ಶನಿವಾರ, ಜೂನ್ 6, 2020
27 °C

ಲಾಕ್‌ಡೌನ್‌ನಿಂದ ಬಾಂಧವ್ಯ ವೃದ್ಧಿ...

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

prajavani

ಕೊಡಗು ಜಿಲ್ಲೆ ಸೋಮವಾರಪೇಟೆಯ ಸುನಿಲ್‌, 2007ರಲ್ಲಿ ಅಂತರರಾಷ್ಟ್ರೀಯ ಹಾಕಿಗೆ ಪದಾರ್ಪಣೆ ಮಾಡಿದ್ದರು. 2011ರ ಚಾಂಪಿಯನ್ಸ್‌ ಚಾಲೆಂಜ್‌ ಟೂರ್ನಿಯಲ್ಲಿ ನಾಲ್ಕು ಗೋಲುಗಳನ್ನು ದಾಖಲಿಸಿದ್ದ ಅವರು ಈ ಸಾಧನೆ ಮಾಡಿದ ಭಾರತದ ಏಕೈಕ ಫಾರ್ವರ್ಡ್‌ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದರು. 2017ರಲ್ಲಿ ಅವರಿಗೆ ಪ್ರತಿಷ್ಠಿತ ಅರ್ಜುನ ಗೌರವ ಒಲಿದಿತ್ತು.

ಮೊಣಕಾಲಿನ ಗಾಯದಿಂದಾಗಿ ಹನ್ನೊಂದು ತಿಂಗಳು ಮೈದಾನದಿಂದ ದೂರ ಉಳಿದರೂ ಎದೆಗುಂದದ ಎಸ್‌.ವಿ.ಸುನಿಲ್‌,  ಫೀನಿಕ್ಸ್‌ನಂತೆ ಪುಟಿದೆದ್ದು ಹಾಕಿ ಅಂಗಳದಲ್ಲಿ ಹೊಳೆಯುತ್ತಿದ್ದಾರೆ.

ಭಾರತ ತಂಡದಲ್ಲಿರುವ ಏಕೈಕ ಕನ್ನಡಿಗ ಎಂಬ ಹಿರಿಮೆ ಹೊಂದಿರುವ ಅವರು ಒಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌, ಕಾಮನ್‌ವೆಲ್ತ್‌ ಕ್ರೀಡಾಕೂಟ, ಏಷ್ಯಾಕಪ್‌, ಚಾಂಪಿಯನ್ಸ್‌ ಟ್ರೋಫಿ ಹೀಗೆ ಅನೇಕ ಟೂರ್ನಿಗಳಲ್ಲಿ ಆಡಿ ಸೈ ಎನಿಸಿಕೊಂಡಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ (ಸಾಯ್‌) ‘ಬಂಧಿ’ಯಾಗಿರುವ 30ರ ಹರೆಯದ ಸುನಿಲ್‌ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

ಒಲಿಂಪಿಕ್ಸ್‌ ಮುಂದೂಡಿರುವ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಗ್ಗೆ ನೀವೇನು ಹೇಳುತ್ತೀರಿ?

ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಸಲುವಾಗಿ ವಿಶ್ವದ ವಿವಿಧ ದೇಶಗಳಿಂದ ಸಾವಿರಾರು ಕ್ರೀಡಾಪಟುಗಳು ಬರುತ್ತಾರೆ. ಎಲ್ಲರೂ ಕ್ರೀಡಾಗ್ರಾಮದಲ್ಲೇ ವಾಸ್ತವ್ಯ ಹೂಡುತ್ತಾರೆ.

ಒಟ್ಟಿಗೆ ಊಟಕ್ಕೆ ಹೋಗುತ್ತಾರೆ. ಜೊತೆಯಲ್ಲೇ ಅಭ್ಯಾಸ ಮಾಡಬೇಕಾಗುತ್ತದೆ. ಕೂಟ ಆಯೋಜಿಸಿದ್ದರೆ ಕೊರೊನಾ ಸೋಂಕು ಹರಡಲು ನಾವೇ ದಾರಿಮಾಡಿಕೊಟ್ಟಂತೆ ಆಗುತ್ತಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿಯು (ಐಒಸಿ) ಸರಿಯಾದ ತೀರ್ಮಾನವನ್ನೇ ಕೈಗೊಂಡಿದೆ. ಇದನ್ನು ಸ್ವಾಗತಿಸುತ್ತೇನೆ.

ಐಒಸಿಯ ಈ ತೀರ್ಮಾನದಿಂದ ಭಾರತ ತಂಡಕ್ಕೆ ಏನಾದರು ಲಾಭವಾಗಲಿದೆಯೇ?

ಒಲಿಂ‍ಪಿಕ್ಸ್‌ ಆರಂಭಕ್ಕೆ ಇನ್ನೂ 15 ತಿಂಗಳು ಇದೆ. ಸಿದ್ಧತೆಗೆ ಸುದೀರ್ಘ ಸಮಯ ಸಿಕ್ಕಂತಾಗಿದೆ. ಈ ಅವಧಿಯಲ್ಲಿ ಎದುರಾಳಿ ತಂಡಗಳ ಬಲ, ದೌರ್ಬಲ್ಯಗಳನ್ನು ಇನ್ನಷ್ಟು ಸೂಕ್ಷ್ಮವಾಗಿ ಅವಲೋಕಿಸಿ ಯೋಜನೆಗಳನ್ನು ರೂಪಿಸಬಹುದು.

ಎಫ್‌ಐಎಚ್‌ ಪ್ರೊ ಲೀಗ್‌ ಟೂರ್ನಿಯನ್ನು ಇನ್ನೊಂದು ವರ್ಷ ವಿಸ್ತರಿಸಲಾಗಿದೆ. ಈ ಕುರಿತು ಹೇಳಿ?

ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಈಗಾಗಲೇ ಕೆಲ ಪಂದ್ಯಗಳನ್ನು ಮುಂದೂಡಲಾಗಿದೆ. ಇದರಿಂದ ಟೂರ್ನಿಯ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಬಾರದು ಎಂಬ ಸದುದ್ದೇಶದಿಂದ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ (ಎಫ್‌ಐಎಚ್‌) ಈ ತೀರ್ಮಾನ ಕೈಗೊಂಡಿದೆ. ಇದರಿಂದ ಎಲ್ಲಾ ತಂಡಗಳಿಗೂ ಅನುಕೂಲವಾಗಲಿದೆ. 

ಭಾರತ ತಂಡವು ವಿಶ್ವ ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಈ ಸಾಧನೆಯ ಬಗ್ಗೆ ಹೇಳಿ?

ಇದೊಂದು ಚಾರಿತ್ರಿಕ ಸಾಧನೆ. ನಾನು ಭಾರತದ ಪರ ಆಡಲು ಶುರುಮಾಡಿದಾಗ ತಂಡವು 13ನೇ ಸ್ಥಾನದಲ್ಲಿತ್ತು. 13 ವರ್ಷಗಳ ಹಾದಿಯಲ್ಲಿ ನಾವು ಕಠಿಣ ಸವಾಲುಗಳನ್ನು ಮೆಟ್ಟಿನಿಂತಿದ್ದೇವೆ. ನಮ್ಮೆಲ್ಲರ ಪರಿಶ್ರಮಕ್ಕೆ ಈಗ ಪ್ರತಿಫಲ ಸಿಕ್ಕಿದೆ. ಈ ಖುಷಿಯಲ್ಲಿ ಮೈಮರೆಯದೇ ಅಗ್ರಸ್ಥಾನಕ್ಕೇರುವತ್ತ ಚಿತ್ತ ಹರಿಸುತ್ತೇವೆ.


ಭಾರತ ತಂಡದ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌ ಜೊತೆ ಸುನಿಲ್‌ (ಬಲ)– ಪ್ರಜಾವಾಣಿ ಚಿತ್ರ

ಹಾಕಿ ಪ್ರೊ ಲೀಗ್‌ನ ಪಂದ್ಯದಲ್ಲಿ ಭಾರತವು ವಿಶ್ವ ಚಾಂಪಿಯನ್‌ ಬೆಲ್ಜಿಯಂ ತಂಡಕ್ಕೆ ಆಘಾತ ನೀಡಿತ್ತು. ಇತರ ಪಂದ್ಯಗಳಲ್ಲೂ ಪರಿಣಾಮಕಾರಿಯಾಗಿ ಆಡಿತ್ತು. ತಂಡದ ಈ ಯಶಸ್ಸಿನ ಹಿಂದಿನ ಗುಟ್ಟೇನು?

ನಾವು ಪ್ರತಿ ಪಂದ್ಯದಲ್ಲೂ ಒಂದು ತಂಡವಾಗಿ ಹೋರಾಡುತ್ತೇವೆ. ಹದಿನೆಂಟು ಮಂದಿಯೂ ಒಂದೆಡೆ ಕುಳಿತು ಎದುರಾಳಿ ತಂಡಗಳು ಈ ಹಿಂದೆ ಆಡಿರುವ ಪಂದ್ಯಗಳ ವಿಡಿಯೊ ತುಣುಕುಗಳನ್ನು ವೀಕ್ಷಿಸುತ್ತೇವೆ. ಏನಾದರೂ ಸಂಶಯಗಳಿದ್ದರೆ ಕೋಚ್‌ ಬಳಿ ಕೇಳಿ ಪರಿಹಾರ ಕಂಡುಕೊಳ್ಳುತ್ತೇವೆ. ರಾಷ್ಟ್ರೀಯ ಶಿಬಿರಗಳ ವೇಳೆ ತಂಡದ ಸಾಮರ್ಥ್ಯ ಹೆಚ್ಚಿಸಲು ಅನುವಾಗುವಂತಹ ಚಟುವಟಿಕೆಗಳಿಗೆ ಒತ್ತು ನೀಡುತ್ತೇವೆ. ಈ ಎಲ್ಲಾ ಕಾರಣಗಳಿಂದಾಗಿ ತಂಡವು ಯಶಸ್ಸಿನ ಪಥದಲ್ಲಿ ಸಾಗುತ್ತಿದೆ.

ಕೊರೊನಾ ವೈರಾಣುವಿನ ಉಪಟಳವನ್ನು ಹತ್ತಿಕ್ಕುವ ಉದ್ದೇಶದಿಂದ ಸರ್ಕಾರಗಳು ಲಾಕ್‌ಡೌನ್‌ ಜಾರಿಗೊಳಿಸಿವೆ. ಲಾಕ್‌ಡೌನ್‌ನಿಂದ ಆಟಗಾರರಿಗೆ ಏನಾದರೂ ಅನುಕೂಲವಾಗಿದೆಯೇ?

ಹಿಂದೆಂದಿಗಿಂತಲೂ ಹೆಚ್ಚು ಸಮಯ ಸಾಯ್‌ ಕೇಂದ್ರದಲ್ಲಿದ್ದೇವೆ. ಪರಸ್ಪರರನ್ನು ಅರಿತುಕೊಳ್ಳಲು ಉತ್ತಮ ಅವಕಾಶ ಕೂಡಿಬಂದಿದೆ. ಪಂದ್ಯದ ವೇಳೆ ಹೊಂದಾಣಿಕೆಯಿಂದ ಹೋರಾಡಲು ಇದು ನೆರವಾಗಬಹುದು.

ನೀವೀಗ ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿ ಇದ್ದೀರಿ. ಅಲ್ಲಿ ನಿತ್ಯ ಏನೆಲ್ಲಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತೀರಿ?

ಕೊರೊನಾ ಬಿಕ್ಕಟ್ಟಿನ ಕಾರಣ ಹಾಕಿ ಚಟುವಟಿಕೆ ಸಂಪೂರ್ಣವಾಗಿ ಸ್ತಬ್ಧವಾಗಿದೆ. ಹೀಗಾಗಿ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಒತ್ತು ನೀಡಿದ್ದೇವೆ. ದಕ್ಷಿಣ ಆಫ್ರಿಕಾದ ಟ್ರೇನರ್‌ ನಮ್ಮ ಜೊತೆಗಿದ್ದಾರೆ. ಅವರ ನಿರ್ದೇಶನದಂತೆ ನಮಗೆ ಅನುಕೂಲವಾದ ಸಮಯದಲ್ಲಿ ಪ್ಲೇಟ್ಸ್‌ ಹಾಗೂ ಬಾರ್ಸ್‌ಗಳ ಸಹಾಯದಿಂದ ಹೊರಾಂಗಣದಲ್ಲಿ ಇಬ್ಬಿಬ್ಬರು ಕಸರತ್ತು ನಡೆಸುತ್ತೇವೆ.

ಅಂತರ ಕಾಯ್ದುಕೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ಮಾಡಲಾಗಿದೆ. ಅದನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದೇವೆ.

ಮಧ್ಯಾಹ್ನದ ಊಟದ ಬಳಿಕ ಒಂದಷ್ಟು ಸಮಯ ವಿಶ್ರಾಂತಿ ಪಡೆಯುತ್ತೇವೆ. ಸಾಯ್‌ ಕೇಂದ್ರದಲ್ಲಿ ಸಾಕಷ್ಟು ಮಾವಿನ ಮರಗಳಿವೆ. ಸಂಜೆಯ ಸಮಯದಲ್ಲಿ ನಾನು ಹಾಗೂ ಗೋಲ್‌ಕೀಪರ್‌ ಶ್ರೀಜೇಶ್‌, ಅಲ್ಲಿಗೆ ಹೋಗಿ ಮಾವಿನ ಕಾಯಿಗಳನ್ನು ಕೀಳುತ್ತೇವೆ. ಆಗೆಲ್ಲ ಬಾಲ್ಯದ ದಿನಗಳು ನೆನಪಿಗೆ ಬರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು