ಸೋಮವಾರ, ಫೆಬ್ರವರಿ 24, 2020
19 °C
ಪ್ರೊ ಹಾಕಿ ಲೀಗ್‌: ವಿಶ್ವ ಚಾಂಪಿಯನ್ನರಿಗೆ ಆಘಾತ ನೀಡಿದ ಮನಪ್ರೀತ್‌ ಪಡೆ

ಹಾಕಿ: ಬೆಲ್ಜಿಯಂ ಎದುರು ಗೆದ್ದು ಬೀಗಿದ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

prajavani

ಭುವನೇಶ್ವರ: ಆತಿಥೇಯರ ಆಟ ಕಣ್ತುಂಬಿಕೊಳ್ಳಲು ಕಳಿಂಗ ಕ್ರೀಡಾಂಗಣದಲ್ಲಿ ಸೇರಿದ್ದ ಹಾಕಿ ಪ್ರಿಯರಿಗೆ ಭಾರತ ತಂಡ ನಿರಾಸೆ ಮಾಡಲಿಲ್ಲ. ಆಟದ ಎಲ್ಲಾ ವಿಭಾಗಗಳಲ್ಲೂ ಪಾರಮ್ಯ ಮೆರೆದ ಮನಪ್ರೀತ್‌ ಸಿಂಗ್‌ ಬಳಗ ಎಫ್‌ಐಎಚ್‌ ಪ್ರೊ ಹಾಕಿ ಲೀಗ್‌ನ ಪಂದ್ಯದಲ್ಲಿ ವಿಶ್ವ ಚಾಂಪಿಯನ್‌ ಬೆಲ್ಜಿಯಂ ತಂಡಕ್ಕೆ ಆಘಾತ ನೀಡಿತು.

ಶನಿವಾರ ನಡೆದ ಹಣಾಹಣಿಯಲ್ಲಿ 2–1 ಗೋಲುಗಳಿಂದ ಗೆದ್ದ ಆತಿಥೇಯರು ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಐದರಿಂದ ನಾಲ್ಕನೇ ಸ್ಥಾನಕ್ಕೇರಿದರು. 2003ರಲ್ಲಿ ವಿಶ್ವ ರ‍್ಯಾಂಕಿಂಗ್‌ ಪದ್ಧತಿ ಜಾರಿಯಾದ ಬಳಿಕ ಮೊದಲ ಸಲ ಭಾರತ ತಂಡ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಭಾರತ ತಂಡ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ತಂಡದ ಈ ತಂತ್ರಕ್ಕೆ ಎರಡನೇ ನಿಮಿಷದಲ್ಲೇ ಯಶಸ್ಸು ಸಿಕ್ಕಿತು. ಮನದೀಪ್‌ ಸಿಂಗ್‌ ಅವರು ಫೀಲ್ಡ್‌ ಗೋಲು ಬಾರಿಸಿ ತವರಿನ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಬೆಲ್ಜಿಯಂ ತಂಡ ನಂತರ ಲಯ ಕಂಡುಕೊಂಡು ಪರಿಣಾಮಕಾರಿಯಾಗಿ ಆಡಿತು. 0–1 ಹಿನ್ನಡೆಯೊಂದಿಗೆ ವಿರಾಮಕ್ಕೆ ಹೋದ ‘ರೆಡ್‌ ಲಯನ್ಸ್‌’ ನಂತರ ಗರ್ಜಿಸಿತು. 33ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಕೈಚಳಕ ತೋರಿದ ಗೌಟಿಯರ್‌ ಬೊಕಾರ್ಡ್‌ ಅವರು ಪ್ರವಾಸಿ ಪಡೆ 1–1 ಸಮಬಲ ಸಾಧಿಸಲು ನೆರವಾದರು.

ಇದರಿಂದ ಭಾರತದ ಆಟಗಾರರು ಎದೆಗುಂದಲಿಲ್ಲ. ಅಂತಿಮ ಕ್ವಾರ್ಟರ್‌ನಲ್ಲಿ ಇನ್ನಷ್ಟು ಚುರುಕಾಗಿ ಆಡಿದ ಆತಿಥೇಯ ಆಟಗಾರರು 47ನೇ ನಿಮಿಷದಲ್ಲಿ ನಿರ್ಣಾಯಕ ಗೋಲು ಗಳಿಸಿ ಸಂಭ್ರಮಿಸಿದರು. ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ರಮಣದೀಪ್‌ ಸಿಂಗ್‌, ಭಾರತದ ಗೆಲುವನ್ನು ಖಾತ್ರಿ ಪಡಿಸಿದರು.

‌ನಂತರದ ಅವಧಿಯಲ್ಲಿ ಬೆಲ್ಜಿಯಂ ವೇಗದ ಆಟಕ್ಕೆ ಮುಂದಾಯಿತು. ಈ ತಂಡದ ಮುಂಚೂಣಿ ವಿಭಾಗದ ಆಟಗಾರರ ಗೋಲು ಗಳಿಕೆಯ ಪ್ರಯತ್ನಗಳಿಗೆ ಭಾರತದ ಗೋಲ್‌ಕೀಪರ್‌ಗಳಾದ ಪಿ.ಆರ್‌.ಶ್ರೀಜೇಶ್‌ ಮತ್ತು ಕೊನೆಯಲ್ಲಿ ಅವರ ಬದಲಿಗೆ ಬಂದ ಕೃಷ್ಣ ಪಾಠಕ್‌ ಅವರು ಅಡ್ಡಿಯಾದರು.

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಎದುರಿನ ಪಂದ್ಯಗಳಲ್ಲಿ ದೊಡ್ಡ ಅಂತರದಿಂದ ಗೆದ್ದು ವಿಶ್ವಾಸ ಹೆಚ್ಚಿಸಿಕೊಂಡಿದ್ದ ಥಾಮಸ್‌ ಬ್ರೀಲ್ಸ್‌ ಸಾರಥ್ಯದ ಬೆಲ್ಜಿಯಂ, ಭಾರತದ ಎದುರು ಪರದಾಡಿತು. 38 ಬಾರಿ ಭಾರತದ ಆವರಣ ಪ್ರವೇಶಿಸಿದ ಪ್ರವಾಸಿ ಪಡೆಗೆ 12 ಪೆನಾಲ್ಟಿ ಕಾರ್ನರ್‌ ಅವಕಾಶಗಳೂ ಸಿಕ್ಕಿದ್ದವು. ಇವುಗಳನ್ನು ಸದುಪಯೋಗಪಡಿಸಿಕೊಳ್ಳಲು ತಂಡಕ್ಕೆ ಆಗಲಿಲ್ಲ.

ಉಭಯ ತಂಡಗಳು ಭಾನುವಾರ ಮತ್ತೊಮ್ಮೆ ಮುಖಾಮುಖಿಯಾಗಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು