ಗುರುವಾರ , ಏಪ್ರಿಲ್ 9, 2020
19 °C
ಪರ್ಯಾಯ ಯೋಜನೆಗಳನ್ನು ರೂಪಿಸಲು ಸಿದ್ಧತೆ

‌ ಒಲಿಂಪಿಕ್ಸ್‌: ಮುಂದೂಡಿಕೆ ಸಂಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ (ರಾಯಿಟರ್ಸ್‌): ನಿಗದಿಯಂತೆ ಒಲಿಂಪಿಕ್ಸ್‌ ಕ್ರೀಡೆಗಳನ್ನು ನಡೆಸಲು ಸಾಧ್ಯವಾಗದಿದ್ದರೆ ಪರ್ಯಾಯವಾಗಿ ಏನು ಮಾಡಬಹುದು ಎಂಬ ಬಗ್ಗೆ ಟೋಕಿಯೊ 2020 ಒಲಿಂಪಿಕ್ ಸಂಘಟಕರು ಯೋಜನೆಗಳನ್ನು ರೂಪಿಸುತ್ತಿದ್ದಾರೆ ಎಂದು ಈ ಸಂಬಂಧ ಮಾತುಕತೆಯಲ್ಲಿ ತೊಡಗಿರುವ ಮೂಲಗಳು ತಿಳಿಸಿವೆ.

ಶರವೇಗದಲ್ಲಿ ಹಬ್ಬುತ್ತಿರುವ ಕೊರೊನಾ ಸೋಂಕು ವಿಶ್ವದ ಕ್ರೀಡಾ ವೇಳಾಪಟ್ಟಿಯನ್ನು ಅಸ್ತವ್ಯಸ್ತ ಮಾಡಿದೆ. ಆದರೆ ಒಲಿಂಪಿಕ್ಸ್‌ ನಿಗದಿಯಾದ ಸಮಯದಲ್ಲೇ ನಡೆಯುತ್ತದೆ ಎಂದು ಜಪಾನ್‌ ಬಲವಾಗಿ ಹೇಳುತ್ತ ಬಂದಿದೆ. ಮುಂದೂಡಿಕೆಗೆ ಜಪಾನ್‌ ಸಿದ್ಧವಾಗಿಲ್ಲ ಎಂದು ಸರ್ಕಾರದ ವಕ್ತಾರರು ಇತ್ತೀಚೆಗಷ್ಟೇ ಸಮರ್ಥಿಸಿಕೊಂಡಿದ್ದರು.

ದೀರ್ಘ ಕಾಲದಿಂದ  ಪ್ರಧಾನಿಯಾಗಿರುವ ಶಿಂಜೊ ಅಬೆ ಅವರಿಗೂ ಒಲಿಂಪಿಕ್ಸ್‌ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ಕೂಟ ಪ್ರವಾಸೋದ್ಯಮಕ್ಕೆ ವರದಾನವಾಗಬಹುದೆಂಬ ಲೆಕ್ಕಾಚಾರವಿದೆ. ಈಗಾಗಲೇ ಒಲಿಂಪಿಕ್ಸ್‌ ಮೂಲ ಸೌಕರ್ಯಗಳಿಗಾಗಿ ಸಿದ್ಧತೆಗಾಗಿ ಸುಮಾರು ₹ 90 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ.

‘ಒಂದು ವೇಳೆ ಮುಂದೂಡಿಕೆಯಾದರೆ, ಪರ್ಯಾಯವಾಗಿ ಯೋಜನೆಗಳನ್ನು ರೂಪಿಸಬೇಕೆಂದು ನಮಗೆ ತಿಳಿಸಲಾಗಿದೆ’ ಎಂದು ಸಂಘಟನಾ ಸಮಿತಿಗೆ ಆಪ್ತರಾಗಿರುವ ಒಬ್ಬ ಅಧಿಕಾರಿ ತಿಳಿಸಿದ್ದಾರೆ. ಮಾಧ್ಯಮದವರ ಜೊತೆ ಮಾತನಾಡುವಂತಿಲ್ಲ ಎಂದು ಸೂಚಿಸಿರುವ ಕಾರಣ ಷರತ್ತಿನ ಮೇಲೆ ಈ ವಿಷಯ ಬಹಿರಂಗಪಡಿಸಿದ್ದಾರೆ.

‘ನಾವು ಮುಂದೂಡಿಕೆಗೆ ಅನುಗುಣವಾಗಿ ಯೋಜನೆ ಬಿ, ಸಿ, ಡಿ– ಹೀಗೆ ಪರ್ಯಾಯಗಳನ್ನು ರೂಪಿಸುತ್ತಿದ್ದೇವೆ.  ಕ್ರೀಡೆಗಳು ಎಷ್ಟು ವಿಳಂಬವಾದರೆ ಹೆಚ್ಚುವರಿಯಾಗಿ ಎಷ್ಟು ವೆಚ್ಚವಾಗಬಹುದು ಎಂಬ ಲೆಕ್ಕಾಚಾರವನ್ನೂ ಹಾಕಲಾಗುತ್ತಿದೆ’ ಎಂದರು.

ಈ ಬಗ್ಗೆ ಪ್ರತಿಕ್ರಿಯಿಸುವಂತೆ ಮಾಡಿದ ಮನವಿಗೆ ಟೋಕಿಯೊ ಒಲಿಂಪಿಕ್ಸ್ 2020 ಸಂಘಟಕರಾಗಲಿ,  ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯಾಗಲಿ ಓಗೊಟ್ಟಿಲ್ಲ. ‌ಜಪಾನ್‌ ಸರ್ಕಾರವೂ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

ಕ್ರೀಡೆಯನ್ನು ಮಿತಿಗೊಳಿಸುವುದು ಅಥವಾ ಪ್ರೇಕ್ಷಕರಿಲ್ಲದೇ ನಡೆಸುವುದು ಮತ್ತಿತರ ವಿಷಯಗಳ ಬಗ್ಗೆ ವ್ಯವಸ್ಥಾಪಕ ಸಮಿತಿಯು ಮಾರ್ಚ್‌ ಕೊನೆಯಲ್ಲಿ ಚರ್ಚೆ ನಡೆಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಒಂದು ಅಥವಾ ಎರಡು ವರ್ಷ ಮುಂದೂಡುವ ಬಗ್ಗೆಯೂ ಚರ್ಚೆಯಾಗುತ್ತಿದೆ ಎಂದು ಇನ್ನೊಂದು ಮೂಲ ತಿಳಿಸಿದೆ. ಸಂಘಟನಾ ಸಮಿತಿಯ ಕೆಲವು ಸಿಬ್ಬಂದಿ ಒಂದು ತಿಂಗಳು ಅಥವಾ 45 ದಿನ ಮುಂದೂಡಿದರೆ ಕ್ರೀಡೆಗಳನ್ನು ನಡೆಸಲು ಸಾಧ್ಯವಾಗಬಹುದು ಎಂಬ ವಿಶ್ವಾಸದಲ್ಲಿದ್ದಾರೆ.

ಒಲಿಂಪಿಕ್ಸ್‌ ಪ್ರಾಯೋಜಕರು ತಳಮಳಗೊಂಡಿದ್ದಾರೆ ಎಂದು ಕಂಪನಿ ಪ್ರತಿನಿಧಿಗಳು ಖಾಸಗಿಯಾಗಿ ಹೇಳಿಕೊಂಡಿದ್ದಾರೆ. ಟೊಯೊಟಾ ಮೋಟಾರ್‌ ಕಾರ್ಪೊರೇಷನ್‌ ಮತ್ತು ಪ್ಯಾನಸೋನಿಕ್‌ ಪ್ರಮುಖ ಪ್ರಾಯೋಜಕರಲ್ಲಿ ಒಳಗೊಂಡಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು