ಭಾನುವಾರ, ಅಕ್ಟೋಬರ್ 24, 2021
23 °C
ಪ್ಯಾರಾ ಕ್ಲೈಂಬಿಂಗ್ ವಿಶ್ವ ಚಾಂಪಿಯನ್‌ಶಿಪ್‌:

ಪ್ಯಾರಾ ಕ್ಲೈಂಬಿಂಗ್ ಚಾಂಪಿಯನ್‌ಶಿಪ್‌: ಮಾಸ್ಕೊದಲ್ಲಿ ಮಿಂಚಿದ ಬೆಳಗಾವಿಯ ಸುನೀತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನ ತೋಲಗಿ ಗ್ರಾಮದ ಸುನೀತಾ ಎಂ. ದುಂಡಪ್ಪನವರ ಮಾಸ್ಕೊದಲ್ಲಿ ನಡೆದ ಐಎಫ್‌ಎಸ್‌ಸಿ (ಇಂಟರ್‌ನ್ಯಾಷನಲ್ ಫೆಡರೇಷನ್ ಆಫ್ ಸ್ಪೋರ್ಟ್ಸ್‌ ಕ್ಲೈಂಬಿಂಗ್) ಪ್ಯಾರಾ ಕ್ಲೈಂಬಿಂಗ್‌ ವಿಶ್ವ ಚಾಂಪಿಯನ್‌ಶಿಪ್‌–2021ರಲ್ಲಿ 3ನೇ ಸ್ಥಾನ ಗಳಿಸಿ ಕಂಚಿನ ಪದಕ ಜಯಿಸಿದ್ದಾರೆ.

ಭಾರತ ದೇಶವು ದೃಷ್ಟಿದೋಷವುಳ್ಳವರ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸಿತ್ತು. 24 ವರ್ಷದ ಸುನೀತಾ ಅವರು ‘ಬಿ3’ (ಅರೆ ದೃಷ್ಟಿದೋಷ) ವಿಭಾಗದಲ್ಲಿ ಸ್ಪರ್ಧಿಸಿದ್ದರು.

ಅವರು ಬೆಂಗಳೂರಿನ ಸಮರ್ಥನಂ ಅಂಗವಿಕಲರ ಸಂಸ್ಥೆಯಲ್ಲಿದ್ದಾರೆ. ಅಲ್ಲಿ ಐದು ವರ್ಷಗಳಿಂದ ಕ್ರೀಡಾ ತರಬೇತಿ ಪಡೆಯುತ್ತಿದ್ದಾರೆ. 2014ರಲ್ಲಿ ಬೆಳಗಾವಿಯ ಸಮರ್ಥನಂ ಸಂಸ್ಥೆಗೆ ವೃತ್ತಿಪರ ತರಬೇತಿಗೆಂದು ಬಂದಿದ್ದರು. ನಾಲ್ಕು ತಿಂಗಳವರೆಗೆ ಕಂಪ್ಯೂಟರ್ ತರಬೇತಿ ಪಡೆದಿದ್ದರು. ಅವರಿಗಿದ್ದ ವಿಶೇಷ ಪ್ರತಿಭೆ ಗಮನಿಸಿದ ಸಂಸ್ಥೆಯ ಮುಖ್ಯಸ್ಥ ಅರುಣ್‌ಕುಮಾರ್ ಎಂ.ಜಿ. ಅವರು, ಸುನೀತಾ ಅವರನ್ನು ಹೆಚ್ಚಿನ ತರಬೇತಿ ಹಾಗೂ ಅವಕಾಶಗಳಿಗಾಗಿ ಬೆಂಗಳೂರಿನಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿಗೆ ಕಳುಹಿಸಿದ್ದರು.

‘ತರಬೇತುದಾರರ ಮಾರ್ಗದರ್ಶನ ಮತ್ತು ನಿರಂತರ ಪ್ರಯತ್ನದ ಫಲವಾಗಿ ಅವರು ಈ ಸಾಧನೆ ತೋರುವುದು ಸಾಧ್ಯವಾಗಿದೆ’ ಎಂದು ಅರುಣ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅವರು ದೃಷ್ಟಿದೋಷವುಳ್ಳ ಮಹಿಳಾ ಕ್ರಿಕೆಟ್‌ನಲ್ಲಿ ರಾಷ್ಟ್ರಮಟ್ಟದ ಆಟಗಾರ್ತಿಯೂ ಹೌದು. 2 ವರ್ಷಗಳಿಂದ ಆಡುತ್ತಿದ್ದಾರೆ. ಒಮ್ಮೆ ರಾಜ್ಯ ತಂಡದ ಉಪ ನಾಯಕಿಯಾಗಿದ್ದರು. ಒಳ್ಳೆಯ ಅಥ್ಲಿಟ್‌ ಆಗಿದ್ದಾರೆ. ಸಮರ್ಥನಂ ಸಂಸ್ಥೆಯಿಂದ 2019ರಲ್ಲಿ ಮೈಸೂರಿನಿಂದ ಬೆಂಗಳೂರಿನವರೆಗೆ ಆಯೋಜಿಸಿದ್ದ ಮ್ಯಾರಾಥಾನ್‌ನಲ್ಲಿ ಭಾಗವಹಿಸಿ ಗಮನಸೆಳೆದಿದ್ದರು’ ಎಂದು ಮಾಹಿತಿ ನೀಡಿದರು.

‘ಮಗಳು ಕಂಚಿನ ಪದಕ ಗಳಿಸಿದ್ದಕ್ಕೆ ಖುಷಿಯಾಗಿದೆ. ಬೇರೆ ದೇಶಕ್ಕೆ ಹೋಗಬೇಕು ಎಂದು ಕರೆ ಮಾಡಿ ತಿಳಿಸಿದ್ದಳು. ನಿನಗೆ ಹೇಗೆ ತಿಳಿಯುತ್ತದಯೋ ಹಾಗೆಯೇ ಮಾಡು ಅಂದಿದ್ದೆ’ ಎಂದು ಸುನೀತಾ ತಂದೆ ನೀಲಕಂಠ ಬಸಪ್ಪ ದುಂಡಪ್ಪನವರ ಪ್ರತಿಕ್ರಿಯಿಸಿದರು.

‘ತಂದೆ ನೀಲಕಂಠ–ತಾಯಿ ಸಾವಿತ್ರಿ ಊರಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಾರೆ. ನಾನು ಪ್ರಾಥಮಿಕ ಶಿಕ್ಷಣವನ್ನು ಊರಲ್ಲೇ ಮುಗಿಸಿದೆ. ದೂರ ಇದ್ದಿದ್ದರಿಂದ ಉನ್ನತ ಶಿಕ್ಷಣ ಪಡೆಯಲಾಗಿರಲಿಲ್ಲ. ಕಂಪ್ಯೂಟರ್‌ ತರಬೇತಿಗೆಂದು 2014ರಲ್ಲಿ  ಸಮರ್ಥನಂ ಅಂಗವಿಕಲರ ಸಂಸ್ಥೆಗೆ ಸೇರಿದ್ದೆ’ ಎಂದು ಸುನೀತಾ ತಿಳಿಸಿದರು.

‘ಅಲ್ಟ್ರಾ ಮ್ಯಾರಾಥಾನ್‌ನಲ್ಲಿ ವಿಶ್ವ ದಾಖಲೆ ಮಾಡಿದ್ದೇನೆ. ರಾಷ್ಟ್ರೀಯ ವಾಲ್ ಕ್ಲೈಂಬಿಂಗ್‌ ಸ್ಪರ್ಧೆಯಲ್ಲಿ 2018ರಲ್ಲಿ ಜಮ್ಮುವಿನಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಗಳಿಸಿದ್ದೆ. ಕ್ರೀಡೆಯಲ್ಲಿ ಭಾರತಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಆಸೆ ಇತ್ತು. ಮುಂದಿನ ದಿನಗಳಲ್ಲಿ ಚಿನ್ನದ ಪದಕ ಗೆದ್ದು, ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ರಾಷ್ಟ್ರಗೀತೆ ಮೊಳಗುವಂತೆ ಮಾಡಬೇಕು ಎಂಬ ಗುರಿ ಇದೆ. ಇದಕ್ಕಾಗಿ ಅಭ್ಯಾಸ ಮುಂದುವರಿಸುತ್ತೇನೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು