ಶುಕ್ರವಾರ, ಸೆಪ್ಟೆಂಬರ್ 17, 2021
30 °C

ಹಾಕಿ ಸಾಧನೆ ಹಿಂದಿನ ಒಡಿಶಾವನ್ನು ಕೊಂಡಾಡಿದ ಸಂಸದೀಯ ಸ್ಥಾಯಿ ಸಮಿತಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡಗಳು ಉತ್ತಮ ಪ್ರದರ್ಶನ ನೀಡುವಂತೆ ಮಾಡಿದ ಪ್ರಯತ್ನಗಳಿಗಾಗಿ ಕೇಂದ್ರದ ಸಂಸದೀಯ ಸ್ಥಾಯಿ ಸಮಿತಿಯು ಒಡಿಶಾ ಮುಖ್ಯಮಂತ್ರಿ ನವೀನ್‌ ಪಾಟ್ನಾಯಕ್‌ ಅವರನ್ನು ಪ್ರಶಂಸಿಸಿದೆ.

ಶಿಕ್ಷಣ, ಮಹಿಳೆಯರು, ಮಕ್ಕಳು, ಕ್ರೀಡೆ ಮತ್ತು ಯುವಜನ ಸಂಸದೀಯ ಸ್ಥಾಯಿ ಸಮಿತಿಯು ಶುಕ್ರವಾರ ನವೀನ್‌ ಪಾಟ್ನಾಯಕ್‌ ಅವರನ್ನು ಕೊಂಡಾಡಿದೆ. ಅಲ್ಲದೆ, ಕ್ರೀಡಾ ಬೆಳವಣಿಗೆಗೆ ರಾಷ್ಟ್ರದ ಎಲ್ಲ ರಾಜ್ಯಗಳೂ ಒಡಿಶಾ ಮಾದರಿಯನ್ನು ಅನುಸರಿಸಬೇಕು ಎಂದು ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಪದಕ ಗೆಲ್ಲುವ ಹಂತಕ್ಕೆ ಹಾಕಿ ತಂಡವನ್ನು ಒಡಿಶಾ ಪ್ರೋತ್ಸಾಹಿಸಿದ್ದು ಹೇಗೆ? 

ಪುರುಷರು ಮತ್ತು ಮಹಿಳೆಯರ ರಾಷ್ಟ್ರೀಯ ಹಾಕಿ ತಂಡದ ಅಧಿಕೃತ ಪ್ರಾಯೋಜಕತ್ವ ಪಡೆದಿರುವ ಒಡಿಶಾ, 2018ರಿಂದಲೂ ಎರಡೂ ತಂಡಗಳಿಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತಿದೆ.

ಹಾಕಿಗಾಗಿ ಉನ್ನತ ಕ್ರೀಡಾ ಕೇಂದ್ರಗಳನ್ನು ಸ್ಥಾಪಿಸಿದ, ಹಾಕಿ ಇಂಡಿಯಾ ಮೂಲಕ 2018ರಿಂದಲೂ ಪುರುಷ ಮತ್ತು ಮಹಿಳಾ ಹಾಕಿ ತಂಡಗಳ ಪ್ರಾಯೋಜಕತ್ವ ತೆಗೆದುಕೊಂಡಿರುವ ಕ್ರಮಗಳು ಮತ್ತು ಪ್ರಯತ್ನಗಳಿಗಾಗಿ ಸಮಿತಿಯು ಪಾಟ್ನಾಯಕ್‌ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಎರಡೂ ತಂಡಗಳೂ ಉತ್ತಮ ಪ್ರದರ್ಶನ ನೀಡಿದ್ದವು. ಈ ಕುರಿತು ಸಮಿತಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕಾರ್ಪೊರೇಟ್ ಪ್ರಾಯೋಜಕತ್ವವನ್ನು ಪಡೆಯುವುದರ ಹೊರತಾಗಿ, ಪ್ರತಿಯೊಂದು ರಾಜ್ಯವು ಆಯಾ ಪ್ರದೇಶಕ್ಕೆ ಅನುಗುಣವಾಗಿ ನಿರ್ದಿಷ್ಟವಾದ ಒಂದು ಕ್ರೀಡೆಯ ಮೇಲೆ ಗಮನಹರಿಸಿ, ಪ್ರೋತ್ಸಾಹಿಸಬೇಕು ಮತ್ತು ಇತರ ಕ್ರೀಡೆಗಳನ್ನೂ ಪ್ರೋತ್ಸಾಹಿಸಬೇಕು. ಒಡಿಶಾದಂತೆ ಉನ್ನತ ಕಾರ್ಯಕ್ಷಮತೆಯ ಕ್ರೀಡಾ ಕೇಂದ್ರಗಳನ್ನು ರಚಿಸಬೇಕು ಮತ್ತು ಅಭಿವೃದ್ಧಿಪಡಿಸಬೇಕು ಎಂದು ಸಮಿತಿಯು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡವು 41 ವರ್ಷಗಳ ನಂತರ ಪದಕ ಗೆಲ್ಲುವಲ್ಲಿ ಸಫಲವಾಗಿದೆ. ಮಹಿಳಾ ಹಾಕಿ ತಂಡವು ಕ್ರೀಡಾ ಕೂಟದಲ್ಲಿ ಅಚ್ಚರಿಯ ಪ್ರದರ್ಶನ ನೀಡಿದ್ದು, ಮೂರನೇ ಸ್ಥಾನದ ಪೈಪೋಟಿಯಲ್ಲಿ ಗ್ರೇಟ್‌ ಬ್ರಿಟನ್‌ ವಿರುದ್ಧ ವೀರೋಚಿತ ಸೋಲು ಕಂಡಿದೆ. ಆದರೂ, ಉತ್ತಮ ಪ್ರದರ್ಶನಕ್ಕಾಗಿ ಮಹಿಳಾ ಹಾಕಿ ತಂಡವು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು