ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬಳ ಓಟಗಾರರ ಸಿಕ್ಸ್‌ಪ್ಯಾಕ್‌ ಸೀಕ್ರೆಟ್‌

ಜಿಮ್‌ ಮುಖ ನೋಡಿಲ್ಲ; ಗಂಜಿ ಊಟ, ಮೀನು ಆರೋಗ್ಯದ ಗುಟ್ಟು
Last Updated 23 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ವಿಶ್ವ ಚಾಂಪಿಯನ್‌ ಅಥ್ಲೀಟ್‌ ಉಸೇನ್ ಬೋಲ್ಟ್‌ ಅವರಿಗಿಂತಲೂ ವೇಗವಾಗಿ ಓಡಿದರೆಂಬ ‘ಸುದ್ದಿ’ಯಿಂದ ಕರಾವಳಿಯ ಕಂಬಳ ಓಟಗಾರರು ಜಾಗತಿಕ ಮಟ್ಟದಲ್ಲಿ ಸುದ್ದಿಯಲ್ಲಿದ್ದಾರೆ. ಅವರ ವೇಗದ ಓಟದ ಜತೆಗೆ ಆಕರ್ಷಕ ಮೈಕಟ್ಟು ಕೂಡ ಎಲ್ಲರ ಗಮನ ಸೆಳೆಯುತ್ತಿದೆ. ಪತ್ರಿಕೆಗಳಲ್ಲಿ, ಸುದ್ದಿ ಮಾಧ್ಯಮಗಳಲ್ಲಿ ಕಂಬಳ ಓಟಗಾರರ ಹುರಿಗಟ್ಟಿದ ದೇಹವನ್ನು ಕಂಡು ಕಣ್ಣರಳಿಸಿದವರೇ ಹೆಚ್ಚು.

ಕಂಬಳ ಓಟಗಾರರು ನಿತ್ಯ ಜಿಮ್‌ಗೆ ಹೋಗ್ತಾರಾ, ಎಷ್ಟು ಗಂಟೆ ವರ್ಕ್‌ ಔಟ್‌ ಮಾಡ್ತಾರೆ, ಆಹಾರ ಪದ್ಧತಿ ಏನು, ವೈಯಕ್ತಿಕ ತರಬೇತುದಾರರು ಇದ್ದಾರಾ ಎಂಬೆಲ್ಲ ವಿಷಯಗಳು ಚರ್ಚೆ ಯಾಗುತ್ತಿರುವಾಗಲೇ, ತಮ್ಮ ಕಟ್ಟುಮಸ್ತಾದ ದೇಹಕ್ಕೆ ಕಾರಣ ಏನು ಎಂಬುದನ್ನು ಕಂಬಳ ಓಟಗಾರರೇ ಬಹಿರಂಗಪಡಿಸಿದ್ದಾರೆ.

ಕಂಬಳ ಓಟಗಾರರು ಜಿಮ್‌ಗೂ ಹೋಗುವುದಿಲ್ಲ, ಆಹಾರದಲ್ಲಿ ಪಥ್ಯವನ್ನೂ ಅನುಸರಿಸುವುದಿಲ್ಲ. ಸಿಕ್ಸ್‌ ಪ್ಯಾಕ್‌ ಮೈಕಟ್ಟು ಅವರಿಗೆ ಪ್ರಕೃತಿ ಸಹಜವಾಗಿ ಬಂದಿದೆ.ಕೃಷಿ ಕಾಯಕ, ಕೋಣಗಳ ಲಾಲನೆ–ಪಾಲನೆ, ದೈಹಿಕ ಶ್ರಮ ಬೇಡುವ ನಿತ್ಯದ ಕೆಲಸ... ಇಂಥ ಜೀವನಶೈಲಿ ಕಂಬಳ ಓಟಗಾರರ ಫಿಟ್ನೆಸ್‌ ಸೀಕ್ರೆಟ್‌ ಎಂದು ಈ ಕ್ಷೇತ್ರದಲ್ಲಿದ್ದವರು ಹೇಳುತ್ತಾರೆ.

ಸಿನಿಮಾ ನಟರು ಸಿಕ್ಸ್‌ ಪ್ಯಾಕ್‌ಗಾಗಿ ನಿತ್ಯ ಜಿಮ್‌ನಲ್ಲಿ ಬೆವರು ಸುರಿಸುವಾಗ, ತರಬೇತುದಾರರನ್ನು ನೇಮಿಸಿ ಕೊಂಡು ಅಂಗಸೌಷ್ಠವದ ಬಗ್ಗೆ ಕಾಳಜಿ ವಹಿಸುತ್ತಿರುವಾಗ, ತರಬೇತಿ ಪಡೆಯದೆ, ಜಿಮ್‌ಗೂ ಹೋಗದೆ ಸಿಕ್ಸ್‌ಪ್ಯಾಕ್‌ ಸಾಧ್ಯವಾಗಿದ್ದು ಹೇಗೆ ಎಂಬ ಪ್ರಶ್ನೆಗೆ, ‘ನಮಗೆ ಕಂಬಳದ ಕೋಣಗಳೇ ಟ್ರೈನರ್ಸ್‌, ಕೆಸರು ಗದ್ದೆಯೇ ಜಿಮ್‌’ ಎಂದರು ಕಾರ್ಕಳದ ಬಜಗೋಳಿಯ ನಿಶಾಂತ್ ಶೆಟ್ಟಿ.

ಕೋಣಗಳೊಟ್ಟಿಗೆ ಕೆಸರುಗದ್ದೆಯಲ್ಲಿ ಓಡುವಾಗ ಸಹಜವಾಗಿ ಬೊಜ್ಜು ಕರಗಿ ದೇಹ ಹುರಿಗಟ್ಟುತ್ತದೆ. ಓಡುವಾಗ ಅಂಗಾಂಗಗಳ ಮೇಲೆ ಒತ್ತಡ ಬಿದ್ದು, ಸಿಕ್ಸ್‌ ಪ್ಯಾಕ್‌ ರೂಪುಗೊಳ್ಳುತ್ತದೆ.ಆಹಾರದ ವಿಚಾರಕ್ಕೆ ಬಂದರೆ, ವಿಶೇಷ ಅಂತೇನಿಲ್ಲ. ಬೆಳಿಗ್ಗೆ ಕರಾವಳಿಯ ಗಂಜಿ ಊಟ, ರಾತ್ರಿ ಮೀನೂಟ. ಉಳಿದಂತೆ, ಮನೆಯಲ್ಲಿನ ನಿತ್ಯದ ಆಹಾರ ಪದಾರ್ಥಗಳನ್ನು ಸೇವಿಸುತ್ತೇವೆ ಎಂದು ಆರೋಗ್ಯದ ಗುಟ್ಟು ಬಿಚ್ಚಿಟ್ಟರು ನಿಶಾಂತ್.

ಜಿಮ್‌ಗೆ ಹೋದರೆ ಮೀನಖಂಡಗಳು ಹಾಗೂ ಇತರೆ ಅಂಗಾಂಗಗಳು ಬಿಗಿದು ಕೆಸರುಗದ್ದೆಯಲ್ಲಿ ಓಡಲು ಕಷ್ಟವಾಗುತ್ತದೆ. ಸ್ನಾಯುಸೆಳೆತವೂ ಉಂಟಾಗುತ್ತದೆ. ದೇಹ ಹಗುರವಾಗಿದ್ದರೆ ಕೆಸರಿನಲ್ಲಿ ಕೋಣಗಳ ವೇಗಕ್ಕೆ ಹೊಂದಿಕೊಂಡು ಓಡಬಹುದು. ಹಾಗಾಗಿ, ನಾವು ಜಿಮ್‌ನಲ್ಲಿ ಹೆಚ್ಚು ಕಸರತ್ತು ಮಾಡುವುದಿಲ್ಲ. ದೇಹವನ್ನು ಹಗುರಾಗಿಸಿಕೊಳ್ಳುವ ವ್ಯಾಯಾಮ ಮಾತ್ರ ಮಾಡುತ್ತೇವೆ ಎಂದರು.

ಕರಾವಳಿ ಕಂಬಳದ ಸ್ಟಾರ್ ಓಟಗಾರ ಖ್ಯಾತಿಯ ಇರ್ವತ್ತೂರು ಕೊಳಕೆ ಆನಂದ್‌ ಅವರ ಕಟ್ಟುಮಸ್ತಾದ ದೇಹ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿತ್ತು. 51 ವರ್ಷ ಪ್ರಾಯದ ಆನಂದ್‌ ಈಗಲೂ ಸಿಕ್ಸ್‌ಪ್ಯಾಕ್‌ ಕಾಪಾಡಿಕೊಂಡಿದ್ದು, ಯುವಕರನ್ನೂ ನಾಚಿಸುವಂತಿದೆ. ಎರಡು ದಶಕಗಳಿಂದಲೂ ಕಂಬಳ ಕ್ರೀಡೆಯಲ್ಲಿ ಓಡುತ್ತಿರುವ ಆನಂದ್ ಸದ್ಯ ಕಂಬಳ ಅಕಾಡೆಮಿಯಲ್ಲಿ ಯುವ ಓಟಗಾರರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಪ್ರತಿದಿನ ಕೃಷಿ ಕಾಯಕ, ದೇಹ ದಂಡಿಸುವ ಯಾವುದೇ ಕೆಲಸಗಳಿಂದ ಫಿಟ್‌ನೆಸ್‌ ಕಾಯ್ದುಕೊಳ್ಳಬಹುದು. ಕಂಬಳ ಕರೆಯಲ್ಲಿ ಓಡಬೇಕಾದರೆ ಹೆಚ್ಚು ಶಕ್ತಿ ಬೇಕಾಗುತ್ತದೆ. ದುಶ್ಚಟಗಳಿದ್ದರೆ ವೇಗವಾಗಿ ಓಡಲು ದೇಹ ಸಹಕರಿಸುವುದಿಲ್ಲ. ಹಾಗಾಗಿ, ವ್ಯಸನಗಳಿಂದ ಕಂಬಳ ಓಟಗಾರರು ದೂರವಿರಬೇಕು ಎಂದು ಸಲಹೆ ನೀಡುತ್ತಾರೆ ಆನಂದ್‌.

ಇನ್ನು ಕಂಬಳದಲ್ಲಿ ಮಿಂಚಿನ ಓಟದಿಂದ ‘ಕಂಬಳದ ಉಸೇನ್ ಬೋಲ್ಟ್‌’ ಎನಿಸಿದ ಶ್ರೀನಿವಾಸ ಗೌಡ ಕೂಡ ಜಿಮ್‌ಗೆ ಹೋಗಿ, ಸಿಕ್ಸ್‌ಪ್ಯಾಕ್‌ ಪಡೆದವರಲ್ಲ. ಬೆಳಿಗ್ಗೆ ಕೋಣಗಳ ಪೋಷಣೆ, ಮಧ್ಯಾಹ್ನ ಈಜು, ಗಂಜಿ ಊಟ, ರಾತ್ರಿ ಮೀನಿನ ಊಟ ಮಾಡುತ್ತಾರಂತೆ. ‘ಸೋಮವಾರದಿಂದ ಶುಕ್ರವಾರದವರೆಗೂ ಕಟ್ಟಡ ಕಾರ್ಮಿಕನಾಗಿ ದುಡಿಯುತ್ತೇನೆ. ಶನಿವಾರ ಭಾನುವಾರ ಕಂಬಳ ಗದ್ದೆಯಲ್ಲಿ ಓಡುತ್ತೇನೆ. ಇದೇ ನನ್ನ ಸಿಕ್ಸ್‌ಪ್ಯಾಕ್‌ ಸೀಕ್ರೆಟ್‌’ ಎನ್ನುತ್ತಾರೆ ಶ್ರೀನಿವಾಸ ಗೌಡ.

ಅಕಾಡೆಮಿಯಲ್ಲಿ ತರಬೇತಿ

ದೈಹಿಕವಾಗಿ ಸದೃಢರಾಗಿರುವ ಕಂಬಳ ಓಟಗಾರರಿಗೆ ಕಂಬಳ ಅಕಾಡೆಮಿಯಲ್ಲಿ ಪ್ರತಿವರ್ಷ ತರಬೇತಿ ನೀಡಲಾಗುತ್ತದೆ. ಬೆಳಿಗ್ಗೆ 6.30 ರಿಂದ 7.30ರವರೆಗೆ ಯೋಗ, ಆಹಾರವಾಗಿ ಮೊಳಕೆಯುಕ್ತ ಕಾಳುಗಳು, ರಾಷ್ಟ್ರೀಯ ತರಬೇತುದಾರರಿಂದ 16 ರೀತಿಯ ಕಠಿಣ ತರಬೇತಿ ನೀಡಲಾಗುತ್ತದೆ. ಬೆತ್ತ ಕಟ್ಟುವುದು, ಕಂಬಳ ಹಗ್ಗ ನೇಯ್ಯುವ ತರಬೇತಿ ನೀಡಲಾಗುವುದು. ಇದರ ಜತೆಗೆ, ಕೋಣಗಳ ಮೈತೊಳೆಸುವುದು, ಎಣ್ಣೆ ಹಚ್ಚುವುದು, ಉರುಳಿ ಬೇಯಿಸಿ ಬಡಿಸುವುದು, ವಾಕಿಂಗ್‌ ಕರೆದೊಯ್ಯುವುದು ಹೀಗೆ ಹಲವು ರೀತಿಯ ಕಠಿಣ ತರಬೇತಿಗಳನ್ನು ಕಂಬಳ ಓಟಗಾರರಿಗೆ ನೀಡಲಾಗುವುದು. ವ್ಯಕ್ತಿತ್ವ ವಿಕಸನ, ಮಾನಸಿಕ ತರಬೇತಿ ನೀಡುವ ಮೂಲಕ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಂಬಳ ಓಟಗಾರರನ್ನು ಸದೃಢರನ್ನಾಗಿ ಮಾಡಲಾಗುತ್ತದೆ ಎನ್ನುತ್ತಾರೆ ಕಂಬಳ ಅಕಾಡೆಮಿಯ ಸಂಚಾಲಕರಾದ ಗುಣಪಾಲ ಕಡಂಬ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT