ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯದ ಹಾದಿಗೆ ಮರಳುವ ಛಲ

ರಣಜಿ ಕ್ರಿಕೆಟ್: ಕರ್ನಾಟಕ–ಗುಜರಾತ್ ಮುಖಾಮುಖಿ ಇಂದು
Last Updated 13 ಡಿಸೆಂಬರ್ 2018, 18:30 IST
ಅಕ್ಷರ ಗಾತ್ರ

ಸೂರತ್: ಹೋದ ವಾರ ಸೌರಾಷ್ಟ್ರ ಎದುರಿನ ಸೋಲಿನ ಆಘಾತದಿಂದ ಹೊರಬರುವ ಛಲದಲ್ಲಿರುವ ಕರ್ನಾಟಕ ತಂಡವು ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಶುಕ್ರವಾರದಿಂದ ಇಲ್ಲಿ ರಣಜಿ ಟ್ರೋಫಿ ಟೂರ್ನಿಯಲ್ಲಿ ಗುಜರಾತ್ ವಿರುದ್ಧ ಆಡಲಿದೆ. ತಂಡದ ‘ರನ್‌ ಯಂತ್ರ‘ ಮಯಂಕ್ ಅಗರವಾಲ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಎಲೀಟ್ ಗುಂಪಿನಲ್ಲಿ (ಎ–ಬಿ) ಎಂಟನೇ ಸ್ಥಾನದಲ್ಲಿರುವ ಕರ್ನಾಟಕ ತಂಡವು ತನ್ನ ಪಾಲಿನಲ್ಲಿ ಉಳಿದ ಇನ್ನು ನಾಲ್ಕು ಪಂದ್ಯಗಳಲ್ಲಿ ಕನಿಷ್ಠ ಮೂರರಲ್ಲಿ ಜಯಿಸುವ ಒತ್ತಡವಿದೆ. ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಡ್ರಾ ಮಾಡಿಕೊಂಡಿದ್ದ ಕರ್ನಾಟಕವು, ಒಂದರಲ್ಲಿ ಗೆದ್ದಿತ್ತು. ಆದರೆ, ಕಳೆದ ಪಂದ್ಯದಲ್ಲಿ ಸೋತಿದ್ದು ಒತ್ತಡಕ್ಕೆ ಕಾರಣವಾಗಿದೆ. ಹೋದ ಪಂದ್ಯ ನಡೆದಿದ್ದ ರಾಜ್‌ಕೋಟ್‌ನ ಪಿಚ್‌ ಕಳಪೆಯಾಗಿತ್ತು ಎಂದು ಕೆಎಸ್‌ಸಿಎ ಬಿಸಿಸಿಐಗೆ ದೂರು ನೀಡಿತ್ತು.

ಆದರೆ, ಗುಜರಾತ್ ತಂಡವನ್ನು ಸೂರತ್‌ನಲ್ಲಿ ಎದುರಿಸುವುದು ಕಠಿಣ ಸವಾಲಾಗುವುದು ಖಚಿತ. ಏಕೆಂದರೆ, ಐದು ಪಂದ್ಯಗಳನ್ನು ಆಡಿರುವ ಪ್ರಿಯಾಂಕ್ ಪಾಂಚಾಲ್ ತಂಡವು ಸೋತಿಲ್ಲ. ಎರಡರಲ್ಲಿ ಗೆದ್ದು, ಮೂರರಲ್ಲಿ ಡ್ರಾ ಮಾಡಿಕೊಂಡಿದೆ. ಒಟ್ಟು 17 ಪಾಯಿಂಟ್‌ಗಳು ಖಾತೆಯಲ್ಲಿವೆ.

ಮರಳಿದ ಮಯಂಕ್, ಗೌತಮ್: ನ್ಯೂಜಿಲೆಂಡ್ ಪ್ರವಾಸ ಮುಗಿಸಿ ಬಂದಿರುವ ಮಯಂಕ್ ಅಗರವಾಲ್ ಮತ್ತು ಆಲ್‌ರೌಂಡರ್ ಕೃಷ್ಣಪ್ಪ ಗೌತಮ್ ಬಂದಿರುವುದು ತಂಡದ ಬಲ ಹೆಚ್ಚಿಸಿದೆ. ಇವರಿಬ್ಬರೂ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಆದರೆ, ತಮಗೆ ಸಿಕ್ಕ ಅವಕಾಶಗಳಲ್ಲಿಯೇ ನವಪ್ರತಿಭೆಗಳಾದ ಕೆ.ವಿ. ಸಿದ್ಧಾರ್ಥ್, ಡೇಗಾ ನಿಶ್ಚಲ್, ಬಿ.ಆರ್. ಶರತ್, ಪವನ್ ದೇಶಪಾಂಡೆ ಮತ್ತು ಜೆ. ಸುಚಿತ್ ಅವರು ಚೆನ್ನಾಗಿ ಆಡಿದ್ದಾರೆ. ನಿಶ್ಚಲ್ ಮತ್ತು ಮಯಂಕ್ ಇನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ. ಆದರೆ ಗಾಯದ ಸಮಸ್ಯೆಯಿಂದಾಗಿ ಕರುಣ್ ನಾಯರ್ ಈ ಪಂದ್ಯದಲ್ಲಿ ಆಡುತ್ತಿಲ್ಲ. ಇದರಿಂದಾಗಿ ಸಿದ್ಧಾರ್ಥ್ ಸ್ಥಾನ ಉಳಿಸಿಕೊಳ್ಳ
ಬಹುದು. ಅದರೆ ವೈಫಲ್ಯ ಅನುಭವಿಸುತ್ತಿರುವ ಸಮರ್ಥ್ ಅವಕಾಶ ಪಡೆಯುವುದು ಖಚಿತವಿಲ್ಲ. ಮನೀಷ್ ಪಾಂಡೆ ಈ ಪಂದ್ಯದಲ್ಲಿ ಆಡುವುದು ಅನುಮಾನ. ಇದರಿಂದಾಗಿ ಸಮರ್ಥ್ ಉಳಿಯಬಹುದು. ಆದರೆ, ಕೆ. ಗೌತಮ್‌ಗಾಗಿ ಆಲ್‌ರೌಂಡರ್ ಪವನ್ ದೇಶಪಾಂಡೆ ಸ್ಥಾನ ಬಿಡಬೇಕಾಗಬಹುದು.

ಬೌಲಿಂಗ್ ವಿಭಾಗದಲ್ಲಿ ಮೂವರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಿಕೊಂಡರೆ, ಶ್ರೇಯಸ್ ಗೋಪಾಲ್, ಗೌತಮ್ ಜೊತೆಗೆ
ಸುಚಿತ್ ಕೂಡ ಮುಂದುವರಿಯಬಹುದು. ಹೋದ ಎರಡೂ ಪಂದ್ಯಗಳಲ್ಲಿ ಅವರು ಉತ್ತಮ ಬೌಲಿಂಗ್ ಮಾಡಿದ್ದರು. ವಿನಯ್ ಜೊತೆಗೆ ಮಿಥುನ್ ವೇಗದ ವಿಭಾಗಕ್ಕೆ ಬಲ ತುಂಬುವ ಸಾಧ್ಯತೆ ಇದೆ. ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ಬಿ.ಆರ್. ಶರತ್ ನಂತರದ ಇನಿಂಗ್ಸ್‌ಗಳಲ್ಲಿ ಗಮನಾರ್ಹ ಆಟವಾಡಿಲ್ಲ. ಲಯಕ್ಕೆ ಮರಳಲು ಅವರಿಗೆ ಇದು ಸದಾವಕಾಶ.

ಆತಿಥೇಯ ತಂಡದ ಆಟಗಾರರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಹೋದ ಪಂದ್ಯದಲ್ಲಿ ರೇಲ್ವೆಸ್‌ ಎದುರು ಪಿಯೂಷ್ ಚಾವ್ಲಾ ಶತಕ ಬಾರಿಸಿದ್ದರು. ಉತ್ತರಪ್ರದೇಶ ತಂಡ ತೊರೆದ ನಂತರ ಅವರು ಇಲ್ಲಿಆಡುತ್ತಿದ್ದಾರೆ. ರುಜುಲ್ ಭಟ್, ಪಾಂಚಾಲ್ ಅವರು ಉತ್ತಮವಾಗಿ ಆಡಿದ್ದಾರೆ.

ತಂಡಗಳು : ಕರ್ನಾಟಕ: ಆರ್. ವಿನಯಕುಮಾರ್ (ನಾಯಕ), ಮಯಂಕ್ ಅಗರವಾಲ್, ಆರ್. ಸಮರ್ಥ್, ಕೆ.ವಿ. ಸಿದ್ಧಾರ್ಥ್, ಡೇಗಾ ನಿಶ್ಚಲ್, ಶ್ರೇಯಸ್ ಗೋಪಾಲ್, ಬಿ.ಆರ್. ಶರತ್ (ವಿಕೆಟ್‌ಕೀಪರ್), ಪವನ್ ದೇಶಪಾಂಡೆ, ಜೆ. ಸುಚಿತ್, ಕೃಷ್ಣಪ್ಪ ಗೌತಮ್, ಪ್ರಸಿದ್ಧ ಕೃಷ್ಣ, ಶಿಶಿರ್ ಭವಾನೆ, ರೋನಿತ್ ಮೋರೆ, ಅಭಿಮನ್ಯು ಮಿಥುನ್, ಶ್ರೀನಿವಾಸ್ ಶರತ್, ಮೀರ್ ಕೌನೇನ್ ಅಬ್ಬಾಸ್, ಲಿಯಾನ್ ಖಾನ್, ದೇವದತ್ ಪಡಿಕ್ಕಲ್. ಯರೇಗೌಡ (ಮುಖ್ಯ ಕೋಚ್). ಎಸ್. ಅರವಿಂದ್ (ಬೌಲಿಂಗ್ ಕೋಚ್).

ಗುಜರಾತ್: ಪ್ರಿಯಾಂಕ ಪಾಂಚಾಲ್ (ನಾಯಕ), ಮೆಹುಲ್ ಪಟೇಲ್, ರುಜುಲ್ ಭಟ್, ಪಿಯೂಷ್ ಚಾವ್ಲಾ, ಧ್ರುವ ರಾವಳ್ (ವಿಕೆಟ್‌ ಕೀಪರ್), ಸಿದ್ಧಾರ್ಥ್ ದೇಸಾಯಿ, ಚಿಂತನ್ ಗಜಾ, ಸಮಿತ್ ಗೊಹೆಲ್, ಮನಪ್ರೀತ್ ಜುನೇಜಾ, ರೂಷ್ ಕಲೇರಿಯಾ, ಕ್ಷಿತಿಜ್ ಪಟೇಲ್, ಭಾರ್ಗವ್ ಮೆರಾಜ್, ಅರ್ಜನ್ ನಾಗವಸ್ವಾಲ್ಲಾ, ಕರಣ್ ಪಟೇಲ್, ಹಾರ್ದಿಕ್ ಪಟೇಲ್, ಕೇತನ್ ಡಿ ಪಟೇಲ್.

ಪಂದ್ಯ ಆರಂಭ: ಬೆಳಿಗ್ಗೆ 9.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT