ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಾಂಗಣ ಅಭ್ಯಾಸ ಖುಷಿ ನೀಡಿದೆ: ಭಾರತ ಹಾಕಿ ತಂಡದ ಸುಮಿತ್‌

Last Updated 14 ಜುಲೈ 2020, 12:34 IST
ಅಕ್ಷರ ಗಾತ್ರ

ನವದೆಹಲಿ: ‘ಸುದೀರ್ಘ ಬಿಡುವಿನ ಬಳಿಕ ತವರೂರು ಸೋನಿಪತ್‌ನಲ್ಲಿ ಹೊರಾಂಗಣ ಅಭ್ಯಾಸ ಆರಂಭಿಸಿದ್ದೇನೆ. ಹೀಗಾಗಿ ತುಂಬಾ ಖುಷಿಯಾಗಿದೆ’ ಎಂದು ಭಾರತ ಸೀನಿಯರ್ ಹಾಕಿ ತಂಡದ ಮಿಡ್‌ಫೀಲ್ಡರ್‌ ಸುಮಿತ್ ಮಂಗಳವಾರ ಹೇಳಿದ್ದಾರೆ.

ಕೊರೊನಾ ವೈರಾಣುವಿನ ಪಸರಿಸುವಿಕೆಯನ್ನು ತಡೆಯುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್‌ಡೌನ್‌ ಜಾರಿಗೊಳಿಸಿದ್ದವು. ಹೀಗಾಗಿ ಸುಮಿತ್‌ ಅವರು ಸುಮಾರು ಮೂರು ತಿಂಗಳ ಕಾಲ ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿ ಉಳಿದುಕೊಂಡಿದ್ದರು.

ಹಾಕಿ ಇಂಡಿಯಾವು ಎಲ್ಲಾ ಆಟಗಾರರಿಗೂ ಒಂದು ತಿಂಗಳ ವಿರಾಮ ನೀಡಿದ್ದರಿಂದ ಹೋದ ತಿಂಗಳು ಬೆಂಗಳೂರಿನಿಂದ ಹರಿಯಾಣದ ಸೋನಿಪತ್‌ಗೆ ಪಯಣಿಸಿದ್ದರು.

‘ಹಿಂದಿನ ಕೆಲ ವಾರಗಳಿಂದ ಕುಟುಂಬದ ಜೊತೆ ಹಾಯಾಗಿ ಕಾಲ ಕಳೆದಿದ್ದೇನೆ. ಹೀಗಾಗಿ ಮನಸ್ಸು ಪ್ರಶಾಂತವಾಗಿದೆ. ನಾನು ಮನೆಗೆ ಮರಳಿದಾಗ ಅಮ್ಮ ತುಂಬಾ ಖುಷಿಪಟ್ಟರು. ಅವರ ಮೊಗದಲ್ಲಿ ನಗು ಕಂಡು ನನಗೂ ಸಂತಸವಾಯಿತು’ ಎಂದು ಸುಮಿತ್‌ ತಿಳಿಸಿದ್ದಾರೆ.

‘ಮನೆಯ ಬಳಿ ಇರುವ ಮೈದಾನದಲ್ಲಿ ಸ್ನೇಹಿತರೊಂದಿಗೆ ಅಭ್ಯಾಸ ಆರಂಭಿಸಿದ್ದೇನೆ. ಈ ವೇಳೆ ಹಾಕಿ ಇಂಡಿಯಾದ ನಿಯಮಾವಳಿಗಳನ್ನು ತಪ್ಪದೇ ಪಾಲಿಸುತ್ತಿದ್ದೇನೆ’ ಎಂದಿದ್ದಾರೆ.

‘ಶೀಘ್ರವೇ ರಾಷ್ಟ್ರೀಯ ಶಿಬಿರ ನಡೆಯುವ ನಿರೀಕ್ಷೆ ಇದೆ. ಹೀಗಾಗಿ ಫಿಟ್‌ನೆಸ್‌ ಕಾಪಾಡಿಕೊಳ್ಳುವುದಕ್ಕೂ ಒತ್ತು ನೀಡಿದ್ದೇನೆ. ಇದಕ್ಕಾಗಿ ನಿತ್ಯವೂ ಒಂದಷ್ಟು ಸಮಯ ಓಡುತ್ತಿದ್ದೇನೆ. ಜೊತೆಗೆ ಹೊಸ ಕೌಶಲಗಳನ್ನು ಕಲಿಯಲೂ ಪ್ರಯತ್ನಿಸುತ್ತಿದ್ದೇನೆ’ ಎಂದು 23 ವರ್ಷ ವಯಸ್ಸಿನ ಆಟಗಾರ ನುಡಿದಿದ್ದಾರೆ.

‘ಗಾಯದಿಂದಾಗಿ ಐದು ತಿಂಗಳು ಮೈದಾನದಿಂದ ಹೊರಗುಳಿಯಬೇಕಿತ್ತು. ಆಗ ಭವಿಷ್ಯದ ಬಗ್ಗೆ ಚಿಂತೆ ಕಾಡಿತ್ತು. ಈ ಸಂಬಂಧ ಮುಖ್ಯ ಕೋಚ್‌ ಗ್ರಹಾಂ ರೀಡ್‌ ಜೊತೆಗೆ ಮಾತನಾಡಿದ್ದೆ. ಆಗ ಅವರು ನನ್ನಲ್ಲಿ ಆತ್ಮಸ್ಥೈರ್ಯ ತುಂಬಿದರು. ನನ್ನ ಮೇಲೆ ನಂಬಿಕೆ ಇಟ್ಟು ಮತ್ತೆ ತಂಡದಲ್ಲಿ ಆಡಲು ಅವಕಾಶ ಮಾಡಿಕೊಟ್ಟರು’ ಎಂದು ಹೇಳಿದ್ದಾರೆ.

2016ರ ಜೂನಿಯರ್‌ ಹಾಕಿ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಭಾರತ ತಂಡದಲ್ಲಿ ಸುಮಿತ್‌ ಕೂಡ ಇದ್ದರು. 2017ರಲ್ಲಿ ನಡೆದಿದ್ದ ಸುಲ್ತಾನ್‌ ಅಜ್ಲಾನ್‌ ಶಾ ಕಪ್‌ನಲ್ಲಿ ಆಡುವ ಮೂಲಕ ಅವರು ಸೀನಿಯರ್‌ ತಂಡಕ್ಕೆ ಪದಾರ್ಪಣೆ ಮಾಡಿದ್ದರು.

ಬಲ ಮಣಿಕಟ್ಟಿನ ಗಾಯ ಕಾಡಿದ್ದರಿಂದ ಸುಮಿತ್ ಅವರು‌ ಹೋದ ವರ್ಷ ಕೆಲ ಸಮಯ ಹಾಕಿಯಿಂದ ದೂರ ಉಳಿಯಬೇಕಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT