ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಕಿಯೊ ಒಲಿಂಪಿಕ್ಸ್‌: ಲಸಿಕೆ, ಆರೋಗ್ಯ ಸೌಲಭ್ಯದ ಭರವಸೆ ನೀಡಿದ ಜಪಾನ್

Last Updated 19 ಮೇ 2021, 10:37 IST
ಅಕ್ಷರ ಗಾತ್ರ

ಟೋಕಿಯೊ: ಕೋವಿಡ್ ಹೆಚ್ಚುತ್ತಿರುವ ಸಂದರ್ಭದಲ್ಲಿ ಒಲಿಂಪಿಕ್ಸ್ ಕೂಟ ಆಯೋಜಿಸುವುದು ಸುರಕ್ಷಿತವಲ್ಲ ಎಂದು ಸ್ಥಳೀಯ ವೈದ್ಯರ ಬಳಗ ಹೇಳಿಕೆ ನೀಡಿರುವ ಬೆನ್ನಲ್ಲೇ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮತ್ತು ಕೂಟದ ಆಯೋಜಕರು ಸುದೀರ್ಘ ಸಭೆ ಆರಂಭಿಸಿದ್ದಾರೆ.

ವರ್ಚುವಲ್ ಸಭೆ ಮೂರು ದಿನ ನಡೆಯಲಿದೆ. ಈ ನಡುವೆ ಟೋಕಿಯೊದಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಲು ಮತ್ತು ಒಲಿಂಪಿಕ್ಸ್‌ ಗ್ರಾಮದಲ್ಲಿ ಎಲ್ಲರಿಗೂ ಲಸಿಕೆ ಹಾಕಿಸಲು ಐಒಸಿ ಮುಂದಾಗಿದೆ.

ಬುಧವಾರ ಆರಂಭಗೊಂಡಿರುವ ವರ್ಚುವಲ್ ಸಭೆ ಐಒಸಿ ಉಪಾಧ್ಯಕ್ಷ ಜಾನ್ ಕೋಟ್ಸ್‌ ನೇತೃತ್ವದಲ್ಲಿ ನಡೆಯುತ್ತಿದ್ದು ಸುರಕ್ಷಿತ ಮತ್ತು ಸುಭದ್ರವಾಗಿ ಕ್ರೀಡಾಕೂಟ ನಡೆಯಲಿದೆ ಎಂದು ಅವರು ಜಪಾನ್ ಪ್ರಜೆಗಳಿಗೆ ಭರವಸೆ ನೀಡಿದ್ದಾರೆ.

ಟೋಕಿಯೊ ಮತ್ತು ಒಸಾಕ ನಗರಗಳು ಒಳಗೊಂಡಂತೆ ಜಪಾನ್‌ನ ಬಹುತೇಕ ಪ್ರದೇಶಗಳಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಹೀಗಾಗಿ ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಅವರ ಭೇಟಿಯನ್ನು ರದ್ದುಗೊಳಿಸಲಾಗಿದೆ. ಈ ತಿಂಗಳ ಅಂತ್ಯದಲ್ಲಿ ಅವರು ಭೇಟಿ ನೀಡುವ ಯೋಜನೆ ಇತ್ತು. ಶೇಕಡಾ ಎರಡರಷ್ಟು ಮಂದಿಗೆ ಮಾತ್ರ ಲಸಿಕೆ ಹಾಕಲಾಗಿದೆ. 60ರಿಂದ 80 ಶೇಕಡಾ ಜನರು ಒಲಿಂಪಿಕ್ಸ್ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೋವಿಡ್‌ನಿಂದಾಗಿ ಮುಂದೂಡಿರುವ ಒಲಿಂಪಿಕ್ಸ್‌ ಜುಲೈ 23ರಂದು ಆರಂಭವಾಗಲಿದ್ದು ಆಗಸ್ಟ್ 24ರಿಂದ ಪ್ಯಾರಾಲಿಂಪಿಕ್ಸ್ ನಡೆಯಲಿದೆ. ಒಲಿಂಪಿಕ್ಸ್ ಮುಂದೂಡುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಈ ನಡುವೆ ವಿರೋಧ ಪಕ್ಷಗಳು ಸಣ್ಣ ಪ್ರಮಾಣದ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಕೂಟದ ಸಂದರ್ಭದಲ್ಲಿ 10 ಸಾವಿರಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿ, 500 ಹೆಚ್ಚುವರಿ ಶುಶ್ರೂಷಕಿಯರು ಮತ್ತು 200 ಕ್ರೀಡಾ ವೈದ್ಯರ ಅಗತ್ಯವಿದೆ ಎಂದು ಆಯೋಜಕರು ಅಂದಾಜಿಸಿದ್ದಾರೆ.

ಥಾಮಸ್ ಬಾಕ್ ಅಭಯ

ಸುದೀರ್ಘ ಸಭೆಯ ಹಿನ್ನೆಲೆಯಲ್ಲಿ ಮಂಗಳವಾರ 12 ನಿಮಿಷದ ವಿಡಿಯೊ ಸಂದೇಶ ನೀಡಿರುವ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್ ಬಾಕ್ ಲಸಿಕೆ ಒದಗಿಸುವ ಬಗ್ಗೆ ಭರವಸೆ ನೀಡಿದರು. ಕ್ರೀಡಾ ಗ್ರಾಮವು ಅತ್ಯಂತ ಸುರಕ್ಷಿತವಾಗಿ ಇರಲಿದ್ದು ಒಲಿಂ‍ಪಿಕ್ಸ್‌ ಮತ್ತು ಪ್ಯಾರಾಲಿಂಪಿಕ್ಸ್‌ ಸುಗಮವಾಗಿ ನಡೆಯಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಜಪಾನ್‌ನಲ್ಲಿ ಉತ್ಪಾದನೆಯಾಗಲಿರುವ ಲಸಿಕೆ ಕುರಿತುಸ್ಥಳೀವಾಗಿ ಈಗಾಗಲೇ ಟೀಕೆಗಳು ಕೇಳಿಬಂದಿದ್ದು ಹಿರಿಯರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಸಿಗದೇ ಇರುವ ಬಗ್ಗೆಯೂ ಆಕ್ಷೇಪಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT