ಮಂಗಳವಾರ, ಆಗಸ್ಟ್ 3, 2021
27 °C
ಆಯೋಜಕರಿಂದ ಆರೋಗ್ಯ ಸುರಕ್ಷತಾ ಕ್ರಮ ಘೋಷಣೆ

ಟೋಕಿಯೊ ಒಲಿಂಪಿಕ್ಸ್: ಗುಂಪು ಫೋಟೊ ಇಲ್ಲ, ಅಂತರ ಕಡ್ಡಾಯ

ಪಿಟಿಐ/ಎಪಿ/ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಈ ಬಾರಿ ಒಲಿಂಪಿಕ್ಸ್ ಪದಕ ಪ್ರದಾನ ಸಮಾರಂಭದಲ್ಲಿ ಅಥ್ಲೀಟ್‌ಗಳು, ಅತಿಥಿಗಳು ಮತ್ತು ಸ್ವಯಂಸೇವಕರು ಗುಂಪು ಫೋಟೊ ತೆಗೆಸಿಕೊಳ್ಳುವಂತಿಲ್ಲ. ಪದಕ ಪ್ರದಾನ ವೇದಿಕೆಯಲ್ಲಿ ಮಾ‌ಸ್ಕ್ ಧರಿಸುವುದು ಕಡ್ಡಾಯ. ಪದಕಗಳನ್ನು ಅಥ್ಲೀಟ್‌ಗಳು ತಾವಾಗಿಯೇ ಕೊರಳಿಗೆ ಹಾಕಿಕೊಳ್ಳಬೇಕು.

ಒಲಿಂಪಿಕ್ಸ್ ಸಂದರ್ಭದಲ್ಲಿ ಆರೋಗ್ಯ ಸುರಕ್ಷತೆಗೆ ಸಂಬಂಧಿಸಿದ ಅನೇಕ ಕ್ರಮಗಳನ್ನು ಗುರುವಾರ ಘೋಷಿಸಿದ್ದು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳ ವಿಜೇತರ ನಡುವೆ ಅಂತರಕ್ಕಾಗಿ ವಿಶೇಷ ರೀತಿಯಲ್ಲಿ ಪೋಡಿಯಂ ವಿನ್ಯಾಸಗೊಳಿಸಲಾಗುವುದು ಎಂದು ತಿಳಿಸಲಾಗಿದೆ.

ಪದಕ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಂಡಿರಬೇಕು. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಮತ್ತು ನಿರ್ದಿಷ್ಟ ಕ್ರೀಡಾ ಫೆಡರೇಷನ್‌ನ ತಲಾ ಒಬ್ಬರು ಪ್ರತಿನಿಧಿಗೆ ಮಾತ್ರ ವೇದಿಕೆಯೇರಲು ಅವಕಾಶ ಇರುತ್ತದೆ. ಅಥ್ಲೀಟ್‌ಗಳು ಪದಕಗಳನ್ನು ತಾವೇ ಕೊರಳಿಗೆ ಹಾಕಿಕೊಳ್ಳಬೇಕು ಎಂದು ಸೂಚಿಸಲಾಗಿದೆ. 

ಕ್ರೀಡಾಂಗಣಗಳಿಗೆ ಪ್ರೇಕ್ಷಕರಿಗೆ ಪ್ರವೇಶ ನೀಡದೇ ಇರಲು ಆಯೋಜಕರು ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಕಳೆದ ವಾರ ನಿರ್ಧರಿಸಿತ್ತು.

ಗವರ್ನರ್ ಭೇಟಿ ಮಾಡಿದ ಬಾಕ್‌

ಒಲಿಂಪಿಕ್ಸ್ ಆರಂಭಕ್ಕೆ ಒಂದು ವಾರ ಬಾಕಿ ಉಳಿದಿರುವಾಗ ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಂಸ್ಥೆಯ (ಐಒಸಿ) ಅಧ್ಯಕ್ಷ ಥಾಮಸ್ ಬಾಕ್ ಟೋಕಿಯೊಗೆ ಭೇಟಿ ನೀಡಿದ್ದು ಗವರ್ನರ್ ಯೂಕೆ ಕೊಯ್ಕೆ ಅವರನ್ನು ಗುರುವಾರ ಭೇಟಿ ಮಾಡಿದರು.

ಸತತ ಮೂರನೇ ದಿನವೂ ಜಪಾನ್‌ನ ಪ್ರಮುಖ ಮುಖಂಡರು ಮತ್ತು ಒಲಿಂಪಿಕ್ಸ್‌ ಆಯೋಜಕರನ್ನು ಭೇಟಿ ಮಾಡಿದ ಬಾಕ್ ನಿಯಮಗಳನ್ನು ಪಾಲಿಸಿಕೊಂಡು ಸುರಕ್ಷತಾ ಕ್ರಮಗಳೊಂದಿಗೆ ಟೂರ್ನಿ ಆಯೋಜಿಸಲು ಪೂರಕ ವಾತಾವರಣ ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ.

ಯೂಕೆ ಕೊಯ್ಕೆ ಅವರೊಂದಿಗೆ ಸಭೆ ನಡೆಸುವುದಕ್ಕೂ ಮುನ್ನ ಬಾಕ್ ಅವರು ಕ್ರೀಡಾ ಗ್ರಾಮಕ್ಕೆ ಭೇಟಿ ನೀಡಿದರು. ಪ್ರಧಾನಿ ಯೊಶಿಹಿಡೆ ಸುಗಾ ಅವರನ್ನು ಬುಧವಾರ ಭೇಟಿ ಮಾಡಿದ್ದ ಅವರು ಒಲಿಂಪಿಕ್ಸ್ ಆಯೋಜನಾ ಸಮಿತಿ ಅಧ್ಯಕ್ಷ ಸೀಕೊ ಹಾಶಿಮೊಟೊ ಜೊತೆ ಮಂಗಳವಾರ ಮಾತುಕತೆ ನಡೆಸಿದ್ದರು.

ಟೋಕಿಯೊದಲ್ಲಿ ಈ ವಾರದ ಆರಂಭದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು ಒಲಿಂಪಿಕ್ಸ್ ಮುಕ್ತಾಯದ ವರೆಗೂ ಮುಂದುವರಿಯಲಿದೆ. ಕ್ರೀಡಾಕೂಟ ಜುಲೈ 23ರಂದು ಆರಂಭಗೊಂಡು ಆಗಸ್ಟ್ ಎಂಟರಂದು ಮುಗಿಯಲಿದೆ. ಬಾರ್ ಮತ್ತು ರೆಸ್ಟೋರಂಟ್‌ಗಳನ್ನು ನಿಗದಿಗಿಂತ ಮೊದಲೇ ಮುಚ್ಚಿಸಿ ಮದ್ಯ ವ್ಯಾಪಾರಕ್ಕೆ ಕಡಿವಾಣ ಹಾಕಲು ಆಡಳಿತ ಮುಂದಾಗಿದೆ. ಇದು, ರೈಲುಗಳಲ್ಲಿ ಜನರ ಸಂಚಾರವನ್ನು ನಿಯಂತ್ರಿಸುವುದು ಇದರ ಉದ್ದೇಶ.

‘ಒಲಿಂಪಿಕ್ಸ್‌ನಿಂದಾಗಿ‌ ಜಪಾನ್ ಜನತೆಗೆ ಯಾವುದೇ ಅಪಾಯ ಆಗದು. ವೈರಸ್‌ ವಿರುದ್ಧದ ಹೋರಾಟಕ್ಕೆ  ಎಲ್ಲ ಬಗೆಯ ಪ್ರಯತ್ನಗಳನ್ನು ಮಾಡುತ್ತಿದ್ದು ಅಪಾಯ ಆಗದಂತೆ ಕೂಟ ಆಯೋಜನೆಗೆ ಬದ್ಧ’ ಎಂದು ಬಾಕ್ ಬುಧವಾರ ಹೇಳಿದ್ದರು. 

ಕ್ವಾರಂಟೈನ್‌ನಲ್ಲಿದ್ದ ಅಥ್ಲೀಟ್‌ಗೆ ಕೋವಿಡ್‌

ಟೋಕಿಯೊಗೆ ಬಂದು 14 ದಿನಗಳ ಕ್ವಾರಂಟೈನ್‌ನಲ್ಲಿರುವ ಅಥ್ಲೀಟ್ ಒಬ್ಬರಿಗೆ ಕೋವಿಡ್ ದೃಢವಾಗಿದೆ ಎಂದು ಆಯೋಜಕರ ವೆಬ್‌ಸೈಟ್‌ನಲ್ಲಿ ಗುರುವಾರ ಪ್ರಕಟಿಸಲಾಗಿದೆ. ಅಥ್ಲೀಟ್‌ ಇನ್ನೂ ಹೋಟೆಲ್ ಕೊಠಡಿಯಲ್ಲೇ ಇದ್ದು ಕ್ರೀಡಾ ಗ್ರಾಮಕ್ಕೆ ‍ಪ್ರವೇಶಿಸಲಿಲ್ಲ. ಕ್ರೀಡಾಪಟುವಿನ ಮಾಹಿತಿಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

ಬೋಟ್ ಪಡೆದುಕೊಂಡ ನೇತಾ, ವಿಷ್ಣು

ಒಲಿಂಪಿಕ್ಸ್‌ನ ಸೇಲಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಭಾರತದ ನೇತ್ರಾ ಕುಮನನ್ ಮತ್ತು ವಿಷ್ಣು ಸರವಣನ್‌ ಅವರು ಗುರುವಾರ ತಮ್ಮ ಬೋಟ್‌ಗಳನ್ನು ಪಡೆದುಕೊಂಡರು. ಅವರು ಲೇಜರ್ ಕ್ಲಾಸ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ನೇತ್ರ ಅವರು ಸ್ಪೇನ್‌ನಲ್ಲೂ ವಿಷ್ಣು ಮಾಲ್ಟಾದಲ್ಲೂ ಅಭ್ಯಾಸ ನಡೆಸಿದ್ದರು. ವರುಣ್ ಠಕ್ಕರ್ ಮತ್ತು ಗಣಪತಿ ಚೆಂಗಪ್ಪ ಜೊತೆ ಇವರು ಟೋಕಿಯೊ ತಲುಪಿದ್ದಾರೆ.

 

ಕಪ್ಪು ವರ್ಣೀಯರಿಗೆ ಗೌರವ ಸೂಚನೆ

ಲಂಡನ್‌: ಜನಾಂಗೀಯ ನಿಂದನೆಗೆ ವಿರೋಧ ವ್ಯಕ್ತಪಡಿಸುವ ಸಲುವಾಗಿ ಬ್ರಿಟನ್ ಮಹಿಳಾ ಫುಟ್‌ಬಾಲ್ ತಂಡದವರು ಒಲಂಪಿಕ್ಸ್‌ನಲ್ಲಿ ತಮ್ಮ ಪ್ರತಿಯೊಂದು ಪಂದ್ಯಕ್ಕೂ ಮೊದಲು ಮೊಣಕಾಲೂರಿ ಕಪ್ಪು ವರ್ಣೀಯರಿಗೆ ಗೌರವ ಸೂಚಿಸಲಿದ್ದಾರೆ.

ಒಂದು ವರ್ಷದಿಂದ ಬ್ರಿಟನ್ ಮಹಿಳಾ ತಂಡದವರು ಇದನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಆಯೋಜಕರು ನಿಯಮಗಳನ್ನು ಸಡಿಲಿಸಿ ಒಲಿಂಪಿಕ್ಸ್‌ನಲ್ಲೂ ಕಪ್ಪುವರ್ಣೀಯರಿಗೆ ಗೌರವ ಸೂಚಿಸಲು ಅವಕಾಶ ನೀಡಿದ್ದಾರೆ. ಗುಂಪು ಹಂತದಲ್ಲಿ ಬ್ರಿಟನ್‌ ಆತಿಥೇಯ ಜಪಾನ್‌ ವಿರುದ್ಧ ಮೊದಲ ಪಂದ್ಯ ಆಡಲಿದ್ದು ನಂತರ ಕೆನಡಾ ಮತ್ತು ಚಿಲಿಯನ್ನು ಎದುರಿಸಲಿದೆ. 

ವಿರಾಮದಿಂದ ಅನುಕೂಲವೇ ಆಗಿದೆ: ಸಿಂಧು

ಹೈದರಾಬಾದ್‌: ಕೋವಿಡ್‌ನಿಂದಾಗಿ ಲಭಿಸಿರುವ ವಿರಾಮದಿಂದ ವೈಯಕ್ತಿಕವಾಗಿ ತಮಗೆ ಅನುಕೂಲ ಆಗಿದ್ದು ತಂತ್ರಗಾರಿಕೆ ಮತ್ತು ನೈಪುಣ್ಯ ಹೆಚ್ಚಿಸಲು ನೆರವಾಗಿದೆ ಎಂದು ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಹೇಳಿದ್ದಾರೆ. 

ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಸಿಂಧು ಅವರ ಅಭ್ಯಾಸಕ್ಕೆ ಕೊರೊನಾ ಅಡ್ಡಿಯಾಗಿತ್ತು. ಒಂದು ವರ್ಷದಿಂದ ಅವರಿಗೆ ಯಾವ ಟೂರ್ನಿಯಲ್ಲೂ ಆಡಲು ಸಾಧ್ಯವಾಗಲಿಲ್ಲ. ಆದರೆ ಈ ಅವಧಿ ತಮ್ಮ ಪಾಲಿಗೆ ಅದೃಷ್ಟವಾಗಿ ಪರಿಣಮಿಸಿದೆ ಎಂದು ಸಿಂಧು ಹೇಳಿದರು.

‘ಸಾಮಾನ್ಯವಾಗಿ ಅಭ್ಯಾಸ ಮಾಡಲು ಅವಕಾಶ ಸಿಗುವುದು ಕಡಿಮೆ. ಆ ಹಿನ್ನೆಲೆಯಲ್ಲಿ ನೋಡಿದರೆ ಇದೇ ಮೊದಲ ಬಾರಿ ಅಭ್ಯಾಸಕ್ಕೆ ಸಾಕಷ್ಟು ಸಮಯ ಸಿಕ್ಕಿದೆ. ಒಲಿಂಪಿಕ್ಸ್‌ಗೆ ಸಿದ್ಧವಾಗಲು ಇದು ನೆರವಾಗಿದೆ. ಕೋವಿಡ್‌ನಿಂದಾಗಿ ಒಲಿಂಪಿಕ್ಸ್‌ ಸಿದ್ಧತೆಗೆ ಯಾವ ರೀತಿಯಲ್ಲೂ ತೊಂದರೆಯಾಗಲಿಲ್ಲ’ ಎಂದು ಅವರು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು