ಶನಿವಾರ, ಸೆಪ್ಟೆಂಬರ್ 25, 2021
29 °C

Tokyo Olympics | ಸಿಂಧು ಜಯಭೇರಿ; ಸೆಮಿಫೈನಲ್‌ಗೆ ಲಗ್ಗೆ

ಪಿಟಿಐ Updated:

ಅಕ್ಷರ ಗಾತ್ರ : | |

ಟೋಕಿಯೊ: ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಸತತ ಎರಡು ಒಲಿಂಪಿಕ್ಸ್‌ಗಳಲ್ಲಿ ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಿದ ಭಾರತದ ಮೊದಲ ಬ್ಯಾಡ್ಮಿಂಟನ್ ಆಟಗಾರ್ತಿಯಾದರು.

ಶುಕ್ರವಾರ ಮುಸಾಶಿನೊ ಫಾರೆಸ್ಟ್ ಪ್ಲಾಜಾದಲ್ಲಿ ನಡೆದ ರೋಚಕ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಸಿಂಧು 21–13, 22–20ರಿಂದ ಆತಿಥೇಯ ದೇಶದ ಅಕಾನೆ ಯಾಮಗುಚಿ ವಿರುದ್ಧ ಜಯಿಸಿದರು. 

2016ರ ರಿಯೊ ಒಲಿಂಪಿಕ್ಸ್‌ನ ಬೆಳ್ಳಿ ಪದಕ ವಿಜೇತರಾಗಿರುವ ಸಿಂಧು ಈ ಬಾರಿ ಬಂಗಾರದ ಪದಕ ಜಯಿಸುವ ಭರವಸೆ ಮೂಡಿಸಿದ್ದಾರೆ. ಶನಿವಾರ ಮಧ್ಯಾಹ್ನ ನಡೆಯಲಿರುವ ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಸಿಂಧುಗೆ ಕಠಿಣ ಪೈಪೋಟಿ ಎದುರಾಗಿದೆ. ಅಗ್ರಶ್ರೇಯಾಂಕದ ಆಟಗಾರ್ತಿ, ಥೈವಾನ್ ದೇಶದ ತೈ ಜು ಯಿಂಗ್ ವಿರುದ್ಧ ಸಿಂಧು ಸೆಣಸಲಿದ್ದಾರೆ.

ಎಂಟರ ಘಟ್ಟದ ಮೊದಲ ಗೇಮ್‌ನಲ್ಲಿ ಸುಲಭ ಜಯ ಸಾಧಿಸಿದ ಹೈದರಾಬಾದ್ ಹುಡುಗಿ, ಎರಡನೇ ಸುತ್ತಿನಲ್ಲಿ ಬಹಳಷ್ಟು ಪ್ರಯಾಸಪಡಬೇಕಾಯಿತು. ಒಟ್ಟು 56 ನಿಮಿಷಗಳ ಪಂದ್ಯದಲ್ಲಿ ಅತ್ಯಂತ ರೋಚಕವಾಗಿದ್ದ ಗೇಮ್‌ನಲ್ಲಿ ಸಿಂಧು ತಮ್ಮ ಅನುಭವ ಮತ್ತು ಶಕ್ತಿಯನ್ನು ಪಣಕ್ಕೊಡ್ಡಿದರು.

‘ಮೊದಲ ಗೇಮ್‌ನಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸಿದ್ದೆ. ಆದರೆ, ಎರಡನೇಯದ್ದರಲ್ಲಿ ಅವರು ದಿಟ್ಟ ಪ್ರತಿಕ್ರಿಯೆ ನೀಡಿದರು. ಕೊನೆಯ ಹಂತದಲ್ಲಿ ಲೀಡ್‌ ನಿರ್ವಹಿಸಿ ಜಯಗಳಿಸಿದೆ’ ಎಂದು ಆರನೇ ಶ್ರೇಯಾಂಕದ ಸಿಂಧು ಹೇಳಿದರು.

ಮೊದಲ ಗೇಮ್‌ ಆರಂಭದಲ್ಲಿ ಯಾಮಗುಚಿ 2–4ರ  ಮುನ್ನಡೆ ಸಾಧಿಸಿದ್ದರು. ಈ ಹಂತದಲ್ಲಿ ಆಕ್ರಮಣಶೀಲ ಆಟವಾಡಿದ ಸಿಂಧು 6–6ಕ್ಕೆ ಸಮಬಲ ಸಾಧಿಸಿ, ಅಲ್ಲಿಂದ ಮುಂದೆ ಸತತ ಮುನ್ನಡೆ ಸಾಧಿಸಿದರು. ಕ್ರಾಸ್‌ಕೋರ್ಟ್ ಸ್ಮ್ಯಾಷ್‌ಗಳ ಆಟ ಗಮನ ಸೆಳೆಯಿತು.

ಆದರೆ ಎರಡನೇ ಗೇಮ್‌ನಲ್ಲಿ ತಮ್ಮ ಲಾಂಗ್ ರ‍್ಯಾಲಿ ಆಟವಾಡಿದ ಯಾಮಗುಚಿ ಸ್ಪರ್ಧೆಯೊಡ್ಡಿದರು. ಈ ಗೇಮ್‌ನ ಅರ್ಧವಿರಾಮಕ್ಕೆ ಸಿಂಧು 11–7ರಿಂದ ಮುಂದಿದ್ದರು. ಆದರೆ ಅದರ ನಂತರದ ಆಟದಲ್ಲಿ ಜಪಾನ್ ಆಟಗಾರ್ತಿ 16–15ರ ಮುನ್ನಡೆ ಸಾಧಿಸಿದರು.  54 ಸ್ಟ್ರೋಕ್‌ಗಳು ವಿನಿಯಮವಾದ ಒಂದೇ ರ‍್ಯಾಲಿಯಲ್ಲಿ ಯಾಮಗುಚಿ ಪಾಯಿಂಟ್ ಪಡೆದರು. ಇಬ್ಬರೂ ಬಹಳಷ್ಟು ಆಯಾಸಗೊಂಡಿದ್ದರು. 18 ಪಾಯಿಂಟ್‌ಗಳ ನಂತರ ತಮ್ಮ ಆಟವನ್ನು ಚುರುಕುಗೊಳಿಸಿದ ಸಿಂಧು ಗೆಲುವಿನ ಕೇಕೆ ಹಾಕಿದರು. 

19ನೇ ಬಾರಿ ಇವರು ಮುಖಾಮುಖಿಯಾಗಿದ್ದರು. ಸಿಂಧು 12ನೇ ಸಲ ಗೆದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು