ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಒಲಿಂಪಿಕ್‌ನ ಈ ಚಿನ್ನದ ಹುಡುಗ ಗಂಡುಮಗುವಿನ ‘ತಾಯಿ’!

Last Updated 5 ಆಗಸ್ಟ್ 2021, 12:31 IST
ಅಕ್ಷರ ಗಾತ್ರ

ಆಟದ ಮನೆ:ಟಾಮ್ ಡಾಲೆ ತನಗಿಂತ 20 ವರ್ಷ ಹಿರಿಯ ಪುರುಷ ಸಂಗಾತಿಯನ್ನು ವಿವಾಹವಾಗಿರುವ ‘ಗೇ’. ಟೋಕಿಯೊ ಒಲಿಂಪಿಕ್ಸ್‌ನ ಡೈವಿಂಗ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ನಂತರ ಅವರು ತಮ್ಮ ಬದುಕಿನ ಸೂಕ್ಷ್ಮ ಸಂಗತಿಗಳನ್ನು ನಿರ್ಭಿಡೆಯಿಂದ ಹಂಚಿಕೊಂಡರು. ಅವೆಲ್ಲವೂ ಕೇಳಿಸಿಕೊಳ್ಳಬೇಕಾದ ಸಂಗತಿಗಳು.

‘ನಾನೊಬ್ಬ ಗೇ ಮ್ಯಾನ್ ಹಾಗೂ ಒಲಿಂಪಿಕ್ ಚಾಂಪಿಯನ್ ಎಂದು ಹೇಳಲು ಹೆಮ್ಮೆಯೆನಿಸುತ್ತಿದೆ. ಚಿಕ್ಕಂದಿನಲ್ಲಿ ನಾನು ಏನಾಗಿದ್ದೆನೋ ಅದರಿಂದಾಗಿ ಎಂದಿಗೂ ಏನೂ ಸಾಧಿಸಲಾರೆ ಎಂದುಕೊಂಡಿದ್ದೆ. ಒಲಿಂಪಿಕ್ ಚಾಂಪಿಯನ್ ಆಗಿದ್ದೇ ಏನು ಬೇಕಾದರೂ ಸಾಧಿಸಬಹುದೆನ್ನುವುದಕ್ಕೆ ಸಾಕ್ಷಿಯಾಗಿದೆ’–ಟಾಮ್ ಡಾಲೆ ಈಜುಕೊಳದಿಂದ ಎದ್ದುಬಂದದ್ದೇ ಹೀಗೆ ಹೇಳಿದ್ದರು. ಅವರ ಕೆಂದುಟಿಗಳಲ್ಲಿ ಕಂಪನವಿರಲಿಲ್ಲ. ಅದರಿಂದ ಹೊಮ್ಮುತ್ತಿದ್ದ ಎದೆಯಾಳದ ಮಾತಿನಲ್ಲಿ ಇದ್ದದ್ದು ಸಾರ್ಥಕ್ಯ.

ಬ್ರಿಟನ್‌ನ ಈ ಡೈವರ್ ಎಲ್ಲರಂತಲ್ಲ. ಮ್ಯಾಟಿ ಲೀ ಜತೆಗೂಡಿ ಸಿಂಕ್ರನೈಸ್ಡ್‌ 10 ಮೀಟರ್‌ ಪ್ಲಾಟ್‌ಫಾರ್ಮ್‌ ಡೈವಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಗೆದ್ದರು. ಹದಿಮೂರು ವರ್ಷಗಳ ಶ್ರಮಕ್ಕೆ ಸಂದ ಫಲ ಇದು. ‘ಮೈ ಸ್ಟೋರಿ’ ಎನ್ನುವ ಪುಸ್ತಕದಲ್ಲಿ ಟಾಮ್ ಡಾಲೆ ತಾವು ಬದುಕಿನಲ್ಲಿ ಹಾದುಬಂದ ಸಂಕಷ್ಟಗಳ ಸರಮಾಲೆಯನ್ನು ತೆರೆದಿಟ್ಟಿದ್ದಾರೆ.

ಚೀನಾದ ಕಾವೊ ಯುಆನ್ ಹಾಗೂ ಚೆನ್ ಐಸೆನ್ ಜೋಡಿಯನ್ನು ಸ್ಪರ್ಧೆಯಲ್ಲಿ ಕೂದಲೆಳೆಯಲ್ಲಿ ಮಣಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡ ಡಾಲೆ–ಮ್ಯಾಟಿ ಲೀ ಜೋಡಿಯ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಡಾಲೆ ಸುಸ್ಪಷ್ಟವಾಗಿ ತಾವು ಎದುರಿಸಿದ ಸಮಸ್ಯೆಯನ್ನು ಪದಕ ಗೆದ್ದ ಸಂದರ್ಭದಲ್ಲೇ ಹೇಳಿಕೊಂಡರು. ‘ಸದಾ ಕಾಲ ನಾನು ಒಂಟಿ ಎಂಬ ಭಾವನೆ ಕಾಡುತ್ತಿತ್ತು. 2013ರಲ್ಲಿ ಆ ಪೊರೆ ಕಳಚುವ ನಿರ್ಣಯ ಕೈಗೊಂಡೆ. ಸಮಾಜ ಬಯಸಿದಂತೆ ನಾನು ಇರಲಿಲ್ಲ. ಅದರಿಂದ ಏನೋ ಕಳೆದುಕೊಂಡಂಥ ಭಾವ ಕಾಡುತ್ತಿತ್ತು. ಅದನ್ನು ಮೀರಿದೆ...ಚೆನ್ನಾಗಿಯೇ ಮೀರಿದೆ’ ಎಂಬ ಅವರ ಮಾತು ಎಷ್ಟೋ ಜನರಿಗೆ ಸ್ಫೂರ್ತಿಯಾಯಿತು. ಯಾವುದೇ ಎಲ್‌ಜಿಬಿಟಿ ವ್ಯಕ್ತಿ ತಾನೂ ಒಲಿಂಪಿಕ್ಸ್‌ ತರಹದ ದೊಡ್ಡ ವೇದಿಕೆಯಲ್ಲಿ ಪದಕ ಗೆಲ್ಲಬಹುದು ಎನ್ನುವುದಕ್ಕೆ ತಾವು ಮಾದರಿಯಾದ ಹೆಮ್ಮೆ ಅವರದ್ದು.

ಟಾಮ್ ಡಾಲೆಗೆ ಒಲಿಂಪಿಕ್ ಚಿನ್ನವೇನೋ ಹೊಸತು. ಆದರೆ, ಪದಕಗಳಿಗೆ ಅವರು ಹಳಬರು. 2012ರಲ್ಲಿ ಹಾಗೂ 2016ರಲ್ಲಿ ಕಂಚಿನ ಪದಕಗಳನ್ನು ಗೆದ್ದು ಅವರು ತಮ್ಮ ಗುರಿಯನ್ನು ನಿಕ್ಕಿ ಮಾಡಿಕೊಂಡು ಹೋಗಿದ್ದರು. ಆಗ ಅವರ ಬದುಕಿನ ಪುಟಗಳ ಕುರಿತು ಹೆಚ್ಚು ಜನ ತಲೆಕೆಡಿಸಿಕೊಂಡಿರಲಿಲ್ಲ.

ಚಿತ್ರಕೃಪೆ:REUTERS
ಚಿತ್ರಕೃಪೆ:REUTERS

ಕಳೆದ ವಾರ ಒಲಿಂಪಿಕ್ ಚಿನ್ನ ಗೆದ್ದಮೇಲೆ ಅವರು ಟೇಬಲ್‌ ಎದುರು ಕುಳಿತು ನಿರ್ಭಿಡೆಯಿಂದ ತಾನು ಒಬ್ಬಾತನ ‘ಹೆಂಡತಿ’ ಎಂದು ಹೇಳಿಕೊಂಡರು. ಚೀನಾ ಹಾಗೂ ರಷ್ಯಾದ ಅಥ್ಲೀಟ್‌ಗಳು ಅವರ ಆ ಮಾತುಗಳಿಗೆ ಮೇಜವಾನಿಯಲ್ಲಿ ಸಾಕ್ಷಿಯಾಗಿದ್ದರು. ಅವರೆಲ್ಲ ಸಹಜವಾಗಿಯೇ ಕಣ್ಣು ಪಿಳಿಪಿಳಿಸುತ್ತಿದ್ದರು. ಚೀನಾದಲ್ಲಾಗಲೀ, ರಷ್ಯಾದಲ್ಲಾಗಲೀ ಸಲಿಂಗಿಗಳ ವಿವಾಹಕ್ಕೆ ಕಾನೂನಿನ ಮಾನ್ಯತೆ ಇಲ್ಲ.

ಚೀನಾದ ಪತ್ರಕರ್ತರೊಬ್ಬರು ಮಾತಿನ ನಡುವೆ ಮುಗುಮ್ಮಾಗಿ, ‘ನೀವು ಮಗುವನ್ನು ನೋಡಲು ಕಾತರರಾಗಿದ್ದೀರಾ’ ಎಂದು ಪ್ರಶ್ನೆ ಹಾಕಿದರು. ಆಗಲೂ ಕಣ್ಣು ಪಿಳಿಪಿಳಿಸಿದವರು ಅಲ್ಲಿದ್ದರು. ಇಬ್ಬರು ಪುರುಷರಿಗೆ ಮಗು ಹುಟ್ಟುವುದು ಹೇಗೆ ಎನ್ನುವುದು ಸಹಜ ಪ್ರಶ್ನೆ. ಇದಕ್ಕೆ ಜೀವಶಾಸ್ತ್ರದ ವಿವರಣೆಯ ಮೂಲಕ ಉತ್ತರ ಕೊಡಲು ಹೋಗದ ಟಾಮ್, ‘ಅದೊಂದು ಬದುಕಿನ ಪರಮ ಸಂತಸದ ಪಯಣ. ನನ್ನ ಗಂಡ, ಮಗನನ್ನು ಯಾವಾಗ ನೋಡುವೆನೋ ಎಂದು ಕಾತರನಾಗಿದ್ದೇನೆ. ಅವರನ್ನು ಬಿಗಿಯಾಗಿ ಅಪ್ಪಿಕೊಂಡು, ನನ್ನ ಈ ಖುಷಿಯ ಪಯಣವನ್ನು ಸಾರ್ಥಕಗೊಳಿಸಲು ಕಾಯುತ್ತಿರುವೆ’ ಎಂದರಷ್ಟೆ.

ಸಾಥಿ ಸ್ಪರ್ಧಿ ಲೀ ತಮ್ಮ ಒಂಬತ್ತರ ಬಾಲ್ಯದಲ್ಲಿ ಟಾಮ್ ಡಾಲೆ ಬಳಿಗೆ ಓಡಿಹೋಗಿ, ಹಸ್ತಾಕ್ಷರ ಪಡೆದಿದ್ದವರು. ಬ್ರಿಟನ್‌ನಲ್ಲಿ ಆಧುನಿಕ ಕಾಲದ ಡೈವಿಂಗ್ ಗಾಡ್‌ಫಾದರ್ ಎಂದೇ ಟಾಮ್ ಅವರನ್ನು ಬಹುತೇಕರು ಗುರುತಿಸುವುದು. ತಾವು ಆರಾಧಿಸುತ್ತಾ ಬೆಳೆದ ಕ್ರೀಡಾಪಟುವಿನ ಜತೆಗೇ ಒಲಿಂಪಿಕ್ಸ್ ಚಿನ್ನದ ಪದಕದ ಖುಷಿಗೆ ಸಾಕ್ಷಿಯಾಗುವುದು ವಿರಳಾತಿವಿರಳ.

‘ಬೀಜಿಂಗ್ ಒಲಿಂಪಿಕ್ಸ್ ಸಂದರ್ಭದಲ್ಲಿ ತೆಗೆದ ಟಾಮ್ ಹಾಗೂ ನನ್ನದೊಂದು ಫೋಟೊ ಇದೆ. ಆಗ ನಾನಿನ್ನೂ ಬಾಲಕ. ದಪ್ಪ ತಲೆಯ ಹುಡುಗ. ಅದರ ಜತೆಗೆ ತೀರಾ ಇತ್ತೀಚಿನ ಫೋಟೊ ಒಂದನ್ನು ಸೇರಿಸಿದೆ. ವರ್ಷಗಳಲ್ಲೇ ಎಷ್ಟೆಲ್ಲ ಬದಲಾವಣೆ ಆಗುತ್ತದೆ ಎನ್ನುವ ಸೋಜಿಗಕ್ಕೆ ಈ ಫೋಟೊ ಸಾಕ್ಷಿ’ ಎಂಬ ಲೀ ಮಾತು ಟಾಮ್ ಸಹೃದಯತೆಗೂ ಕನ್ನಡಿ ಹಿಡಿಯುತ್ತದೆ.

ಏಳನೇ ವಯಸ್ಸಿನಲ್ಲೇ ಡೈವಿಂಗ್ ಕಲಿಯಲು ಪ್ರಾರಂಭಿಸಿದ ಟಾಮ್, ಶಾಲೆಯಲ್ಲಿ ಅಂತರ್ಮುಖಿಯಾಗಿರುತ್ತಿದ್ದ ಹುಡುಗ. ಅದಕ್ಕೇ ಕಲಿಸುವ ಗುರು ಹೊರಗೆಹಾಕಿದರು. ಮಗನನ್ನು ವಿಪರೀತ ಪ್ರೀತಿಸುತ್ತಿದ್ದ ತಂದೆಗೆ ಇದು ಕೋಪ ತರಿಸಿತು. ಖಾಸಗಿಯಾಗಿಯೇ ಮಗನಿಗೆ ಕಲಿಸಲು ಶಾಲೆಯೊಂದು ಒಪ್ಪಿತಾದರೂ ಅದು ಅವರಿಗೆ ಇಷ್ಟವಿರಲಿಲ್ಲ. ಇನ್ನೊಂದು ಶಾಲೆಗೆ ಮಗನನ್ನು ಸೇರಿಸಿದರು. ಟಾಮ್ ದೇಹದ ಹಾರ್ಮೋನ್‌ಗಳಲ್ಲಿ ಆಗುತ್ತಿದ್ದ ಏರಿಳಿತಗಳನ್ನು ಅವರ ತಂದೆ ಸೂಕ್ಷ್ಮವಾಗಿ ಗಮನಿಸಿದ್ದರೆನ್ನಿಸುತ್ತದೆ. ಅದಕ್ಕೇ ಅವರು ಮಗನನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಆದರೆ, ಡೈವಿಂಗ್ ಕ್ಷೇತ್ರದಲ್ಲಿ ಮಗ ವಿಕ್ರಮ ಸಾಧಿಸುತ್ತಿರುವಾಗಲೇ ಅವರು ಅಗಲಿದರು. ಆಗ 17 ವರ್ಷ ಪ್ರಾಯದ ಟಾಮ್‌ ಖಿನ್ನತೆಗೆ ಒಳಗಾಗಿದ್ದೂ ಇದೆ.

ಬಾಲ್ಯದಲ್ಲೇ ಇಂತಹ ಮನೋಸೂಕ್ಷ್ಮ ಸಂಕಟಗಳನ್ನು ಅನುಭವಿಸಿಯೂ ಟಾಮ್ ಗಣಿತದಲ್ಲಿ 12ನೇ ತರಗತಿಯನ್ನು ಉತ್ತಮ ಅಂಕಗಳೊಂದಿಗೆ ಪಾಸು ಮಾಡಿದರು. ಬೇರೆ ಬೇರೆ ಭಾಷೆಗಳನ್ನು ಕಲಿತರು. ಫೋಟೊಗ್ರಫಿಯಲ್ಲೂ ‘ಎ’ ಗ್ರೇಡ್ ಪಡೆದರು.

ತನ್ನೊಳಗಿದ್ದ ಸಲಿಂಗ ಆಕರ್ಷಣೆಯನ್ನು ಅರುಹುವ ಮನಸ್ಸು ಇತ್ತೋ ಏನೋ? 2013ರಲ್ಲಿ ಅವರು ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿ, ಅದರಲ್ಲಿ ಮುಕ್ತವಾಗಿ ಆ ಕುರಿತು ಮಾತನಾಡಲಾರಂಭಿಸಿದರು. ಒಬ್ಬ ಪುರುಷನ ಮೇಲೆ ತನಗೆ ಮೋಹವಾಗಿದೆ ಎಂದು ಯಾವುದೇ ಮುಜುಗರವಿಲ್ಲದೆ ಆ ಚಾನೆಲ್‌ನಲ್ಲಿ ಹೇಳಿಕೊಂಡರು. ಒಂದೂವರೆ ಕೋಟಿಯಷ್ಟು ಮಂದಿ ಅವರ ಆ ವಿಡಿಯೊ ನೋಡಿ, ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಅಮೆರಿಕದ ಚಿತ್ರಕಥಾ ಬರಹಗಾರ, ನಿರ್ದೇಶಕ, ಟೆಲಿವಿಷನ್ ಕಾರ್ಯಕ್ರಮಗಳ ನಿರ್ಮಾಪಕ ಡಸ್ಟಿನ್ ಲಾನ್ಸ್ ಬ್ಲ್ಯಾಕ್ ಅವರ ಮೇಲೆ ಆಗ ಟಾಮ್‌ಗೆ ಮೋಹವಾಗಿದ್ದದ್ದು. ಅದನ್ನು ಅವರು ಅಲ್ಲಿಗೇ ಬಿಡದೆ ಪ್ರೇಮ ನಿವೇದನೆ ಮಾಡಿದ್ದೇ ದೊಡ್ಡದೊಂದು ಕಥೆ. ಇಬ್ಬರಿಗೂ 2015ರ ಹೊತ್ತಿಗೆ ನಿಶ್ಚಿತಾರ್ಥವಾಯಿತು. ಅದಾದ ಮೇಲೆ ರಿಯೊ ಒಲಿಂಪಿಕ್ಸ್ ಸವಾಲು. ಅಲ್ಲಿ ತಾನು ಅಂದುಕೊಂಡ ಮಟ್ಟದ ಸಾಧನೆಯನ್ನು ಡೈವಿಂಗ್‌ನಲ್ಲಿ ಮಾಡಲು ಸಾಧ್ಯವಾಗಲಿಲ್ಲ ಎಂಬ ಕೊರಗು ಟಾಮ್‌ ಅವರನ್ನು ಕಾಡಿತ್ತು. ಆಗ ತಲೆನೇವರಿಸಿದ ಡಸ್ಟಿನ್ ಲಾನ್ಸ್‌, ‘ಮುಂದಿನ ಒಲಿಂಪಿಕ್ಸ್‌ಗೆ ಅಣಿಯಾಗು’ ಎಂದಿದ್ದರು. 2017ರಲ್ಲಿ ಇಬ್ಬರೂ ವಿವಾಹವಾದರು. ಇಬ್ಬರೂ ವೀರ್ಯವನ್ನು ನೀಡಿ ಒಂದೆಡೆ ಶೇಖರಿಸಿ, ಬಾಡಿಗೆ ತಾಯಿಯೊಬ್ಬರನ್ನು ಒಪ್ಪಿಸಿ ಗಂಡು ಮಗುವನ್ನು ಪಡೆದರು.

ಟಾಮ್‌ಗೆ ಈಗ 27 ವರ್ಷ. ಡಸ್ಟಿನ್‌ 47 ವರ್ಷದವರು. ಇಂಥ ಇಬ್ಬರು ಪುರುಷರ ನಡುವಿನ ಸಮಾಜ ಒಪ್ಪದ ಪ್ರೇಮ ಕಥಾನಕ, ದಾಂಪತ್ಯದ ನಡುವೆಯೂ ಸಾಧನೆಯ ಮಿಂಚು ಮೂಡಿಸುವುದು ಕಠಿಣವೇ. ಟಾಮ್ ಅದನ್ನು ಮಾಡಿಯೇ ತೀರಿದರು.

ಸಾಮಾನ್ಯವಾಗಿ ಡೈವಿಂಗ್‌ನಲ್ಲಿ ಮೂರು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದವರು ಹೈರಾಣಾಗುತ್ತಾರೆ. ಟಾಮ್ ಹಾಗಲ್ಲ. ಅವರು ನಿವೃತ್ತಿ ಘೋಷಿಸಿಲ್ಲ. ದೇಹ, ಮನಸ್ಸು ಗಟ್ಟಿ ಇರುವವರೆಗೂ ಡೈವಿಂಗ್ ಅವರಿಗೆ ಜೀವಾಳ. ಅನೇಕ ಯುವಕರಿಗೆ ಈ ಸ್ಪರ್ಧೆಯ ಸೂಕ್ಷ್ಮಗಳನ್ನು ಅವರು ಕಲಿಸಿಕೊಡುತ್ತಿದ್ದಾರೆ.

ಚಿತ್ರಕೃಪೆ:REUTERS
ಚಿತ್ರಕೃಪೆ:REUTERS

ತಾವು ಚಿನ್ನ ಗೆದ್ದಮೇಲೆ ಉಳಿದ ಸ್ಪರ್ಧೆಗಳನ್ನು ನೋಡುತ್ತಾ ಕುಳಿತಿದ್ದಾಗ, ಅವರು ಸ್ವೆಟರ್‌ ನೇಯುತ್ತಿದ್ದರು. ಏಕಕಾಲದಲ್ಲಿ ಹೀಗೆ ಕೆಲವು ಕೆಲಸಗಳನ್ನು ಮಾಡುವುದರಲ್ಲಿ ಅವರು ನಿಸ್ಸೀಮರು. ಕ್ರೀಡೆ ಎಂತೆಂಥ ಮನಸ್ಸುಗಳನ್ನೆಲ್ಲ ಕಲೆಹಾಕುತ್ತದೆ, ಏನೆಲ್ಲ ಹೊಸತುಗಳನ್ನು ಅರುಹುತ್ತದೆ ಎನ್ನುವುದಕ್ಕೆ ಟಾಮ್ ಬದುಕಿನ ಈ ಕೆಲವು ಪುಟಗಳೇ ಸಾಕ್ಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT