ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಪವನ್ ಪರಾಕ್ರಮ– ಮೂರನೇ ಸ್ಥಾನಕ್ಕೆ ನೆಗೆದ ಬುಲ್ಸ್‌

ಪ್ರೊ ಕಬಡ್ಡಿ ಲೀಗ್‌: ಗೆಲುವು ಕಾಣದ ತೆಲುಗು ಟೈಟನ್ಸ್‌
Last Updated 8 ಆಗಸ್ಟ್ 2019, 16:05 IST
ಅಕ್ಷರ ಗಾತ್ರ

ಪಟ್ನಾ: ಉತ್ತಮ ರೈಡಿಂಗ್‌ ಪ್ರದರ್ಶನ ಮುಂದುವರಿಸಿದ ಪವನ್‌ ಶೆರಾವತ್‌ ಬೆಂಗಳೂರು ಬುಲ್ಸ್‌ ತಂಡ ಪಾರಮ್ಯ ಸಾಧಿಸಲು ನೆರವಾದರು. ಅವರ ಉತ್ತಮ ಕೊಡುಗೆಯ ನೆರವಿನಿಂದ ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಗುರುವಾರ ತಳದಲ್ಲಿರುವ ತೆಲುಗು ಟೈಟನ್ಸ್‌ ಮೇಲೆ 47–26 ರಲ್ಲಿ ಆರಾಮವಾಗಿ ಗೆಲುವನ್ನು ದಾಖಲಿಸಿತು.

ಪಾಟಲೀಪುತ್ರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ವಿರಾಮದ ವೇಳೆಗೆ ವಿಜೇತರು 21–14 ಪಾಯಿಂಟ್‌ಗಳ ಮುನ್ನಡೆ ಸಾಧಿಸಿದ್ದರು. 23 ವರ್ಷ ವಯಸ್ಸಿನ ಪವನ್‌ ಈ ಪಂದ್ಯದಲ್ಲಿ 17 ಪಾಯಿಂಟ್ಸ್‌ ಗಳಿಸಿಕೊಟ್ಟರು. ಆ ಹಾದಿಯಲ್ಲಿ ಪ್ರೊ ಕಬಡ್ಡಿ ಲೀಗ್‌ನಲ್ಲಿ 400 ಪಾಯಿಂಟ್‌ಗಳ ಮೈಲಿಗಲ್ಲನ್ನು ದಾಟಿಸಿದರು.

ಈ ಗೆಲುವಿನಿಂದ 12 ತಂಡಗಳ ಪಾಯಿಂಟ್‌ ಪಟ್ಟಿಯಲ್ಲಿ ಬುಲ್ಸ್‌ ಮೂರನೇ ಸ್ಥಾನಕ್ಕೆ ಜಿಗಿಯಿತು. ದಬಂಗ್‌ ಡೆಲ್ಲಿ (21) ಮತ್ತು ಜೈಪುರ್‌ ಪಿಂಕ್‌ ಪ್ಯಾಂಥರ್ಸ್‌ (20) ಮೊದಲ ಎರಡು ಸ್ಥಾನದಲ್ಲಿವೆ. ಬುಲ್ಸ್‌ ಕೂಡ 20 ಪಾಯಿಂಟ್ಸ್‌ ಸಂಗ್ರಹಿಸಿದ್ದರೂ, ಸ್ಕೋರ್‌ಗಳ ವ್ಯತ್ಯಾಸದ ಆಧಾರದಲ್ಲಿ ಮೂರನೇ ಸ್ಥಾನದಲ್ಲಿದೆ. ಟೈಟನ್ಸ್‌ ಆರು ಪಂದ್ಯಗಳಲ್ಲಿ ಐದು ಸೋತಿದ್ದು, ಒಂದು ಟೈ ಮಾಡಿಕೊಂಡು ಕೊನೆಯ ಸ್ಥಾನದಲ್ಲಿದೆ.

ರೋಹಿತ್‌ ಕುಮಾರ್‌ ಮತ್ತು ಪವನ್‌ ಶೆರಾವತ್‌ ಆರಂಭದಿಂದಲೇ ಯಶಸ್ವಿ ರೈಡ್‌ಗಳ ಮೂಲಕ ಎದುರಾಳಿಗಳ ಮೇಲೆ ಒತ್ತಡ ಹೇರಿದರು. ಯಾವ ಹಂತದಲ್ಲೂ ಪ್ರತಿರೋಧ ಎದುರಾಗುವಂತೆ ಕಾಣಲಿಲ್ಲ.

ಪವನ್‌ ಈ ಬಾರಿ ಆರು ಬೋನಸ್‌ ಸೇರಿದಂತೆ ರೈಡಿಂಗ್‌ನಲ್ಲಿ 14 ಮತ್ತು ಟ್ಯಾಕ್ಲಿಂಗ್‌ನಲ್ಲಿ ಮೂರು ಪಾಯಿಂಟ್ಸ್‌ ಗಳಿಸಿಕೊಟ್ಟರು. ಅವರಿಗೆ ರೈಡಿಂಗ್‌ನಲ್ಲಿ ಬೆಂಬಲ ನೀಡಿದ ರೋಹಿತ್‌ ಕುಮಾರ್‌ ಎಂಟು ಪಾಯಿಂಟ್ಸ್‌ ಗಳಿಸಿಕೊಟ್ಟರು. ಕ್ಯಾಚಿಂಗ್‌ನಲ್ಲಿ ಮಹೇಂದರ್‌ ಸಿಂಗ್‌ ಐದು ಪಾಯಿಂಟ್ಸ್‌ ಗಳಿಸಿದರು.

ಟೈಟನ್ಸ್‌ ಪರ ಯಶಸ್ವಿ ರೈಡರ್‌ ಎನಿಸಿದ ಸಿದ್ಧಾರ್ಥ ಎಸ್‌.ದೇಸಾಯಿ 11 ಪಾಯಿಂಟ್ಸ್‌ ಗಳಿಸಿದರು. ಅವರು ಗುರುವಾರ ಮೂರನೇ ಪಾಯಿಂಟ್‌ ಪಡೆಯುತ್ತಿದ್ದಂತೆ ಪಿಕೆಎಲ್‌ನಲ್ಲಿ 250 ಪಾಯಿಂಟ್‌ಗಳನ್ನು ಪೂರೈಸಿದ ದಾಖಲೆಗೆ ಪಾತ್ರರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT