ಗುರುವಾರ , ಆಗಸ್ಟ್ 18, 2022
25 °C

ಕಾಮನ್‌ವೆಲ್ತ್‌ ಕೂಟದ ಈಜು ಸ್ಪರ್ಧೆಗೆ ಭಾರತ ತಂಡ ಪ್ರಕಟ: ಶ್ರೀಹರಿ, ಸಜನ್‌ ಭರವಸೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕರ್ನಾಟಕದ ಶ್ರೀಹರಿ ನಟರಾಜ್‌ ಮತ್ತು ಕೇರಳದ ಸಜನ್‌ ಪ್ರಕಾಶ್‌ ಅವರು ಕಾಮನ್‌ವೆಲ್ತ್‌ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.

ಭಾರತ ಈಜು ಫೆಡರೇಷನ್‌ (ಎಸ್‌ಎಫ್‌ಐ) ಕಾಮನ್‌ವೆಲ್ತ್‌ ಕೂಟಕ್ಕೆ ನಾಲ್ವರು ಸದಸ್ಯರ ಭಾರತ ತಂಡವನ್ನು ಶನಿವಾರ ಪ್ರಕಟಿಸಿತು. ಸಜನ್ ಮತ್ತು ಶ್ರೀಹರಿ ಜತೆ ದೆಹಲಿಯ ಭರವಸೆಯ ಈಜು ಪಟು ಕುಶಾಗ್ರ ರಾವತ್ ಹಾಗೂ ಮಧ್ಯಪ್ರದೇಶದ ಅದ್ವೈತ್ ಪಾಗೆ ಅವರೂ ಸ್ಥಾನ ಪಡೆದುಕೊಂಡಿದ್ದಾರೆ.

ಕಾಮನ್‌ವೆಲ್ತ್‌ ಕೂಟಕ್ಕೆ ನಾಲ್ವರು ಈಜು ಸ್ಪರ್ಧಿಗಳನ್ನು ಕಳುಹಿಸುವ ಅವಕಾಶವನ್ನು ಎಸ್‌ಎಫ್‌ಐ ಪಡೆದುಕೊಂಡಿತ್ತು.

'ಕಳೆದ ಒಂದು ವರ್ಷದ ಅವಧಿಯಲ್ಲಿ ಸ್ಪರ್ಧಿಗಳ ಪ್ರದರ್ಶನವನ್ನು ನೋಡಿಕೊಂಡು ತಂಡವನ್ನು ಆಯ್ಕೆ ಮಾಡಲಾಗಿದೆ. ಎಸ್‌ಎಫ್‌ಐ ನಿಗದಿಪಡಿಸಿದ್ದ ಸಮಯವನ್ನು ಕಂಡುಕೊಳ್ಳುವಲ್ಲಿ ಈ ಸ್ಪರ್ಧಿಗಳು ಯಶಸ್ವಿಯಾಗಿದ್ದಾರೆ’ ಎಂದು ಫೆಡರೇಷನ್‌ನ ಕಾರ್ಯದರ್ಶಿ ಮೋನಲ್‌ ಚೋಕ್ಸಿ ಹೇಳಿದ್ದಾರೆ.

ಶ್ರೀಹರಿ 50 ಮೀ., 100 ಮೀ. ಮತ್ತು 200 ಮೀ. ಬ್ಯಾಕ್‌ಸ್ಟ್ರೋಕ್‌ ವಿಭಾಗಗಳಲ್ಲಿ ಕಣಕ್ಕಿಳಿಯುವರು. ಟೋಕಿಯೊ ಒಲಿಂಪಿಕ್ಸ್‌ ಬಳಿಕ ಬೆಂಗಳೂರಿನ ಈಜು ಪಟು ಪಾಲ್ಗೊಳ್ಳುತ್ತಿರುವ ಪ್ರಮುಖ ಕೂಟ ಇದಾಗಿದೆ.

ಸಜನ್‌ 50 ಮೀ., 100 ಮೀ. ಮತ್ತು 200 ಮೀ. ಬಟರ್‌ಫ್ಲೈ ವಿಭಾಗಗಳಲ್ಲಿ ಸ್ಪರ್ಧಿಸುವರು. ತಮ್ಮ ನೆಚ್ಚಿನ ಸ್ಪರ್ಧೆ 200 ಮೀ.ನಲ್ಲಿ ಅವರು ಭಾರತಕ್ಕೆ ಮೊದಲ ಪದಕ ತಂದುಕೊಡುವ ವಿಶ್ವಾಸದಲ್ಲಿದ್ದಾರೆ.

ಕುಶಾಗ್ರ ಮತ್ತು ಅದ್ವೈತ್‌ 1,500 ಮೀ. ಫ್ರೀಸ್ಟೈಲ್‌ನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದುಕೊಂಡಿದ್ದಾರೆ. ಕುಶಾಗ್ರ  200 ಮೀ. ಹಾಗೂ 400 ಮೀ. ಫ್ರೀಸ್ಟೈಲ್‌ನಲ್ಲೂ ಪಾಲ್ಗೊಳ್ಳುವರು.

ಕಾಮನ್‌ವೆಲ್ತ್‌ ಕೂಟದ ಈಜು ಸ್ಪರ್ಧೆಯಲ್ಲಿ ಭಾರತ ಇದುವರೆಗೂ ಪದಕ ಜಯಿಸಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು