ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕಾಶ ಪಡುಕೋಣೆ ಬಗ್ಗೆ ಗೋಪಿ ಬೇಸರ

ನೋವು ಹೊರಹಾಕಿದ ಪುಲ್ಲೇಲ ಗೋಪಿಚಂದ್; ಪ್ರಕಾಶ ಪಡುಕೋಣೆ ಕುರಿತು ಪುಸ್ತಕದಲ್ಲಿ ಹೇಳಿಕೆ
Last Updated 12 ಜನವರಿ 2020, 20:00 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ಸದಾ ಶಾಂತಚಿತ್ತರಾ ಗಿರುವ ವ್ಯಕ್ತಿ. ತಮ್ಮ ಮಾನಸಿಕ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದು ವಿರಳ. ಆದರೆ ಆರು ವರ್ಷಗಳ ಹಿಂದೆ ತಮ್ಮ ಅಕಾಡೆಮಿಯಲ್ಲಿ ತರಬೇತಿ ಪಡೆದು ಸಾಧನೆ ಮಾಡಿದ್ದ ಸೈನಾ ನೆಹ್ವಾಲ್ ಅವರು ಬೆಂಗಳೂರಿನ ಪ್ರಕಾಶ ಪಡುಕೋಣೆ ಅಕಾಡೆಮಿಗೆ ತರಬೇತಿಗಾಗಿ ತೆರಳಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಇದೇ ತಿಂಗಳು ಬಿಡುಗಡೆಯಾಗಲಿ ರುವ ‘ಡ್ರೀಮ್ಸ್‌ ಆಫ್ ಎ ಬಿಲಿಯನ್; ಇಂಡಿಯಾ ಅ್ಯಂಡ್ ದ ಒಲಿಂಪಿಕ್ ಗೇಮ್ಸ್‌’ ಕೃತಿಯಲ್ಲಿ ತಮ್ಮ ನೋವನ್ನು ಬಿಚ್ಚಿಟ್ಟಿದ್ದಾರೆ. ಕ್ರೀಡಾ ಲೇಖಕ ಬೊರಿಯಾ ಮಜುಂದಾರ್ ಮತ್ತು ಹಿರಿಯ ಪತ್ರಕರ್ತ ನಳಿನ್ ಮೆಹ್ತಾ ಬರೆದಿರುವ ಈ ಪುಸ್ತಕದ ‘ಬಿಟರ್ ರೈವ ಲರಿ’ ಅಧ್ಯಾಯದಲ್ಲಿ ಗೋಪಿ ತಮ್ಮ ಕಹಿ ನೆನಪನ್ನು ಬಿಚ್ಚಿಟ್ಟಿದ್ದಾರೆ.

‘ನಮಗೆ ತೀರಾ ಆತ್ಮೀಯರಾದ ವರನ್ನು ಬೇರೆಯವರು ನಮ್ಮಿಂದ ದೂರ ಕರೆದುಕೊಂಡು ಹೋದಾಗ ಆಗುವ ನೋವು ಸೈನಾ ವಿಷಯದಲ್ಲಿ ಆಗಿತ್ತು. ಆ ಸಂದರ್ಭದಲ್ಲಿ ಬೆಂಗಳೂರಿಗೆ ಹೋಗದಂತೆ ಅಕ್ಷರಶಃ ಆಕೆಯಲ್ಲಿ ಬೇಡಿ ಕೊಂಡೆ. ಆದರೆ ಸೈನಾ ನಮ್ಮ ಅಕಾಡೆಮಿ ಬಿಡಲು ಗಟ್ಟಿ ನಿರ್ಧಾರ ಮಾಡಿದ್ದರು. ಕೊನೆಗೆ, ಆಕೆಗೆ ಒಳ್ಳೆಯದಾಗಲಿ ಎಂದು ಹಾರೈಸಿದೆ’ ಎಂದು ಗೋಪಿ ಹೇಳಿದ್ದಾರೆ.

2014ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿ ಯನ್‌ಷಿಪ್‌ ನಂತರ ಸೈನಾ ಸೈನಾ ಅವರು ಬೆಂಗಳೂರಿನಲ್ಲಿ ವಿಮಲ್ ಕುಮಾರ್ ಅವರ ಬಳಿ ತರಬೇತಿಗೆ ಸೇರಿದ್ದರು. ಪಿ.ವಿ. ಸಿಂಧು ಅವರ ಬಗ್ಗೆ ಗೋಪಿ ಹೆಚ್ಚು ಗಮನ ಕೊಡುತ್ತಿದ್ದ ಕಾರಣಕ್ಕೆ ಸೈನಾ ಹೈದರಾಬಾದ್ ಬಿಟ್ಟರು ಎಂಬ ಮಾತುಗಳು ಆಗ ಕೇಳಿಬಂದಿದ್ದವು.

ಈ ಕುರಿತು ಪ್ರತಿಕ್ರಿಯಿಸಿರುವ ಗೋಪಿ, ‘ಹೌದು. ನಮ್ಮಲ್ಲಿರುವ ಎಲ್ಲ ಆಟಗಾರರ ಬಗ್ಗೆಯೂ ಗಮನ ನೀಡು ತ್ತಿದ್ದೆ. ಆದರೆ, 2012 ರಿಂದ 2014ರ ಅವಧಿಯಲ್ಲಿ ಸಿಂಧು ಮಾಡಿದ್ದ ಸಾಧನೆ ಗಳಿಂದಾಗಿ ಅವರ ಮೇಲೆ ಹೆಚ್ಚು ಗಮನ ಇತ್ತು. ಹಾಗೆಂದು ಸೈನಾ ಅವರನ್ನು ಕಡೆಗಣಿಸಿರಲಿಲ್ಲ ಮತ್ತು ಆ ಉದ್ದೇಶವೂ ಇರಲಿಲ್ಲ. ಆದರೆ ಈ ಮಾತನ್ನು ಸೈನಾ ಅವರಿಗೆ ಮನದಟ್ಟು ಮಾಡಲು ಆಗ ನನ್ನಿಂದ ಸಾಧ್ಯವಾಗಲಿಲ್ಲ’ ಎಂದಿದ್ದಾರೆ.

‘ಪ್ರಕಾಶ್ ಸರ್ ಅಥವಾ ಒಲಿಂಪಿಕ್ ಗೋಲ್ಡ್‌ ಕ್ವೆಸ್ಟ್ (ಒಜಿಕ್ಯು) ಅಧಿಕಾರಿ ವಿರೇನ್ ರಸ್ಕೀನಾ ಅಥವಾ ವಿಮಲ್ ಕುಮಾರ್ ಅವರು ಸೈನಾಗೆ ತಿಳಿವಳಿಕೆ ಹೇಳಬಹುದಿತ್ತು. ಆದರೆ ವಾಸ್ತವದಲ್ಲಿ ಅವರೇ ಆಕೆಯು ಹೈದರಾಬಾದ್ ಬಿಡು ವಂತೆ ಪ್ರೇರೆಪಿಸಿದ್ದರು. ಪ್ರಕಾಶ್ ಸರ್‌ ನನ್ನ ಪಾಲಿನ ಆದರ್ಶ ವ್ಯಕ್ತಿ. ಆದರೂ ಅವರು ನನ್ನ ಕುರಿತು ಯಾವತ್ತೂ ಉತ್ತಮವಾದದ್ದನ್ನು ಹೇಳಿಲ್ಲ’ ಎಂದು ಗೋಪಿ ಹೇಳಿದ್ದಾರೆ.

ಹರಿಯಾಣದ ಜಟ್ನಿ ಸೈನಾ: 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಸೈನಾ ಬೇಗನೆ ಸೋತು ಹೊರಬಿದ್ದಿದ್ದರು. ಗಂಭೀರ ಗಾಯದ ಸಮಸ್ಯೆ ಅನುಭವಿಸಿ, ಶಸ್ತ್ರ ಚಿಕಿತ್ಸೆಯನ್ನೂ ಪಡೆಯಬೇಕಾಯಿತು. ಈ ಕುರಿತು ಸೈನಾ ಅವರ ಪತಿ, ಆಟ ಗಾರ ಪರುಪಳ್ಳಿ ಕಶ್ಯಪ್ ನೀಡಿರುವ ಹೇಳಿ ಕೆಯೂ ಈ ಕೃತಿಯಲ್ಲಿ ದಾಖಲಾಗಿದೆ.

‘ನನ್ನ ಪತ್ನಿ ಪಕ್ಕಾ ಹರಿಯಾಣ್ವಿ ಜಟಣಿ (ಹರಿಯಾಣದ ಜಟ್‌ ಜನಾಂಗದ ಮಹಿಳೆ). ಅದಕ್ಕೆ ತಕ್ಕಂತೆ ಹಟವಾದಿ ಮತ್ತು ಸ್ವಾಭಿಮಾನಿ. ಆದರೆ ಆಕೆ ಗೋಪಿ ಸರ್ ಬಳಿ ಕ್ಷಮೆ ಕೇಳಲು ತವಕಿಸಿದ್ದರು. ಮತ್ತೆ ಹೈದರಾಬಾದ್‌ನಲ್ಲಿ ತರಬೇತಿಗೆ ಮರಳುವ ಒತ್ತಡದಲ್ಲಿದ್ದರು’ ಎಂದು ಕಶ್ಯಪ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT