರೂ ಅನರ್ಹಗೊಳಿಸಿದ್ದಾರೆ’ ಎಂದು ಅವರು ಕಿಡಿಕಾರಿದ್ದರು.

ಸ್ಯಾಮ್ಯುಯಲ್ ಟಕ್ಯಿ ಅವರು ಕೊಲಂಬಿಯಾದ ಸೀಬರ್ ಅವಿಲಾ ಎದುರು ಗೆದ್ದು ಪದಕವನ್ನು ಖಚಿತಪಡಿಸಿಕೊಂಡರು. ಈ ಮೂಲಕ ಬಾಕ್ಸಿಂಗ್‌ನಲ್ಲಿ ಅರ್ಧಶತಮನಾದ ಪದಕದ ಬರವನ್ನು ನೀಗಿಸಿದರು.1992ರಲ್ಲಿ ಫುಟ್‌ಬಾಲ್‌ನಲ್ಲಿ ಕಂಚು ಗಳಿಸಿದ ನಂತರ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ದೊರೆಯಲಿರುವ ಒಟ್ಟಾರೆ ಮೊದಲ ಪದಕವೂ ಆಗಲಿದೆ ಇದು.

ರಕ್ತಚೆಲ್ಲಿದ ಸತೀಶ್‌ಗೆ ನಿರಾಸೆ

ವಿಶ್ವ ಚಾಂಪಿಯನ್, ಉಜ್ಬೆಕಿಸ್ತಾನದ ಬಖೊದಿರ್ ಜಲೊಲೊವ್‌ ಎದುರಿನ ಕ್ವಾರ್ಟರ್ ಫೈನಲ್ ಬೌಟ್‌ನಲ್ಲಿ ಕಣ್ಣಿನ ಅಂಚು ಹರಿದು ರಕ್ತ ಚೆಲ್ಲಿದರೂ ದಿಟ್ಟತನದಿಂದ ಕಾದಾಡಿದ ಭಾರತದ ಸತೀಶ್ ಕುಮಾರ್ ಸೋತು ಹೊರಬಿದ್ದರು.

91+ ಕೆಜಿ ವಿಭಾಗದಲ್ಲಿ ಅವರು 0–5ರಲ್ಲಿ ಎದುರಾಳಿಗೆ ಮಣಿದರು. ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಗಾಯಗೊಂಡಿದ್ದ ಅವರು ಭಾನುವಾರ ರಿಂಗ್‌ಗೆ ಬರುವಾಗಲೇ ಹಣೆ ಮತ್ತು ಗಲ್ಲಕ್ಕೆ ಸ್ಟಿಚ್ ಹಾಕಿಸಿಕೊಂಡಿದ್ದರು. ಬಖೊದಿರ್ ಜಲೊಲೊವ್‌ ವಿರುದ್ಧ ಮತ್ತಷ್ಟು ಗಾಯಗೊಂಡರು. ಸೂಪರ್ ಹೆವಿವೇಟ್ ವಿಭಾಗದಲ್ಲಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಭಾರತದ ಮೊದಲ ಬಾಕ್ಸರ್ ಆಗಿದ್ದಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT