ಗುರುವಾರ , ಮೇ 19, 2022
20 °C
ರಾಂಚಿಯಲ್ಲಿ ಪುರುಷ–ಮಹಿಳೆಯರ 35 ಕಿಲೋಮೀಟರ್ ವೇಗ ನಡಿಗೆ ಸ್ಪರ್ಧೆ

ವೇಗ ನಡಿಗೆ ಸ್ಪರ್ಧೆ: ಜುನೇದ್ ಖಾನ್, ರಮಣ್‌ದೀಪ್ ರಾಷ್ಟ್ರೀಯ ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹರಿಯಾಣದ ಜುನೇದ್ ಖಾನ್ ಮತ್ತು ಪಂಜಾಬ್‌ನ ರಮಣ್‌ದೀಪ್ ಕೌರ್ ಅವರು ರಾಂಚಿಯಲ್ಲಿ ಭಾನುವಾರ ಕೊನೆಗೊಂಡ 35 ಕಿಲೋಮೀಟರ್ಸ್ ವೇಗನಡಿಗೆಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆ ಬರೆದರು. 

ಕಳೆದ ತಿಂಗಳು ಮಸ್ಕತ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್‌ನ ರೇಸ್ ವಾಕಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಿಯಾಂಕ ಗೋಸ್ವಾಮಿ ನಿರ್ಮಿಸಿದ ದಾಖಲೆಯನ್ನು 13 ನಿಮಿಷಗಳಿಂದ ರಮಣ್ ದೀಪ್ ಕೌರ್ (3 ತಾಸು 4 ಸೆಕೆಂಡು) ಹಿಂದಿಕ್ಕಿದರು. ತಮ್ಮದೇ ರಾಜ್ಯದ ಮಂಜು, ರಮಣ್‌ದೀಪ್‌ಗೆ ತೀವ್ರ ಪೈಪೋಟಿ ಒಡ್ಡಿದರು. 15 ಕಿಲೋಮೀಟರ್ ವರೆಗೆ ಅವರು ಮುನ್ನಡೆ ಸಾಧಿಸಿದ್ದರು. ನಂತರ ವೇಗ ಹೆಚ್ಚಿಸಿಕೊಂಡ ರಮಣ್‌ದೀಪ್ ಭಾರಿ ಮುನ್ನಡೆ ಸಾಧಿಸಿದರು. ಮಂಜು ಅವರು ಪ್ರಿಯಾಂಕ ದಾಖಲಿಸಿದ ಅವಧಿಗಿಂತ ಮೊದಲೇ ಗುರಿ ಮುಟ್ಟಿ ದ್ವಿತೀಯ ಸ್ಥಾನ ಗಳಿಸಿದರು. ಉತ್ತರಾಖಂಡದ ಪಾಯಲ್ ಮೂರನೆಯವರಾದರು.  

22 ವರ್ಷದ ಜುನೇದ್ ಖಾನ್ ಅವರು ರಾಮ್‌ಬಾಬು ಮತ್ತು ಚಂದನ್ ಸಿಂಗ್ ಅವರನ್ನು 20 ಕಿಲೋಮೀಟರ್ ಅಂತರದ ನಂತರ ಹಿಂದಿಕ್ಕಿದರು. ಎಕನಾಥ್ ಸಂಭಾಜಿ ತುರಂಬೇಕರ್ ಅವರ ದಾಖಲೆಯನ್ನು 5 ನಿಮಿಷಗಳ ಅಂತರದಲ್ಲಿ ಹಿಂದಿಕ್ಕಿದ ಅವರು 2 ತಾಸು 40 ನಿಮಿಷ 16 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಏಕನಾಥ್‌ ಕೂಡ ಸ್ಪರ್ಧೆಯಲ್ಲಿದ್ದರು. 20 ಕಿಲೋಮೀಟರ್‌ ವರೆಗೆ ಮುನ್ನಡೆಯಲ್ಲಿದ್ದವರ ಪೈಕಿ ಅವರೂ ಇದ್ದರು. ಉತ್ತರ ಪ್ರದೇಶದ ರಾಮ್‌ ಬಾಬು ದ್ವಿತೀಯ ಮತ್ತು ಉತ್ತರಾಖಂಡದ ಚಂದನ್ ಸಿಂಗ್ ಮೂರನೇ ಸ್ಥಾನ ಗಳಿಸಿದರು. ಮಸ್ಕತ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಏಕನಾಥ್ 2 ತಾಸು 45 ನಿಮಿಷ 17 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.