ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರದಿಂದ ಹಿಮಾಲಯದೆತ್ತರಕ್ಕೆ...

Last Updated 21 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಕರ್ನಾಟಕದ ಆರ್‌.ನಟರಾಜ್‌ ಮೋಟರ್‌ ಸ್ಪೋರ್ಟ್ಸ್‌ ಲೋಕದಲ್ಲಿ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸಿದ್ದಾರೆ. ರಾಷ್ಟ್ರೀಯ, ಸೂಪರ್‌ ಕ್ರಾಸ್‌, ಮೋಟರ್‌ ಕ್ರಾಸ್‌ ಹೀಗೆ ಹಲವು ಚಾಂಪಿಯನ್‌ಷಿಪ್‌ಗಳಲ್ಲಿ ಪ್ರಶಸ್ತಿ ಜಯಿಸಿರುವ ಕನಕಪುರದ ಬೈಕ್‌ ಸಾಹಸಿ, ಡೆಸರ್ಟ್‌ಸ್ಟ್ರಾಮ್‌, ದಕ್ಷಿಣ್‌ ಡೇರ್‌ ರ‍್ಯಾಲಿಗಳಲ್ಲೂ ಟ್ರೋಫಿ ಗೆದ್ದು ಮೈಲುಗಲ್ಲು ಸ್ಥಾಪಿಸಿದ್ದಾರೆ. ಇತ್ತೀಚೆಗೆ ನಡೆದ ರೇಡ್‌ ಡಿ ಹಿಮಾಲಯ ರ‍್ಯಾಲಿಯ ಮೋಟೊ ಎಕ್ಸ್‌ಟ್ರೀಮ್‌ ವಿಭಾಗದಲ್ಲಿ ಚಾಂಪಿಯನ್‌ ಆಗಿರುವ ನಟರಾಜ್‌ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

* ಈ ಬಾರಿಯ ರೇಡ್‌ ಡಿ ಹಿಮಾಲಯ ರ‍್ಯಾಲಿಯಲ್ಲಿ ಪ್ರಶಸ್ತಿ ಗೆದ್ದಿದ್ದೀರಿ. ಈ ಬಗ್ಗೆ ಹೇಳಿ?
ಈ ರ‍್ಯಾಲಿಯಲ್ಲಿ ಏಳನೇ ಬಾರಿ ಭಾಗವಹಿಸಿದ್ದೆ. ಈ ಸಲ ಹಿಂದೆಂದಿಗಿಂತಲೂ ಅತಿ ಹೆಚ್ಚು ಚಳಿಯಿತ್ತು. ಮೈಕೊರೆಯುವ ಚಳಿಯಲ್ಲಿ ಬೈಕ್‌ ಚಲಾಯಿಸುವುದು ಸವಾಲೆನಿಸಿತ್ತು. ಹೀಗಿದ್ದರೂ ವಿಶ್ವಾಸ ಕಳೆದುಕೊಳ್ಳಲಿಲ್ಲ. ಎಲ್ಲಾ ಹಂತಗಳಲ್ಲೂ ಛಲದಿಂದ ಬೈಕ್‌ ಓಡಿಸಿ ಪ್ರಶಸ್ತಿ ಜಯಿಸಿದ್ದೇನೆ. ಈ ಸಾಧನೆ ಹೆಮ್ಮೆಯಿಂದ ಬೀಗುವಂತೆ ಮಾಡಿದೆ.

* ನೀವು ಮೋಟರ್‌ಸ್ಪೋರ್ಟ್ಸ್‌ಗೆ ಅಡಿ ಇಟ್ಟಿದ್ದು ಹೇಗೆ?
2007ರಲ್ಲಿ ರೇಸ್‌ವೊಂದನ್ನು ನೋಡಲು ಹೋಗಿದ್ದೆ. ಅದರಲ್ಲಿ ನಮ್ಮ ಊರಿನ ಹುಡುಗನೂ ಭಾಗವಹಿಸಿದ್ದ. ಪರಿಣತ ರ‍್ಯಾಲಿಪಟುಗಳಿಂದ ಮೂಡಿಬಂದ ಸಾಮರ್ಥ್ಯ ಕಂಡು ಅವಾಕ್ಕಾಗಿದ್ದೆ. ಅವರಂತೆ ನಾನೂ ಬೈಕ್‌ ಓಡಿಸಬೇಕೆಂಬ ಆಸೆ ಆಗಲೇ ಚಿಗುರೊಡೆಯಿತು. ಒಂದೇ ಒಂದು ರೇಸ್‌ನಲ್ಲಿ ಭಾಗವಹಿಸಿ ನಂತರ ಬೈಕ್‌ ಸಾಹಸವನ್ನು ನಿಲ್ಲಿಸಿಬಿಡೋಣ ಅಂದುಕೊಂಡಿದ್ದೆ. ಆದರೆ ಆಗಿದ್ದೇ ಬೇರೆ. ಪ್ರಶಸ್ತಿಗಳನ್ನು ಗೆಲ್ಲುತ್ತಾ ಹೋದಂತೆ ಜನ ನನ್ನನ್ನು ಗುರುತಿಸಲು ಶುರು ಮಾಡಿದರು. ಹೀಗಾಗಿ ಆಸಕ್ತಿ ಇಮ್ಮಡಿಸಿತು. ಟಿವಿಎಸ್‌ ಫ್ಯಾಕ್ಟರಿಯ ನೆರವು ಸಿಕ್ಕ ಮೇಲೆ ಇದನ್ನು ವೃತ್ತಿಪರವಾಗಿ ಸ್ವೀಕರಿಸಲು ನಿರ್ಧರಿಸಿದೆ. ಅದರಲ್ಲೇ ಎತ್ತರದ ಸಾಧನೆ ಮಾಡುವ ಪಣ ತೊಟ್ಟೆ.

* ನಿಮ್ಮ ನಿರ್ಧಾರವನ್ನು ಪೋಷಕರು ವಿರೋಧಿಸಲಿಲ್ಲವೇ?
ಆರಂಭದಲ್ಲಿ ಮನೆಯವರ ಕಣ್ತಪ್ಪಿಸಿ ರ‍್ಯಾಲಿಗಳಲ್ಲಿ ಭಾಗವಹಿಸುತ್ತಿದ್ದೆ. ಕಂಪ್ಯೂಟರ್‌ ತರಗತಿಗೆ ಸೇರುತ್ತೇನೆ ಎಂದು ಹಣ ಪಡೆದು ಅದರಿಂದ ಬೈಕ್‌ ಖರೀದಿಸಿದ್ದೆ. ಒಮ್ಮೆ ಅಭ್ಯಾಸದ ವೇಳೆ ಬಿದ್ದು ಮುಖದ ಮೇಲೆಲ್ಲಾ ಗಾಯವಾಗಿತ್ತು. ಮನೆಯವರಿಗೆ ವಿಷಯ ಗೊತ್ತಾದಾಗ ಅಪ್ಪ ಬೈದರು. ಹೀಗಿದ್ದರೂ ಹಟ ಬಿಡದೆ ಊರಿನ ಸಮೀಪದಲ್ಲಿ ನಡೆದ ಚಾಂಪಿಯನ್‌ಷಿಪ್‌ ವೊಂದರಲ್ಲಿ ಪಾಲ್ಗೊಂಡು ಪ್ರಶಸ್ತಿಯನ್ನೂ ಗೆದ್ದೆ. ಆದರೆ ಟ್ರೋಫಿಯನ್ನು ಮನೆಗೆ ತೆಗೆದುಕೊಂಡು ಹೋಗುವ ಧೈರ್ಯ ಇಲ್ಲದೆ ಅದನ್ನು ಸ್ನೇಹಿತನ ಮನೆಯಲ್ಲಿ ಇಟ್ಟಿದ್ದೆ. ಚಾಂಪಿಯನ್‌ ಆದ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ನನ್ನೊಳಗಿನ ಆಸಕ್ತಿ ಕಂಡು ಪೋಷಕರು ಮನಸ್ಸು ಬದಲಿಸಿದರು. ಅಂದಿನಿಂದ ಇಂದಿನವರೆಗೂ ನನ್ನೆಲ್ಲಾ ಸಾಧನೆಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

* ಟಿವಿಎಸ್‌ ಫ್ಯಾಕ್ಟರಿಯ ಬೆಂಬಲದ ಬಗ್ಗೆ ಹೇಳಿ.
2007ರಲ್ಲಿ ಟಿವಿಎಸ್‌ ತಂಡ ಸೇರಿದೆ. ದೇಶದ ಯಾವುದೇ ಭಾಗದಲ್ಲಿ ರ‍್ಯಾಲಿ ನಡೆದರೂ ಅದರಲ್ಲಿ ಭಾಗವಹಿಸುತ್ತೇನೆ. ಇದಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಅದನ್ನೆಲ್ಲಾ ಕಂಪನಿಯೇ ಭರಿಸುತ್ತದೆ. ಬೈಕ್‌ನ ಜೊತೆಗೆ ಅಭ್ಯಾಸ ನಡೆಸಲು ಟ್ರ್ಯಾಕ್‌ ವ್ಯವಸ್ಥೆಯನ್ನೂ ಮಾಡಿಕೊಟ್ಟಿದೆ.

* ನಿಮ್ಮ ಅಭ್ಯಾಸದ ಬಗ್ಗೆ ಹೇಳಿ?
ವಾರದಲ್ಲಿ ಮೂರು ದಿನ ಹೊಸೂರಿನಲ್ಲಿರುವ ಟಿವಿಎಸ್‌ ಫ್ಯಾಕ್ಟರಿಯ ಟ್ರ್ಯಾಕ್‌ನಲ್ಲಿ ಅಭ್ಯಾಸ ನಡೆಸುತ್ತೇನೆ. ರ‍್ಯಾಲಿಪಟುಗಳಿಗೆ ಫಿಟ್‌ನೆಸ್‌ ಕೂಡಾ ಬಹಳ ಅಗತ್ಯ. ಹೀಗಾಗಿ ಉಳಿದ ಮೂರು ದಿನವನ್ನು ಫಿಟ್‌ನೆಸ್‌ ತರಬೇತಿಗಾಗಿ ಮೀಸಲಿಡುತ್ತೇನೆ.

* ನಿಮ್ಮ ಮುಂದಿರುವ ಗುರಿ ಏನು?
ಡಕಾರ್‌ ರ‍್ಯಾಲಿ ವಿಶ್ವ ಶ್ರೇಷ್ಠವಾದುದು. ಅದರಲ್ಲಿ ಭಾಗವಹಿಸಬೇಕೆಂಬ ಕನಸಿದೆ. ಅದಕ್ಕಾಗಿ ಕಠಿಣ ತಾಲೀಮು ನಡೆಸುತ್ತಿದ್ದೇನೆ. ಹಿಂದೆ ಸ್ಪೇನ್‌ನಲ್ಲಿ ನಡೆದಿದ್ದ ಸ್ಪೇನ್‌ ಬಾಹಾ ರ‍್ಯಾಲಿಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ದುರದೃಷ್ಟವಶಾತ್‌ ಆ ರ‍್ಯಾಲಿಗೂ ಮುನ್ನ ನಡೆದ ಇನ್ನೊಂದು ರ‍್ಯಾಲಿಯ ವೇಳೆ ಕೈಗೆ ಪೆಟ್ಟಾಗಿತ್ತು. ಹೀಗಾಗಿ ಅವಕಾಶ ಕೈತಪ್ಪಿತ್ತು.

ನನಗೆ ಇಂಗ್ಲಿಷ್‌ ನಿರರ್ಗಳವಾಗಿ ಮಾತನಾಡಲು ಬರುವುದಿಲ್ಲ. ಆಂಗ್ಲ ಭಾಷೆಯಲ್ಲಿ ಸಂವಹನ ನಡೆಸಲು ಹಿಂಜರಿಯುತ್ತೇನೆ. ಈ ಕಾರಣದಿಂದಾಗಿಯೇ ಅಂತರರಾಷ್ಟ್ರೀಯ ರ‍್ಯಾಲಿಗಳಲ್ಲಿ ಭಾಗವಹಿಸಲು ಅವಕಾಶ ಸಿಗುತ್ತಿಲ್ಲ. ಹಾಗಂತ ಎದೆಗುಂದಿಲ್ಲ. ಮುಂದೊಂದು ದಿನ ಖಂಡಿತವಾಗಿ ಅವಕಾಶ ಸಿಗುತ್ತದೆ ಎಂಬ ಅದಮ್ಯ ವಿಶ್ವಾಸ ಇದೆ. ಸಿಕ್ಕ ಅವಕಾಶದಲ್ಲಿ ಸಾಮರ್ಥ್ಯ ಸಾಬೀತುಪಡಿಸುತ್ತೇನೆ.

* ನೀವು ಬಳಸುವ ಬೈಕ್‌ನ ವಿಶೇಷತೆ ಏನು?
ಹಿಮಾಲಯ ರ‍್ಯಾಲಿಯಲ್ಲಿ ಅಪಾಚೆ ಆರ್‌ಟಿಆರ್‌ 450 ಗ್ರೂಪ್‌ ಎ ಕ್ಲಾಸ್‌ ಬೈಕ್‌ ಬಳಸಿದ್ದೆ. ಅದಕ್ಕೆ ಆರು ಗೇರ್‌ಗಳಿರುತ್ತವೆ. ಅದು ತುಂಬಾ ಶಕ್ತಿಶಾಲಿ. ₹11 ಲಕ್ಷದ ಈ ಬೈಕ್‌ ಅನ್ನು ರ‍್ಯಾಲಿಗೆಂದೇ ತಯಾರಿಸಲಾಗಿರುತ್ತದೆ. ಭಾರತದಲ್ಲಿ ನಡೆಯುವ ಸೂಪರ್‌ ಕ್ರಾಸ್‌ ರೇಸ್‌ಗಳ ವೇಳೆ ಅಪಾಚೆ ಆರ್‌ಟಿಆರ್‌ 200 ಬೈಕ್‌ ಬಳಸುತ್ತೇನೆ.

* ಉಡುಪಿಯ ಅರವಿಂದ್‌ ಸೇರಿದಂತೆ ವಿದೇಶದ ಅನೇಕ ರೈಡರ್‌ಗಳು ನಿಮ್ಮ ತಂಡದಲ್ಲಿದ್ದಾರೆ. ಅವರು ಏನಾದರೂ ಸಲಹೆ ನೀಡುತ್ತಾರಾ?
ನಾನು ಮತ್ತು ಅರವಿಂದ್ ತುಂಬಾ ಒಳ್ಳೆಯ ಸ್ನೇಹಿತರು. ಆರಂಭದಲ್ಲಿ ಒಟ್ಟಿಗೆ ಅಭ್ಯಾಸ ನಡೆಸುತ್ತಿದ್ದೆವು. ಆಗೆಲ್ಲಾ ಒಬ್ಬರ ‌ತಪ್ಪನ್ನು ಮತ್ತೊಬ್ಬರು ತಿದ್ದುವ ಕೆಲಸ ಮಾಡುತ್ತಿದ್ದೆವು. ಈಗಲೂ ಭೇಟಿಯಾದಾಗಲೆಲ್ಲಾ ಸಲಹೆ ನೀಡುತ್ತಾರೆ. ಅವರ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಾರೆ.

* ರ‍್ಯಾಲಿಪಟುಗಳಿಗೆ ನೇವಿಗೇಷನ್ (ಮಾರ್ಗಸೂಚಿ) ತುಂಬಾ ಅಗತ್ಯ. ಈ ವಿಷಯದಲ್ಲಿ ಏನಾದರೂ ವಿಶೇಷ ತರಬೇತಿ ಪಡೆದಿದ್ದೀರಾ?
ಡಕಾರ್‌ ಸೇರಿದಂತೆ ವಿದೇಶಗಳಲ್ಲಿ ನಡೆಯುವ ರ‍್ಯಾಲಿಗಳಲ್ಲಿ ವೇಗಕ್ಕಿಂತಲೂ ಮಾರ್ಗಸೂಚಿಯ ಮೇಲೆ ಹೆಚ್ಚಿನ ಗಮನ ಇಡಬೇಕಾಗುತ್ತದೆ. ಇದರಲ್ಲಿ ಪರಿಣತಿ ಸಾಧಿಸಲು ಅನುಕೂಲವಾಗಲಿ ಎಂಬ ಕಾರಣದಿಂದ ಕಂಪನಿ ವತಿಯಿಂದ ಪ್ರತಿ ವರ್ಷ ಸ್ಪೇನ್‌ನಲ್ಲಿ ವಿಶೇಷ ತರಬೇತಿ ಕೊಡಿಸುತ್ತಾರೆ. ನಾನು ಎರಡು ಬಾರಿ ಭಾಗವಹಿಸಿದ್ದೇನೆ.

* ರೇಡ್‌ ಡಿ ಹಿಮಾಲಯ, ವಿಶ್ವದ ಅತ್ಯಂತ ಕಠಿಣ ಮತ್ತು ಅಪಾಯಕಾರಿ ರ‍್ಯಾಲಿ. ಅಲ್ಲಿ ಸ್ಪರ್ಧೆ ಹೇಗಿರುತ್ತೆ?
ಹಿಂದೆಲ್ಲಾ ಆರು ದಿನ ರ‍್ಯಾಲಿ ನಡೆಯುತ್ತಿತ್ತು. ಈ ಬಾರಿ ಸ್ಪರ್ಧೆ ನಾಲ್ಕು ದಿನಗಳಿಗೆ ಸೀಮಿತವಾಗಿತ್ತು. ಸೂರ್ಯ ಉದಯಿಸುವ ಮುನ್ನವೇ ಶುರುವಾಗುವ ರ‍್ಯಾಲಿ, ರಾತ್ರಿ 10 ಇಲ್ಲವೇ 11 ಗಂಟೆಗೆ ಮುಗಿಯುತ್ತದೆ. ಹೀಗಾಗಿ ಕೆಲವೊಮ್ಮೆ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟ ಸೇವಿಸಲೂ ಸಮಯ ಸಿಗುವುದಿಲ್ಲ. ರಾತ್ರಿ ಊಟ ಮುಗಿಸಿದ ಬಳಿಕ ಹೆಚ್ಚೆಂದರೆ ಎರಡು ಗಂಟೆ ಮಲಗಬಹುದು. ಬೆಳಿಗ್ಗೆ 3 ಗಂಟೆಗೆ ಎದ್ದು ಸ್ಪರ್ಧೆಗೆ ಅಣಿಯಾಗಬೇಕು. ಮುಂಜಾವಿನಲ್ಲಿ ರಸ್ತೆಯ ಮೇಲೆಲ್ಲಾ ಹಿಮದ ರಾಶಿ ಬಿದ್ದಿರುತ್ತದೆ. ಅದರ ಮೇಲೆ ಬೈಕ್‌ ಚಲಾಯಿಸುವುದು, ಗಿರಿ, ಕಂದರಗಳು, ಕಣಿವೆಗಳನ್ನು ದಾಟಿ ಗುರಿಯತ್ತ ಸಾಗುವುದು ಸವಾಲೇ ಸರಿ. ಸ್ಪರ್ಧೆಯ ವೇಳೆ ಏಕಾಗ್ರತೆ ಬಹಳ ಅಗತ್ಯ. ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗಿ ಅತ್ತಿತ್ತ ಕಣ್ಣಾಹಿಸಿದರೆ ಅಪಾಯ ಕಟ್ಟಿಟ್ಟಬುತ್ತಿ. ನೆಲಮಟ್ಟದಿಂದ 18,000 ಅಡಿಗಳಷ್ಟು ಎತ್ತರದಲ್ಲಿ ನಾವಿರುತ್ತೇವೆ. ಹೀಗಾಗಿ ನಮ್ಮ ಗಮನ ಕೇವಲ ರಸ್ತೆಯ ಮೇಲಿರಬೇಕು. ಆಯಾ ತಪ್ಪಿದರೆ ಪ್ರಪಾತಕ್ಕೆ ಬೀಳುವುದು ನಿಶ್ಚಿತ.

ಕರ್ನಾಟಕದ ಆರ್‌. ನಟರಾಜ್‌ ಅವರ ಸಾಹಸದ ವೈಖರಿ
ಕರ್ನಾಟಕದ ಆರ್‌. ನಟರಾಜ್‌ ಅವರ ಸಾಹಸದ ವೈಖರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT