ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್ ವಿಶ್ವ ಟೂರ್ ಫೈನಲ್ಸ್: ಸಿಂಧು, ಶ್ರೀಕಾಂತ್‌ಗೆ ಆರಂಭಿಕ ಆಘಾತ

Last Updated 27 ಜನವರಿ 2021, 13:14 IST
ಅಕ್ಷರ ಗಾತ್ರ

ಬ್ಯಾಂಕಾಕ್‌: ಪ್ರಬಲ ಪೈಪೋಟಿ ಒಡ್ಡಿದರೂ ಸೋಲಿಗೆ ಶರಣಾದ ಭಾರತದ ಪಿ.ವಿ.ಸಿಂಧು ಮತ್ತು ಕಿದಂಬಿ ಶ್ರೀಕಾಂತ್ ಅವರು ಬಿಡಬ್ಲ್ಯುಎಫ್‌ ವಿಶ್ವ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲಿ ನಿರಾಸೆ ಅನುಭವಿಸಿದರು. ಮೊದಲ ದಿನವಾದ ಬುಧವಾರ ನಡೆದ ‘ಬಿ‘ ಗುಂಪಿನ ಪಂದ್ಯಗಳಲ್ಲಿ ಸಿಂಧು ತಾಯ್ವಾನ್‌ನ ತಾಯ್‌ ಜು ಯಿಂಗ್‌ಗೆ ಮತ್ತು ಶ್ರೀಕಾಂತ್‌ ಡೆನ್ಮಾರ್ಕ್‌ನ ಆ್ಯಂಟನಿ ಆ್ಯಂಟೊನ್ಸೆನ್‌ಗೆ ಮಣಿದರು.

ಕಳೆದ ವಾರ ನಡೆದ ಥಾಯ್ಲೆಂಡ್ ಓಪನ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ನೀರಸ ಆಟವಾಡಿ ಸೋತ ಸಿಂಧು ವಿಶ್ವ ರ‍್ಯಾಂಕಿಂಗ್‌ನಲ್ಲಿ ಒಂದನೇ ಸ್ಥಾನದಲ್ಲಿರುವ ಯಿಂಗ್‌ ಎದುರು ಬುಧವಾರ ಅಮೋಘ ಸಾಮರ್ಥ್ಯ ತೋರಿದರು. ಆದರೂ 21–19, 12–21, 17-21ರಲ್ಲಿ ಮಣಿದರು. ಮೊದಲ ಗೇಮ್‌ನಲ್ಲಿ ಇಬ್ಬರೂ ಜಿದ್ದಾಜಿದ್ದಿಯ ಕಾದಾಟ ನಡೆಸಿದರು. ಆರಂಭದಲ್ಲಿ 5–3ರಲ್ಲಿ ಮುನ್ನಡೆದ ಯಿಂಗ್ ನಂತರ ಮುನ್ನಡೆಯನ್ನು 11–8ಕ್ಕೇ ಹೆಚ್ಚಿಸಿಕೊಂಡರು. ವಿರಾಮದ ನಂತರ ಯಿಂಗ್‌ ಮುನ್ನಡೆ 14–10ಕ್ಕೇರಿತು. ಆದರೆ ಚೇತರಿಕೆಯ ಆಟವಾಡಿದ ಸಿಂಧು ಕ್ರಾಸ್ ಕೋರ್ಟ್‌ ಶಾಟ್ ಮತ್ತು ಬ್ಯಾಕ್‌ಹ್ಯಾಂಡ್ ರಿಟರ್ನ್‌ಗಳ ಮೂಲಕ 16–16ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ಎದುರಾಳಿ ಎರಡು ಪಾಯಿಂಟ್‌ಗಳನ್ನು ಕಲೆ ಹಾಕಿ ಮುನ್ನಡೆದಾಗ ಬಲಶಾಲಿ ಸ್ಮ್ಯಾಷ್‌ಗಳ ಮೂಲಕ ಸಿಂಧು 19–19ರ ಸಮಬಲ ಸಾಧಿಸಿದರು. ನಂತರ ಗೇಮ್‌ ಗೆದ್ದು ಸಂಭ್ರಮಿಸಿದರು.

ಎರಡನೇ ಗೇಮ್‌ನಲ್ಲಿ ಯಿಂಗ್ 6–0 ಮುನ್ನಡೆ ಗಳಿಸಿ ಸುಲಭವಾಗಿ ಪಂದ್ಯ ಗೆಲ್ಲುವ ಭರವಸೆ ಮೂಡಿಸಿದರು. ನಂತರ ಸಿಂಧು ಹಿನ್ನಡೆಯನ್ನು 3–7ಕ್ಕೆ ಇಳಿಸಿಕೊಂಡರು. ಆದರೆ ಯಿಂಗ್ ಮೋಹಕ ಡ್ರಾಪ್‌ಗಳು ಮತ್ತು ಪ್ರಬಲ ಸ್ಮ್ಯಾಷ್‌ಗಳ ಮೂಲಕ 9–4ರ ಮುನ್ನಡೆ ಸಾಧಿಸಿದರು. ನಂತರ ಅದು 11–4ಕ್ಕೆ ಏರಿತು. ಅವರ ಮುನ್ನಡೆ 19–9ಕ್ಕೆ ಏರಿದಾಗ ಸಿಂಧು ಬಳಿ ಉತ್ತರವೇ ಇರಲಿಲ್ಲ. ಕ್ರಾಸ್ ಕೊರ್ಟ್‌ ಹೊಡೆತದ ಮೂಲಕ ಗೇಮ್ ಪಾಯಿಂಟ್ ಗಳಿಸಿದ ಯಿಂಗ್ ತಿರುಗೇಟು ನೀಡಿದರು.

ಮೂರನೇ ಗೇಮ್‌ನಲ್ಲೂ ಯಿಂಗ್ ಆಧಿಪತ್ಯ ಸ್ಥಾಪಿಸಿ 6–3ರ ಮುನ್ನಡೆ ಗಳಿಸಿದರು. ನಂತರ ಸಿಂಧು ಚೇತರಿಸಿಕೊಂಡರು. ಎದುರಾಳಿ ಎಸಗಿದ ಸ್ವಯಂ ತಪ್ಪುಗಳಿಂದಾಗಿ ಸಿಂಧು 6–6ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ಆದರೆ ಎದೆಗುಂದದ ಎರಡನೇ ಶ್ರೇಯಾಂಕಿತ ಆಟಗಾರ್ತಿ ಯಿಂಗ್ 11–9ರ ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದರು. ನಂತರ ಸಿಂಧು ಆಕ್ರಮಣಕಾರಿ ಆಟಕ್ಕೆ ಮುಂದಾಗಿ ಹಿನ್ನಡೆಯನ್ನು 13–15ಕ್ಕೆ ಇಳಿಸಿಕೊಂಡರು. ಆದರೆ ಅದೇ ಲಯವನ್ನು ಉಳಿಸಿಕೊಳ್ಳಲಾಗದೆ 17–13ರ ಹಿನ್ನಡೆ ಅನುಭವಿಸಿದರು. ಈ ಸಂದರ್ಭದಲ್ಲಿ ಪಂದ್ಯ ರೋಚಕವಾಯಿತು. ಸಿಂಧು ಹಿನ್ನಡೆಯನ್ನು 16–18 ಮತ್ತು 17–19ಕ್ಕೆ ಇಳಿಸಿದರು. ಆದರೆ ಎರಡು ಬಾರಿ ಷಟಲ್‌ ಅನ್ನು ನೆಟ್‌ಗೆ ಹಾಕಿ ಸೋಲಿಗೆ ಶರಣದಾದರು.

ತೀವ್ರ ಪೈ‍ಪೋಟಿ ಒಡ್ಡಿದ ಕಿದಂಬಿ ಶ್ರೀಕಾಂತ್‌

ಕಿದಂಬಿ ಶ್ರೀಕಾಂತ್‌ ಮತ್ತು ಆ್ಯಂಟೊನ್ಸೆನ್‌ ನಡುವಿನ ಹಣಾಹಣಿ ಪ್ರತಿ ಕ್ಷಣವೂ ರೋಚಕವಾಗಿತ್ತು. ತೀವ್ರ ಪೈಪೋಟಿ ಒಡ್ಡಿದರೂ ಶ್ರೀಕಾಂತ್ 21-15, 16-21, 19-21ರಲ್ಲಿ ಸೋಲುಂಡರು. ಆರಂಭದಲ್ಲಿ ಸ್ವಯಂ ತಪ್ಪುಗಳನ್ನು ಎಸಗಿದ ಡೆನ್ಮಾರ್ಕ್ ಆಟಗಾರನ ವಿರುದ್ಧ ಶ್ರೀಕಾಂತ್ 7–1ರ ಮುನ್ನಡೆಯಲ್ಲಿದ್ದರು. ನಂತರ 4–7ಕ್ಕೆ ಹಿನ್ನಡೆಯನ್ನು ತಗ್ಗಿಸಿದ ಆ್ಯಂಟೊನ್ಸೆನ್‌ 35 ಶಾಟ್‌ಗಳ ಸುದೀರ್ಘ ರ‍್ಯಾಲಿಯಲ್ಲಿ ಗೆಲುವು ಸಾಧಿಸುವ ಮೂಲಕ ತಿರುಗೇಟು ನೀಡಿದರು. ಹೀಗಾಗಿ ವಿರಾಮದ ವೇಳೆ ಹಿನ್ನಡೆ ಕೇವಲ ಮೂರು ಪಾಯಿಂಟ್‌ಗಳಿಗೆ ಇಳಿಯಿತು. ನಂತರ 12–12ರಲ್ಲಿ ಸಮಬಲ ಸಾಧಿಸಿದರು. ಆದರೂ ಛಲದಿಂದ ಆಡಿದ ಶ್ರೀಕಾಂತ್ 14–13, 16–13ರ ಮುನ್ನಡೆ ಸಾಧಿಸಿದರು. ಭರ್ಜರಿ ಸ್ಮ್ಯಾಷ್‌ಗಳ ಮೂಲಕ 19–13ರ ಮುನ್ನಡೆ ಗಳಿಸಿದ ನಂತರ ಗೇಮ್‌ ತಮ್ಮದಾಗಿಸಿಕೊಳ್ಳಲು ಅವರಿಗೆ ಕಷ್ಟವಾಗಲಿಲ್ಲ.

ಎರಡನೇ ಗೇಮ್‌ನ ಆರಂಭದಲ್ಲಿ ಎರಡು ಪಾಯಿಂಟ್‌ಗಳ ಹಿನ್ನಡೆ ಕಂಡಿದ್ದರೂ ನಂತರ ಚೇತರಿಸಿಕೊಂಡ ಆ್ಯಂಟೊನ್ಸೆನ್‌ 5–2ರ ಮುನ್ನಡೆ ಸಾಧಿಸಿದರು. ನಂತರ ಕಿದಂಬಿ ನೆಟ್‌ ಬಳಿ ಮೋಹಕ ಆಟವಾಡಿ ಪಾಯಿಂಟ್‌ಗಳನ್ನು ಗಳಿಸಿದರು. ಹೀಗಾಗಿ ಒಂದು ಹಂತದಲ್ಲಿ ಅವರ ಹಿನ್ನಡೆ 15–16 ಆಗಿತ್ತು. ಆದರೆ ‍ಪಂದ್ಯವನ್ನು ಬಿಟ್ಟುಕೊಡಲು ಎದುರಾಳಿ ಸಿದ್ಧ ಇರಲಿಲ್ಲ. ಜಂಪ್‌ ಸ್ಮ್ಯಾಷ್ ಮೂಲಕ ಪಾಯಿಂಟ್‌ ಗಳಿಸಿ ಶ್ರೀಕಾಂತ್ ಅವರನ್ನು ಕಂಗೆಡಿಸಿದ ಆ್ಯಂಟೊನ್ಸೆನ್‌ ಸತತ ನಾಲ್ಕು ಗೇಮ್‌ ಪಾಯಿಂಟ್‌ಗಳನ್ನು ಕಲೆ ಹಾಕಿ ಪಂದ್ಯವನ್ನು ಸಮಗೊಳಿಸಿದರು. ನಿರ್ಣಾಯಕ ಗೇಮ್‌ನಲ್ಲೂ ಆರಂಭದಲ್ಲಿ ಶ್ರೀಕಾಂತ್ ಎರಡು ಪಾಯಿಂಟ್‌ಗಳ ಮುನ್ನಡೆ ಗಳಿಸಿದ್ದರು. ಆದರೆ ಸ್ವಯಂ ತಪ್ಪುಗಳನ್ನು ಎಸಗಿ ಎದುರಾಳಿ 13–13ರ ಸಮಬಲ ಸಾಧಿಸಲು ಅವಕಾಶ ಮಾಡಿಕೊಟ್ಟರು. ನಂತರ ಅಮೋಘ ರ‍್ಯಾಲಿಗಳ ಮೂಲಕ ಇಬ್ಬರೂ ಪಟ್ಟುಬಿಡದೆ ಕಾದಾಡಿದರು. ಕೊನೆಗೆ ಗೇಮ್ ಮತ್ತು ಪಂದ್ಯ ಆ್ಯಂಟೊನ್ಸೆನ್ ಪಾಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT