ಭಾನುವಾರ, ಸೆಪ್ಟೆಂಬರ್ 26, 2021
21 °C

ಅಲ್ಲಿ ಪ್ರಶಸ್ತಿ ಪ್ರದಾನ; ಇಲ್ಲಿ ‘ದ್ರೋಣಾಚಾರ್ಯ‘ ಪಂಚಭೂತಗಳಲ್ಲಿ ಲೀನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿಕಾಸಸೌಧದಲ್ಲಿ ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡುವ ವರ್ಚುವಲ್ ಸಮಾರಂಭ ನಡೆಯುತ್ತಿತ್ತು. ಖೇಲ್ ರತ್ನ, ದ್ರೋಣಾಚಾರ್ಯ ಮತ್ತು ಅರ್ಜುನ ಪ್ರಶಸ್ತಿಗೆ ಆಯ್ಕೆಯಾದವರನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನವದೆಹಲಿಯಿಂದ ಆನ್‌ಲೈನ್‌ನಲ್ಲಿ ಅಭಿನಂದಿಸುತ್ತಿದ್ದರು. ಜೀವಮಾನ ಸಾಧನೆಗಾಗಿ ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದ ಪುರುಷೋತ್ತಮ ರೈ ಅವರು ಅದೇ ಸಂದರ್ಭದಲ್ಲಿ ಪೀಣ್ಯದ ವಿದ್ಯುತ್ ಚಿತಾಗಾರದಲ್ಲಿ ಪಂಚಭೂತಗಳಲ್ಲಿ ಲೀನವಾದರು.

ಶನಿವಾರ ಬೆಳಿಗ್ಗೆ 11 ಗಂಟೆಗೆ ನಡೆದ ಸಮಾರಂಭದಲ್ಲಿ ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿತ್ತು. ಇದರಲ್ಲಿ ಪುರುಷೋತ್ತಮ ರೈ ಅವರೂ ಭಾಗಿಯಾಗಬೇಕಾಗಿತ್ತು. ಅವರು ಎರಡು ದಿನಗಳ ಹಿಂದೆ ನಡೆದ ಅಣಕು ಕಾರ್ಯಕ್ರಮದಲ್ಲಿ ಪಾಲ್ಗೊಂಡು ವರ್ಚುವಲ್ ಆಗಿ ಪ್ರಶಸ್ತಿ ಸ್ವೀಕರಿಸುವುದು ಹೇಗೆ ಎಂಬುದನ್ನು ತಿಳಿದುಕೊಂಡೂ ಇದ್ದರು. ಆದರೆ ಗೌರವ ಸ್ವೀಕರಿಸಲು ತಾಸುಗಳು ಉಳಿದಿರುವಾಗ, ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧರಾಗಿದ್ದರು.

ನಿಗದಿಯಂತೆ ಪುರುಷೋತ್ತಮ ರೈ ಅವರಿಗೆ ಬೆಳಿಗ್ಗೆ 11.15ರಿಂದ 11.30ರ ಅವಧಿಯಲ್ಲಿ ಪ್ರಶಸ್ತಿ ಪ್ರದಾನ ಆಗಬೇಕಿತ್ತು. 11 ಗಂಟೆಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತ ಪ್ಯಾರಾ ಅಥ್ಲೀಟ್ ಮರಿಯಪ್ಪನ್ ತಂಗವೇಲು ಅವರಿಗೆ ಮೊದಲು ಪ್ರಶಸ್ತಿ ನೀಡಲಾಯಿತು. ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಅವರದು ನಂತರದ ಸರದಿ. ‘ದ್ರೋಣಾಚಾರ್ಯ’ ಬೆಂಗಳೂರಿನ ಜೂಡ್ ಫೆಲಿಕ್ಸ್, ‘ಅರ್ಜುನ’ ಆಕಾಶದೀಪ್ ಸಿಂಗ್, ‘ದ್ಯಾನಚಂದ್‌’ ಜಿನ್ಸಿ ಫಿಲಿಪ್, ರಂಜಿತ್ ಕುಮಾರ್ ಮುಂತಾದವರು ಬೆಂಗಳೂರಿನಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಈ ನಡುವೆ ಪುರುಷೋತ್ತಮ ರೈ ಅವರ ಹೆಸರನ್ನು ಕರೆಯಬೇಕಾಗಿತ್ತು. ಆದರೆ ಅದೇ ಸಂದರ್ಭದಲ್ಲಿ ಅವರ ಅಂತ್ಯಸಂಸ್ಕಾರ ನಡೆಯಿತು. ಬಂಧುಗಳು, ಶಿಷ್ಯಂದಿರು ಮತ್ತು ಕ್ರೀಡಾಪಟುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಅಧಿಕಾರಿಗಳ ಗೊಂದಲ

ಡಿವೈಇಎಸ್ ಮತ್ತು ಸಾಯ್ ಕೋಚ್ ಆಗಿದ್ದ ಪುರುಷೋತ್ತಮ ಅವರಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕ್ರೀಡಾ ದಿನಾಚರಣೆಯ ಸಮಾರಂಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಿತು. ಆದರೆ ಅವರ ಮನೆಗೆ ತೆರಳಿ ಗೌರವ ಸಲ್ಲಿಸಲು ಅಥವಾ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಇಲಾಖೆಗೆ ಸಾಧ್ಯವಾಗಲಿಲ್ಲ.

‘ಬೆಳಿಗ್ಗೆಯಿಂದ ಅವರ ಸಂಬಂಧಿಕರನ್ನು ಸಂಪರ್ಕಿಸಲು ಪ್ರಯತ್ನಿಸಿದೆವು. ಅಂತ್ಯಸಂಸ್ಕಾರದ ಸ್ಥಳದ ಬಗ್ಗೆಯಾಗಲಿ ಸಮಯದ ಕುರಿತಾಗಲಿ ಮಾಹಿತಿ ಇರಲಿಲ್ಲ. ಕ್ರೀಡಾ ದಿನಾಚರಣೆಯ ಸಿದ್ಧತೆಯ ನಡುವೆಯೇ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವಂತೆ ಉಪನಿರ್ದೇಶಕರೊಬ್ಬರಿಗೆ ಸೂಚಿಸಲಾಗಿತ್ತು. ಅವರು ಮಾಹಿತಿ ತಿಳಿದುಕೊಳ್ಳುವಷ್ಟರಲ್ಲಿ ಅಂತ್ಯಸಂಸ್ಕಾರ ಮುಗಿದೇ ಹೋಗಿತ್ತು’ ಎಂದು ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ಪುರುಷೋತ್ತಮ ರೈ ಮತ್ತು ಜೂಡ್ ಫೆಲಿಕ್ಸ್ ಅವರನ್ನು ಗೌರವಿಸಲು ಆಗಸ್ಟ್ 31ರಂದು ನಿಗದಿಯಾಗಿದ್ದ ಸಮಾರಂಭವನ್ನು ಮುಂದೂಡಲಾಗಿದೆ ಎಂದು ಅವರು ವಿವರಿಸಿದರು.

ಸೌಮ್ಯ ವ್ಯಕ್ತಿತ್ವ; ಅಸಾಮಾನ್ಯ ಕೋಚ್

ಪುರುಷೋತ್ತಮ ರೈ ಅವರು ಎನ್‌ಐಎಸ್‌ನಲ್ಲಿ ತರಬೇತಿ ಮುಗಿಸಿ ಬೆಂಗಳೂರಿಗೆ ಬಂದ ಆರಂಭದಲ್ಲೇ ಅವರ ಬಳಿ ತರಬೇತಿಗೆ ಸೇರಿದ್ದ ಜಾವೆಲಿನ್ ಥ್ರೋ ಪಟು ಚಂದ್ರಶೇಖರ ರೈ 'ಪುರುಷೋತ್ತಮ ಅವರು ಸೌಮ್ಯ ಸ್ವಭಾವದ ಅಸಾಮಾನ್ಯ ಕೋಚ್ ಆಗಿದ್ದರು’ ಎಂದು ನೆನಪಿಸಿಕೊಂಡರು. ‘ಕೋಚ್‌ಗಳು ಗದರಿಸುವುದು, ಅಥವಾ ಗಟ್ಟಿ ಧ್ವನಿಯಲ್ಲಿ ಸಲಹೆ ನೀಡುವುದು ಸಹಜ. ಆದರೆ ಪುರುಷೋತ್ತಮ ಅವರ ಧ್ವನಿ ಎತ್ತರಕ್ಕೆ ಏರಿದ್ದು ನಾನೊಮ್ಮೆಯೂ ಕಂಡಿಲ್ಲ. ಅಂಥ ಕೋಚ್‌ಗಳು ತೀರಾ ಅಪರೂಪ. ಅವರ ಸಾಧನೆಗೆ ಮತ್ತು ಶ್ರಮಕ್ಕೆ ದ್ರೋಣಾಚಾರ್ಯ ಪ್ರಶಸ್ತಿ ಸಂದಿತ್ತು. ಆದರೆ ಅದನ್ನು ಪಡೆದುಕೊಳ್ಳುವ ಮೊದಲೇ ಇಹಲೋಕ ತ್ಯಜಿಸಿದ್ದು ಅತ್ಯಂತ ಬೇಸರದ ಸಂಗತಿ’ ಎಂದು ಚಂದ್ರಶೇಖರ ಹೇಳಿದರು.

ಶಿಷ್ಯಂದಿರಾದ ಎಸ್‌.ಡಿ.ಈಶನ್, ರೋಸಾಕುಟ್ಟಿ, ಉದಯಪ್ರಭು, ಸತ್ಯನಾರಾಯಣ, ಶಿವಾನಂದ ಮತ್ತಿತರರು ಅಂತ್ಯಕ್ರಿಯೆ ವೇಳೆ ಇದ್ದರು. ಪತ್ನಿ ಆ್ಯನಿ ಮತ್ತು ಪುತ್ರ ಪೃಥ್ವಿ, ಪುರುಷೋತ್ತಮ ಅವರ ಸಹೋದರ ಜಗನ್ನಾಥ ರೈ ಅವರೊಂದಿಗೆ ಸಂಜೆ ಹುಟ್ಟೂರಾದ ಪುತ್ತೂರಿಗೆ ಪಯಣ ಬೆಳೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು