ಭಾನುವಾರ, ಏಪ್ರಿಲ್ 5, 2020
19 °C
ಕೊರೊನಾ: ಪಟ್ಟು ಸಡಿಲಿಸಿದ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ; ಐಒಸಿ ಅಧ್ಯಕ್ಷ–ಜಪಾನ್ ಪ್ರಧಾನಿ ನಿರ್ಧಾರ

ಒಲಿಂಪಿಕ್ಸ್ ಒಂದು ವರ್ಷ ಮುಂದಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಾಸೆನ್ (ಎಎಫ್‌ಪಿ): ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯಬೇಕಿದ್ದ ಒಲಿಂಪಿಕ್ ಕೂಟವನ್ನು ಒಂದು ವರ್ಷ ಮುಂದೂಡಲಾಗಿದೆ.

ಜಗತ್ತಿನಾದ್ಯಂತ ಭೀತಿ ಮೂಡಿಸಿರುವ ಕೊರೊನಾ ವೈರಸ್‌ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಬಹಳಷ್ಟು ರಾಷ್ಟ್ರಗಳ ಒಲಿಂಪಿಕ್ಸ್ ಸಂಸ್ಥೆಗಳು ಕೂಟವನ್ನು ಮುಂದೂಡುವಂತೆ ಐಒಸಿಯನ್ನು ಒತ್ತಾಯಿಸಿದ್ದವು. 

ಮಂಗಳವಾರ ಈ ಕುರಿತು ದೂರವಾಣಿಯ ಮೂಲಕ ಮಾತುಕತೆ ನಡೆಸಿದ ಅಂತರರಾಷ್ಟ್ರೀಯ ಒಲಿಂಪಿಕ್ ಕೌನ್ಸಿಲ್ (ಐಒಸಿ) ಅಧ್ಯಕ್ಷ ಥಾಮಸ್ ಬಾಕ್‌ ಮತ್ತು ಜಪಾನ್ ಪ್ರಧಾನಿ ಶಿಂಜೊ ಅಬೆ ಅವರು, ಕೂಟವನ್ನು ಮುಂದೂಡುವ ತೀರ್ಮಾನ ಕೈಗೊಂಡರು. 

ಕೊರೊನಾ ವೈರಸ್‌ ಉಪಟಳಕ್ಕೆ ಬಹಳಷ್ಟು ದೇಶಗಳಲ್ಲಿ ಜನರು ಸಾವನ್ನುಪ್ಪುತ್ತಿರುವ ಹಿನ್ನೆಲೆಯಲ್ಲಿ ಕೆಲವು ಪ್ರಮುಖ ದೇಶಗಳು ಒಲಿಂಪಿಕ್ಸ್‌ನಿಂದ ಹಿಂದೆ ಸರಿಯುವುದಾಗಿ ಪ್ರಕಟಿಸಿದ್ದವು. ಆದ್ದರಿಂದ ಐಒಸಿ ಈಗ ಮಣಿದಿದೆ.

‘ವೇಳಾಪಟ್ಟಿಯನ್ನು ಪುನಾರಚನೆ ಮಾಡುತ್ತಿದ್ದೇವೆ. 2020ರ ನಂತರ ಒಲಿಂಪಿಕ್ಸ್‌ ನಡೆಯಲಿದೆ. ಆದರೆ ಮುಂದಿನ ವರ್ಷದ ಬೇಸಿಗೆಯೊಳಗೆ ಕೂಡ ನಡೆಯುವಂತೆ ನೋಡಿಕೊಳ್ಳಲಾಗುವುದು. ಕ್ರೀಡಾಪಟುಗಳು ಆರೋಗ್ಯ, ಕೂಟದ ಆಯೋಜನೆಯಲ್ಲಿ ತೊಡಗಿರುವ ಎಲ್ಲರೂ ಮತ್ತು ಕ್ರೀಡಾಪ್ರೇಮಿಗಳ ಹಿತದೃಷ್ಟಿಯಿಂದ ನಾವು ಕೂಟವನ್ನು ಮುಂದೂಡುತ್ತಿದ್ದೇವೆ’ ಎಂದು ಜಂಟಿ ಪ್ರಕಟಣೆ ನೀಡಿರುವ ಅಬೆ ಮತ್ತು ಥಾಮಸ್ ತಿಳಿಸಿದ್ದಾರೆ.

‘ಕೂಟ ಮುಗಿಯುವವರೆಗೂ ಕ್ರೀಡಾಜ್ಯೋತಿಯು ಜಪಾನ್‌ನಲ್ಲಿಯೇ ಇರಲಿದೆ. ಮುಂದಿನ ವರ್ಷ ನಡೆದರೂ ಇದನ್ನು ಟೋಕಿಯೊ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ ಗೇಮ್ಸ್‌ 2020 ಎಂದೇ ಕರೆಸಿಕೊಳ್ಳಲಿದೆ. ಈ ಕುರಿತು ಎಲ್ಲ ಪ್ರಮುಖರೂ ಸಮ್ಮತಿಸಿದ್ದಾರೆ’ ಎಂದು ತಿಳಿಸಿದ್ದಾರೆ.

 ಚೀನಾ, ಅಮೆರಿಕ, ಸ್ಪೇನ್, ಜರ್ಮನಿ, ಇಟಲಿ, ಇಂಗ್ಲೆಂಡ್, ಭಾರತ, ಇರಾನ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೊರೊನಾ ವೈರಸ್‌ ಸೊಂಕು ಹರಡಿದೆ. ಈ ದೇಶಗಳಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ವಿದೇಶಿ ವಿಮಾನಗಳ ಹಾರಾಟ ರದ್ದಾಗಿದೆ. ಜನರು ಮನೆಗಳನ್ನು ಬಿಟ್ಟು ಬರದಂತೆ ನಿಷೇಧ ಹೇರಲಾಗಿದೆ. ವೈರಸ್‌ನ ಹರಡುವಿಕೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಲ್ಲಿಯವರೆಗೆ ಲಕ್ಷಾಂತರ ಜನರು ಸೋಂಕಿನಿಂದ ಬಳಲುತ್ತಿದ್ದಾರೆ. ವಿಶ್ವದಾದ್ಯಂತ  16 ಸಾವಿರಕ್ಕೂ ಹೆಚ್ಚು ಜನರು ಈ ವೈರಸ್‌ಗೆ ಬಲಿಯಾಗಿದ್ದಾರೆ.

ಟಾರ್ಚ್‌ ರಿಲೇ ಮುಂದಕ್ಕೆ: ಒಲಿಂಪಿಕ್ಸ್‌ ಮುಂದೂಡಿದ ಬೆನ್ನಲ್ಲೇ ಗುರುವಾರ ಆರಂಭವಾಗಬೇಕಿದ್ದ ಒಲಿಂಪಿಕ್ಸ್‌ ಜ್ಯೋತಿ ಯಾತ್ರೆಯನ್ನೂ (ಟಾರ್ಚ್‌ ರಿಲೆ) ಮುಂದಕ್ಕೆ ಹಾಕಲಾಗಿದೆ.

‘ಇದೇ ತಿಂಗಳ 26ರಂದು ಫುಕುಶಿಮಾದಲ್ಲಿ ಯಾತ್ರೆಗೆ ಚಾಲನೆ ನೀಡಬೇಕಿತ್ತು. ಸದ್ಯಕ್ಕೆ ಒಲಿಂಪಿಕ್ಸ್‌ ಜ್ಯೋತಿಯು ಫುಕುಶಿಮಾದಲ್ಲೇ ಇರಲಿದೆ. ಮುಂದೇನು ಮಾಡಬೇಕೆಂಬುದನ್ನು ಶೀಘ್ರವೇ ತೀರ್ಮಾನಿಸುತ್ತೇವೆ’ ಎಂದು ಟೋಕಿಯೊ ಕೂಟದ ಸಂಘಟನಾ ಸಮಿತಿ ಅಧ್ಯಕ್ಷ ಯೊಶಿರೊ ಮೊರಿ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು