ಶನಿವಾರ, ಮೇ 28, 2022
31 °C
ರೋಹಿತ್‌, ಸುರ್ಜೀತ್‌ಗೂ ಉತ್ತಮ ಬೆಲೆ

ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜು: ಕೋಟಿ ಬೆಲೆ ಗಿಟ್ಟಿಸಿದ ಪ್ರದೀಪ್‌, ‘ಬಾಹುಬಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಡುಬ್ಕಿ ಕಿಂಗ್ ಎಂದೇ ಹೆಸರು ಗಳಿಸಿರುವ ರೈಡರ್ ಪ್ರದೀಪ್ ನರ್ವಾಲ್ ಮತ್ತು ‘ಬಾಹುಬಲಿ’ ಖ್ಯಾತಿಯ ಸಿದ್ಧಾರ್ಥ್ ದೇಸಾಯಿ ಅವರು ಪ್ರೊ ಕಬಡ್ಡಿ ಲೀಗ್ ಎಂಟನೇ ಆವೃತ್ತಿಯ ಆಟಗಾರರ ಹರಾಜಿನಲ್ಲಿ ಗರಿಷ್ಠ ಬೆಲೆ ಪಡೆದುಕೊಂಡರು. ಮುಂಬೈನಲ್ಲಿ ನಡೆಯುತ್ತಿರುವ ಹರಾಜಿನ ಎರಡನೇ ದಿನವಾದ ಸೋಮವಾರ ₹ 1 ಕೋಟಿ 65 ಲಕ್ಷ ನೀಡಿ ಯು.ಪಿ.ಯೋಧಾ ಪಡೆದುಕೊಂಡಿತು. ತೆಲುಗು ಟೈಟನ್ಸ್ ಪಾಲಾದ ಸಿದ್ಧಾರ್ಥ್ ₹ 1 ಕೋಟಿ 30 ಲಕ್ಷಕ್ಕೆ ಹರಾಜಾದರು.

ರೈಡರ್ ಮಂಜೀತ್‌, ಆಲ್‌ರೌಂಡರ್ ರೋಹಿತ್ ಗುಲಿಯ ಮತ್ತು ಡಿಫೆಂಡರ್ ಸುರ್ಜೀತ್ ಸಿಂಗ್ ಅವರಿಗೂ ಉತ್ತಮ ಬೆಲೆ ಲಭಿಸಿತು. ಮಂಜೀತ್‌ ₹ 92 ಲಕ್ಷಕ್ಕೆ ತಮಿಳ್ ತಲೈವಾಸ್ ಪಾಲಾದರೆ ರೋಹಿತ್ ₹ 83 ಲಕ್ಷ ಮೊತ್ತಕ್ಕೆ ಹರಿಯಾಣ ಸ್ಟೀಲರ್ಸ್‌ ಪಾಲಾದರು. ₹ 75 ಲಕ್ಷ ವ್ಯಯಿಸಿ ಸರ್ಜೀತ್ ಸಿಂಗ್ ಅವರನ್ನು ತಮಿಳ್ ತಲೈವಾಸ್ ಪಡೆದುಕೊಂಡಿತು.

ಡಿಫೆಂಡರ್ ರವೀಂದ್ರ ಪೆಹಲ್ ₹ 74 ಲಕ್ಷ ಮೊತ್ತಕ್ಕೆ ಹರಾಜಾದರು. ಅವರನ್ನು ಗುಜರಾತ್ ಜೈಂಟ್ಸ್ ತನ್ನ ತೆಕ್ಕೆಗೆ ಹಾಕಿಕೊಂಡಿತು. ₹ 71 ಲಕ್ಷಕ್ಕೆ ರೈಡರ್ ಪ್ರಪಂಚನ್‌ ಅವರನ್ನು ತಮಿಳ್ ತಲೈವಾಸ್ ಪಡೆದುಕೊಂಡಿತು. ಬಲದೇವ್ ಸಿಂಗ್ ಮತ್ತು ವಿಶಾಲ್ ಭಾರದ್ವಾಜ್ ತಲಾ ₹ 60 ಲಕ್ಷಕ್ಕೆ ಪುಣೇರಿ ಪಲ್ಟನ್ ಪಾಲಾದರು. ದೀಪಕ್ ನಿವಾಸ್ ಹೂಡ ಮತ್ತು ಸುರೇಂದರ್‌ ಸಿಂಗ್ ತಲಾ 55 ಲಕ್ಷಕ್ಕೆ ಕ್ರಮವಾಗಿ ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ತೆಲುಗು ಟೈಟನ್ಸ್‌ ಪಾಲಾದರು.

ವಿದೇಶಿ ಆಟಗಾರರ ಪೈಕಿ ಇರಾನ್‌ನ ಮೊಹಮ್ಮದ್‌ ರೇಜಾ ಚಿಯಾನೆಹ್ ಮತ್ತು ಅಬೊಜೆರ್ ಮಿಘಾನಿ ಗೆಚ್ಚು ಬೆಲೆ ಪಡೆದುಕೊಂಡರು. ಆಲ್‌ರೌಂಡರ್ ಮೊಹಮ್ಮದ್‌ ರೇಜಾ ₹ 31 ಲಕ್ಷ ಮೊತ್ತಕ್ಕೆ ಪಟ್ನಾ ಪೈರೇಟ್ಸ್ ಪಾಲಾದರೆ ಡಿಫೆಂಡರ್ ಅಬೊಜೆರ್ ₹ 30.5 ಲಕ್ಷಕ್ಕೆ ಬೆಂಗಾಲ್ ವಾರಿಯರ್ಸ್ ಪಾಲಾದರು. ಕೊರಿಯಾದ ರೈಡರ್ ಜಂಗ್‌ಕುನ್‌ ಲೀ ಅವರನ್ನು ₹ 20.5 ಲಕ್ಷಕ್ಕೆ ಪಟ್ನಾ ಪೈರೇಟ್ಸ್‌, ಇರಾನ್‌ನ ಆಲ್‌ರೌಂಡರ್‌ ಹಾದಿ ಒಶ್ಟರಕ್ ಅವರನ್ನು ₹ 20 ಲಕ್ಷಕ್ಕೆ ಗುಜರಾತ್ ಜೈಂಟ್ಸ್ ಮತ್ತು ಇರಾನ್‌ನ ರೈಡರ್ ಮಹಮ್ಮದ್ ಮಗ್ಶೊಡ್ಲು ಅವರನ್ನು ₹ 13.2 ಲಕ್ಷಕ್ಕೆ ಹರಿಯಾಣ ಸ್ಟೀಲರ್ಸ್ ಪಡೆದುಕೊಂಡಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು