ಈಜುಕೊಳವಿಲ್ಲ; ಸಾಧನೆ ಮಾಡೋದು ಹೇಗೆ?

7

ಈಜುಕೊಳವಿಲ್ಲ; ಸಾಧನೆ ಮಾಡೋದು ಹೇಗೆ?

Published:
Updated:
Deccan Herald

ಅದು ಮಹಿಳೆಯರ 50 ಮೀಟರ್‌ ಬ್ಯಾಕ್‌ ಸ್ಟ್ರೋಕ್‌ ಸ್ಪರ್ಧೆ. ಚಿನ್ನ ಗೆದ್ದ ಸ್ಪರ್ಧಿ ಒಂದು ನಿಮಿಷ 09 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು. ಕಂಚಿನ ಪದಕ ಪಡೆದ ಸ್ಪರ್ಧಿ ಗುರಿ ಮುಟ್ಟಲು ತೆಗೆದುಕೊಂಡಿದ್ದು ಎರಡು ನಿಮಿಷ 40 ಸೆಕೆಂಡ್‌. ಪುರುಷರ 400 ಮೀಟರ್‌ ಫ್ರೀಸ್ಟೈಲ್‌ನಲ್ಲಿ ಮೊದಲ ಸ್ಥಾನ ಪಡೆದ ಸ್ಪರ್ಧಿ 4 ನಿಮಿಷ 07 ಸೆಕೆಂಡುಗಳಲ್ಲಿ ಗುರಿ ತಲುಪಿದರೆ, ಬೆಳ್ಳಿ ಪದಕ ಪಡೆದವರು ಗುರಿ ತಲುಪಿದ್ದು 10 ನಿಮಿಷಗಳಲ್ಲಿ!

ಹುಬ್ಬಳ್ಳಿಯಲ್ಲಿ ಕಳೆದ ವಾರ ನಡೆದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಈಜು ಚಾಂಪಿಯನ್‌ಷಿಪ್‌ನಲ್ಲಿ ಕಂಡುಬಂದ ದೃಶ್ಯವಿದು. ಇದು ಉದಾಹರಣೆಯಷ್ಟೇ, ಮೊದಲ ಸ್ಥಾನ ಮತ್ತು ನಂತರದ ಸ್ಥಾನ ಪಡೆದ ಈಜುಪಟುಗಳ ನಡುವೆ ಸಾಕಷ್ಟು ಸಮಯದ ಅಂತರವಿತ್ತು.

ಏಕೆಂದರೆ, ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಈಜುಪಟುಗಳಿಗೆ ವೃತ್ತಿಪರ ತರಬೇತಿ ಪಡೆಯಲು ಈಜುಕೊಳಗಳಿಲ್ಲ. ತಮ್ಮೂರಿನ ಬಾವಿಗಳಲ್ಲಿ, ದೇವಸ್ಥಾನದ ಹೊಂಡಗಳಲ್ಲಿ, ಪುಷ್ಕರಣಿಗಳಲ್ಲಿ ಅಭ್ಯಾಸ ಮಾಡಿ ವಿಶ್ವವಿದ್ಯಾಲಯ ತಂಡದ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಂಡವರೇ ಅಧಿಕವಾಗಿದ್ದರು!

ಈಜುಕೊಳಗಳ ಕೊರತೆ, ನುರಿತ ಸಿಬ್ಬಂದಿಯ ಅಲಭ್ಯತೆ, ವೃತ್ತಿಪರ ತರಬೇತಿ ಇಲ್ಲದ ಕಾರಣ ಈಜುಪಟುಗಳಿಗೆ ಅಭ್ಯಾಸ ನಡೆಸುವುದೇ ಕಷ್ಟವಾಗುತ್ತಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ವಿದ್ಯಾರ್ಥಿಗಳೇ ಸ್ವಂತ ಆಸಕ್ತಿಯಿಂದ ತಮಗೆ ಅನುಕೂಲವಾದಲ್ಲಿ ಈಜು ಕಲಿತು ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪದಕಗಳನ್ನು ಜಯಿಸಿದರು.

ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ. ಎ.ಬಿ. ಬಾಳಿಗಾ ವಾಣಿಜ್ಯ ಕಾಲೇಜು, ಹುಬ್ಬಳ್ಳಿಯ ಆಕ್ಸ್‌ಫರ್ಡ್‌ ಕಾಲೇಜು, ಧಾರವಾಡದ ಜೆಎಸ್‌ಎಸ್‌ ಕಾಲೇಜು, ಮೃತ್ಯುಂಜಯ ಕಾಲೇಜು, ಭಟ್ಕಳದ ಅಂಜುಮನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್ ಕಾಲೇಜು, ಅಂಜುಮನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಕಾಲೇಜುಗಳ ಈಜುಪಟುಗಳು ಇಲ್ಲಗಳ ನಡುವೆ ಚಾಂಪಿಯನ್‌ಷಿಪ್‌ಗಳಲ್ಲಿ ಪದಕ ಜಯಿಸಿದರು.


ಹುಬ್ಬಳ್ಳಿಯಲ್ಲಿ ಗುರುವಾರ ನಡೆದ ಕರ್ನಾಟಕ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಈಜು ಚಾಂಪಿಯನ್‌ಷಿಪ್‌ಯಲ್ಲಿ ಸಂಕೇತ ದುಶಿ ಪುರುಷರ 50 ಮೀ. ವಿಭಾಗದಲ್ಲಿ ಬಟರ್‌ ಪ್ಲೈ ಸ್ಪರ್ಧೆಯಲ್ಲಿ ಗುರಿ ಮುಟ್ಟುತ್ತಿರುವ ದೃಶ್ಯಗಳು –ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ

ಪುಷ್ಕರಣಿಯೇ ಇವರಿಗೆ ಈಜುಕೊಳ!
ಬಾಳಿಗಾ ಕಾಲೇಜಿನ ಈಜುಪಟುಗಳು ಕುಮಟಾದಲ್ಲಿರುವ ವೆಂಕಟೇಶ್ವರ ದೇವಸ್ಥಾನ ಎದುರಿನ ವಿಷ್ಣುತೀರ್ಥ ಪುಷ್ಕರಣಿಯಲ್ಲಿ ಈಜು ಅಭ್ಯಾಸ ಮಾಡಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

ಕುಮಟಾದ ದೇವರಾಜ ಗುಣಗಾ, ವಿನೀತ್ ಶಾನಭೋಗ, ಶ್ರೀಧರ ಶಾನಭೋಗ, ಸ್ವಾತಿ ಪೈ ಹೀಗೆ ಅನೇಕ ಈಜುಪಟುಗಳು ಪುಷ್ಕರಣಿಯಲ್ಲಿ ಅಭ್ಯಾಸ ಮಾಡಿದವರೇ.

‘ಮಳೆ ಚೆನ್ನಾಗಿ ಬಂದರೆ ವರ್ಷದಲ್ಲಿ ಎರಡು ತಿಂಗಳು ಪುಷ್ಕರಣಿ ತುಂಬಿರುತ್ತದೆ. ಆಗ ಅಭ್ಯಾಸ ಮಾಡುತ್ತೇವೆ, ಯೂಟ್ಯೂಬ್‌ಗಳಲ್ಲಿ ವಿಡಿಯೊ ನೋಡಿ ಈಜು ಕೌಶಲ ಕಲಿತುಕೊಳ್ಳುತ್ತೇವೆ. ತರಬೇತಿ ವಿಧಾನ ಹೇಳಿಕೊಡಲು ನಮಗೆ ನುರಿತ ಕೋಚ್‌ಗಳು ಇಲ್ಲ, ಆದರೆ ನನಗೆ ಈಜು ಸ್ಪರ್ಧೆಯಲ್ಲಿ ದೊಡ್ಡ ಸಾಧನೆ ಮಾಡುವ ಆಸೆಯಿದೆ’ ಎನ್ನುತ್ತಾರೆ ಆರು ಚಿನ್ನದ ಪದಕಗಳನ್ನು ಜಯಿಸಿದ ಬಾಳಿಗಾ ಕಾಲೇಜಿನ ಸ್ವಾತಿ ಪೈ.

‘ಕುಮಟಾದಲ್ಲಿ ಸಾಕಷ್ಟು ಪ್ರತಿಭಾನ್ವಿತ ಈಜುಪಟುಗಳು ಇದ್ದಾರೆ, ವೃತ್ತಿಪರ ತರಬೇತಿಗೆ ಅನುಕೂಲವಾಗುವಂತೆ ಈಜುಕೊಳ ಕಟ್ಟಿಸಿಕೊಡಿ ಎಂದು ಅನೇಕ ಸಲ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನಮ್ಮ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಜಿ.ಡಿ. ಭಟ್ ಸರ್‌ ಸಹಕಾರದಿಂದ ಎಲ್ಲ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗಿದೆ’ ಎಂದು ಅವರು ಹೇಳುತ್ತಾರೆ.

ಸ್ವಾತಿ ಪೈ ಹೋದ ವರ್ಷ ರಾಣೆಬೆನ್ನೂರಿನಲ್ಲಿ ನಡೆದ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಕ್ರೀಡಾಕೂಟದಲ್ಲಿ ಐದು ಚಿನ್ನ ಜಯಿಸಿ ವಿ.ವಿ. ತಂಡವನ್ನು ಪ್ರತಿನಿಧಿಸಿದ್ದರು.

‘ಮಗಳಿಗೆ ಈಜು ಎಂದರೆ ತುಂಬಾ ಇಷ್ಟ. ಆದರೆ, ಸೌಲಭ್ಯಗಳಿಲ್ಲ. ಪುಷ್ಕರಣಿಯಲ್ಲಿಯೇ ಅಭ್ಯಾಸ ಮಾಡುವುದು ಅನಿವಾರ್ಯ’ ಎಂದು ಸ್ವಾತಿ ಅವರ ತಾಯಿ ಶಿಲ್ಪಾ ಪೈ ಬೇಸರ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ಇದೇ ವರ್ಷದ ಅಕ್ಟೋಬರ್‌ನಲ್ಲಿ ಅಂತರ ವಿಶ್ವವಿದ್ಯಾಲಯಗಳ ಈಜು ಚಾಂಪಿಯನ್‌ಷಿಪ್‌ ನಡೆಯಲಿದೆ. ಈ ಕೂಟಕ್ಕೆ ವಿ.ವಿ. ತಂಡವನ್ನು ಆಯ್ಕೆ ಮಾಡಲು ಚಾಂಪಿಯನ್‌ಷಿಪ್‌ ಆಯ್ಕೆ ಟ್ರಯಲ್ಸ್‌ ಕೂಡ ಆಗಿತ್ತು. ಆಯ್ಕೆ ಸಮಿತಿ ಸದಸ್ಯರಾಗಿ ಬಂದಿದ್ದ ಕಿರಣ ಹಿರೇಮಠ ‘ನಮ್ಮಲ್ಲಿ ಪ್ರತಿಭಾವಂತ ಈಜುಪಟುಗಳಿದ್ದಾರೆ. ಆದರೆ, ಈಜುಕೊಳವೇ ಇಲ್ಲ. ವಿದ್ಯಾರ್ಥಿಗಳು ಅಭ್ಯಾಸ ಮಾಡುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

ಹಾವೇರಿಯಲ್ಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರದಲ್ಲಿ ಕೆಲಸ ಮಾಡುತ್ತಿರುವ ಅವರು ‘ಜಿಲ್ಲೆಗೆ ಕನಿಷ್ಠ ಒಂದು ಈಜುಕೊಳವಿದ್ದರೆ ಇನ್ನಷ್ಟು ಸ್ಪರ್ಧಿಗಳು ಬರುತ್ತಾರೆ. ಹುಬ್ಬಳ್ಳಿಯಲ್ಲಿ ಒಂದು ಈಜುಕೊಳವಿದೆ, ಆದರೆ ವೃತ್ತಿಪರ ಕೋಚ್‌ಗಳಿಲ್ಲ’ ಎಂದರು.

ಪಾಲ್ಗೊಳ್ಳುವಿಕೆಯೂ ಕಡಿಮೆ
ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ನಾಲ್ಕು ಜಿಲ್ಲೆಗಳಿಂದ 250ಕ್ಕೂ ಹೆಚ್ಚು ಕಾಲೇಜುಗಳು ಇವೆ. ಆದರೆ, ಈಜು ಚಾಂಪಿಯನ್‌ಷಿಪ್‌ನಲ್ಲಿ ಪುರುಷರ ವಿಭಾಗದಲ್ಲಿ 17 ಮತ್ತು ಮಹಿಳಾ ವಿಭಾಗದಲ್ಲಿ ಐದು ಕಾಲೇಜುಗಳಷ್ಟೇ ಭಾಗವಹಿಸಿದ್ದವು!

ಈಜುಕೂಟ ಸಂಘಟಿಸುವುದೇ ಸವಾಲು

ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ ಜಿಲ್ಲೆಗಳಲ್ಲಿ ಸರಿಯಾಗಿ ಈಜುಕೊಳಗಳು ಇರದ ಕಾರಣ ಪ್ರತಿ ವರ್ಷ ಈಜು ಸ್ಪರ್ಧೆಗಳನ್ನು ಆಯೋಜಿಸಲು ಬಹುತೇಕ ಕಾಲೇಜುಗಳು ಹಿಂದೇಟು ಹಾಕುತ್ತವೆ. ಆದರೆ, ಹುಬ್ಬಳ್ಳಿಯ ರಾಜನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ 2009–10, 2014–15, 2015–16, 2016–17 ಮತ್ತು 2018–19ರಲ್ಲಿ ಈಜು ಕೂಟದ ಆತಿಥ್ಯ ವಹಿಸಿತ್ತು. ‘ಹುಬ್ಬಳ್ಳಿಯ ಮಹಾನಗರ ಪಾಲಿಕೆಯ ಈಜುಕೊಳದ ಮೇಲೆ ಅವಲಂಬಿತರಾಗಿ ಸ್ಪರ್ಧೆಗಳನ್ನು ಆಯೋಜಿಸಬೇಕಾಗುತ್ತದೆ. ವೃತ್ತಿಪರ ಅಭ್ಯಾಸ ನಡೆಸಲು ಪ್ರತ್ಯೇಕ ಈಜುಕೊಳದ ಅಗತ್ಯವಿದೆ. ಆಗ ಸ್ಪರ್ಧಿಗಳ ಸಂಖ್ಯೆ ಹೆಚ್ಚಾಗುತ್ತದೆ. ಇದಕ್ಕೆ ವಿಶ್ವವಿದ್ಯಾಲಯ ಪ್ರಯತ್ನ ನಡೆಸಿದೆ’ ಎಂದು ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಸೋಮಶೇಖರ ಪಟ್ಟಣಶೆಟ್ಟಿ ಹೇಳಿದರು.

ಈಜುಕೊಳಕ್ಕೆ ಪ್ರಸ್ತಾವ

ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ವೃತ್ತಿಪರ ತರಬೇತಿ ಪಡೆಯಲು ಪ್ರತ್ಯೇಕ ಈಜುಕೊಳದ ಅಗತ್ಯವಿದೆ. ಇದಕ್ಕಾಗಿ ಪ್ರಸ್ತಾವ ಸಲ್ಲಿಸಲಾಗಿದೆ ಎಂದು  ಕರ್ನಾಟಕ ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಬಿ.ಎಂ. ಪಾಟೀಲ ತಿಳಿಸಿದರು.

‘ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸಾಕಷ್ಟು ಸುಧಾರಣೆಯಾಗಿದೆ. ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚಿದೆ. ವಿಶ್ವವಿದ್ಯಾಲಯ ವ್ಯಾಪ್ತಿಯ ಜಿಲ್ಲೆಗಳಲ್ಲಿ ಈಜುಕೊಳ ನಿರ್ಮಾಣವಾಗುತ್ತಿವೆ. ಇನ್ನೆರೆಡು ವರ್ಷಗಳಲ್ಲಿ ಪೂರ್ಣ ಸುಧಾರಣೆಯಾಗುತ್ತದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !